ಕೇಂದ್ರ ಪುರಸ್ಕೃತ ಯೋಜನೆ; 20,111.36 ಕೋಟಿ ರು. ಬಾಕಿ ಉಳಿಸಿಕೊಂಡ ಕೇಂದ್ರ, ರಾಜ್ಯ ಸರ್ಕಾರ

photo credit; rediffmail

ಬೆಂಗಳೂರು; ಕೇಂದ್ರ ಪುರಸ್ಕೃತ ಯೋಜನೆಗಳಡಿ 2022-23ನೇ ಸಾಲಿಗೆ ಬಿಡುಗಡೆಯಾಗಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರವು ತನ್ನ ಪಾಲಿನ ಅನುದಾನ ಮತ್ತು ಪ್ರಾಥಮಿಕ ಶಿಲ್ಕಿನಲ್ಲಿದ್ದ ಅನುದಾನದಲ್ಲಿ 20,111.36 ಕೋಟಿ ರು. ಬಿಡುಗಡೆಗೆ ಬಾಕಿ ಇರಿಸಿಕೊಂಡಿದೆ.

 

ವಿಧಾನಸಭೆ ಚುನಾವಣೆಯನ್ನು ಮುಂದಿರಿಸಿಕೊಂಡು ರಾಜ್ಯದಾದ್ಯಂತ ಸಮಾವೇಶ ನಡೆಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರವು ನಿರೀಕ್ಷೆಗೂ ಮೀರಿ ಅನುದಾನ ಬಿಡುಗಡೆ ಮಾಡಿದೆ ಎಂದು ಜಾಹೀರಾತು ನೀಡುತ್ತಿರುವ ಹೊತ್ತಿನಲ್ಲಿಯೇ ಕೇಂದ್ರ ಸರ್ಕಾರವು ತನ್ನ ಪಾಲಿನ 6,510.76 ಕೋಟಿ ರು., ರಾಜ್ಯ ಸರ್ಕಾರವು 5,081.99 ಕೋಟಿ ರು. ಬಿಡುಗಡೆಗೆ ಬಾಕಿ ಉಳಿಸಿಕೊಂಡಿರುವುದು ಮುನ್ನೆಲೆಗೆ ಬಂದಿದೆ.

 

ಯೋಜನಾ ಇಲಾಖೆಯು 2022-23ನೇ ಸಾಲಿನ ಪ್ರಮುಖ ಕಾರ್ಯಕ್ರಮಗಳ ಕುರಿತು ಕೆಡಿಪಿ ಸಭೆಗೆ ಒದಗಿಸಿರುವ ಅಂಕಿ ಅಂಶಗಳ ಸಮಗ್ರ ಮಾಹಿತಿಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಆರ್ಥಿಕ ಪ್ರಗತಿಯ ಕುರಿತೂ ವಿವರಗಳಿವೆ. ಈ ಮಾಹಿತಿಯು ‘ದಿ ಫೈಲ್‌’ ಗೆ ಲಭ್ಯವಾಗಿದೆ.

 

ವಿಶೇಷವೆಂದರೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಕೇಂದ್ರ ಪುರಸ್ಕೃತ ಯೋಜನೆಯಡಿ ಬಿಡುಗಡೆಯಾಗಿರುವ ಒಟ್ಟು ಅನುದಾನದಲ್ಲಿ 100.00 ಕೋಟಿ ರು.ನಲ್ಲಿ ಖರ್ಚು ಮಾಡಿರುವುದು ಕೇವಲ 1.91 ಕೋಟಿಯಷ್ಟೇ. ಹೀಗಾಗಿ ಒಟ್ಟು ಅನುದಾನಕ್ಕೆ ಶೇ.0.48ರಷ್ಟು ಮಾತ್ರ ಆರ್ಥಿಕ ಪ್ರಗತಿ ಸಾಧಿಸಿದೆ.

