ಮುಗ್ಗುರಿಸಿದ ಪ್ರಧಾನಮಂತ್ರಿ ಜನವಿಕಾಸ; ಪ್ರಮುಖ ಕಾರ್ಯಕ್ರಮಗಳಿಗೆ 41,942 ಕೋಟಿ ವೆಚ್ಚಕ್ಕೆ ಬಾಕಿ

ಬೆಂಗಳೂರು; ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿನ ಪ್ರಧಾನಮಂತ್ರಿ ಜನವಿಕಾಸ ಕಾರ್ಯಕ್ರಮ, ಪ್ರಾಥಮಿಕ ಆರೋಗ್ಯ ಸೌಲಭ್ಯ, ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನ, ಪ್ರಧಾನಮಂತ್ರಿ ಕಿಸಾನ್‌, ಕೃಷಿ ಮೂಲಭೂತ ಸೌಕರ್ಯ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ, ಪ್ರಾಥಮಿಕ ಆರೋಗ್ಯ ಸೌಲಭ್ಯ ಬಲಪಡಿಸುವುದು, ವಿದ್ಯಾರ್ಥಿಗಳ ರಿಯಾಯಿತಿ ಪಾಸ್‌, ಕುಟೀರ ಭಾಗ್ಯ, ನೀರಾವರಿ ಪಂಪ್‌ಸೆಟ್‌, ಕನಿಷ್ಠ ಬೆಂಬಲ ಬೆಲೆ ಗಳಂತಹ ಮಹತ್ತರ ಕಾರ್ಯಕ್ರಮಗಳಿಗೆ 2022-23ನೇ ಸಾಲಿಗೆ ಬಿಡುಗಡೆಯಾಗಿದ್ದ ಒಟ್ಟು ಅನುದಾನದ ಪೈಕಿ 41,942.68 ಕೋಟಿ ರು.ಗಳನ್ನು ವೆಚ್ಚ ಮಾಡದೇ ಬಾಕಿ ಉಳಿಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ.

 

ಹಿಜಾಬ್‌, ಹಲಾಲ್‌ ಕಟ್‌, ಪಠ್ಯಪುಸ್ತಕ ಪರಿಷ್ಕರಣೆ ವಿವಾದಗಳ ಬೆಂಕಿಯಲ್ಲಿ ಕೈಕಾಯಿಸಿಕೊಂಡು ವಿಧಾನಸಭೆ ಚುನಾವಣೆಗೆ ತಯಾರಿ ನಡೆಸುತ್ತಲೇ ವಿಜಯ ಸಂಕಲ್ಪ, ಫಲಾನುಭವಿ ಸಮಾವೇಶಗಳಿಗೆ ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತಿರುವ ರಾಜ್ಯ ಬಿಜೆಪಿ ಸರ್ಕಾರವು ಪ್ರಮುಖ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರತ್ತ ಗಮನವನ್ನೇ ಹರಿಸಿಲ್ಲ. ಯೋಜನಾ ಇಲಾಖೆಯು 2022-23ನೇ ಸಾಲಿನ ಪ್ರಮುಖ ಕಾರ್ಯಕ್ರಮಗಳ ಕುರಿತು ಕೆಡಿಪಿ ಸಭೆಗೆ ಒದಗಿಸಿರುವ ಅಂಕಿ ಅಂಶಗಳ ಸಮಗ್ರ ಮಾಹಿತಿಯು ‘ದಿ ಫೈಲ್‌’ ಗೆ ಲಭ್ಯವಾಗಿದೆ.

