ರಾಜಸ್ವ ಕೊರತೆ, ಆರ್ಥಿಕ ಸಂಕಷ್ಟ ನೆಪ; 114 ಖಾಸಗಿ ಶಾಲಾ ಕಾಲೇಜುಗಳಿಗೆ ಅನುದಾನ ಪ್ರಸ್ತಾವ ತಿರಸ್ಕಾರ

photo credit;basavarajbommai twitter

ಬೆಂಗಳೂರು; ಅಬಕಾರಿ, ಜಿಎಸ್‌ಟಿ ಸೇರಿದಂತೆ ಇನ್ನಿತರೆ ಮೂಲಗಳಿಂದ ಸಾವಿರಾರು ಕೋಟಿ ರುಪಾಯಿ ಸಂಗ್ರಹಿಸಲಾಗಿದೆ ಎಂದು ಭರ್ಜರಿ ಪ್ರಚಾರ ಪಡೆದುಕೊಂಡಿರುವ ರಾಜ್ಯ ಸರ್ಕಾರವು ಪ್ರಸ್ತುತ ರಾಜಸ್ವ ಕೊರತೆಯತ್ತ ಸಾಗುವ ಮೂಲಕ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.

 

ರಾಜಸ್ವ ಕೊರತೆ ಮತ್ತು ಆರ್ಥಿಕ ಸಂಕಷ್ಟವನ್ನು ಮುಂದೊಡ್ಡಿರುವ ಆರ್ಥಿಕ ಇಲಾಖೆಯು ಶಿಕ್ಷಣ ಇಲಾಖೆಯು ಸಲ್ಲಿಸಿದ್ದ 114 ಖಾಸಗಿ ಶಾಲಾ, ಕಾಲೇಜುಗಳ ಸಹಾಯಾನುದಾನಕ್ಕೆ ಒಳಪಡಿಸುವ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ನಿರ್ಧರಿಸಿದೆ. ಶಿಕ್ಷಣ ಇಲಾಖೆಯ ಪ್ರಸ್ತಾವನೆಯನ್ನು ತಿರಸ್ಕರಿಸಲು ಆರ್ಥಿಕ ಇಲಾಖೆಯು ಕೈಗೊಂಡಿರುವ ತೀರ್ಮಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಅನುಮೋದಿಸಿದ್ದಾರೆ. ಹಲವು ವರ್ಷಗಳಿಂದ ಸಹಾಯಾನುದಾನದ ನಿರೀಕ್ಷೆ ಇಟ್ಟುಕೊಂಡಿದ್ದ ಖಾಸಗಿ ಶಾಲೆ ಕಾಲೇಜುಗಳ ಬೋಧಕ, ಬೋಧಕೇತರ ಸಿಬ್ಬಂದಿ ಭವಿಷ್ಯ ಮತ್ತೆ ಮುಸುಕಾದಾಂತಾಗಿದೆ.

 

1987 ಜೂನ್‌ 1ರಿಂದ 1994-95ನೇ ಸಾಲಿನ ಅವಧಿಯಲ್ಲಿ ಪ್ರಾರಂಭವಾಗಿರುವ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆ, ಅರೇಬಿಕ್‌ ಶಾಲೆಗಳಿಗೆ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಸಹಾಯಾನುದಾನಕ್ಕೆ ಒಳಪಡಿಸುವ ಸಂಬಂಧ ಆರ್ಥಿಕ ಇಲಾಖೆಯು ಶಿಕ್ಷಣ ಇಲಾಖೆಗೆ 2023ರ ಜನವರಿ 19ರಂದು ನೀಡಿರುವ ಅಭಿಪ್ರಾಯದಲ್ಲಿ ರಾಜಸ್ವ ಕೊರತೆ ಮತ್ತು ಅರ್ಥಿಕ ಸಂಕಷ್ಟದ ಕುರಿತು ಪ್ರಸ್ತಾಪಿಸಲಾಗಿದೆ. ಅರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನೀಡಿರುವ ಅಭಿಪ್ರಾಯದ ಪ್ರತಿಯು (ಆಇ 33 ವೆಚ್ಚ-8 2022, ಇಪಿ 117ಪಿಎಂಸಿ 2022, ಇಪಿ 01 ಎಸ್‌ಇಪಿ 2022) ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ರಾಜ್ಯ ಸರ್ಕಾರವು ಈಗಾಗಲೇ ಸಹಾಯಾನುದಾನಕ್ಕೆ ಒಳಪಟ್ಟಿರುವ ಖಾಸಗಿ ಅನುದಾನಿತ ಶಾಲಾ/ಕಾಲೇಜುಗಳ ಸಿಬ್ಬಂದಿ ವೇತನಕ್ಕಾಗಿ ವಾರ್ಷಿಕ 1,800 ಕೋಟಿಗಳಿಗೂ ಹೆಚ್ಚು ಹಣವನ್ನು ವೆಚ್ಚ ಮಾಡುತ್ತಿದೆ. ರಾಜ್ಯ ಸರ್ಕಾರವು ಪ್ರಸ್ತುತ ರಾಜಸ್ವ ಕೊರತೆಯತ್ತ ಸಾಗುತ್ತಿದ್ದು (revenue deficit) ಅರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಇರುವ ಸಾಮರ್ಥ್ಯವನ್ನು ಸಂಪೂರ್ಣ/ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆಡಳಿತ ಇಲಾಖೆ ಸಲ್ಲಿಸಿರುವ 114 ಖಾಸಗಿ ಶಾಲಾ/ಕಾಲೇಜುಗಳನ್ನು ಸಹಾಯಾನುದಾನಕ್ಕೆ ಒಳಪಡಿಸುವ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಿರುವುದಿಲ್ಲ,’ ಎಂದು ಅಭಿಪ್ರಾಯ ನೀಡಿರುವುದು ಗೊತ್ತಾಗಿದೆ.

 

ಅರ್ಥಿಕ ಇಲಾಖೆಯು ನೀಡಿರುವ ಅಭಿಪ್ರಾಯದ ಪ್ರತಿ

 

1987ರ ಜೂನ್‌ 1ರಿಂದ 1994-95ನೇ ಸಾಲಿನ ಅವಧಿಯಲ್ಲಿ ಪ್ರಾರಂಭವಾಗಿ ಸಹಾಯಾನುದಾನಕ್ಕೆ ಒಳಪಡಿಸಲು ಇನ್ನೂ 77 ಪ್ರಾಥಮಿಕ ಶಾಲೆಗಳು, 05 ಅರೇಬಿಕ್ ಶಾಲೆಗಳು, 31 ಪ್ರೌಢಶಾಲೆಗಳು ಮತ್ತು 01 ಅರೇಬಿಕ್ ಕಾಲೇಜು ಸೇರಿದಂತೆ ಒಟ್ಟು 114 ಶಾಲಾ ಕಾಲೇಜುಗಳ 547 ಶಿಕ್ಷಕ/ಉಪನ್ಯಾಸಕ ಹುದ್ದೆಗಳನ್ನು ಹಾಗೂ 29 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ಸಹಾಯಾನುದಾನಕ್ಕೆ ಒಳಪಡಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪ್ರಸ್ತಾವನೆ ಸಲ್ಲಿಸಿತ್ತು.

 

ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸಹಾಯಾನುದಾನಕ್ಕೆ ಒಳಪಡಿಸಲು ಅವಕಾಶ ಕಲ್ಪಿಸಲು 2007ರ ಅಕ್ಟೋಬರ್‌ 6ರಂದು ಆದೇಶ ಹೊರಡಿಸಿ 11 ವರ್ಷಗಳಾದರೂ ಸಹಾಯಾನುದಾನಕ್ಕೆ ಒಳಪಡಿಸುವ ಪ್ರಸ್ತಾವನೆಗಳು ಸರ್ಕಾರಕ್ಕೆ ನಿರಂತರವಾಗಿ ಸಲ್ಲಿಕೆಯಾಗುತ್ತಿವೆ. ಈ ಕುರಿತು ಅಂದಿನ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಕರ್ನಾಟಕ ವಿಧಾನಪರಿಷತ್‌ನ ಸಭಾಪತಿ, ಶಿಕ್ಷಣ ಕ್ಷೇತ್ರ ಪ್ರತಿನಿಧಿಸುವ ವಿಧಾನಪರಿಷತ್‌ ಸದಸ್ಯರುಗಳೊಂದಿಗೆ 2018ರ ಸೆ.28ರಂದು ಸಭೆ ಕೂಡ ನಡೆದಿತ್ತು.

 

ಸಹಾಯಾನುದಾನಕ್ಕೆ ಒಳಪಡಿಸಲು ಸರ್ಕಾರದ ಹಂತದಲ್ಲಿ ಆ ಸಮಯದಲ್ಲಿ ಬಾಕಿ ಇದ್ದ 116 ಪ್ರಾಥಮಿಕ ಶಾಲೆಗಳು, 32 ಪ್ರೌಢಶಾಲೆಗಳು, 29 ಪದವಿಪೂರ್ವ ಕಾಲೇಜುಗಳು ಸೇರಿದಂತೆ ಒಟ್ಟು 117 ಶಾಲಾ ಕಾಲೇಜುಗಳನ್ನು ಮಾತ್ರ ವೇತಾನುದಾನಕ್ಕೆ ಒಳಪಡಿಸಲು ಮತ್ತು ಇನ್ನೂ ಮುಂದೆ 1987ರ ಜೂನ್‌ 1ರಿಂದ 1994-95ನೇ ಸಾಲಿನ ಅವಧಿಯಲ್ಲಿ ಪ್ರಾರಂಭವಾದ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಪ್ರಸ್ತಾವನೆಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಬಾರದು ಎಂದು ಆಡಳಿತ ಇಲಾಖೆಗೆ ಆರ್ಥಿಕ ಇಲಾಖೆಯು ನಿರ್ದೇಶಿಸಿತ್ತು ಎಂದು ಗೊತ್ತಾಗಿದೆ.

 

ಶಿಕ್ಷಣ ಅಧಿನಿಯಮ 1983ರ ಪ್ರಕರಣ 49ರ ಅನ್ವಯ ಸಹಾಯಾನುದಾನವನ್ನು ರಾಜ್ಯ ಸರ್ಕಾರದ ಆರ್ಥಿಕ ಸಂಪನ್ಮೂಲಗಳ ಇತಿಮಿತಿಯಲ್ಲಿ ನೀಡುವುದಾಗಿದ್ದು ಹಕ್ಕೆಂದು ಪ್ರತಿಪಾದಿಸಲು ಅವಕಾಸವಿರುವುದಿಲ್ಲ. ರಾಜ್ಯ ಸರ್ಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸಹಾಯಾನುದಾನಕ್ಕೆ ಒಳಪಡಿಸಲು ಸಾಕಷ್ಟು ಕಾಲಾವಕಾಶ ನೀಡಿದ್ದರೂ ನಿಗದಿತ ಅವಧಿಯಲ್ಲಿ ಪ್ರಸ್ತಾವನೆಗಳನ್ನು ಸಲ್ಲಿಸಿ ಸಹಾಯಾನುದಾಕ್ಕೆ ಒಳಪಡದಿರುವುದು ಸಂಬಂಧಪಟ್ಟ ಆಡಳಿತ ಮಂಡಳಿಗಳ ಲೋಪವಾಗಿದೆ ಎಂದು ಹೇಳಿದೆ.

 

ಹೀಗಾಗಿ 1987ರ ಜೂನ್‌ 1ರಿಮದ 1994-95ನೇ ಸಾಲಿನಲ್ಲಿ ಪ್ರಾರಂಭವಾದ ಶಾಲಾ ಕಾಲೇಜುಗಳನ್ನು ಸಹಾಯನುದಾನಕ್ಕೆ ಒಳಪಡಿಸುವ ಪ್ರಸ್ತಾವನೆಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ,’ ಎಂಬ ನಿರ್ಣಯವನ್ನೂ ಕೈಗೊಂಡಿತ್ತು. ಈ ನಿರ್ಣಯವು ಸೂಕ್ತ ಹಾಗೂ ನ್ಯಾಯಸಮ್ಮತವಾಗಿದ್ದು ಇದನ್ನು ಮರು ಪರಿಶೀಲಿಸಲು ಯಾವುದೇ ಸಕಾರಣ/ಸಮರ್ಥನೆ ಇರುವುದಿಲ್ಲ,’ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯದಲ್ಲಿ ಸ್ಪಷ್ಟಪಡಿಸಿದೆ.

SUPPORT THE FILE

Latest News

Related Posts