 

ಕೇಂದ್ರವು ತನ್ನ ಪಾಲಿನ ಅನುದಾನದ ಪೈಕಿ ಅರ್ಧಕ್ಕರ್ಧ ಬಾಕಿ ಉಳಿಸಿಕೊಂಡಿದ್ದರೂ ಕೇಂದ್ರದ ಅನುದಾನವನ್ನು ನಿರೀಕ್ಷಿಸಿ ಬಿಡುಗಡೆಯಾಗಿರುವ ಅನುದಾನಕ್ಕೆ ಎದುರಾಗಿ ಹೆಚ್ಚುವರಿ ಖರ್ಚು ಮಾಡಿದೆ.

 

ಪ್ರಾಥಮಿಕ ಶಿಲ್ಕು 8,518.61 ಕೋಟಿ ರು. ಒಳಗೊಂಡಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ  ಒಟ್ಟಾರೆ 49,515.29 ಕೋಟಿ ರು. ಅನುದಾನದಲ್ಲಿ 29,403.93 ಕೋಟಿ ರು. ಖರ್ಚಾಗಿದ್ದು ಇನ್ನೂ 20,111.36 ಕೋಟಿ ರು. ಬಿಡುಗಡೆ ಅಗಬೇಕಿದೆ. ಕೇಂದ್ರವು ನೀಡಬೇಕಿದ್ದ 20,229.70 ಕೋಟಿ ರು. ಪೈಕಿ 13,718.94 ಕೋಟಿ ರು. ಬಿಡುಗಡೆ ಮಾಡಿದ್ದು ಇನ್ನೂ 6,510.76 ಕೋಟಿ ರು. ಬಿಡುಗಡೆಗೆ ಬಾಕಿ ಉಳಿಸಿಕೊಂಡಿರುವುದು ತಿಳಿದು ಬಂದಿದೆ.

 

ರಾಜ್ಯವು 20,766.97 ಕೋಟಿ ರು. ಅನುದಾನದ ಪೈಕಿ 15,684.99 ಕೋಟಿ ರು. ಬಿಡುಗಡೆ ಮಾಡಿದ್ದು ಇನ್ನೂ 5,081.98 ಕೋಟಿ ರು. ಬಿಡುಗಡೆಗೆ ಬಾಕಿ ಉಳಿಸಿಕೊಂಡಿರುವುದು ಗೊತ್ತಾಗಿದೆ.

 

ಉನ್ನತ ಶಿಕ್ಷಣ ಇಲಾಖೆಗೆ ರಾಜ್ಯದ ಪಾಲು 39.48 ಕೋಟಿ ರು. ಕೇಂದ್ರವು 59.22 ಕೋಟಿ ರು. ಸೇರಿ ಒಟ್ಟು 98.70 ಕೋಟಿ ರು ಅನುದಾನ ಹಂಚಿಕೆಯಾಗಿತ್ತು. ಆದರೆ ಈ ಪೈಕಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಒಟ್ಟುಒಟ್ಟು ಅನುದಾನಕ್ಕೆ ವೆಚ್ಚವು ಶೂನ್ಯ ಎಂದು ತೋರಿಸಿದೆ.

 

ಜಲಸಂಪನ್ಮೂಲ ಇಲಾಖೆಗೆ ರಾಜ್ಯವು 343.67 ಕೋಟಿ ರು. ಕೇಂದ್ರವು 66.10 ಕೋಟಿ ಸೇರಿ ಒಟಟು 409.77 ಕೋಟಿ ರು. ಅನುದಾನವಿತ್ತು. ಈ ಪೈಕಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ಬಿಡಿಗಾಸನ್ನೂ ನೀಡಿಲ್ಲ. ಆದರೆ ಒಟ್ಟು ವೆಚ್ಚವೆಂದು 155.01 ಕೋಟಿ ರು. ಎಂದು ತೋರಿಸಿದೆ. ಒಟ್ಟು ಅನುದಾನಕ್ಕೆ ಶೇ.37.83ರಷ್ಟು ಆರ್ಥಿಕ ಪ್ರಗತಿಯಾಗಿದೆ ಎಂದು ನಮೂದಿಸಿರುವುದು ಗೊತ್ತಾಗಿದೆ.