 

ಪ್ರಮುಖ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗುವ ಸಾಧ್ಯತೆಗಳಿವೆ. ಸಾವಿರಾರು ಕೋಟಿ ರುಪಾಯಿ ಅನುದಾನವಿದ್ದರೂ ಖರ್ಚು ಮಾಡದೇ ಬಾಕಿ ಉಳಿಸಿಕೊಂಡಿರುವ ಕಾರಣ ಈ ಹಣವು ಸರ್ಕಾರಕ್ಕೆ ಮರಳಿಸಲು ದಾರಿಮಾಡಿಕೊಟ್ಟಂತಾಗುತ್ತದೆ. ಕೆಡಿಪಿ ಸಭೆಗೆ ಒದಗಿಸಿರುವ ಅಂಕಿ ಅಂಶಗಳ ವಿವರವಾದ ಮಾಹಿತಿಯು ರಾಜ್ಯ ಬಿಜೆಪಿ ಸರ್ಕಾರದ ಪ್ರಗತಿಗೆ ಕನ್ನಡಿ ಹಿಡಿದಿದೆ.

 

ಮತ್ತೊಂದು ವಿಶೇಷವೆಂದರೇ ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಪ್ರಮುಖ ಕಾರ್ಯಕ್ರಮಗಳಿಗೆ ಒಟ್ಟು ಅನುದಾನದ ಪೈಕಿ ಬಿಡುಗಡೆಯಾಗಿದ್ದ ಕನಿಷ್ಠ ಹಣಕ್ಕಿಂತಲೂ ಹೆಚ್ಚಿನ ವೆಚ್ಚವಾಗಿರುವುದು ಇಲಾಖೆಗಳು ಒದಗಿಸಿರುವ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

 

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿ ಜಾರಿಗೊಳಿಸಿದ್ದ ಪ್ರಧಾನ ಮಂತ್ರಿ ಜನವಿಕಾಸ ಕಾರ್ಯಕ್ರಮಕ್ಕೆ 400.00 ಕೋಟಿ ರು. ಒಟ್ಟು ಅನುದಾನದಲ್ಲಿ 100.00 ಕೋಟಿ ರು.ಗಳನ್ನು ಬಿಡುಗಡೆ ಮಾಡಿದ್ದರೂ 2023ರ ಫೆಬ್ರುವರಿ ಅಂತ್ಯಕ್ಕೆ ಖರ್ಚು ಮಾಡಿರುವುದು ಕೇವಲ  1.91 ಕೋಟಿ ರು. ಮಾತ್ರ. 398.09 ಕೋಟಿ ರು.ಗಳನ್ನು ವೆಚ್ಚ ಮಾಡಿಲ್ಲ. ಇದು ಅಲ್ಪಸಂಖ್ಯಾತರ ಕಲ್ಯಾಣದ ಮೇಲೆ ಕಾಳಜಿಯು ಹೇಗಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನ ಒದಗಿಸಿದಂತಾಗಿದೆ.

 

ಪ್ರಾಥಮಿಕ ಆರೋಗ್ಯ ಸೌಲಭ್ಯಗಳನ್ನು ಬಲಪಡಿಸಲು ಹದಿನೈದನೇ ಹಣಕಾಸು ಆಯೋಗದ ಅನುದಾನದಲ್ಲಿ 911.11 ಕೋಟಿ ರು., ರಾಷ್ಟ್ರೀಯ ಆರೋಗ್ಯ ಅಭಿಯಾನ, 1,372.11 ಕೋಟಿ , ನೀರಾವರಿ ಪಂಪ್‌ಸೆಟ್‌ ಭಾಗ್ಯ, ಕುಟೀರ ಜ್ಯೋತಿ, ವಿದ್ಯುತ್‌ ಸ್ಥಾವರಗಳಿಗೆ ವಿದ್ಯುತ್‌ ಸರಬರಾಜಿಗೆ ಸಹಾಯಧನಕ್ಕೆ ನೀಡಿದ್ದ 14,092 ಕೋಟಿ ರು. ಪೈಕಿ 9,193.67 ಕೋಟಿ ರು. ಬಿಡುಗಡೆಯಾಗಿದ್ದು ಈ ಪೈಕಿ ಇನ್ನು 4,898.94 ಕೋಟಿ ರು.ಗಳನ್ನು ಖರ್ಚು ಮಾಡದೆಯೇ ಬಾಕಿ ಉಳಿಸಿಕೊಂಡಿರುವುದು ಅಂಕಿ ಅಂಶದಿಂದ ತಿಳಿದು ಬಂದಿದೆ.

