ಮಾರ್ಗಸೂಚಿ ಪರಿಷ್ಕರಣೆ ವಿರುದ್ಧ ಎತ್ತದ ದನಿ; ಕೇಂದ್ರದ ಪಾಲನ್ನೂ ಭರಿಸಿ ಹೊರೆ ಹೆಚ್ಚಿಸಿದ ರಾಜ್ಯ

ಬೆಂಗಳೂರು; ನಾರಾಯಣಪುರ ಎಡದಂಡೆ ಕಾಲುವೆ ಆಧುನೀಕರಣ, ವಿಸ್ತರಣೆ, ನವೀಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ವರದಿಯನ್ನು 20 ವರ್ಷಗಳ ಹಿಂದೆಯೇ (2012) ರಾಷ್ಟ್ರೀಯ ಜಲ ಉದ್ದಿಷ್ಟ ಕಾರ್ಯ ಯೋಜನೆಯಡಿ ಕೇಂದ್ರ ಜಲ ಆಯೋಗಕ್ಕೆ ಕಳಿಸಲಾಗಿತ್ತು. ಆದರೆ ಸಕಾಲದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳದ ಕಾರಣ ಅದರ ಯೋಜನಾ ವೆಚ್ಚವು ಮಿತಿ ಮೀರಲು ಕಾರಣವಾಗಿದೆ ಎಂಬ ಅಂಶ ಇದೀಗ ಮುನ್ನೆಲೆಗೆ ಬಂದಿದೆ.

 

ಈ ಕುರಿತು ‘ದಿ ಫೈಲ್‌’ 500ಕ್ಕೂ ಹೆಚ್ಚು ಪುಟಗಳನ್ನೊಳಗೊಂಡಿರುವ ಸಮಗ್ರ ಕಡತವನ್ನು ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

ಪ್ರಾಥಮಿಕ ವರದಿ ಅನ್ವಯ 2012ರಲ್ಲಿ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರವು 3,060 ಕೋಟಿ ರು. ಯೋಜನೆಗೆ ಕೇಂದ್ರ ಸಹಾಯಧನದಡಿ ಪ್ರಸ್ತಾವನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಜತೆಯಲ್ಲಿ ತಾತ್ವಿಕ ಅನುಮೋದನೆಯನ್ನೂ 2012ರ ಮೇ 5ರಂದು ನೀಡಲಾಗಿತ್ತು.

 

‘ಕೃಷ್ಣಭಾಗ್ಯ ಜಲನಿಗಮದಿಂದ ಸಲ್ಲಿಸಿರುವ 3,060.00 ಕೋಟಿ ಮೊತ್ತದ ಎಐಬಿಪಿ-ಇಆರ್‌ಎಂ ಕೇಂದ್ರ ಸಹಾಯಧನಡಿ ಪ್ರಸ್ತಾವನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಿ, ಈಗಾಗಲೇ ಕೇಂದ್ರ ಸರ್ಕಾರದ ಜಲಸಂಪನ್ಮೂಲ ಇಲಾಖೆಯಿಂದ ರಾಷ್ಟ್ರೀಯ ಜಲ ಉದ್ದಿಷ್ಟ ಯೋಜನೆಯಡಿ ನಾರಾಯಣಪುರ ಎಡದಂಡೆ ಕಾಲುವೆ ನೀರು ಬಳಕೆ ದಕ್ಷತೆ ಕಾರ್ಯಕ್ರಮದಡಿ ಪರಿಗಣಿಸಿರುವಂತೆ 1,020 ಕೋಟಿ ಮೊತ್ತದ ಹನಿನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದಕ್ಕೆ 5.00 ಕೋಟಿ ಮೊತ್ತದ ಜಿಐಎಸ್‌ ಆಧಾರಿತ ನೀರು ನಿರ್ವಹಣೆ ಪದ್ಧತಿ ಅಳವಡಿಸುವುದಕ್ಕೆ ತಾತ್ವಿಕ ಅನುಮೋದನೆ ‘ ನೀಡಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿತ್ತು.

 

2012ರ ನಂತರ ಕಾಂಗ್ರೆಸ್‌ ಸರ್ಕಾರ ಪೂರ್ಣಾವಧಿ ಅಧಿಕಾರ ನಡೆಸಿದ್ದರೂ ಕಾಮಗಾರಿ ತ್ವರಿತಗತಿಯಲ್ಲಿ ನಡೆಯಲಿಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿಯೂ ಕಾಮಗಾರಿಗೆ ಚುರುಕಿನ ವೇಗ ದೊರೆಯಲಿಲ್ಲ. ಹೀಗಾಗಿ ಯೋಜನಾ ವೆಚ್ಚವು ಪ್ರತಿವರ್ಷವೂ ಏರಿಕೆಯಾಗಿರುವುದು ಲಭ್ಯವಿರುವ ದಾಖಲೆಗಳಿಂದ ತಿಳಿದು ಬಂದಿದೆ.

 

ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿದ್ದ ಪ್ರಾಥಮಿಕ ವರದಿ ಪ್ರಕಾರ ಒಟ್ಟು 3,060.00 ಕೋಟಿ ರು. ಯೋಜನಾ ವೆಚ್ಚವಾಗಿತ್ತು. ಯೋಜನಾ ಆಯೋಗವು ಈ ಯೋಜನೆ ಮೇಲೆ 3,752.18 ಕೋಟಿ ರು. ಬಂಡವಾಳ ಹೂಡಲು 2013ರ ಡಿಸೆಂಬರ್‌ 16ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಅಲ್ಲದೇ ಈ ಯೋಜನೆಯನ್ನು 2016ರ ಮಾರ್ಚ್‌ 31ರೊಳಗೆ ಮುಕ್ತಾಯಗೊಳಿಸಬೇಕು ಎಂಬ ಷರತ್ತನ್ನೂ ವಿಧಿಸಿತ್ತು. ಆದರೆ ರಾಜ್ಯ ಸರ್ಕಾರವು 2016ರ ಡಿಸೆಂಬರ್‌ವರೆಗೂ ಕಾಲಾವಕಾಶ ಕೋರಿತ್ತು.

 

ಕಾಲಾವಕಾಶ ಪಡೆದು 6 ವರ್ಷಗಳಾದರೂ ಇದುವರೆಗೂ ಯೋಜನೆಯ ಕಾಮಗಾರಿ ಪೂರ್ಣಗೊಂಡಿಲ್ಲ. ಬದಲಿಗೆ ಯೋಜನಾ ವೆಚ್ಚವನ್ನು ಊಹೆಗೂ ನಿಲುಕದ ರೀತಿಯಲ್ಲಿ ಏರಿಕೆ ಆಗುತ್ತಲೇ ಇರುವುದು ದಾಖಲೆಯಿಂದ ಗೊತ್ತಾಗಿದೆ.

 

ಯೋಜನೆಗೆ ಆರ್ಥಿಕ ನೆರವು ನೀಡುವ ಸಂಬಂಧ ಕೇಂದ್ರ ಸರ್ಕಾರವು ಮಾರ್ಗಸೂಚಿಗಳನ್ನು ಪರಿಷ್ಕರಿಸುವ ಮೊದಲೇ 562 ಕೋಟಿ ರು.ಗಳನ್ನು ( ಶೇ.75ರ ಪಾಲು) ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರು 2014ರ ಜನವರಿ 23ರಂದು ಕೇಂದ್ರ ಸರ್ಕಾರವನ್ನು ಕೋರಿತ್ತು. ಜುಲೈ 2014ರ ಅಂತ್ಯಕ್ಕೆ 1,760.43 ಕೋಟಿ ರು. ಖರ್ಚಾಗಿತ್ತು. 1,991.75 ಕೋಟಿ ರು. ವೆಚ್ಚಮಾಡಲು ಬಾಕಿ ಉಳಿಸಿಕೊಂಡಿತ್ತು.

 

ಈ ಮಧ್ಯೆ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರವು ಪರಿಷ್ಕರಿಸಿದ ಕಾರಣ ಕೇಂದ್ರದ ಹಂಚಿಕೆಯ ಮೊತ್ತವೂ ಇಳಿದಿತ್ತು. ಎರಡನೇ ಕಂತಾದ 200 ಕೋಟಿ ರು.ಗಳನ್ನು ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರವು 2015ರ ಫೆ.13ರಂದು ಕೇಂದ್ರಕ್ಕೆ ಪತ್ರವನ್ನು ಬರೆದಿತ್ತು. ಆದರೆ ಕೇಂದ್ರ ಸರ್ಕಾರವು ಎರಡನೇ ಕಂತನ್ನು ಬಿಡುಡೆಗೊಳಿಸಲಿಲ್ಲ ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಈ ಬೆಳವಣಿಗೆಗಳ ನಡುವೆಯೇ ಯೋಜನೆಯ ವೆಚ್ಚವು 4,233.98 ಕೋಟಿ ರುಗೆ ಏರಿಕೆಯಾಗಿತ್ತು. ಮೂಲ ಒಪ್ಪಂದದಂತೆ 1,245.63 ಕೋಟಿ ರು. ಪೈಕಿ ಮೊದಲ ಕಂತಾಗಿ 2014-15ರಲ್ಲಿ 70 ಕೋಟಿಯನ್ನು ಬಿಡುಗಡೆ ಮಾಡಿತ್ತು. ಕಾಮಗಾರಿ ಪೂರ್ಣಗೊಳಿಸಲು 2019 ಮಾರ್ಚ್‌ವರೆಗೆ ಗುರಿ ನಿಗದಿಪಡಿಸಿತ್ತು. 2016-17ರ ಆರ್ಥಿಕ ವರ್ಷಕ್ಕೆ 300 ಕೋಟಿಯನ್ನು ಬಿಡುಗಡೆ ಮಾಡಬೇಕಿದ್ದ ಕೇಂದ್ರ ಸರ್ಕಾರವು ಆ ನಂ ತರ ಈ ಹಣವನ್ನು ಬಿಡುಗಡೆ ಮಾಡಲಿಲ್ಲ.

 

ಹೀಗಾಗಿ 2017-18ರಲ್ಲಿ ರಾಜ್ಯ ಸರ್ಕಾರವು ಒಟ್ಟು 700 (400 ಕೋಟಿ ಮತ್ತು ಹಿಂದಿನ ಕಂತು 300 ಕೋಟಿ) ಕೋಟಿ ಬಿಡುಗಡೆಗೆ ಮತ್ತೊಂದು ಕೋರಿಕೆ ಸಲ್ಲಿಸಿತ್ತು. ಆದರೆ ಕೇಂದ್ರ ಸರ್ಕಾರವು 184.13 ಕೋಟಿಯನ್ನಷ್ಟೇ ಬಿಡುಗಡೆ ಮಾಡಿತ್ತು.

 

ಈ ಯೋಜನೆಗೆ ಈಗಾಗಲೇ 2013-14ರಿಂದ 2018-19ರವರೆಗೆ ಒಟ್ಟು 3,714.17 ಕೋಟಿ ರು. ವೆಚ್ಚವಾಗಿದೆ. ಈ ಪೈಕಿ ಕೇಂದ್ರ ಸರ್ಕಾರವು 2014-15ರಲ್ಲಿ 70 ಕೋಟಿ, 2017-18ರಲ್ಲಿ 368.86 ಕೋಟಿ ರು., 2018-19ರಲ್ಲಿ 197.00 ಕೋಟಿ, 2019-20ರಲ್ಲಿ 155.67 ಕೋಟಿ, 2020-21ರಲ್ಲಿ 109.48 ರು. ಸೇರಿ ಒಟ್ಟು 901.01 ಕೋಟಿ ರು ಗಳನ್ನು ನೀಡಿದೆ. ರಾಜ್ಯ ಸರ್ಕಾರವು ಈದೇ ಅವಧಿಯಲ್ಲಿ ಒಟ್ಟಾರೆ 2,028.62 ಕೋಟಿ ರು ನೀಡಿರುವುದು ದಾಖಲೆಯಿಂದ ತಿಳಿದು ಬಂದಿದೆ.

SUPPORT THE FILE

Latest News

Related Posts