 

ಸಮಾಜ ಕಲ್ಯಾಣ ಇಲಾಖೆಗೆ ರಾಜ್ಯವು 118.51 ಕೋಟಿ ರು. ಮತ್ತು ಕೇಂದ್ರವು 315.66 ಕೋಟಿ ರು. ಸೇರಿ ಒಟ್ಟು 434.17 ಕೋಟಿ ರು. ಅನುದಾನವಿತ್ತು. ಈ ಪೈಕಿ ಕೇಂದ್ರ ಸರ್ಕಾರವು 315.66 ಕೋಟಿ ರು. ಪೈಕಿ 36.46 ಕೋಟಿ ರು.ಗಳನ್ನಷ್ಟೇ ಬಿಡುಗಡೆ ಮಾಡಿ 279.2 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಒಟ್ಟು ಅನುದಾನಕ್ಕೆ ಶೇ.22.85ರಷ್ಟು ಮಾತ್ರ ಆರ್ಥಿಕ ಪ್ರಗತಿ ಸಾಧಿಸಿದೆ.

 

 

ಅರಣ್ಯ ಇಲಾಖೆಗೆ ರಾಜ್ಯ ಸರ್ಕಾರವು 66.15 ಕೋಟಿ ರು., ಕೇಂದ್ರ ಸರ್ಕಾರವು 78.00 ಕೋಟಿ ರು. ಸೇಇ ಒಟ್ಟು 144.15 ಕೋಟಿ ರು. ಅನುದಾನವಿದೆ.ಈ ಪೈಕಿ ರಾಜ್ಯವು 12.87 ಕೋಟಿ ಮತ್ತು ಕೇಂದ್ರವು ಕೇವಲ 9.93 ಕೋಟಿ ರು. ಬಿಡುಗಡೆ ಸೇರಿ ಒಟ್ಟಾರೆ 22.80 ಕೋಟಿ ರು. ಬಂದಿದೆ. ರಾಜ್ಯ ಸರ್ಕಾರವು 53.28 ಕೋಟಿ ರು. ಕೇಂದ್ರವು 68.07 ಕೋಟಿ ರು. ಸೇರಿದಂತೆ 121.35 ಕೋಟಿ ರು. ಬಿಡುಗಡೆಗೆ ಬಾಕಿ ಉಳಿಸಿಕೊಂಡಿರುವುದು ತಿಳಿದು ಬಂದಿದೆ.

 

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ರಾಜ್ಯವು 100.00 ಕೋಟಿ ರು. ಕೇಂದ್ರವು 300.00 ಕೋಟಿ ರು ಸೇರಿ ಒಟ್ಟು 400 ಕೋಟಿ ರು. ಅನುದಾನ ಲಭ್ಯವಾಗಿಸಿಕೊಂಡಿತ್ತು. ಈ ಪೈಕಿ ರಾಜ್ಯವು 25.00 ಕೋಟಿ ಮತ್ತು ಕೇಂದ್ರವು ಕೇವಲ 75.00 ಕೋಟಿ ರು. ಸೇರಿ 100.00 ಕೋಟಿ ರು.ಗಳನ್ನಷ್ಟೇ ಬಿಡುಗಡೆ ಮಾಡಿದ್ದು ಬಿಡುಗಡೆಗೆ ಇನ್ನೂ 300 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಬಿಡುಗಡೆಯಾಗಿರುವ 100.00 ಕೋಟಿ ರು.ನಲ್ಲಿ ಖರ್ಚು ಮಾಡಿರುವುದು ಕೇವಲ 1.91 ಕೋಟಿಯಷ್ಟೇ. ಹೀಗಾಗಿ ಒಟ್ಟು ಅನುದಾನಕ್ಕೆ ಶೇ.0.48ರಷ್ಟು ಮಾತ್ರ ಆರ್ಥಿಕ ಪ್ರಗತಿ ಸಾಧಿಸಿದೆ.

