ವಿಐಎಸ್‌ಎಲ್‌;20 ವರ್ಷದಲ್ಲಿ ಸೈಲ್‌ ನೀಡಿದ್ದು ಕೇವಲ 157 ಕೋಟಿ, ಗಣಿ ಭೋಗ್ಯವನ್ನೂ ಕಾರ್ಯಗತಗೊಳಿಸಿರಲಿಲ್ಲ

ಬೆಂಗಳೂರು; ಸೂಕ್ತ ಬಂಡವಾಳ ತೊಡಗಿಸುವ ಷರತ್ತಿನೊಂದಿಗೆ ಭದ್ರಾವತಿಯ ವಿಐಎಸ್‌ಎಲ್‌ನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ ಭಾರತೀಯ ಉಕ್ಕು ಪ್ರಾಧಿಕಾರವು ಕಳೆದ ಇಪ್ಪತ್ತು ವರ್ಷಗಳಲ್ಲಿ ಭಾರತೀಯ ಉಕ್ಕು ಪ್ರಾಧಿಕಾರವು ದುರಸ್ತಿ ಮತ್ತು ನವೀಕರಣ ಉದ್ದೇಶಕ್ಕೆ ಕೇವಲ 157 ಕೋಟಿ ರು.ಗಳನ್ನು ತೊಡಗಿಸಿದೆ. ಸೂಕ್ತ ಬಂಡವಾಳವನ್ನು ವಿಐಎಸ್‌ಎಲ್‌ನಲ್ಲಿ ತೊಡಗಿಸದ ಕಾರಣ ರೋಗಗ್ರಸ್ಥ ಘಟಕವನ್ನಾಗಿಸಲಾಗಿತ್ತು.

 

ಇಂದು ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರವು   ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ  ಮತ್ತು  ಉಕ್ಕಿನ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲಿದೆ ಎಂದು ಒಪ್ಪಿಕೊಂಡಿದೆ. ಕಾರ್ಖಾನೆಗೆ ಕಬ್ಬಿಣದ ಅದಿರಿನ ಮೂಲ ಇಲ್ಲಾ ಎಂಬ ಕಾರಣ ನೀಡಿ ಮುಚ್ಚಲಾಗುತ್ತಿದೆ. ರಾಜ್ಯದಲ್ಲಿ ಖಾಸಗಿ ಕಾರ್ಖಾನೆಗಳು ಗಣಿಗಳನ್ನು ಹೊಂದಿದ್ದರೂ SAILಗೆ ಗಣಿ ಇಲ್ಲಾ ಎಂಬುದು ಆಶ್ಚರ್ಯಕರ ಎಂದು ಕೇಂದ್ರ ಮಾಜಿ ಸಚಿವ ಹಾಗೂ ರಾಜ್ಯಸಭೆ ಹಾಲಿ ಸದಸ್ಯ   ಜೈರಾಮ್‌ ರಮೇಶ್ ಟ್ವೀಟ್‌ ಮಾಡಿರುವ ಬೆನ್ನಲ್ಲೇ ಸೈಲ್‌ ಕಳೆದ 20 ವರ್ಷಗಳಲ್ಲಿ ಕೇವಲ 157 ಕೋಟಿಯಷ್ಟನ್ನೇ ತೊಡಗಿಸಿತ್ತು ಎಂಬ ಅಂಶವು ಮುನ್ನೆಲೆಗೆ ಬಂದಿದೆ.

 

2 ವರ್ಷಗಳ ಹಿಂದೆಯೇ ವಿಐಎಸ್‌ಎಲ್‌ನ ಬಂಡವಾಳ ಹಿಂತೆಗೆತಕ್ಕೆ ಮುಂದಾಗಿದ್ದ ಹೊತ್ತಿನಲ್ಲೇ ಅಂದು ಮುಖ್ಯಮಂತ್ರಿಯಾಗಿದ್ದ ಬಿ ಎಸ್‌ ಯಡಿಯೂರಪ್ಪ ಅವರು 2020ರ ಸೆ.18ರಂದು ಕೇಂದ್ರ ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ್‌ ಸೇರಿದಂತೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಬರೆದ ಪತ್ರದಲ್ಲಿ ಈ ಅಂಶವನ್ನು ವಿವರಿಸಿದ್ದರು.

 

ಬಿ ಎಸ್‌ ಯಡಿಯೂರಪ್ಪ ಅವರು ಧರ್ಮೇಂದ್ರ ಪ್ರಧಾನ್‌ ಅವರಿಗೆ ಬರೆದಿದ್ದ ಪತ್ರದ ಪ್ರತಿ

 

ಈ ಕುರಿತು ‘ದಿ ಫೈಲ್‌’ 347 ಪುಟಗಳನ್ನೊಳಗೊಂಡ ಸಮಗ್ರ ಕಡತವನ್ನು ಆರ್‌ಟಿಐ ಮೂಲಕ ಪಡೆದುಕೊಂಡಿದೆ.

