2022-23ನೇ ಬಜೆಟ್; ಆರ್ಥಿಕ ವರ್ಷಾಂತ್ಯದಲ್ಲಿದ್ದರೂ 79,255 ಕೋಟಿ ರು. ವೆಚ್ಚವೇ ಆಗಿಲ್ಲ

photo credit; thehindu

ಬೆಂಗಳೂರು; ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್‌, ಶಾಲಾ ಕಟ್ಟಡಗಳ ದುರಸ್ತಿ, ಶೌಚಾಲಯ ನಿರ್ಮಾಣ, ಬೈಸಿಕಲ್‌ ಒದಗಿಸಲು ಹಣವಿಲ್ಲವೆಂದು ಕೈಚೆಲ್ಲುತ್ತಿರುವ ಹೊತ್ತಿನಲ್ಲೇ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಫೆಬ್ರುವರಿ ಅಂತ್ಯಗೊಂಡರೂ 79,255 ಕೋಟಿ ರು.ಗಳನ್ನು ಇನ್ನೂ ಖರ್ಚು ಮಾಡಿಲ್ಲ ಎಂಬುದು ಬಹಿರಂಗವಾಗಿದೆ.

 

2023ರ ಮಾರ್ಚ್‌ 21ರಂದು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿರುವ ನಡೆಯುತ್ತಿರುವ ಕರ್ನಾಟಕ ಪ್ರಗತಿ ಪರಿಶೀಲನೆ (ಕೆಡಿಪಿ) ಸಭೆಗೆ ಇಲಾಖೆಗಳು ಸಲ್ಲಿಸಿರುವ ಅಂಕಿ ಅಂಶಗಳ ಪ್ರಕಾರ ನಗರಾಭಿವೃದ್ದಿ ಸೇರಿದಂತೆ ಹಲವು ಇಲಾಖೆಗಳು ನಿಗದಿತ ಅವಧಿ ಮೀರಿದ್ದರೂ ಬಿಡುಗಡೆಯಾಗಿರುವ ಅನುದಾನವನ್ನೂ ಖರ್ಚು ಮಾಡದೆಯೇ ಹಲವು ಜನಕಲ್ಯಾಣ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇಲಾಖೆಗಳು ಮಂಡಿಸಿರುವ ಅಂಕಿ ಅಂಶಗಳ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ರಾಜ್ಯ ಬಿಜೆಪಿ ಸರ್ಕಾರವು ಮತ ಬ್ಯಾಂಕ್‌ನ್ನು ಬಲಪಡಿಸಿಕೊಳ್ಳಲು ಕೋಟ್ಯಂತರ ರುಪಾಯಿ ಖರ್ಚು ಮಾಡಿ ಫಲಾನುಭವಿಗಳ ಸಮಾವೇಶಗಳನ್ನು ಸಂಘಟಿಸುತ್ತಿದೆ. ಬಿಡುಗಡೆಯಾಗಿರುವ ಅನುದಾನವನ್ನು ಖರ್ಚು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವವರುಗಳು  ಈ ಸಮಾವೇಶಗಳಲ್ಲಿ ಲೆಕ್ಕಕೊಡುತ್ತಿದ್ದಾರಾದರೂ  2023ರ ಫೆಬ್ರುವರಿ ಅಂತ್ಯಕ್ಕೆ 79,255 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿರುವುದು ಮುನ್ನೆಲೆಗೆ ಬಂದಿದೆ.

 

2022-23ರ ಆಯವ್ಯಯದಲ್ಲಿ ಒಟ್ಟು 2,42,751.39 ಕೋಟಿ ರು. ಹಂಚಿಕೆಯಾಗಿತ್ತು. ಈ ಮೊತ್ತದಲ್ಲಿ ಪ್ರಾರಂಭಿಕ ಶಿಲ್ಕು 20,248.66 ಕೋಟಿ ರು. ಇತ್ತು. ಈ ಪೈಕಿ 1,93,281.91 ಕೋಟಿ ರು. ಬಿಡುಗಡೆ ಆಗಿದೆ. ಇದು ಒಟ್ಟು ಅನುದಾನಕ್ಕೆ ಶೇ.79.62ರಷ್ಟಿತ್ತು. ಇದರಲ್ಲಿ ಒಟ್ಟು 1,83,744.97 ಕೋಟಿ ರು. ವೆಚ್ಚವಾಗಿದೆ. 2021-22ರಲ್ಲಿ ಇದೇ ಅವಧಿಗೆ ಒಟ್ಟು ಅನುದಾನಕ್ಕೆ ಶೆ.86.3ರಷ್ಟು ವೆಚ್ಚವಾಗಿತ್ತು. 1,61,297.40 ಕೋಟಿ ರು. ವೆಚ್ಚವಾಗಿತ್ತು. 2021-22ರ ಫೆಬ್ರುವರಿಯಲ್ಲಿ 90,369 ಕೋಟಿ ರು. ವೆಚ್ಚಕ್ಕೆ ಬಾಕಿ ಉಳಿಸಿಕೊಂಡಿತ್ತು ಎಂಬುದು ಅಂಕಿ ಅಂಶದಿಂದ ತಿಳಿದು ಬಂದಿದೆ.