 

ಪರಿಶಿಷ್ಟ ಪಂಗಡಗಳ ಇಲಾಖೆಗೆ ರಾಜ್ಯ ಸರ್ಕಾರವು ನಯಾಪೈಸೆಯನ್ನು ನೀಡಿಲ್ಲ. ಕೇಂದ್ರ ಸರ್ಕಾರವು 261.05 ಕೋಟಿ ರು. ಅನುದಾನದ ಪೈಕಿ 93.53 ಕೋಟಿ ರು. ಬಿಡುಗಡೆ ಮಾಡಿತ್ತು. ಬಿಡುಗಡೆಗೆ 167.52 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಇದು ಒಟ್ಟು ಅನುದಾನಕ್ಕೆ ಶೇ.34.57ರಷ್ಟು ಆರ್ಥಿಕ ಪ್ರಗತಿ ಸಾಧಿಸಿದಂತಾಗಿದೆ.

 

ಹಿಂದುಳಿದ ವರ್ಗಗಳ ಇಲಾಖೆಗೆ ರಾಜ್ಯ ಸರ್ಕಾರವು 28.33 ಕೋಟಿ ರು. ಮತ್ತು ಕೇಂದ್ರವು 84.25 ಕೋಟಿ ರು ಸೇರಿ 112.58 ಕೋಟಿ ರು. ಲಭ್ಯವಾಗಿಸಿಕೊಂಡಿತ್ತು. ಈ ಪೈಕಿ ರಾಜ್ಯ ಸರ್ಕಾರವು ನಯಾಪೈಸೆಯನ್ನೂ ನೀಡಿಲ್ಲ. ಕೇಂದ್ರವು 45.46 ಕೋಟಿ ರು.ಗಳನ್ನು ಬಿಡುಗಡೆಗೆ ಬಾಕಿ ಇರಿಸಿಕೊಂಡಿದೆಯಾದರೂ ಬಿಡುಗಡೆಯಾಗಿರುವ ಅನುದಾನದಲ್ಲಿ ವೆಚ್ಚವನ್ನು ಶೂನ್ಯವೆಂದು ತೋರಿಸಿದೆ.

 

ತೋಟಗಾರಿಕೆ ಇಲಾಖೆಗೆ ರಾಜ್ಯ ಸರ್ಕಾರವು 205.38 ಕೋಟಿ ರು. ಕೇಂದ್ರವು 524.55 ಕೋಟಿ , ಪ್ರಾಥಮಿಕ ಶಿಲ್ಕಕು ಸೇರಿ ಒಟ್ಟು 958.27 ಕೋಟಿ ರು. ಅನುದಾನ ಲಭ್ಯವಾಗಿತ್ತು. ಈ ಪೈಕಿ ರಾಜ್ಯ ಸರ್ಕಾರವು 156.62 ಕೋಟಿ, ಕೇಂದ್ರವು 245.72 ಕೋಟಿ ರು. ಸೇರಿ ಒಟ್ಟು 402.34 ಕೋಟಿ ರು. ಬಿಡುಗಡೆ ಮಾಡಿತ್ತು. ರಾಜ್ಯವು ತನ್ನ ಪಾಲಿನಲ್ಲಿ 48.76 ಕೋಟಿ ರು., ಕೇಂದ್ರವು 278.83 ಕೋಟಿ ರು. ಬಿಡುಗಡೆಗೆ ಬಾಕಿ ಉಳಿಸಿಕೊಂಡಿದೆ. ವಿಶೇಷವೆಂದರೆ ಬಿಡುಗಡೆಯಾಗಿರುವ 402.34 ಕೋಟಿ ರು ಗಿಂತಲೂ 450.66 ಕೋಟಿ ರು. ಒಟ್ಟು ವೆಚ್ಚವಾಗಿದೆ ಎಂದು ತೋರಿಸಿದೆ. ಬಿಡುಗಡೆಗಿಂತಲೂ 48.32 ಕೋಟಿ ರು. ಅಧಿಕ ವೆಚ್ಚ ಮಾಡಿರುವುದು ಗೊತ್ತಾಗಿದೆ.