 

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ 1,000 ಕೋಟಿ ರು. ಅಂದಾಜಿಸಿದ್ದಾದರೂ ಫೆಬ್ರುವರಿ ಅಂತ್ಯಕ್ಕೆ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಈ ಕಾರ್ಯಕ್ರಮದಲ್ಲಿ 1,000 ಕೋಟಿ ರು. ವೆಚ್ಚವಾಗಿಲ್ಲ.

 

ಗ್ರಾಮೀಣ ಸುಮಾರ್ಗ ಯೋಜನೆಗೆ 2,217.13 ಕೋಟಿ ರು. ಅಂದಾಜಿಸಿತ್ತು. ಈ ಪೈಕಿ 903.38 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಗ್ರಾಮೀಣ ಕುಡಿಯುವ ನೀರು ಯೋಜನೆಗೆ ಒಟ್ಟು 8,529.86 ಕೋಟಿ ರು. ಅನುದಾನದ ಪೈಕಿ 1,996.79 ಕೋಟಿ ರು. ಬಿಡುಗಡೆಯಾಗಿದ್ದರೂ 4,101.26 ಕೋಟಿ ರು. ಖರ್ಚು ಮಾಡಿದೆ. ಒಟ್ಟು ಅನುದಾನದ ಪೈಕಿ ವೆಚ್ಚಕ್ಕೆ 4,428.60 ಕೋಟಿ ರು. ಬಾಕಿ ಉಳಿಸಿಕೊಂಡಿರುವುದು ಗೊತ್ತಾಗಿದೆ.

 

ರಾಷ್ಟ್ರೀಯ ಗ್ರಾಮ ಸ್ವರಾಜ್‌ ಅಭಿಯಾನಕ್ಕೆ 60 ಕೋಟಿ ರು. ಬಿಡುಗಡೆಯಾಗಿದ್ದರೂ ಬಿಡಿಗಾಸನ್ನೂ ಖರ್ಚು ಮಾಡಿಲ್ಲ. ಕರ್ನಾಟಕ ನೀರಾವರಿ ನಿಗಮದಲ್ಲಿ 4,758.77 ಕೋಟಿ ರು. ಅನುದಾನದ ಪೈಕಿ 3,022.46 ಕೋಟಿ ರು. ಬಿಡುಗಡೆಯಾಗಿದೆ. ಈ ಪೈಕಿ 3,240.41 ಕೋಟಿ ರು ವೆಚ್ಚವಾಗಿದ್ದು ಇನ್ನೂ ವೆಚ್ಚಕ್ಕೆ 1,518.36 ಕೋಟಿ ರು. ಬಾಕಿ ಉಳಿದಿದೆ.

 

ಕೃಷ್ಣಭಾಗ್ಯ ಜಲನಿಗಮ ಭೂ ಸ್ವಾಧೀನ ವೆಚ್ಚಗಳಿಗಾಗಿ 2,726.30 ಕೋಟಿ ರು. ಅನುದಾನದ ಪೈಕಿ ಬಿಡುಗಡೆಯಾಗಿದ್ದು 705.36 ಕೋಟಿ ರು. ಮಾತ್ರ. ಆದರೆ 1,234.64 ಕೋಟಿ ರು. ಒಟ್ಟು ವೆಚ್ಚವಾಗಿದೆ ಎಂದು ತೋರಿಸಲಾಗಿದೆ. ವೆಚ್ಚಕ್ಕೆ 1,491.66 ಕೋಟಿ ರು. ಬಾಕಿ ಉಳಿದಿದೆ. ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಭೂ ಸ್ವಾಧೀನ ವೆಚ್ಚಕ್ಕೆಂದು 472.72 ಕೋಟಿ ರು. ಪೈಕಿ 225.00 ಕೋಟಿ ರು. ಬಿಡುಗಡೆಯಾಗಿತ್ತು. ಈ ಪೈಕಿ 172.71 ಕೋಟಿ ರು. ಮಾತ್ರ ವೆಚ್ಚವಾಗಿದ್ದು ವೆಚ್ಚಕ್ಕೆ 300.01 ಕೋಟಿ ರು. ಬಾಕಿ ಉಳಿದಿದೆ.

