ವಿಧಾನಸಭೆ ಚುನಾವಣೆ ಹೊತ್ತಿನಲ್ಲೇ ಐಎಂಎ ಪ್ರಕರಣ ಆರೋಪಿ ಕೆಎಎಸ್‌ ಅಧಿಕಾರಿಯ ರಾಜೀನಾಮೆ ಅಂಗೀಕಾರ

ಬೆಂಗಳೂರು: ಅಂದಾಜು ಒಂದು ಲಕ್ಷ ಠೇವಣಿದಾರರಿಗೆ 2,000 ಕೋಟಿ ರು. ವಂಚನೆ ಮಾಡಿರುವ ಐಎಂಎ ಪ್ರಕರಣದಲ್ಲಿ ಆರೋಪಿಯಾಗಿ ಸಿಬಿಐ ವಿಚಾರಣೆ ಎದುರಿಸುತ್ತಿರುವ ಕೆಎಎಸ್‌ ಅಧಿಕಾರಿ ಎಲ್‌ ಸಿ ನಾಗರಾಜು ಅವರ ರಾಜೀನಾಮೆಯನ್ನು ರಾಜ್ಯ ಸರ್ಕಾರವು ಅಂಗೀಕರಿಸಿ ಆದೇಶ ಹೊರಡಿಸಿದೆ.

 

ಐಎಂಎ ಹಗರಣವಲ್ಲದೇ ಇತರ ಪ್ರಕರಣಗಳಲ್ಲೂ ವಿವಿಧ ಗಂಭೀರ ಸ್ವರೂಪದ ಆರೋಪಗಳ ಕುರಿತು ಸಿಬಿಐ,  ಲೋಕಾಯುಕ್ತ ಮತ್ತು   ಇಲಾಖೆ ಹಂತದಲ್ಲಿ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಎಲ್‌ ಸಿ ನಾಗರಾಜು ಅವರು ವೈಯಕ್ತಿಕ ಕಾರಣಗಳನ್ನು ಮುಂದೊಡ್ಡಿ ಸಲ್ಲಿಸಿದ್ದ  ರಾಜೀನಾಮೆಯನ್ನು ಅಂಗೀಕರಿಸಿರುವ ಸಿಬ್ವಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ  ನಡೆಯು ಚರ್ಚೆಗೆ ಗ್ರಾಸವಾಗಿದೆ. ಎಲ್‌ ಸಿ ನಾಗರಾಜ್‌ ಅವರು ಮಧುಗಿರಿ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

 

ಆದೇಶದಲ್ಲೇನಿದೆ?

 

ಎಲ್‌ ಸಿ ನಾಗರಾಜ ಇವರು ತಮ್ಮ ವೈಯಕ್ತಿಕ ಕಾರಣಗಳ ನಿಮಿತ್ತ ಕೆಎಎಸ್‌ (ಕಿರಿಯ ಶ್ರೇಣಿ) ಹುದ್ದೆಗೆ ನೀಡಿರುವ ರಾಜೀನಾಮೆಯನ್ನು ಇವರ ವಿರುದ್ಧ ಹೂಡಲು ಪ್ರಸ್ತಾಪಿಸಲಾಗಿರುವ ಪರಿಶೀಲನೆಯಲ್ಲಿರುವ ಮತ್ತು ಈಗಾಗಲೇ ಹೂಡಲಾಗಿರುವ ತನಿಖಾ ಹಂತದಲ್ಲಿರುವ ಶಿಸ್ತು ಕ್ರಮ ಪ್ರಕರಣಗಳು ಇಲಾಖೆ ವಿಚಾರಣೆ ಪ್ರಕರಣಗಳು, ಜಂಟಿ ಇಲಾಖೆ ವಿಚಾರಣೆ ಪ್ರಕರಣಗಳು, ಲೋಕಾಯುಕ್ತ ಪ್ರಕರಣಗಳು ಸಿವಿಲ್‌ ಹಾಗೂ ಕ್ರಿಮಿನಲ್ ಮೊಕದ್ದಮೆ ಪ್ರಕರಣಗಳನ್ನು ನಿಯಮಾನುಸಾರ ಮುಂದುವರೆಸುವ ಹಾಗೂ ಭವಿಷ್ಯದಲ್ಲಿಯೂ ಸಹ ಇವರ ವಿರುದ್ಧ ಯಾವುದೇ ಇಲಾಖೆಯಲ್ಲಿ ಶಿಸ್ತು ಕ್ರಮ ಪ್ರಕರಣಗಳನ್ನು ಸಿವಿಲ್‌ ಮತ್ತು ಕ್ರಿಮಿನಲ್‌ ಮೊಕದ್ದಮೆ ಪ್ರಕರಣಗಳನ್ನು ಹೂಡುವ ಸಂಭವವಿದ್ದಲ್ಲಿ ನಿಯಮಾನುಸಾರ ಹೂಡುವ ಷರತ್ತಿಗೆ ಒಳಪಟ್ಟಂತೆ ಹಾಗೂ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 252(ಎ) ಅನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು 2023ರ ಮಾರ್ಚ್‌ 9ರಂದು ಕಂದಾಯ ಇಲಾಖೆಯು ಆದೇಶ ಹೊರಡಿಸಿದೆ.