 

 

ಕೃಷಿ ಇಲಾಖೆಗೆ ರಾಜ್ಯ ಸರ್ಕಾರವು 437.63 ಕೋಟಿ ರು., ಕೇಂದ್ರವು 611.42 ಕೋಟಿ ರು., ಪ್ರಾಥಮಿಕ ಶಿಲ್ಕು 236.56 ಕೋಟಿ ರು. ಸೇರಿ ಒಟ್ಟಾರೆ 1,285.61 ಕೋಟಿ ರು. ಅನುದಾನ ಲಭ್ಯವಿತ್ತು. ಈ ಪೈಕಿ ರಾಜ್ಯ ಸರ್ಕಾರವು 437.63 ಕೋಟಿ ರು.ನಲ್ಲಿ 205.10 ಕೋಟಿ , ಕೇಂದ್ರವು 611.42 ಕೋಟಿ ರು.ನಲ್ಲಿ 308.32 ಕೋಟಿ ರು. ಸೇರಿ ಒಟ್ಟು 513.41 ಕೋಟಿ ರು. ಬಿಡುಗಡೆ ಮಾಡಿತ್ತು. ರಾಜ್ಯವು 232.53 ಕೋಟಿ ರು., ಕೇಂದ್ರವು 303.01 ಕೋಟಿ ರು. ಸೇರಿ 535.54 ಕೋಟಿ ರು ಬಿಡುಗಡೆಗೆ ಬಾಕಿ ಇರಿಸಿಕೊಂಡಿದೆ.

 

ಆರೋಗ್ಯ ಇಲಾಖೆಗೆ ರಾಜ್ಯವು 1,010.69 ಕೋಟಿ ರು., ಕೇಂದ್ರವು 1,112.25 ಕೋಟಿ ರು., ಪ್ರಾಥಮಿಕ ಶಿಲ್ಕು 732.32 ಕೋಟಿ ರು. ಸೇರಿ ಒಟ್ಟು 2,855.26 ಕೋಟಿ ರು. ಅನುದಾನ ಲಭ್ಯವಾಗಿರಿಸಿಕೊಂಡಿತ್ತು. ಈ ಪೈಕಿ ರಾಜ್ಯ ಸರ್ಕಾರವು ತನ್ನ ಪಾಲಿನ 1,010.69 ಕೋಟಿ ರು ಪೈಕಿ 601.18 ಕೋಟಿ ರು ಬಿಡುಗಡೆ ಮಾಡಿ 409.51 ಕೋಟಿ ರು., ಕೇಂದ್ರವು 495.12 ಕೋಟಿ ರು. ಸೇರಿ ಒಟ್ಟಾರೆ 904.63 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಬಿಡುಗಡೆಯಾಗಿದ್ದ 1,218.31 ಕೋಟಿ ರು. ಪೈಕಿ 1,212.92 ಕೋಟಿ ರು. ಖರ್ಚು ಮಾಡಿ ವೆಚ್ಚಕ್ಕೆ 5.39 ಕೋಟಿ ರು. ವೆಚ್ಚಕ್ಕೆ ಬಾಕಿ ಉಳಿಸಿಕೊಂಡಿರುವುದು ತಿಳಿದು ಬಂದಿದೆ.

 

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ರಾಜ್ಯವು 4,405.02 ಕೋಟಿ ರು., ಕೇಂದ್ರವು 1,444.47 ಕೋಟಿ ರು., ಪ್ರಾಥಮಿಕ ಶಿಲ್ಕು 136.35 ಕೋಟಿ ರು. ಸೇರಿ ಒಟ್ಟು 5,985.84 ಕೋಟಿ ರು ಅನುದಾನ ಲಭ್ಯವಿತ್ತು. ಈಪೈಕಿ ಒಟ್ಟಾರೆ 3,580.73 ಕೋಟಿ ರು. ಬಿಡುಗಡೆ ಆಗಿದೆ. ರಾಜ್ಯವು ತನ್ನ ಪಾಲಿನ 4,405.02 ಕೋಟಿ ರು.ನಲ್ಲಿ 3,580.73 ಕೋಟಿ ರು. ಬಿಡುಗಡೆ ಮಾಡಿ 824.29 ಕೋಟಿ ರು. ಬಾಕಿ ಇರಿಸಿಕೊಂಡಿದೆ. ಕೇಂದ್ರವು ಸಹ ತನ್ನ ಪಾಲಿನಲ್ಲಿ ಬಿಡುಗಡೆಗೆ 540.84 ಕೋಟಿ ಬಾಕಿ ಇರಿಸಿಕೊಂಡಿದೆ.

 

ಗ್ರಾಮೀಣಾಭಿವೃದ್ದಿ ಇಲಾಖೆಗೆ ರಾಜ್ಯವು 4,580.08 ಕೋಟಿ ರು., ಕೇಂದ್ರವು 9,812.80 ಕೋಟಿ, ಪ್ರಾಥಮಿಕ ಶಿಲ್ಕು 4,211.76 ಕೋಟಿ ರು. ಸೇರಿ 18,605.07 ಕೋಟಿ ರು. ಅನುದಾನ ಲಭ್ಯವಿದೆ. ರಾಜ್ಯವು ತನ್ನ ಪಾಲಿನಲ್ಲಿ 2,338.78 ಕೋಟಿ ರು., 3,165.44 ಕೋಟಿ ರು. ಸೇರಿ ಒಟ್ಟಾರೆ 5,504.22 ಕೋಟಿ ರು. ಬಿಡುಗಡೆಗೆ ಬಾಕಿ ಇರಿಸಿಕೊಂಡಿದೆ. ವಿಶೇಷವೆಂದರೆ ಬಿಡುಗಡೆಯಾಗಿರುವ 8,889.09 ಕೋಟಿ ರು. ಗಿಂತಲೂ 11,298.86 ಕೋಟಿ ರು. ಒಟ್ಟು ವೆಚ್ಚವಾಗಿದೆ ಎಂದು ತೋರಿಸಿದೆ. ಇದು ಬಿಡುಗಡೆಯಾಗಿದ್ದ ಅನುದಾನಕ್ಕೆ ಎದುರಾಗಿ 2,409.77 ಕೋಟಿ ರು. ಹೆಚ್ಚುವರಿ ವೆಚ್ಚ ಮಾಡಿದಂತಾಗಿದೆ.

 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಗೆ ರಾಜ್ಯವು 2,325.06 ಕೋಟಿ ರು. ಕೇಂದ್ರವು 1,189.18 ಕೋಟಿ ರು., ಪ್ರಾಥಮಿಕ ಶಿಲ್ಕು 11.53 ಕೋಟಿ ರು. ಸೇರಿ ಒಟ್ಟಾರೆ 3,525.77 ಕೋಟಿ ಅನುದಾನ ಲಭ್ಯವಿದೆ. ಈ ಪೈಕಿ ರಾಜ್ಯವು ತನ್ನ ಪಾಲಿನ 560.64 ಕೋಟಿ ರು., 154.73 ಕೋಟಿ ರು ಸೇರಿ 715.37 ಕೋಟಿ ರು. ಬಿಡುಗಡೆಗೆ ಬಾಕಿ ಉಳಿಸಿಕೊಂಡಿರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ.

SUPPORT THE FILE

Latest News

Related Posts