ಬೆಂಗಳೂರು; ಆವಲಹಳ್ಳಿ, ಯಲಹಂಕ ಮತ್ತು ಬಸವನಗುಡಿಯಲ್ಲಿ ಬಿಎಂಎಸ್ ಎಜುಕೇಷನಲ್ ಟ್ರಸ್ಟ್ ಹೊಂದಿರುವ ಜಮೀನುಗಳ ದಾಖಲೆಗಳ ನೈಜತೆ ಪರಿಶೀಲಿಸಿ ವರದಿ ನೀಡಬೇಕು ಎಂದು ಕಂದಾಯ ಇಲಾಖೆಯು ನೀಡಿದ್ದ ನಿರ್ದೇಶನವನ್ನು ಬೆಂಗಳೂರು ಜಿಲ್ಲಾಧಿಕಾರಿ ಇದುವರೆಗೂ ಪಾಲನೆ ಮಾಡಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.
ಬಿಎಂಎಸ್ ಶಿಕ್ಷಣ ಟ್ರಸ್ಟ್‌ನ ಡೀಡ್‌ನ್ನು ನಿಯಮಬಾಹಿರವಾಗಿ ತಿದ್ದುಪಡಿ ಮಾಡಲಾಗುತ್ತಿದೆ ಎಂಬ ಸಲ್ಲಿಕೆಯಾಗಿದ್ದ ದೂರನ್ನು ಲೋಕಾಯುಕ್ತ ಸಂಸ್ಥೆಯು ವಿಚಾರಣೆಯನ್ನೇ ನಡೆಸದಿರುವುದು ಮತ್ತು ಜಮೀನಿನ ವ್ಯಾಜ್ಯ ಇತ್ಯರ್ಥವಾಗದಿದ್ದರೂ ಬಿಎಂಎಸ್ ಖಾಸಗಿ ವಿಶ್ವವಿದ್ಯಾಲಯ ಮಸೂದೆಗೆ ವಿಧಾನಮಂಡಲವು ಒಪ್ಪಿಗೆ ನೀಡಿರುವ ಹೊತ್ತಿನಲ್ಲಿಯೇ ಕಂದಾಯ ಇಲಾಖೆಯು ನೀಡಿದ್ದ ನಿರ್ದೇಶನವು ಮುನ್ನೆಲೆಗೆ ಬಂದಿದೆ. ಈ ಕುರಿತು ಸಚಿವ ಆರ್ ಅಶೋಕ್ ಅವರು ನೀಡಿದ್ದ ಸೂಚನೆ ಮೇರೆಗೆ ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ ಎಂದು ಗೊತ್ತಾಗಿದೆ.
ಬಿಎಂಎಸ್ ಎಜುಕೇಷನ್ ಟ್ರಸ್ಟ್ ಹೊಂದಿರುವ ಜಮೀನಿನ ದಾಖಲೆಗಳ ನೈಜತೆ ಪರಿಶೀಲಿಸಿ ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ 2022ರ ಡಿಸೆಂಬರ್ 12ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದರು. ಇದರ ಪ್ರತಿಯು’ದಿ ಫೈಲ್’ಗೆ ಲಭ್ಯವಾಗಿದೆ.
‘ಟ್ರಸ್ಟ್ ಹೊಂದಿರುವ ಜಮೀನಿನ ದಾಖಲೆಗಳನ್ನು ಪರಿಶೀಲಿಸಿ ಕ್ರಮಬದ್ಧತೆ ಬಗ್ಗೆ ವರದಿ ನೀಡಬೇಕು. ನೈಜತೆ ಸೇರಿದಂತೆ ಎಲ್ಲಾ ಅಂಶಗಳನ್ನು ನಿಯಮಾನುಸಾರ ಕೂಲಂಕಷವಾಗಿ ಪರಿಶೀಲಿಸಿ ಕೂಡಲೇ ದಾಖಲೆ ಮಾಹಿತಿಯೊಂದಿಗೆ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ನೀಡಬೇಕು,’ ಎಂದು ನಿರ್ದೇಶನ ನೀಡಿರುವುದು ಪತ್ರದಿಂದ ಗೊತ್ತಾಗಿದೆ.
ಪತ್ರದಲ್ಲೇನಿದೆ?