 

ನಗರಾಭಿವೃದ್ದಿ ಇಲಾಖೆಯ ಅಮೃತ್‌ ಮಿಷನ್‌ ಕಾರ್ಯಕ್ರಮಕ್ಕೆ 1,155.14 ಕೋಟಿ ರು. ಅನುದಾನವಿದೆ. ಇದರಲ್ಲಿ ಬಿಡುಗಡೆಯಾಗಿದ್ದು 814.37 ಕೋಟಿ ರು. ಮಾತ್ರ. ಈ ಪೈಕಿ 121.51 ಕೋಟಿ ರು ಖರ್ಚು ಮಾಡಿದ್ದು ವೆಚ್ಚಕ್ಕೆ 1,033.63 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಸ್ಮಾರ್ಟ್‌ ಸಿಟಿ ಮಿಷನ್‌ಗೆಂದು 2,332.00 ಕೋಟಿ ರು. ಅನುದಾನದಲ್ಲಿ 568.75 ಕೋಟಿ ರು. ಮಾತ್ರ ಬಿಡುಗಡೆ ಮಾಡಲಾಗಿದೆ. ಆದರೆ 1,300.94 ಕೋಟಿ ರು. ವೆಚ್ಚವಾಗಿದೆ ಎಂದು ತೋರಿಸಲಾಗಿದೆ. ವೆಚ್ಚಕ್ಕೆ 1,031.06 ಕೋಟಿ ರು. ಬಾಕಿ ಉಳಿದಿರುವುದು ಅಂಕಿ ಅಂಶದಿಂದ ಗೊತ್ತಾಗಿದೆ.

 

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ 3,783.59 ಕೋಟಿ ರು. ಅನುದಾನದ ಪೈಕಿ 1,500.00 ಕೋಟಿ ರು. ಬಿಡುಗಡೆಯಾಗಿತ್ತು. ಈ ಪೈಕಿ 1,117.87 ಕೋಟಿ ರು. ಖರ್ಚಾಗಿದೆ. ವೆಚ್ಚಕ್ಕೆ 2,685.72 ಕೋಟಿ ರು. ಬಾಕಿ ಇದೆ. ಪೂರಕ ಪೌಷ್ಠಿಕಾಂಶ ಕಾರ್ಯಕ್ರಮಕ್ಕೆ ಕೇಂದ್ರದ ನೆರವು ಕಾರ್ಯಕ್ರಮದಡಿಯಲ್ಲಿ 1,505.41 ಕೋಟಿ ಅನುದಾನದಲ್ಲಿ 1,204.37 ಕೋಟಿ ರು. ಬಿಡುಗಡೆಯಾಗಿತ್ತು. ಈ ಪೈಕಿ ಖರ್ಚಾಗಿರುವುದು 814.85 ಕೋಟಿ ರು. ಮಾತ್ರ. ವೆಚ್ಚ ಮಾಡಲು ಇನ್ನೂ 690.56 ಕೋಟಿ ರು. ಬಾಕಿ ಉಳಿಸಿಕೊಂಡಿದೆ.

 

ಪೋಷಣ ಅಭಿಯಾನದಲ್ಲಿ 91.38 ಕೋಟಿ ರು. ಅನುದಾನದ ಪೈಕಿ ಬಿಡುಗಡೆಯಾಗಿದ್ದು 23.38 ಕೋಟಿ ಮಾತ್ರ. ಇದನ್ನು ಪೂರ್ಣವಾಗಿ ವೆಚ್ಚ ಮಾಡಿರುವ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆಯು ಈ ಕಾರ್ಯಕ್ರಮದಡಿಯಲ್ಲಿ ಇನ್ನೂ 68.00 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿದೆ.

 

ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಡಿಯಲ್ಲಿ 1,368.84 ಕೋಟಿ ರು. ಅನುದಾನವಿದ್ದು ಈ ಪೈಕಿ 596.00 ಕೋಟಿ ರು. ಬಿಡುಗಡೆಯಾಗಿದೆ. ಇದರಲ್ಲಿ 526.48 ಕೋಟಿ ರು ಖರ್ಚು ಮಾಡಿರುವ ಇಲಾಖೆಯು 842.36 ಕೋಟಿ ರು. ವೆಚ್ಚಕ್ಕೆ ಬಾಕಿ ಉಳಿಸಿಕೊಂಡಿದೆ.

 

ಜಿಲ್ಲಾ ಮತ್ತು ಇತರೆ ರಸ್ತೆಗಳ ಕಾಮಗಾರಿಗಳ ಕಾರ್ಯಕ್ರಮಗಳಡಿಯಲ್ಲಿ 2,348.81 ಕೋಟಿ ರು. ಅನುದಾನವಿದ್ದು ಇದರಲ್ಲಿ 1,560. 68 ಕೋಟಿ ರು. ಬಿಡುಗಡೆಯಾಗಿತ್ತು. ಇದರಲ್ಲಿ 1,331.16 ಕೋಟಿ ರು. ಖರ್ಚು ಮಾಡಿ ಇನ್ನು 1,017.65 ಕೋಟಿ ರು. ವೆಚ್ಚಕ್ಕೆ ಬಾಕಿ ಉಳಿಸಿಕೊಂಡಿದೆ.

 

ಪ್ರಧಾನಮಂತ್ರಿ ಆವಾಜ್‌ ಯೋಜನೆ (ನಗರ) 718.84 ಕೋಟಿ ರು. ಅನುದಾನವಿದ್ದು ಇದನ್ನು ಪೂರ್ಣ ಬಿಡುಗಡೆ ಮಾಡಲಾಗಿದೆ. ಆದರೆ ಖರ್ಚು ಮಾಡಿದ್ದು 290.94 ಕೋಟಿ ಮಾತ್ರ. ವೆಚ್ಚಕ್ಕೆ ಇನ್ನೂ 427.90 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಪ್ರಧಾನಮಂತ್ರಿ ಆವಾಜ್‌ ಯೋಜನೆ (ಗ್ರಾಮೀಣ್‌) 371.75 ಕೋಟಿ ರು. ಅನುದಾನದ ಪೈಕಿ ಬಿಡಿಗಾಸನ್ನೂ ಬಿಡುಗಡೆ ಮಾಡದಿದ್ದರೂ 67.17ಕೋಟಿ ರು. ಖರ್ಚಾಗಿದೆ ಎಂದು ತೋರಿಸಲಾಗಿದೆ. ವೆಚ್ಚಕ್ಕೆ ಇನ್ನೂ 304.58 ಕೋಟಿ ರು. ಬಾಕಿ ಉಳಿಸಿಕೊಂಡಿದೆ.

 

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ 1,075.90 ಕೋಟಿ ರು. ಅನುದಾನದ ಪೈಕಿ ಬಿಡುಗಡೆಯಾಗಿದ್ದ 38.40 ಕೋಟಿ ರು.ಗಳನ್ನು ಖರ್ಚು ಮಾಡಿರುವ ಸಹಕಾರ ಇಲಾಖೆಯು ಇನ್ನೂ 1,037.50 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿದೆ. ವಿದ್ಯಾರ್ಥಿಗಳು ಮತ್ತು ಇತರೆ ರಿಯಾಯಿತಿ ಪಾಸ್‌ಗಳ ಕಾರ್ಯಕ್ರಮದಡಿಯಲ್ಲಿ 948.53 ಕೋಟಿ ರು. ಅನುದಾನದಲ್ಲಿ 652.22 ಕೋಟಿ ರು. ಬಿಡುಗಡೆ ಮಾಢಿದ್ದು ಇದರಲ್ಲಿ 172.86ಕೋಟಿ ರು. ಮಾತ್ರ ಖರ್ಚು ಮಾಡಿದೆ. ಖರ್ಚಿಗೆ 775.67 ಕೋಟಿ ರು. ಬಾಕಿ ಉಳಿಸಿಕೊಂಡಿರುವುದು ಅಂಕಿ ಅಂಶದಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts