ಮೈಗಳ್ಳತನ, ಇಚ್ಛಾಶಕ್ತಿ ಕೊರತೆ, ನಿಷ್ಕ್ರೀಯತೆ; ವಿಶೇ‍ಷ ಅಭಿವೃದ್ಧಿ ಯೋಜನೆಯಲ್ಲಿ ಅತ್ಯಂತ ಕಳಪೆ ಪ್ರದರ್ಶನ

photo credit;basavarajbommai twitter account

ಬೆಂಗಳೂರು; ವಿಶೇಷ ಅಭಿವೃದ್ದಿ ಯೋಜನೆಯಡಿಯಲ್ಲಿ 2022-23ನೇ ಸಾಲಿನ ಆಯವ್ಯಯದಲ್ಲಿ ಒಟ್ಟು 3,426.37 ಕೋಟಿ ರು. ಘೋಷಿಸಿ ಬೀಗಿದ್ದ ರಾಜ್ಯ ಬಿಜೆಪಿ ಸರ್ಕಾರವು 2023ರ ಜನವರಿ 20ರ ಅಂತ್ಯಕ್ಕೆ 3,426.37 ಕೋಟಿ ರು. ನಲ್ಲಿ 1,293.85 ಕೋಟಿ ರು. ಬಿಡುಗಡೆಗೊಳಿಸಿ ಇನ್ನೂ 2,132.52 ಕೋಟಿ ರು. ಬಾಕಿ ಉಳಿಸಿಕೊಂಡಿದೆ.

 

ಅರ್ಥಿಕ ವರ್ಷಾಂತ್ಯಕ್ಕೆ ಬಂದು ನಿಂತಿರುವ ಸರ್ಕಾರವು ವಿಶೇ‍ ಅಭಿವೃದ್ದಿ ಯೋಜನೆಯಡಿ ಹಂಚಿಕೆ ಮಾಡಿರುವ ಒಟ್ಟು ಅನುದಾನಕ್ಕೆ ಕೇವಲ ಶೇ. 24.26ರಷ್ಟು ಮಾತ್ರ ವೆಚ್ಚ ಮಾಡಿ ಮೈಗಳ್ಳತನ, ನಿಷ್ಕ್ರೀಯತೆ, ಇಚ್ಛಾಶಕ್ತಿ ಕೊರತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

 

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿಯೇ 2023-24ನೇ ಸಾಲಿನ ಆಯವ್ಯಯ ಮಂಡಿಸಲು ಸರ್ಕಾರವು ಸಜ್ಜಾಗುತ್ತಿದೆ. ಆದರೆ ಕಳೆದ ವರ್ಷದಲ್ಲಿ ಹಂಚಿಕೆ ಮಾಡಿದ್ದ 1,293.85 ಕೋಟಿ ರು ಪೈಕಿ 831.19 ಕೋಟಿ ರು. ಖರ್ಚು ಮಾಡಿದೆ. ಆರ್ಥಿಕ ವರ್ಷಾಂತ್ಯಕ್ಕೆ ಎರಡು ತಿಂಗಳು ಬಾಕಿ ಇದ್ದರೂ 13 ಇಲಾಖೆಗಳು ವೆಚ್ಚಕ್ಕೆ 462.66 ಕೋಟಿ ರು. ಬಾಕಿ ಇರಿಸಿಕೊಂಡಿದೆ.

 

2022-23ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆ ಸಂಬಂಧ ಜನವರಿ 20ರ ಅಂತ್ಯಕ್ಕೆ ವೆಚ್ಚದ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿರುವ ಯೋಜನೆ, ಸಾಂಖ್ಯಿಕ ಇಲಾಖೆಯು ಹಲವು ಇಲಾಖೆಗಳ ಮುಖವಾಡಗಳನ್ನು ಕಳಚಿದೆ. ಇಲಾಖೆಯು ಒದಗಿಸಿರುವ ಮಾಹಿತಿ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಿಶೇಷ ಅಭಿವೃದ್ಧಿ ಯೋಜನೆಯಡಿ ಪ್ರಗತಿಯು ಒಟ್ಟು ಅನುದಾನಕ್ಕೆ ಶೇ 24.26ರಷ್ಟಿದೆ. ಲೋಕೋಪಯೋಗಿ ಇಲಾಖೆಗೆ ಈ ಯೋಜನೆಯಡಿ 70 ಕೋಟಿ ರು ಹಂಚಿಕೆಯಾಗಿತ್ತಾದರೂ ಜನವರಿ 20ರ ಅಂತ್ಯಕ್ಕೆ ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಹಿಂದುಳಿದ ವರ್ಗಗಳ ಇಲಾಖೆಗೆ 75 ಕೋಟಿ ರು ನೀಡಿದ್ದ ಸರ್ಕಾರವು ಈ ಪೈಕಿ ಬಿಡುಗಡೆ ಮಾಡಿದ್ದು ಕೇವಲ 7.50 ಕೋಟಿಯಷ್ಟೇ. ಬಿಡುಗಡೆಗೆ 67.5 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿರುವುದು ಅಂಕಿ ಅಂಶದಿಂದ ತಿಳಿದು ಬಂದಿದೆ.

 

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ ಹಂಚಿಕೆಯಾಗಿದ್ದ 443.00 ಕೋಟಿ ರು. ನಲ್ಲಿ 189.55 ಕೋಟಿ ರು. ಬಿಡುಗಡೆಗೊಳಿಸಿದೆ. ಆದರೆ ಇದರಲ್ಲಿ ವೆಚ್ಚ ಮಾಡಿದ್ದು ಕೇವಲ 19.32 ಕೋಟಿಯಷ್ಟೇ. ವೆಚ್ಚಕ್ಕೆ ಇನ್ನೂ 170.23 ಕೋಟಿ ರು. ಬಾಕಿ ಉಳಿಸಿಕೊಂಡಿದೆ.

 

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಒದಗಿಸಿದ್ದ 60 ಕೋಟಿ ರು.ನಲ್ಲಿ 41.19 ಕೋಟಿ ರು. ಬಿಡುಗಡೆಗೊಳಿಸಿ 18.81 ಕೋಟಿ ರು. ಬಾಕಿ ಇರಿಸಿಕೊಂಡಿದೆ. ಕೃಷಿ ಇಲಾಖೆಗೆ ಹಂಚಿಕೆಯಾಗಿದ್ದ 45 ಕೋಟಿ ರು.ನಲ್ಲಿ 21.10 ಕೋಟಿಯಷ್ಟೇ ಬಿಡುಗಡೆಗೊಳಿಸಿ ಇನ್ನೂ 23.9 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿದೆ.

 

ವಸತಿ ಇಲಾಖೆಗೆ 450 ಕೋಟಿ ರು. ಹಂಚಿಕೆ ಮಾಡಲಾಗಿತ್ತು. ಈ ಪೈಕಿ ಬಿಡುಗಡೆ ಮಾಡಿದ್ದು ಕೇವಲ 37.50 ಕೋಟಿಯಷ್ಟೇ. ಯೋಜನೆ ಇಲಾಖೆಗೆ ಹಂಚಿಕೆಯಾಗಿದ್ದ 1,000 ಕೋಟಿ ರು.ನಲ್ಲಿ 500 ಕೋಟಿ ರು ಬಿಡುಗಡೆ ಮಾಡಿದ್ದರ ಪೈಕಿ ಖರ್ಚಾಗಿರುವುದು 96.49 ಕೋಟಿ ರು. ಮಾತ್ರ. ವೆಚ್ಚಕ್ಕೆ 403.51 ಕೋಟಿ ರು. ಬಾಕಿ ಉಳಿಸಿಕೊಂಡಿರುವುದು ಪಟ್ಟಿಯಿಂದ ತಿಳಿದು ಬಂದಿದೆ.

 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 107.50 ಕೋಟಿ ರು. ಅನುದಾನ ಒದಗಿಸಿದ್ದು ಈ ಪೈಕಿ 77.40 ಕೋಟಿ ರು. ಬಿಡುಗಡೆ ಮಾಡಿತ್ತು. ಆದರೆ ಜನವರಿ 20ರ ಅಂತ್ಯಕ್ಕೆ ಖರ್ಚು ಮಾಡಿರುವುದು ಕೇವಲ 8.10 ಕೋಟಿ ರು. ಮಾತ್ರ. ವೆಚ್ಚಕ್ಕೆ ಇನ್ನು 69.3 ಕೋಟಿ ರು. ಬಾಕಿ ಇದೆ. ಗ್ರಾಮೀಣಾಭಿವೃದ್ಧಿ ಇಲಾಖೆಗೆ 527.67 ಕೋಟಿ ರು. ಅನುದಾದಲ್ಲಿ 20.29 ಕೋಟಿಯಷ್ಟೇ ಬಿಡುಗಡೆಗೊಂಡಿದೆ. ಉನ್ನತ ಶಿಕ್ಷಣದಲ್ಲಿ 50 ಕೋಟಿ ರು.ನಲ್ಲಿ ಜನವರಿ 20ರ ಅಂತ್ಯಕ್ಕೆ ಬಿಡುಗಡೆಯಾಗಿರುವುದು ಕೇವಲ 4.50 ಕೋಟಿ ರು.. ಪೈಕಿ 1.50 ಕೋಟಿಯನ್ನಷ್ಟೆ ಖರ್ಚು ಮಾಡಿದೆ.

Your generous support will help us remain independent and work without fear.

Latest News

Related Posts