ಬಿ ಎಂ ಶ್ರೀನಿವಾಸಯ್ಯ ಎಜುಕೇಷನಲ್ ಟ್ರಸ್ಟ್ ಸಂಸ್ಥೆಯು ಆವಲಹಳ್ಳಿ, ಯಲಹಂಕದಲ್ಲಿ ಹೊಂದಿರುವ 12.25 ಎಕರೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಸರ್ಕಾರದಿಂದ ಮಂಜೂರು ಮಾಡಲಾಗಿರುತ್ತದೆ. ಬೆಂಗಳೂರು ನಗರದ ಬಸವನಗುಡಿ ರಸ್ತೆಯಲ್ಲಿರುವ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು 15 ಎಕರೆ 3.72 ಎಕರೆ ಜಮೀನನ್ನು ಮೈಸೂರು ಸರ್ಕಾರದಿಂದ ಖರೀದಿಸಿದ ಹಾಗೂ ಬೆಂಗಳೂರು ಸಿಟಿ ಕಾರ್ಪೋರೇಷನ್‌ನಿಂದ ದಾನವಾಗಿ ಪಡೆದ ಭೂಮಿಯಾಗಿರುತ್ತದೆ ಎಂದು ಹೇಳಿರುವ ಪತ್ರದ ನೈಜತೆ ಮತ್ತು ಕಂದಾಯ ದಾಖಲೆಗಳಲ್ಲಿ ನಮೂದಾಗಿರುವ ವಿವರದೊಂದಿಗೆ ಪರಿಶೀಲಿಸಿ ವಸ್ತುನಿಷ್ಠ ವರದಿ ನೀಡಬೇಕು. ಸದರಿ ಜಮೀನು ಪ್ರಸ್ತುತ ಸರ್ಕಾರಿ ಜಮೀನು ಭೂಮಿ ಆಗಿಲ್ಲವೆಂಬ ದಾಖಲೆ ಒದಗಿಸಬೇಕು ಎಂದು ಸೂಚಿಸಲಾಗಿದೆ.
ಆವಲಹಳ್ಳಿ ಯಲಹಂಕದಲ್ಲಿ ಸುಮಾರು 21 ಎಕರೆ 20 ಗುಂಟೆ ಜಮೀನನ್ನು ಹೊಂದಿದ್ದು ಈ ಜಮೀನಿನಲ್ಲಿ 12.25 ಎಕರೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಸರ್ಕಾರದಿಂದ ಮಂಜೂರು ಮಾಡಿರುವ ಬಗ್ಗೆ ಪರಿಶೀಲಿಸಬೇಕು. ಬಿ ಎಂ ಶ್ರೀನಿವಾಸಯ್ಯ ಎಜುಕೇಷನಲ್ ಟ್ರಸ್ಟ್ ಹೊಂದಿರುವ 27 ಎಕರೆ ಜಮೀನಿನ ಒಡೆತನದ ಬಗ್ಗೆ ಕಂದಾಯ ದಾಖಲೆ ಪರಿಶೀಲಿಸಿ ವರದಿ ನೀಡಬೇಕು ಎಂದು ನಿರ್ದೇಶನ ನೀಡಿರುವುದು ಪತ್ರದಿಂದ ಗೊತ್ತಾಗಿದೆ.
ಅಂದಾಜು 2,000 ಕೋಟಿಗೂ ಹೆಚ್ಚು ಸಂಪತ್ತು ಹೊಂದಿರುವ ಬೆಂಗಳೂರಿನ ಪ್ರತಿಷ್ಠಿತ ಬಿಎಂಎಸ್ ಸಾರ್ವಜನಿಕ ಶಿಕ್ಷಣ ದತ್ತಿಯ ಟ್ರಸ್ಟ್ ಡೀಡ್ ತಿದ್ದುಪಡಿ ಹಾಗೂ ಅಜೀವ ಟ್ರಸ್ಟಿಯ ನೇಮಕಾತಿಯ ಪ್ರಸ್ತಾವನೆ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರಸಮಿತಿಯು 3 ತಿಂಗಳ ಹಿಂದೆಯೇ ನೀಡಿದ್ದ ದೂರು ಲೋಕಾಯುಕ್ತದಲ್ಲಿ ತೆವಳುತ್ತಿರುವ ನಡುವೆಯೇ ರಾಜ್ಯ ಬಿಜೆಪಿ ಸರ್ಕಾರವು ಬಿಎಂಎಸ್ ವಿಶ್ವವಿದ್ಯಾಲಯ ಕಾಯ್ದೆ 2023 ರೂಪಿಸುವ ಉದ್ದೇಶದಿಂದ ತರಾತುರಿಯಲ್ಲಿ ಮಸೂದೆ ಮಂಡಿಸಿರುವುದು ವಿವಾದಕ್ಕೆ ಕಾರಣವಾಗಿತ್ತು.
ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿ ಅವರು ಬಿಎಂಎಸ್ ಟ್ರಸ್ಟ್ ಡೀಡ್ ತಿದ್ದುಪಡಿ ಪ್ರಸ್ತಾವನೆ ತಿರಸ್ಕೃತಗೊಳಿಸಿದ್ದರು. ಹಾಲಿ ಬಿಜೆಪಿ ಸರ್ಕಾರದ ಹಿಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇದೇ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದರು. ಈ ಕುರಿತು ಕರ್ನಾಟಕ ರಾಷ್ಟ್ರಸಮಿತಿಯು 2022ರ ಅಕ್ಟೋಬರ್ 18ರಂದು ನೀಡಿದ್ದ ದೂರು ಇದುವರೆಗೂ ಅಪರ ವಿಚಾರಣಾಧಿಕಾರಿಗಳು (11) (LOK/BCD/4171/2022) ಬಳಿ ಇರುವುದನ್ನು ಸ್ಮರಿಸಬಹುದು.