 

ಐಎಂಎ ಪ್ರಕರಣದಲ್ಲಿ ಉಪ ವಿಭಾಗಾಧಿಕಾರಿ ಎಲ್‌ ಸಿ ನಾಗರಾಜ್‌ ಮತ್ತು ಗ್ರಾಮ ಲೆಕ್ಕಿಗ ಮಂಜುನಾಥ್‌ ವಿರುದ್ಧ ಸಿಬಿಐ ದೋಷಾರೋಪಣೆ ಪಟ್ಟಿಯನ್ನು  ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಈ ಕುರಿತು ‘ದಿ ಫೈಲ್‌’ 2020ರ ಸೆ.7ರಂದು ವರದಿ ಪ್ರಕಟಿಸಿತ್ತು.

 

ಐಎಂಎ; ಕೆಎಎಸ್‌ ಅಧಿಕಾರಿ ಎಲ್‌ ಸಿ ನಾಗರಾಜ್‌, ಮಂಜುನಾಥ್‌ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌ ಸಲ್ಲಿಕೆ

ಐಎಂಎ ನಿರ್ದೇಶಕ ಮೊಹಮ್ಮದ್‌ ಮನ್ಸೂರ್‌ ರಿಂದ ಉಪ ವಿಭಾಗಾಧಿಕಾರಿಯಾಗಿದ್ದ ಎಲ್‌ ಸಿ ನಾಗರಾಜ್‌ ಅವರು 4.5 ಕೋಟಿ ಪಡೆದಿದ್ದರು ಎಂಬ ಆರೋಪ ಕೇಳಿ ಬಂದಿತ್ತು. 10 ಲಕ್ಷ ರು.ಪಡೆದಿದ್ದ ಗ್ರಾಮ ಲೆಕ್ಕಿಗ ಮಂಜುನಾಥ್‌, ನಾಗರಾಜ್‌ ಮತ್ತು ಮನ್ಸೂರ್‌ಖಾನ್‌ ಮಧ್ಯೆ ಸಭೆ ಏರ್ಪಡಿಸಿದ್ದ ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಲಾಗಿತ್ತು.

 

ಐಎಂಎ ಪ್ರಕರಣದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಕೆ ಅನುಮತಿ ನೀಡಲು ರಾಜ್ಯ ಸರ್ಕಾರದ  ವಿಳಂಬವನ್ನೇ ಮುಂದಿಟ್ಟುಕೊಂಡು ಆರೋಪಿ ಕೆಎಎಸ್‌ ಅಧಿಕಾರಿ ಎಲ್‌ ಸಿ ನಾಗರಾಜ್‌ ಅವರು ಕೆಎಎಸ್‌ ಕಿರಿಯ ಶ್ರೇಣಿಯಿಂದ ಹಿರಿಯ ಶ್ರೇಣಿ ವೃಂದಕ್ಕೆ ಬಡ್ತಿ ಪಡೆಯಲು ಸಚಿವಾಲಯದಲ್ಲಿ ಪ್ರಯತ್ನ ನಡೆಸಿದ್ದರು ಎಂಬುದನ್ನು ‘ದಿ ಫೈಲ್‌’  ಸೆ.9, 2020ರಲ್ಲೇ ವರದಿ ಪ್ರಕಟಿಸಿತ್ತು.

 

ಐಎಂಎ; ಚಾರ್ಜ್‌ಶೀಟ್‌ ಸಲ್ಲಿಕೆ ಬೆನ್ನಲ್ಲೇ ಹೊರಬಿತ್ತು ಅಧಿಕಾರಿ ಎಲ್‌ ಸಿ ನಾಗರಾಜು ಬಡ್ತಿ ಪ್ರಕರಣ

ಎಲ್‌ ಸಿ ನಾಗರಾಜ್‌ ವಿರುದ್ಧ ಸಿಬಿಐ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾದ ಬೆನ್ನಲ್ಲೇ ಬಡ್ತಿ ಪಡೆಯಲು ನಡೆಸಿದ್ದ ಪ್ರಯತ್ನಗಳು ಮುನ್ನೆಲೆಗೆ ಬಂದಿವೆ. ಸೇವಾ ಜೇಷ್ಠತೆಯಲ್ಲಿ ತಮಗಿಂತ ಕಿರಿಯ ಅಧಿಕಾರಿಗೆ ಬಡ್ತಿ ನೀಡುವುದನ್ನು ವಿರೋಧಿಸಿದ್ದ ಎಲ್‌ ಸಿ ನಾಗರಾಜ್‌ ಅವರು ಇದಕ್ಕಾಗಿ ತಮ್ಮ ವಿರುದ್ಧ ಸಿಬಿಐ ದೋಷಾರೋಪಣೆ ಪಟ್ಟಿ ಜಾರಿಯಾಗಿಲ್ಲ ಎಂಬುದು ಸೇರಿದಂತೆ ಹಲವು ಅಂಶಗಳನ್ನಿಡಿದು ವಾದವನ್ನು ಮುಂದೊಡ್ಡಿದ್ದರು ಎಂಬುದು ಬಹಿರಂಗವಾಗಿತ್ತು.

 

 

ಸಿಬಿಐ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡುವ 2 ತಿಂಗಳ ಮೊದಲೇ ಎಲ್‌ ಸಿ ನಾಗರಾಜು ಅವರ ಅಮಾನತು ಆದೇಶವನ್ನು 2020ರ ಜುಲೈ 9ರಂದು ತೆರವುಗೊಳಿಸಿದ್ದ ಸರ್ಕಾರ, ಇವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಶಾಖೆಯ ಉಪ ನಿರ್ದೇಶಕರಾಗಿ ನೇಮಿಸಿತ್ತು. ಈ ಹುದ್ದೆಯಲ್ಲಿ 2 ತಿಂಗಳ ಅವಧಿ ಪೂರ್ಣಗೊಳ್ಳುವ ಮೊದಲೇ ಸಿಬಿಐ ಚಾರ್ಜ್‌ಶೀಟ್‌ ಕೂಡ ದಾಖಲಿಸಿ ಕೆಎಎಸ್‌ ಹಿರಿಯ ಶ್ರೇಣಿ ವೃಂದದ ಬಡ್ತಿಗೆ ತಡೆಯೊಡ್ಡಿತ್ತು.

 

 

ವಿಶೇಷವೆಂದರೆ ಎಲ್‌ ಸಿ ನಾಗರಾಜು ಅವರ ಬಡ್ತಿಗೆ ಸಂಬಂಧಿಸಿದಂತೆ ಆರೋಗ್ಯ, ಕುಟುಂಬ ಕಲ್ಯಾಣ ಸಚಿವ ಬಿ ಶ್ರೀರಾಮುಲು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯದರ್ಶಿ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಟಿಪ್ಪಣಿ ಹೊರಡಿಸಿದ್ದರು. ಸದ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಶಾಖೆಯಲ್ಲಿ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಎಲ್‌ ಸಿ ನಾಗರಾಜು ಜೇಷ್ಠತೆ ಪಟ್ಟಿಗೆ ಸಂಬಂಧಿಸಿದಂತೆ ತಕರಾರು ಎತ್ತಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿತ್ತು.

 

 

ಎಲ್‌ ಸಿ ನಾಗರಾಜು ಮಂಡಿಸಿದ್ದ ವಾದದಲ್ಲೇನಿತ್ತು?

 

 

ಐಎಂಎ ಪ್ರಕರಣದಲ್ಲಿ ಸಿಬಿಐ ದೋಷಾರೋಪಣೆ ಪಟ್ಟಿ ಸಲ್ಲಿಕೆಯಲ್ಲಿ ಆಗಿದ್ದ ವಿಳಂಬವನ್ನು ಎಲ್‌ ಸಿ ನಾಗರಾಜು ಅವರಿಗೆ ಅನುಕೂಲಕರವಾಗಿತ್ತು ಎಂದು ಹೇಳಲಾಗಿದೆ. ಜೇಷ್ಠತಾ ಪಟ್ಟಿಯಲ್ಲಿ ತಮಗಿಂತ ಕಿರಿಯರಾಗಿದ್ದ ಬಿ ಆರ್‌ ರೂಪ ಅವರಿಗೆ ಬಡ್ತಿ ನೀಡಲು ಹೊರಟಿದ್ದ ವೇಳೆಯಲ್ಲಿ ತಕರಾರು ಎತ್ತಿದ್ದರು.

 

 

‘2020ರ ಜುಲೈ 9ರಂದು ನನ್ನ ವಿರುದ್ಧ ಅಮಾನತು ಆದೇಶವನ್ನು ತೆರವುಗೊಳಿಸಿ ನನಗೆ ಉಪ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ ಶಾಖೆಗೆ ನೇಮಿಸಲಾಗಿದೆ. ನನ್ನ ವಿರುದ್ಧ ಪ್ರಸ್ತುತ ಚಾರ್ಜ್‌ ಲಿಸ್ಟ್‌ ಆಗಲಿ, ದೋಷಾರೋಪಣೆ ಪಟ್ಟಿಯಾಗಲಿ, ಜಾರಿಯಾಗಿರುವುದಿಲ್ಲ. ಇಲಾಖೆ ವಿಚಾರಣೆ ಇರುವುದಿಲ್ಲ. ಕ್ರಿಮಿನಲ್‌ ಮೊಕದ್ದಮೆ ಇರುವುದಿಲ್ಲ,’ ಎಂದು ಬಿ ಆರ್‌ ರೂಪ ಅವರಿಗೆ ನೀಡಿದ್ದ ಪದನ್ನೋತಿಗೆ ತಕರಾರು ಎತ್ತಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

 

 

ಬಡ್ತಿ ಪ್ರಕರಣದ ಹಿನ್ನೆಲೆ

 

 

ಕೆಎಎಸ್‌ ಕಿರಿಯ ಶ್ರೇಣಿ ವೃಂದದ ಅಧಿಕಾರಿಗಳ ಬಡ್ತಿಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2019ರ ಆಗಸ್ಟ್‌ 31ರಂದು ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿತ್ತು. ಜೇಷ್ಠತಾ ಪಟ್ಟಿಯ ಕ್ರಮ ಸಂಖ್ಯೆ 934ರಲ್ಲಿ (ಜೇಷ್ಠತಾ ಕ್ರಮ ಸಂಖ್ಯೆ 1412) ಎಲ್‌ ಸಿ ನಾಗರಾಜು ಅವರ ಹೆಸರು ನಮೂದಾಗಿತ್ತು.

 

 

2019ರ ಸೆಪ್ಟಂಬರ್‌ 20ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ಕೆಎಎಸ್‌ (ಕಿ ಶ್ರೇ) ಅಧಿಕಾರಿಗಳನ್ನು ವೇತನ ಶ್ರೇಣಿ 74,000-1,09,600 ವೇತನ ಶ್ರೇಣಿಯ ಕೆಎಎಸ್‌(ಹಿ ಶ್ರೇ) ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡಲಾಗಿದೆ. ಇದರ ಪ್ರಕಾರ ಕ್ರಮ ಸಂಖ್ಯೆ 53ರಲ್ಲಿ ರೂಪ ಬಿ ಆರ್‌ (ಜೇಷ್ಠತಾ ಕ್ರಮ ಸಂಖ್ಯೆ 1413) ಮತ್ತು 55ರಲ್ಲಿ ಶಾರದಾ ಸಿ ಕೋಲಕರ(ಜೇಷ್ಠತಾ ಕ್ರಮ ಸಂಖ್ಯೆ 1417) ಅವರಿಗೆ ಕೆಎಎಸ್‌ ಹಿರಿಯ ಶ್ರೇಣಿ ಹುದ್ದೆಗೆ ಪದನ್ನೋತಿ ನೀಡಲಾಗಿತ್ತು.

 

ಐಎಂಎ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿ ಅಮಾನತುಗೊಂಡಿದ್ದರಿಂದ ಎಲ್‌ ಸಿ ನಾಗರಾಜು ಅವರನ್ನು ಈ ಪ್ರಕ್ರಿಯೆಗಳಲ್ಲಿ ಹೊರಗಿಡಲಾಗಿತ್ತು. 2019ರ ಜುಲೈ 6ರಿಂದ ಅಮಾನತಿನಲ್ಲಿದ್ದರಿಂದ ಎಲ್‌ ಸಿ ನಾಗರಾಜು ಅವರನ್ನು ಬಡ್ತಿಗೆ ಪರಿಗಣಿಸಿರಲಿಲ್ಲ ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts