3,092 ಎಕರೆ ಡಿನೋಟಿಫಿಕೇಷನ್‌; ಕೇಂದ್ರ ಸರ್ಕಾರದ ಅನುಮತಿಯಿಲ್ಲ, ಹೈಕೋರ್ಟ್‌ ತೀರ್ಪು ಪಾಲನೆಯೂ ಇಲ್ಲ

photo credit;rashokofficial twitter account

ಬೆಂಗಳೂರು; ದೇಶಿ ಗೋ ತಳಿ ಸಂವರ್ಧನೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಭರ್ಜರಿ ಪ್ರಚಾರ ಪಡೆದುಕೊಂಡಿರುವ ರಾಜ್ಯ ಬಿಜೆಪಿ ಸರ್ಕಾರವು ಅಮೃತ್‌ ಮಹಲ್‌ ತಳಿಯ ರಾಸುಗಳ ಮೇವಿನ ಉದ್ದೇಶಕ್ಕಾಗಿ ಇರುವ ಜಮೀನುಗಳನ್ನೇ ಅಮೃತ್‌ ಮಹಲ್‌ ಕಾವಲು ಶೀರ್ಷಿಕೆಯಿಂದ ತಗ್ಗಿಸಲು ಮುಂದಾಗಿದೆ. ಈ ಜಮೀನುಗಳನ್ನು ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆಯೇ ಕಂದಾಯ ಇಲಾಖೆಗೆ ವರ್ಗಾಯಿಸುವ ಸಂಬಂಧದ ಕಡತಕ್ಕೆ ಚಿರತೆ ವೇಗ ದೊರೆತಿದೆ.

 

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ನಾಲ್ಕು ಹೋಬಳಿಗಳಲ್ಲಿನ 3,092 ಎಕರೆ ಅಮೃತ್‌ ಮಹಲ್‌ ಕಾವಲು ಜಮೀನುಗಳನ್ನು ಡಿನೋಟಿಫಿಕೇ‍ಷನ್‌ ಮಾಡುವ ಸಂಬಂಧ ಪಶುಪಾಲನೆ, ಮೀನುಗಾರಿಕೆ ಇಲಾಖೆ ನೀಡಿರುವ ಅಭಿಪ್ರಾಯ ಮತ್ತು ಈ ಹಿಂದೆ ಹೊರಡಿಸಿದ್ದ ಸುತ್ತೋಲೆ, ಹೈಕೋರ್ಟ್‌ ಹಲವು ಸಂದರ್ಭಗಳಲ್ಲಿ ನೀಡಿರುವ ನಿರ್ದೇಶನಗಳನ್ನೂ ಬದಿಗಿರಿಸಲು ಹೊರಟಿರುವುದು ಮತ್ತೊಂದು ವಿವಾದಕ್ಕೆ ದಾರಿಮಾಡಿಕೊಡಲಿದೆ. ಈ ಸಂಬಂಧ ‘ದಿ ಫೈಲ್‌’ಗೆ ದಾಖಲೆಗಳು, ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.

 

ಅಮೃತ ಮಹಲ್‌ ಕಾವಲು ಜಮೀನುಗಳನ್ನು ಅರಣ್ಯ ಜಮೀನುಗಳೆಂದು ವರ್ಗೀಕರಿಸಬೇಕು. ಮತ್ತು ಗೋಮಾಳ ಜಮೀನುಗಳನ್ನು ಗೋಮಾಳ ಶೀರ್ಷಿಕೆಯಿಂದ ತಗ್ಗಿಸಲು ಅಳವಡಿಸಿಕೊಂಡಿರುವ ಮಾನದಂಡಗಳ ಮಾದರಿಯಲ್ಲೇ ಅಮೃತ ಮಹಲ್‌ ಕಾವಲು ಜಮೀನುಗಳನ್ನು ಅಮೃತ ಮಹಲ್ ಕಾವಲು ಶೀರ್ಷಿಕೆಯಿಂದ ತಗ್ಗಿಸಲು ಮಾನದಂಡವೆಂದು ಪರಿಗಣಿಸಿ ಕಂದಾಯ ಇಲಾಖೆಗೆ ವರ್ಗಾಯಿಸಲು ಅವಕಾಶವಿಲ್ಲ. ಈ ರೀತಿ ವರ್ಗಾಯಿಸಬೇಕಾದಲ್ಲಿ ಕೇಂದ್ರ ಸರ್ಕಾರದ ಪೂರ್ವಾನುಮತಿ ಅವಶ್ಯಕ.
ಅಲ್ಲದೇ ಅಮೃತ್‌ ಕಾವಲ್‌ ಜಮೀನುಗಳನ್ನು ಡಿನೋಟಿಫೈ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ.

 

ಆದರೂ ಹೊಳಲ್ಕೆರೆಯ ಬಿಜೆಪಿ ಶಾಸಕ ಎಂ ಚಂದ್ರಪ್ಪ, ಕಂದಾಯ ಸಚಿವ ಆರ್‌ ಅಶೋಕ್‌ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಒತ್ತಡದ ಮೇರೆಗೆ ಕಡತಕ್ಕೆ ಬಿರುಸಿನ ಚಾಲನೆ ದೊರೆತಿದೆ.
ಈ ಬಗ್ಗೆ ಪಶುಸಂಗೋಪನೆ ಇಲಾಖೆಯು ಉಚ್ಛ ನ್ಯಾಯಾಲಯವು ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿದೆ.

 

ರಿಟ್‌ ಅರ್ಜಿ (ಸಂಖ್ಯೆ 17954/1997 ದಿನಾಂಕ 20/03/2001)ಯ ತೀರ್ಪು ಹಾಗೂ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಪೀಠದ ಮುಂದಿದ್ದ ಅರ್ಜಿ (ಸಂಖ್ಯೆ 2013/06 ಮತ್ತು 12ರ 2013) (ಎಸ್‌ಝಡ್‌) ಆದೇಶಗಳನ್ನೂ ಪ್ರಸ್ತಾಪಿಸಿದೆ. ‘ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಅಮೃತ್‌ ಮಹಲ್‌ ಕಾವಲು ಜಮೀನುಗಳೂ ಸೇರಿದಂತೆ ರಾಜ್ಯದ ಇತರೆಡೆಯಲ್ಲಿ ಕಂದಾಯ ಇಲಾಖೆಯ ದಾಖಲೆಗಳಲ್ಲಿ (ಪಹಣಿ/ಆರ್‌ಟಿಸಿ) ಅಮೃತ್‌ ಮಹಲ್‌ ಕಾವಲು ಜಮೀನುಗಳೆಂದು ನಮೂದಾಗಿರುವ ಯಾವುದೇ ಜಮೀನುಗಳನ್ನು ಬೇರಾವುದೇ ಉದ್ದೇಶಕ್ಕಾಗಿ ಮಂಜೂರು ಮಾಡುವುದಕ್ಕೆ ಅವಕಾಶವಿರುವುದಿಲ್ಲ,’ ಎಂದು ಅಭಿಪ್ರಾಯ ನೀಡಿರುವುದು ಗೊತ್ತಾಗಿದೆ.

 

ರಾಜ್ಯದಲ್ಲಿ ಪಶು ಸಂಗೋಪನೆ ಇಲಾಖೆಗೆ ಸೇರಿದ ಅಮೃತ್‌ ಮಹಲ್‌ ಕಾವಲ್‌ ಜಮೀನನ್ನು ಇತರೆ ಉದ್ದೇಶಗಳಿಗೆ ಹಂಚಲು ಸರ್ಕಾರಕ್ಕೆ ಅನೇಕ ಸಂಘ ಸಂಸ್ಥೆಗಳಿಂದ ಹಾಗೂ ಸಾರ್ವಜನಿಕರಿಂದ ಕೋರಿಕೆಗಳು ಸಲ್ಲಿಕೆಯಾಗಿವೆ. ಉಚ್ಛ ನ್ಯಾಯಾಲಯದಲ್ಲಿ ರಿಟ್‌ (ಅರ್ಜಿ ಸಂಖ್ಯೆ 17954-79) ಸಲ್ಲಿಸಿರುವ ಸಾರ್ವಜನಿಕರು, ಅಕ್ರಮ ಸಾಗುವಳಿಯನ್ನು ಸಕ್ರಮಗೊಳಿಸಲು ನ್ಯಾಯಾಲಯವನ್ನು ಕೋರಿದ್ದರು. ಈ ಬಗ್ಗೆ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಗಂಗಸಮುದ್ರ ಗ್ರಾಮದ ಅಮೃತ್‌ ಮಹಲ್‌ ಕಾವಲಿನ ಜಮೀನನ್ನು ಸಂರಕ್ಷಿಸಬೇಕು ಎಂದು ಹಾಗೂ ಯಾರಾದರೂ ಅಮೃತ್‌ ಮಹಲ್‌ ಕಾವಲು ಜಮೀನನ್ನು ಒತ್ತುವರಿ ಅತಿಕ್ರಮಣ ಮಾಡಿದರೆ ಅದನ್ನು ತೆರವುಗೊಳಿಸಬೇಕು ಎಂದು 2001ರ ಮಾರ್ಚ್‌ 20ರಂದು ತೀರ್ಪು ನೀಡಿರುವುದು ಗೊತ್ತಾಗಿದೆ.

 

ಇದಲ್ಲದೇ 1995ರಲ್ಲಿಯೂ ಸರ್ಕಾರವು ವಿವಿಧ ಆದೇಶಗಳನ್ನು ಹೊರಡಿಸಿದೆ. 1995ರ ಜನವರಿ 16 ಮತ್ತು 17ರಂದು ನಡೆದಿದ್ದ ವಿಭಾಗಾಧಿಕಾರಿಗಳ ಮತ್ತು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಹಲವಾರು ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವ ಸಮಿತಿಗಳು ಅಮೃತ್‌ ಮಹಲ್ ಕಾವಲು ಜಮೀನುಗಳಲ್ಲಿ ಆಗಿರುವ ಅತಿಕ್ರಮಣವನ್ನು ಸಕ್ರಮಗೊಳಿಸಲಾಗಿದೆ ಎಂದು ಸರ್ಕಾರವು ಗಮನಿಸಿತ್ತು.

 

ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 94-ಎ ರಂತೆ ಮತ್ತು ಕರ್ನಾಟಕ ಭೂ ಕಂದಾಯ ನಿಯಮ 107-ಐರ ಅನ್ವಯ ಅಮೃತ್‌ ಮಹಲ್‌ ಕಾವಲು ಜಮೀನು, ಕೆರೆ, ಅಂಗಳ, ಗುಂಡು ತೋಪು, ಸೇಂದಿವನ ಮುಂತಾದ ನಿರ್ದಿಷ್ಟ ಉದ್ದೇಶಗಳಿಗಾಗಿ ಕಾಯ್ದಿರಿಸಿರುವ ಜಮೀನುಗಳಲ್ಲಿ ಆಗಿರುವ ಅತಿಕ್ರಮಗಳನ್ನು ಸಕ್ರಮಗೊಳಿಸಲು ಅವಕಾಶವಿರುವುದಿಲ್ಲ. ಇಂತಹ ವಿಶೇಷ ಸಾರ್ವಜನಿಕ ಉದ್ದೇಶಗಳಿಗಾಗಿ ಕಾಯ್ದಿರಿಸಿರುವ ಜಮೀನುಗಳಲ್ಲಿ ಆಗಿರುವ ಅತಿಕ್ರಮಣಗಳನ್ನು ಸಕ್ರಮಗೊಳಿಸುವುದು ನಿಯಮಗಳಿಗೆ ವಿರುದ್ಧವಾಗಿರುತ್ತದೆ ಎಂದು ಸರ್ಕಾರವು ಆದೇಶವನ್ನು ಹೊರಡಿಸಿತ್ತು.

 

‘ಉಪ ವಿಭಾಗಾಧಿಕಾರಿಗಳು ಇಂತ ಪ್ರಕರಣಗಳನ್ನು ಕರ್ನಾಟಕ ಭೂ ಕಂದಾಯ ನಿಯಮ 108-ಕೆ ಅನ್ವಯ ನಿಯಮಗಳಿಗನುಸಾರವಾಗಿ ಸೂಕ್ತ ಕ್ರಮಕೈಗೊಂಡು ಒಂದು ವೇಳೆ ನಿಯಮಕ್ಕೆ ವಿರುದ್ಧವಾಗಿ ಅಮೃತ್‌ ಮಹಲ್‌ ಕಾವಲ್‌ ಜಮೀನುಗಳನ್ನು ಸಕ್ರಮಗೊಳಿಸಿದ್ದರೆ ಅಂತಹ ಪ್ರಕರಣಗಳನ್ನು ರದ್ದುಪಡಿಸಬೇಕು,’ ಎಂದು ಸೂಚಿಸಿತ್ತು.

 

ಹೊಳಲ್ಕೆರೆ ತಾಲೂಕು ರಾಮಗಿರಿ ಹೋಬಳಿ ರಾಮಗಿರಿಯಲ್ಲಿನ ಅಮೃತ್‌ ಮಹಲ್ ಕಾವಲ್‌ ಗ್ರಾಮದ ಸರ್ವೆ ನಂಬರ್‌ 01ರಲ್ಲಿರುವ 3,040-00 ಎಕರೆ ಅಮೃತ್‌ ಮಹಲ್‌ ಕಾವಲು ಜಮೀನನ್ನು ಗೋಮಾಳ ಜಮೀನಾಗಿ ರಕ್ಷಿಸಲು ಮತ್ತು ಅನಧಿಕೃತ ಸಾಗುವಳಿ ಮಾಡಿರುವುದನ್ನು ಹಾಗೂ ಒತ್ತುವರಿಯಾಗಿರುವುದನ್ನು ತೆರವುಗೊಳಿಸಲು ಹೈಕೋರ್ಟ್‌ ನಿರ್ದೇಶಿಸಿತ್ತು.

 

ಅಮೃತ್‌ ಮಹಲ್ ಕಾವಲು ಜಮೀನು ಅಮೃತ್‌ ಮಹಲ್‌ ತಳಿಯ ರಾಸುಗಳ ಮೇವಿನ ಉದ್ದೇಶಕ್ಕಾಗಿ ಇರುತ್ತದೆ. ಸದರಿ ಜಮೀನಿನ ವಿಸ್ತೀರ್ಣ ಕಡಿಮೆಯಾಗುತ್ತಿರುವುದರಿಂದ ಉಳಿದ ಅಮೃತ್‌ ಮಹಲ್‌ ಕಾವಲ್‌ ಜಮೀನನ್ನು ಹುಲ್ಲುಗಾವಲು ಪ್ರದೇಶವಾಗಿ ಸಂರಕ್ಷಿಸಬೇಕು ಎಂದು ಸರ್ಕಾರವು 1979ರಲ್ಲೇ ನಿರ್ದೇಶಿಸಿತ್ತು ಎಂಬುದು ತಿಳಿದು ಬಂದಿದೆ.

 

ಆದರೀಗ ಅಮೃತ ಮಹಲ್‌ ಕಾವಲ್‌ ಜಮೀನುಗಳ ಪೈಕಿ ಅರಣ್ಯ ಜಮೀನಿನ ವ್ಯಾಪ್ತಿಗೆ ಒಳಪಡದ ಜಮೀನುಗಳನ್ನು ಡಿ ನೋಟೀಫೈ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

ಅಮೃತ್‌ ಕಾವಲ್‌ ; 3,092.59 ಎಕರೆ ಡಿನೋಟಿಫಿಕೇಷನ್‌ಗೆ ಮುಂದಾದ ಸರ್ಕಾರ

ಹೊಳಲ್ಕೆರೆ ತಾಲೂಕಿನ ಕಸಬಾ ಗುಂಡೇರಿ ಕಾವಲ್‌, ರಾಮಗಿರಿ ಹೋಬಳಿಯ ವನಕೆ ಮರಡಿಕಾವಲ್‌, ತಾಳಿಕಟ್ಟೆ ಕಾವಲ್‌, ಕಸಬಾ ಹೋಬಳಿಯ ಅರೇಹಳ್ಳಿ ಕಾವಲ್‌, ಆರ್‌ ನುಲೇನೂರು ಗ್ರಾಮಗಳಲ್ಲಿ ಅಮೃತ್‌ ಮಹಲ್‌ ಕಾವಲ್‌ ಹೆಸರಿನಲ್ಲಿರುವ ಒಟ್ಟಾರೆ 3,092.59 ಎಕರೆ ಜಮೀನು ಡಿನೋಟಿಫಿಕೇಷನ್‌ ಮಾಡಲು ಹೊರಟಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts