ಪದನ್ನೋತಿ ಜತೆಯಲ್ಲೇ ವರ್ಗಾವಣೆಗೆ 3 ಕೋಟಿ ಲಂಚದ ಆರೋಪ;ತರಾತುರಿಯಲ್ಲಿ ಆಯೋಗಕ್ಕೆ ಪಟ್ಟಿ ರವಾನೆ

ಬೆಂಗಳೂರು: ವಿಧಾನಸಭೆ ಚುನಾವಣೆ ನೀತಿ  ಸಂಹಿತೆ  ಅಧಿಸೂಚನೆ ಪ್ರಕಟಣೆಗೆ  ದಿನಗಣನೆ ನಡೆಯುತ್ತಿರುವ ಹೊತ್ತಿನಲ್ಲೇ  ಅಬಕಾರಿ ಇಲಾಖೆಯು 12 ಮಂದಿಗೆ  ಅಧಿಕಾರಿಗಳ ಪದನ್ನೋತಿ ನೀಡುವ ಜತೆಯಲ್ಲಿಯೇ   ಉಪ ಆಯುಕ್ತರ ವರ್ಗಾವಣೆಗೂ  ಮುಂದಾಗಿ ಕೋಟ್ಯಂತರ ರುಪಾಯಿ ಭ್ರಷ್ಟಾಚಾರ ನಡೆಸಿದೆ ಎಂಬ ಆಪಾದನೆ ಕೇಳಿ ಬಂದಿದೆ.

 

ಈಗಾಗಲೇ ಚುನಾವಣೆ ತರಬೇತಿ ಪಡೆದಿರುವ ಅಬಕಾರಿ ಉಪ ಆಯುಕ್ತರುಗಳನ್ನೂ ಅಂತರ್‌ ಜಿಲ್ಲೆಗೆ ವರ್ಗಾವಣೆ  ಮಾಡಲು ಪಟ್ಟಿ ತಯಾರಿಸಿರುವುದರ ಹಿಂದೆ  ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ಉಪ ಆಯುಕ್ತರೊಬ್ಬರ ಮೂಲಕವೇ  ಕೋಟ್ಯಂತರ ರುಪಾಯಿ  ಕೈಬದಲಾವಣೆ ಆಗಿದೆ   ಎಂಬ ಗುರುತರವಾದ ಆರೋಪಗಳೂ ಕೇಳಿ ಬಂದಿವೆ.

 

ಚುನಾವಣೆ ನೀತಿ ಸಂಹಿತೆ ಜಾರಿಗೆ ಕೆಲವೇ ದಿನಗಳು ಬಾಕಿ ಇರುವಾಗ   ಪದನ್ನೋತಿ  ಹೆಸರಿನಲ್ಲಿ  ಉಪ ಆಯುಕ್ತರುಗಳ ವರ್ಗಾವಣೆ ಸಂಬಂಧದ ಕಡತವನ್ನು ಮುಖ್ಯ ಚುನಾವಣಾಧಿಕಾರಿಗಳು ಸ್ವೀಕರಿಸಿರುವುದು ಕೂಡ  ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಅಲ್ಲದೇ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸುವುದರೊಳಗಾಗಿಯೇ ಪದನ್ನೋತಿ ಮತ್ತು ವರ್ಗಾವಣೆ ಕಡತಕ್ಕೆ ಮುಖ್ಯ ಚುನಾವಣಾಧಿಕಾರಿಗಳ ಅನುಮೋದನೆ ಪಡೆದುಕೊಳ್ಳಲು ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರೂ ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳೂ ಕಡತದ ಹಿಂದೆ ಬಿದ್ದಿದ್ದಾರೆ ಎಂದು ಗೊತ್ತಾಗಿದೆ.

 

ಜೇಷ್ಠತೆಯಲ್ಲಿ ಹಿರಿಯರಾಗಿರುವ  ಅಬಕಾರಿ ಅಧೀಕ್ಷಕರನ್ನು ಕಡೆಗಣಿಸಿ ಜೇಷ್ಠತೆಯಲ್ಲಿ ಅತ್ಯಂತ ಕಿರಿಯರಾಗಿರುವ ಅಧೀಕ್ಷಕರುಗಳಿಗೆ  ಈ ಹಿಂದೆ  ಅಬಕಾರಿ ಉಪ ಆಯುಕ್ತರ ಹೆಚ್ಚುವರಿ ಪ್ರಭಾರದಡಿಯಲ್ಲಿ ಜಿಲ್ಲೆಗಳಿಗೆ ನೇಮಿಸಲಾಗಿತ್ತು.  ಈಗ 12   ಅಬಕಾರಿ ಅಧೀಕ್ಷಕರುಗಳಿಗೆ ಪದನ್ನೋತಿ ನೀಡಲಾಗುತ್ತಿದೆ.  ಆದರೆ ಈ ಪದನ್ನೋತಿ  ಜತೆಗೆ ಹೆಚ್ಚು ಆದಾಯ ಇರುವ  ಆಯ್ದ ಜಿಲ್ಲೆಗಳಿಗೆ    ಅಬಕಾರಿ ಉಪ ಆಯುಕ್ತರುಗಳನ್ನು ವರ್ಗಾವಣೆ ಮಾಡುತ್ತಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಸಂಗನಗೌಡ ಪಿ, ಶಿವಲಿಂಗಪ್ಪ ಬನಹಟ್ಟಿ, ಸ್ಮಿತಾರಾವ್‌, ಮೋತಿಲಾಲ್‌, ಸ್ವಪ್ನಾ ಆರ್‌ ಎಸ್‌, ಕ್ಯಾಪ್ಟನ್‌ ಅಜಿತ್‌ ಕುಮಾರ್‌, ಭರತೇಶ್‌ ವೈ, ಟಿ ಎಂ ಶ್ರೀನಿವಾಸ, ಮಹೇಂದ್ರ ಸಿ ಕೆ , ರಂಗಪ್ಪ, ಅಮಾನುಲ್ಲಾ ಖಾನ್‌, ಮುರುಳೀಧರ್‌ ಸೇರಿ ಒಟ್ಟು 12 ಮಂದಿ ಅಬಕಾರಿ ಅಧೀಕ್ಷರುಗಳಿಗೆ ಅಬಕಾರಿ ಉಪ ಆಯುಕ್ತರ ವೃಂದಕ್ಕೆ ಪದನ್ನೋತಿ ನೀಡಲಾಗುತ್ತಿದೆ ಎಂದು ಲಭ್ಯವಿರುವ ಪಟ್ಟಿಯಿಂದ ಗೊತ್ತಾಗಿದೆ.

 

ಈಗಾಗಲೇ   ಕಾರ್ಯನಿರ್ವಹಿಸುತ್ತಿರುವ ಅಬಕಾರಿ ಉಪ ಆಯುಕ್ತರುಗಳನ್ನು   ಚುನಾವಣೆ ಸಂದರ್ಭದಲ್ಲೂ ಅಬಕಾರಿ ಆಯುಕ್ತರ ಕಚೇರಿಯ ನಾನ್‌ ಎಕ್ಸಿಕ್ಯೂಟಿವ್‌  ಹುದ್ದೆಗೆ ವರ್ಗಾಯಿಸಲಾಗುತ್ತಿದೆ. ಆ ಜಾಗಕ್ಕೆ ಪದನ್ನೋತಿ ಪಡೆಯುತ್ತಿರುವ ಅಧಿಕಾರಿಯನ್ನು  ನೇಮಿಸಲು ಹೊರಟಿದೆ.  ಮತ್ತು ಒಂದೊಂದು ಹುದ್ದೆಗೆ ಎರಡರಿಂದ ಮೂರು ಕೋಟಿ ರು. ಲಂಚ ಪಡೆಯಲಾಗಿದೆ.  ಪದನ್ನೋತಿ ಪಡೆದ ಅಧಿಕಾರಿಗಳ ಪೈಕಿ  ಹಣ ನೀಡಿದವರಿಗೆ ಮಾತ್ರ  ಸ್ಥಳ ತೋರಿಸಲಾಗುತ್ತಿದೆ ಎಂಬ ಆಪಾದನೆಯೂ ಕೇಳಿ ಬಂದಿದೆ.

 

ಹಾಸನ ಜಿಲ್ಲೆಯಲ್ಲಿ ಅಬಕಾರಿ ಉಪ ಆಯುಕ್ತರಾದ ನಾಗೇಶ್‌ಕುಮಾರ್‌ ಡಿ ಮತ್ತು ಬೀದರ್‌ ಜಿಲ್ಲೆಯ ಉಪ ಆಯುಕ್ತರಾದ ಮಂಜುನಾಥ್‌ ಎನ್‌ ಎಂಬುವರನ್ನು ಕ್ರಮವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಬಳ್ಳಾರಿ ಜಿಲ್ಲೆಗೆ 2023ರ ಫೆ.2ರಂದು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ಹಾಸನ ಮತ್ತು ಬೀದರ್‌ ಜಿಲ್ಲೆಗೆ ಇದುವರೆಗೂ ಯಾರನ್ನೂ ನೇಮಿಸದೆಯೇ ಹುದ್ದೆಯನ್ನು ಖಾಲಿ ಬಿಟ್ಟಿರುವುದು ಕೂಡ ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

‘ಹಾಸನ, ಬೀದರ್‌  ಸೇರಿ  ಹೆಚ್ಚು ಆದಾಯ ನೀಡುವ ಜಿಲ್ಲೆಗಳಲ್ಲಿ ಹುದ್ದೆಗಳಿಗೆ ಯಾರನ್ನೂ ನೇಮಿಸದೆಯೇ ಖಾಲಿ ತೋರಿಸಲಾಗಿದೆ.  ಈಗ  ಪದನ್ನೋತಿ ಪಡೆದಿರುವ ಅಧಿಕಾರಿಗಳ ಪೈಕಿ ಯಾರು ಹೆಚ್ಚು ಹಣ ನೀಡಲಿದ್ದಾರೋ ಅಂತಹ ಅಧಿಕಾರಿಗಳಿಗೆ ಹಾಸನ, ಬೀದರ್‌ ಜಿಲ್ಲೆಗೆ ವರ್ಗಾವಣೆ ಮಾಡುತ್ತಾರೆ.  ಆದರೆ ತುಮಕೂರು ಜಿಲ್ಲೆಯಲ್ಲಿ  ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಹಿರಿಯ ಅಬಕಾರಿ ಉಪ ಆಯುಕ್ತರನ್ನು ಅಬಕಾರಿ ಆಯುಕ್ತರ ನಾನ್‌ ಎಕ್ಸಿಕ್ಯೂಟಿವ್ ಹುದ್ದೆಗೆ ವರ್ಗಾಯಿಸಿ ಆ ಜಾಗಕ್ಕೆ  ಪದನ್ನೋತಿ ಹೊಂದಿರುವ ಅಧಿಕಾರಿಯೊಬ್ಬರನ್ನು ನೇಮಿಸಲು ಮುಂದಾಗಿದೆ.  ಈ ಪ್ರಕರಣದಲ್ಲಿ 2.15  ಕೋಟಿ ಲಂಚ ಪಡೆಯಲಾಗಿದೆ.  ಅದೇ ರೀತಿ ಬೀದರ್‌ ಜಿಲ್ಲೆಯಲ್ಲಿಯೂ ಹುದ್ದೆಯನ್ನು ಖಾಲಿ ಇರಿಸಲಾಗಿತ್ತು. ಆ ನಂತರ 1.00 ಕೋಟಿ ರು. ಹಣ ಪಡೆದು ಈಗ ನೇಮಿಸಲಾಗುತ್ತಿದೆ,’  ಎಂದು  ಹೆಸರು ಹೇಳಲಿಚ್ಛಿಸದ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

 

ಪದನ್ನೋತಿ ಹೆಸರಿನಲ್ಲಿ ತುಮಕೂರು ಜಿಲ್ಲೆಗೆ ಬೇರೊಬ್ಬ ಅಧಿಕಾರಿಯಿಂದ ಹಣ ಪಡೆದು ವರ್ಗಾವಣೆ ಮಾಡುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸುವ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು  ಹಾಸನದಲ್ಲಿ ಕಳೆದ 15 ದಿನಗಳಿಂದಲೂ ಈ ಹುದ್ದೆಗೆ ಯಾರನ್ನೂ ನೇಮಿಸದೆಯೇ ಖಾಲಿ ಇರಿಸಲಾಗಿತ್ತು. 2.5 ಕೋಟಿ ರು. ಹಣ ಪಡೆದು ಈಗ ಹಾಸನಕ್ಕೆ ನೇಮಿಸುತ್ತಿರುವುದು ಭ್ರಷ್ಟಾಚಾರಕ್ಕೆ ಸಿಕ್ಕ ನಿದರ್ಶನವಲ್ಲವೇ ಎಂದೂ ಪ್ರಶ್ನಿಸುತ್ತಾರೆ.

 

 

ಚುನಾವಣೆ ಕಾರ್ಯದಲ್ಲಿ ನಿರತರಾದ ಅಧಿಕಾರಿ, ಸಿಬ್ಬಂದಿಗಳನ್ನು ಮುಖ್ಯ ಚುನಾವಣಾಧಿಕಾರಿಯವರ ಸಹಮತಿ ಪಡೆಯದೇ ವರ್ಗಾವಣೆ ಮಾಡಲಾಗುತ್ತಿದೆ ಎಂದು ಖುದ್ದು  ಮುಖ್ಯ ಚುನಾವಣಾಧಿಕಾರಿಗಳು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

 

ಮುಖ್ಯ ಚುನಾವಣಾಧಿಕಾರಿಗಳ ಪತ್ರದಲ್ಲೇನಿದೆ?

 

2023ರ ಸಾರ್ವತ್ರಿಕ ಕರ್ನಾಟಕ ವಿಧಾನಸಭೆ ಚುನಾವಣೆಯು ಸನ್ನಿಹಿತವಾಗುತ್ತಿದ್ದು ಭಾರತ ಚುನಾವಣಾ ಆಯೋಗವು ಸದ್ಯದಲ್ಲಿಯೇ ಮಾದರಿ ನೀತಿಸಂಹಿತೆ ಜಾರಿಗೊಳಿಸಲಿದ್ದು ಈ ಹಂತದಲ್ಲಿ ಚುನಾವಣಾ ಕಾರ್ಯದಲ್ಲಿ ನಿರತರಾದ ಅಧಿಕಾರಿ, ಸಿಬ್ಬಂದಿಗಳನ್ನು ಮುಖ್ಯ ಚುನಾವಣಾಧಿಕಾರಿಯವರ ಸಹಮತಿ ಪಡೆಯದೇ ವರ್ಗಾವಣೆ ಮಾಡುತ್ತಿರುವುದು ಕಂಡು ಬಂದಿದೆ. ಎಲ್ಲಾ ವರ್ಗಾವಣೆ ಪ್ರಕ್ರಿಯೆಗಳಿಗೆ ಮುಖ್ಯ ಚುನಾವಣಾಧಿಕಾರಿಯವರ ಸಹಮತಿ ಪಡೆಯಲು ತಿಳಿಸಿದ್ದರೂ ಹಲವು ಇಲಾಖೆಗಳು ಈ ನಿರ್ದೇಶನವನ್ನು ಪರಿಗಣಿಸದೇ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳುತ್ತಿವೆ, ‘ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್‌ಕುಮಾರ್‌ ಮೀನಾ ಅವರು 2023ರ ಮಾರ್ಚ್‌ 15ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾಶರ್ಮಾ ಅವರಿಗೆ ಪತ್ರ ಬರೆದಿದ್ದಾರೆ.  ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಚುನಾವಣಾ ಆಯೋಗದ ಸಹಮತಿ ಇಲ್ಲದೆಯೇ ಯಾವುದೇ ವರ್ಗಾವಣೆ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗವು ನಿರ್ದೇಶನವನ್ನು ನೀಡಿದ್ದರೂ ಸಹ ಅಬಕಾರಿ ಇಲಾಖೆಯು 2023ರ ಫೆ.27ರಂದು ಅಬಕಾರಿ ಜಿಲ್ಲಾಧಿಕಾರಿಗಳು ಮತ್ತು ಮಾರ್ಚ್‌ 7ರಂದು ಅಬಕಾರಿ ಉಪ ನಿರೀಕ್ಷಕರು, ಮಾರ್ಚ್‌ 13 ಮತ್ತು 15ರಂದು ಅಬಕಾರಿ ನಿರೀಕ್ಷರುಗಳನ್ನು ವರ್ಗಾವಣೆ ಮಾಡಿದೆ.

 

 

‘ಜಿಲ್ಲೆಗಳಲ್ಲಿನ ಅಬಕಾರಿ ಉಪ ಆಯುಕ್ತರ ಹುದ್ದೆಗಳನ್ನು ಖಾಲಿ ತೋರಿಸಿ ಮುಖ್ಯ ಕೆಲಸಗಳಿಲ್ಲದ ಅಬಕಾರಿ ಆಯುಕ್ತರ ಕಚೇರಿ ಮತ್ತು ಡಿಸ್ಟಲರಿಗಳಲ್ಲಿರುವ ಹಾಗೂ ಯಾರೂ ಹಣ ಕೊಡದ ಹುದ್ದೆಗಳಿಗೆ ಕೆಲವರನ್ನು ವರ್ಗಾವಣೆ ಮಾಡಲಾಗಿದೆ. ಕೋಟಿ ಕೋಟಿ ರು.ಗಳನ್ನು ನೀಡುವವರಿಗೆ ಜಿಲ್ಲೆಗಳ ಡಿಸಿ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗಿದೆ,’ ಎಂದು ಅಬಕಾರಿ ಇಲಾಖೆಯ ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಪ್ರತಿಕ್ರಿಯೆ ನೀಡಿದ್ದಾರೆ.

the fil favicon

SUPPORT THE FILE

Latest News

Related Posts