 

ಅನುದಾನವನ್ನು ಖರ್ಚು ಮಾಡದೆಯೇ ಬಾಕಿ ಉಳಿಸಿಕೊಂಡಿರುವ ಇಲಾಖೆಗಳ ಪೈಕಿ ನಗರಾಭಿವೃದ್ಧಿ ಇಲಾಖೆಯು ಪ್ರಥಮ ಸ್ಥಾನದಲ್ಲಿದೆ. ಈ ಇಲಾಖೆಯು ಫೆ.2023ರ ಅಂತ್ಯಕ್ಕೆ ನಗರಾಭಿವೃದ್ಧಿ ಇಲಾಖೆಯು ಒಟ್ಟು 8,204.96 ಕೋಟಿ ರು.ಗಳನ್ನು ವೆಚ್ಚ ಮಾಡದೆಯೇ ಬಾಕಿ ಉಳಿಸಿಕೊಂಡಿದೆ.

 

ಅದೇ ರೀತಿ ಗ್ರಾಮೀಣಾಬಿವೃದ್ಧಿ ಇಲಾಖೆಯಲ್ಲಿ 7,345.80 ಕೋಟಿ ರು., ಜಲಸಂಪನ್ಮೂಲ ಇಲಾಖೆಯಲ್ಲಿ 7,174.86 ಕೋಟಿ ರು., ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು 5,957.76 ಕೋಟಿ ರು. , ಇಂಧನ ಇಲಾಖೆಯಲ್ಲಿ 4,907 ಕೋಟಿ ರು., ಲೋಕೋಪಯೋಗಿ ಇಲಾಖೆಯು 4,355.02 ಕೋಟಿ ರು.ಗಳನ್ನು ಖರ್ಚು ಮಾಡಿಲ್ಲ.

 

ಯೋಜನೆ ಇಲಾಖೆಯು 3,633.02 ಕೋಟಿ ರು., ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು 3,283.67 ಕೋಟಿ ರು., ಕೃಷಿ ಇಲಾಖೆಯು 3,262.49 ಕೋಟಿ ರು., ಆರೋಗ್ಯ ಇಲಾಖೆಯು 2,331.53 ಕೋಟಿ ರು., ಕಂದಾಯ 1,990.96 ಕೋಟಿ ರು., ವಸತಿ 1,972.64 ಕೋಟಿ ರು., ಸಹಕಾರ 1,569.82 ಕೋಟಿ ರು., ಉನ್ನತ ಸಶಿಕ್ಷಣ 1,386.72 ಕೋಟಿ ರು., ಒಳಾಡಳಿತ 1,300.94 ಕೋಟಿ ರು., ಸಮಾಜ ಕಲ್ಯಾಣ ಇಲಾಖೆಯು 1,109.94 ಕೋಟಿ ರು., ಗಳನ್ನು ವೆಚ್ಚ ಮಾಡದೆಯೇ ಬಾಕಿ ಉಳಿಸಿಕೊಂಡಿರುವುದು ಗೊತ್ತಾಗಿದೆ.

 

ವಿಪತ್ತು ನಿರ್ವಹಣೆಯಲ್ಲಿ 695.93 ಕೋಟಿ ರು., ಅರಣ್ಯ ಇಲಾಖೆಯಲ್ಲಿ 608.74 ಕೋಟಿ ರು., ಮೂಲಸೌಲಭ್ಯ ಅಭಿವೃದ್ಧಿಯಲ್ಲಿ 575.38 ಕೋಟಿ ರು., ಅಲ್ಪಸಂಖ್ಯಾತರ ಕಲ್ಯಾಣದಲ್ಲಿ 567.70 ಕೋಟಿ ರು., ಸಣ್ಣ ನೀರಾವರಿಯಲ್ಲಿ 525.05 ಕೋಟಿ ರು., ಪಶುಸಂಗೋಒಪನೆಯಲ್ಲಿ 464.45 ಕೋಟಿ ರು., ವಾಣಿಜ್ಯ ಮತ್ತು ಕೈಗಾರಿಕೆಯಲ್ಲಿ 417.30 ಕೋಟಿ ರು., ತೋಟಗಾರಿಕೆಯಲ್ಲಿ 406.56 ಕೋಟಿ ರು., ಕೌಶಲ್ಯಾಭಿವೃದ್ದಿಯಲ್ಲಿ 260.33 ಕೋಟಿ ರು., ಕನ್ನಡ ಸಂಸ್ಕೃತಿಯಲ್ಲಿ 221.71 ಕೋಟಿ ರು.,ಗಳನ್ನು ವೆಚ್ಚ ಮಾಡಿಲ್ಲ ಎಂಬುದು ತಿಳಿದು ಬಂದಿದೆ.

SUPPORT THE FILE

Latest News

Related Posts