 

ಕಳೆದ ಮೂರು ದಶಕಗಳಿಂದಲೂ ಭಾರತೀಯ ಉಕ್ಕು ಪ್ರಾಧಿಕಾರವು ವಿಐಎಸ್‌ಎಲ್‌ನ್ನು ಆಧುನೀಕರಣಗೊಳಿಸಲು ನಿರೀಕ್ಷೆಯಂತೆ ಬಂಡವಾಳ ತೊಡಗಿಸಲಿಲ್ಲ. ವಿಐಎಸ್‌ಎಲ್‌ನಲ್ಲಿ ನಿಶ್ಚಿತ ಬಂಡವಾಳ ತೊಡಗಿಸದೇ ಬಂಡವಾಳ ಹಿಂಪಡೆಯುವ ಚಟುವಟಿಕೆಗಳಿಗೆ ಸೈಲ್‌ ಹೆಚ್ಚಿನ ಮನ್ನಣೆ ನೀಡಿತ್ತು.

 

ಡಿಐಪಿಎಂ (DIPAM) ಘಟಕವು ಬಂಡವಾಳ ಹಿಂಪಡೆಯು ಸಂಬಂಧ . 2020ರ ಅಕ್ಟೋಬರ್‌ 27ರಂದು ಬರೆದಿದ್ದ ಪತ್ರವನ್ನಾಧರಿಸಿ 2021ರ ಜುಲೈ 14ರಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು.

 

ವಿಐಎಸ್‌ಎಲ್‌ ಅಧೀನದಲ್ಲಿರುವ ಬಂಡಿಗುಡ್ಡ ಸುಣ್ಣದಕಲ್ಲು ಗಣಿ ಮತ್ತು ಕೆಂಚಾಪುರ ಗಣಿ ಗುತ್ತಿಗೆಗಳನ್ನು ಸರ್ಕಾರದ ಸಂಸ್ಥೆಗಳಿಗೆ ಮಾತ್ರ ವರ್ಗಾವಣೆ ಮಾಡಿ ಅಧೀನಕ್ಕೆ ನೀಡಲು ಅವಕಾಶವಿದೆ. ಹೊಸ ಎಂಎಂಡಿಆರ್‌ ಕಾಯ್ದೆ ಪ್ರಕಾರ ಮೊದಲ 50 ವರ್ಷಗಳಿಗೆ ಭೋಗ್ಯಕ್ಕೆ ಮತ್ತು ನಂತರದ ಹೆಚ್ಚುವರಿ 20 ವರ್ಷಗಳ ಅವಧಿಗೆ ಸರ್ಕಾರದ ಸಂಸ್ಥೆಗಳಿಗೆ ಮಾತ್ರ ವಿಸ್ತರಿಸಲು ಈ ನಿಯಮದಡಿ ಅವಕಾಶವಿದೆ. ಆದರೆ ಹೆಚ್ಚುವರಿ 20 ವರ್ಷಗಳ ಅವಧಿಯನ್ನು ಖಾಸಗಿ ಸಂಸ್ಥೆಗಳಿಗೆ ವಿಸ್ತರಿಸಲು ಅವಕಾಶವಿರುವುದಿಲ್ಲ ಎಂದು ಗಣಿ, ಭೂವಿಜ್ಞಾನ ಇಲಾಖೆಯ ನಿರ್ದೇಶಕರು ಸಭೆಯಲ್ಲಿ ವಿವರಿಸಿರುವುದು ನಡವಳಿಯಿಂದ ಗೊತ್ತಾಗಿದೆ.

 

ಅಲ್ಲದೇ ಬಳ್ಳಾರಿ ಜಿಲ್ಲೆಯ ರಾಮದುರ್ಗ ಅರಣ್ಯ ವಲಯದಲ್ಲಿ 60.70 ಹೆಕ್ಟೇರ್‌ ಗಣಿ ಪ್ರದೇಶವನ್ನು ವಿಐಎಸ್‌ಎಲ್‌ನ ಮಂಜೂರಾತಿಗಾಗಿ ಮೀಸಲಿಡಲಾಗಿದೆ. ಆದರೆ ಮೈನಿಂಗ್‌ ಲೀಸ್‌ ಕಾರ್ಯಗತಗೊಳಿಸಿಲ್ಲ. ಈ ಗಣಿ ಭೋಗ್ಯವು 2019ರ ಫೆ.22ರಿಂದ 10 ವರ್ಷಗಳ ಅವಧಿಯವರಗೆ ಇದೆ. ಈ ಗಣಿ ಪ್ರದೇಶವು 60.70 ಹೆಕ್ಟೇರ್‌ ಇದ್ದರೂ ವಿಐಎಸ್‌ಎಲ್‌ 40 ಹೆಕ್ಟೇರ್‌ ಮಾತ್ರ ಅವಶ್ಯವಿದೆ.

 

ಈ ಸಂಬಂಧ ಅರಣ್ಯ ಮಂತ್ರಾಲಯದ ತೀರುವಳಿ (ಎಫ್‌ಸಿಇಸಿ) ಹಾಗೂ ಮೈನಿಂಗ್‌ ಪ್ಲಾನ್‌ ಪಡೆಯದ ಕಾರಣ ಅದನ್ನು ವಿಐಎಸ್‌ಪಿ ಆಸ್ತಿಯಾಗಿ ಮೆಮೊರೆಂಡಮ್‌ನಲ್ಲಿ ಸೇರಿಸಿಲ್ಲ ಎಂದು ವಿಐಎಸ್‌ಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕರು ಇದೇ ಸಭೆಯಲ್ಲಿ ಗಮನ ಸೆಳೆದಿರುವದು ತಿಳಿದು ಬಂದಿದೆ.

 

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆ ನಡವಳಿ ಪ್ರತಿ

 

ವಿಐಎಸ್‌ಎಲ್‌ಗೆ ಅವಶ್ಯವಿರುವ ಕಬ್ಬಿಣದ ಅದಿರಿನ ಗಣಿಯಯನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದ್ದಲ್ಲಿ ಸೈಲ್‌ ಮೂಲಕ 1,000ದಿಂದ 6,000 ಕೋಟಿ ಬಂಡವಾಳ ತೊಡಗಿಸಲಾಗುವುದು ಎಂದು ಕೇಂದ್ರ ಉಕ್ಕು ಸಚಿವರು ನೀಡಿದ್ದ ಭರವಸೆಯೂ ಅನುಷ್ಠಾನಕ್ಕೆ ಬರಲಿಲ್ಲ. ವಿಐಎಸ್‌ಎಲ್‌ ಕಾರ್ಮಿಕರ ಸಂಘವು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿರುವಂತೆ ವಿಐಎಸ್‌ಎಲ್‌ಗೆ ಸಂಡೂರು ತಾಲೂಕಿನ ರಮಣದುರ್ಗದಲ್ಲಿ 150 ಎಕರೆ ಗಣಿ ಪ್ರದೇಶ ಮಂಜೂರಾಗಿದೆ. ಈ ಪ್ರದೇಶದಲ್ಲಿ ವಿಐಎಸ್‌ಎಲ್‌ನಿಂದ ಗಣಿಗಾರಿಕೆ ಅಭಿವೃದ್ಧಿ ಹಂತದಲ್ಲಿದ್ದು 2024ಕ್ಕೆ ಅದಿರು ಉತ್ಪಾದನೆ ಆರಂಭಗೊಳ್ಳಲಿದೆ.

 

ಕಾರ್ಖಾನೆ ಸ್ಥಾಪನೆಯಾದ ವರ್ಷದಿಂದ 1989ರವರೆಗೆ ಕರ್ನಾಟಕದ ಸಾರ್ವಜನಿಕ ಉದ್ಯಮವಾಗಿ ಕಾರ್ಯನಿರ್ವಹಿಸುತ್ತಿತ್ತು. ಆ ನಂತರದ ವರ್ಷದಲ್ಲಿ ಕಾರ್ಖಾನೆ ಪುನಶ್ಚೇತನಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರಕ್ಕೆ ಅಗತ್ಯ ಬಂಡವಾಳವನ್ನು ಹೂಡುವ ಷರತ್ತಿನೊಂದಿಗೆ ಕರ್ನಾಟಕ ಸರ್ಕಾರವು ಕೇಂದ್ರಕ್ಕೆ ಕೇವಲ ಒಂದು ರೂಪಾಯಿಗೆ ಹಸ್ತಾಂತರಗೊಳಿಸಿತ್ತು.

 

1918ರಲ್ಲಿ ಆರಂಭವಾದ ವಿಐಎಸ್‌ಎಲ್‌ ಅನ್ನು ಹೆಚ್‌ ಡಿ ದೇವೇಗೌಡ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ 1996ರಲ್ಲಿ ಭಾರತೀಯ ಉಕ್ಕು ಪ್ರಾಧಿಕಾರದ ವ್ಯಾಪ್ತಿಗೆ ತರಲಾಗಿತ್ತು. 1998ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ವಿಐಎಸ್‌ಎಲ್‌ನ್ನು ಸೈಲ್‌ನ ಪೂರ್ಣ ಪ್ರಮಾಣದ ಘಟಕವನ್ನಾಗಿ ವಹಿಸಿತ್ತು. ಪ್ರಾಧಿಕಾರವು ರೂ. 650 ಕೋಟಿ ವೆಚ್ಚದಲ್ಲಿ ಕಾರ್ಖಾನೆಯನ್ನು ಆಧುನೀಕರಣಗೊಳಿಸಲು ಪ್ರಸ್ತಾವ ಸಿದ್ಧಪಡಿಸಿತ್ತು ಎಂದು ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರು ಪ್ರಧಾನಿಗೆ ಬರೆದ ಪತ್ರದಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts