551 ಕೋಟಿಯಲ್ಲಿ ಬಿಡಿಗಾಸೂ ನೀಡದ ಕೇಂದ್ರ; ನೆನಪೋಲೆಗಳಿಗೆ ಕಿಮ್ಮತ್ತಿಲ್ಲ, ಸುಧಾಕರ್‌ ತುಟಿಬಿಚ್ಚಿಲ್ಲ

ಬೆಂಗಳೂರು; ಹದಿನೈದನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ 2022-23ನೇ ಸಾಲಿನ ಆರೋಗ್ಯ ವಲಯಕ್ಕೆ ಬಿಡುಗಡೆಯಾಗಬೇಕಿದ್ದ 551.53 ಕೋಟಿ ರುಪಾಯಿ ಇದುವರೆಗೂ ಬಿಡುಗಡೆಯಾಗಿಲ್ಲ. ಈ ಕುರಿತು ಆರ್ಥಿಕ ಇಲಾಖೆಯು 3 ನೆನಪೋಲೆಗಳನ್ನು ಕೇಂದ್ರ ಸರ್ಕಾರಕ್ಕೆ ಬರೆದಿದ್ದರೂ ಬಿಡಿಗಾಸೂ ರಾಜ್ಯಕ್ಕೆ ಬಂದಿಲ್ಲ.

 

ಈ ಸಂಬಂಧ 2023ರ ಜನವರಿ 13ರಂದು ಆರ್ಥಿಕ ಇಲಾಖೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ (ಸಂ;ಆಇ19 ಆಆಕೋ 2021)  ಪತ್ರ ಬರೆದಿದ್ದಾರೆ ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಕೆ ಸುಧಾಕರ್‌ ಅವರು ಚಿಕ್ಕಬಳ್ಳಾಪುರ ಉತ್ಸವದ ಯಶಸ್ಸಿನ ಸಂಭ್ರಮದಲ್ಲಿ ಮುಳುಗಿರುವ ಬೆನ್ನಲ್ಲೇ ಆರೋಗ್ಯ ವಲಯಕ್ಕೆ 15ನೇ ಹಣಕಾಸು ಆಯೋಗದಡಿ 551.53 ಕೋಟಿ ರು.ನಲ್ಲಿ ಬಿಡಿಗಾಸೂ ರಾಜ್ಯಕ್ಕೆ ಬಂದಿಲ್ಲ ಎಂದು ಆರ್ಥಿಕ ಇಲಾಖೆಯು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.

 

‘ಉಲ್ಲೇ ಖಿತ ಅನಧಿಕೃತ ಟಿಪ್ಪಣಿಗಳು ಹಾಗೂ ಪತ್ರದತ್ತ ತಮ್ಮ ಗಮನ ಸೆಳೆಯಲಾಗಿದೆ. 2022-23ನೇ ಸಾಲಿಗೆ 15ನೇ ಹಣಕಾಸು ಆಯೋಗದಡಿ ಆರೋಗ್ಯ ವಲಯಕ್ಕೆ 551.53 ಕೋಟಿ ಬಿಡುಗಡೆಯಾಗಬೇಕಿದ್ದು ಈ ಮೊತ್ತವು ಇದುವರೆಗೂ ಬಿಡುಗಡೆಯಾಗಿರುವುದಿಲ್ಲ. ಆರ್ಥಿಕ ವರ್ಷಾಂತ್ಯಕ್ಕೆ ಕೆಲವೇ ತಿಂಗಳುಗಳು ಬಾಕಿ ಇರುವುದರಿಂದ ಪೂರ್ಣ ಮೊತ್ತವನ್ನು ಕೇಂದ್ರದಿಂದ ಪಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು,’ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವೆಂಕಟೇಶ್‌ ಎಸ್‌ ಎನ್‌ ಅವರು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

 

2020–21ನೇ ಸಾಲಿನ ವರದಿಯಲ್ಲಿ ಕರ್ನಾಟಕಕ್ಕೆ ಆರೋಗ್ಯ ವಲಯಕ್ಕೆ 2021-22ರಿಂದ 2025-26ರ ವರ್ಷದಲ್ಲಿ 2,929 ಕೋಟಿ ರು. ಶಿಫಾರಸ್ಸು ಮಾಡಿತ್ತು. 2021-22ನೇ ಸಾಲಿಗೆ ಸಂಬಂಧಿಸಿದಂತೆ 552.00 ಕೋಟಿ ರು.ಗಳನ್ನೂ ಬಿಡುಗಡೆ ಮಾಡಿರಲಿಲ್ಲ ಎಂದು ತಿಳಿದುಬಂದಿದೆ.

 

ಕೋವಿಡ್‌ ನಿರ್ವಹಣೆ ಸಂಬಂಧ ರಾಜ್ಯ ಸರ್ಕಾರವು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದ ಹೊತ್ತಿನಲ್ಲಿ 15ನೇ ಹಣಕಾಸು ಆಯೋಗವು ಆರೋಗ್ಯ ವಲಯಕ್ಕೆ ಮಾಡಿದ್ದ ಶಿಫಾರಸ್ಸಿನಂತೆ 552.00 ಕೋಟಿ ರು. ಬಿಡುಗಡೆ ಮಾಡದೆಯೇ ಶಿಫಾರಸ್ಸನ್ನು ಕಾಗದದ ಮೇಲಷ್ಟೇ ಉಳಿಸಿಕೊಂಡಿತ್ತು. ಕೇಂದ್ರ ಸರ್ಕಾರವು ಅನುದಾನವನ್ನು ಬಿಡುಗಡೆ ಮಾಡದಿದ್ದರೂ ಆರೋಗ್ಯ ಸಚಿವ ಡಾ ಕೆ ಸುಧಾಕರ್‌ ಅವರು ದನಿ ಎತ್ತಿರಲಿಲ್ಲ.

 

2021-22ನೆ ಸಾಲಿಗೆ 552.00 ಕೋಟಿ, 2022-23ಕ್ಕೆ 552.00 ಕೋಟಿ, 2023-24ನೇ ಸಾಲಿಗೆ 579 ಕೋಟಿ, 2024-25ನೇ ಸಾಲಿಗೆ 608 ಕೋಟಿ, 2025-26ಕ್ಕೆ 638 ಕೋಟಿ ಸೇರಿದಂತೆ ಒಟ್ಟು 2,929 ಕೋಟಿ ರು.ಗಳನ್ನು 15ನೇ ಹಣಕಾಸು ಆಯೋಗವು ರಾಜ್ಯದ ಆರೋಗ್ಯ ವಲಯಕ್ಕೆ ಶಿಫಾರಸ್ಸು ಮಾಡಿತ್ತು.

 

2021-22ನೇ ಸಾಲಿಗೆ ಶಿಫಾರಸ್ಸಾಗಿರುವ 552 ಕೋಟಿ ರು. ಕೇಂದ್ರ ಸರ್ಕಾರದಿಂದ ಇನ್ನೂ ಬಿಡುಗಡೆಯಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಈ ಮೊತ್ತವನ್ನು ಕೇಂದ್ರದಿಂದ ಪಡೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡಬೇಕು ಎಂದು ಆರ್ಥಿಕ ಇಲಾಖೆಯು ಆರೋಗ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿತ್ತು ಎಂದು ತಿಳಿದು ಬಂದಿದೆ.

 

15ನೇ ಹಣಕಾಸು ಆಯೋಗ 2020–21ನೇ ಸಾಲಿನ ವರದಿಯಲ್ಲಿ ಕರ್ನಾಟಕಕ್ಕೆ ರೂ.5,495 ಕೋಟಿ ನೀಡಲು ಶಿಫಾರಸು ಮಾಡಿದೆ. ಈ ಶಿಫಾರಸ್ಸನ್ನು ಒಪ್ಪಿಕೊಂಡು 2021–22 ಸಾಲಿನ ಬಜೆಟ್‌ನಲ್ಲಿ ವಿಶೇಷ ಅನುದಾನ ಪ್ರಕಟಿಸಬೇಕು ಎಂದು ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿತ್ತು. ಆದರೆ ಆಗಸ್ಟ್‌ ಮತ್ತು ಸೆಪ್ಟಂಬರ್‌ವರೆಗಿನ ಅವಧಿಯಲ್ಲಿ ಶೇ. 32ರಷ್ಟು ಮಾತ್ರ ಅನುದಾನ ಬಿಡುಗಡೆಯಾಗಿತ್ತು.

 

ಆಗಸ್ಟ್‌ 4ರ ಅಂತ್ಯಕ್ಕೆ ರಾಜ್ಯ ಸರ್ಕಾರವು 2,114.5 ಕೋಟಿ ರು.ಗಳನ್ನು 6 ಲೆಕ್ಕ ಶೀರ್ಷಿಕೆಗಳಿಗೆ ಬಿಡುಗಡೆ ಮಾಡಿದೆ. ರಾಜ್ಯ ವಿಪತ್ತು ನಿರ್ವಹಣೆ ನಿಧಿಗೆ ಅಂದಾಜು 1,000 ಕೋಟಿ ರು.ಗಳನ್ನು ರಾಷ್ಟ್ರೀಯ ವಿಪತ್ತು ನಿಧಿ ಅಡಿಯಲ್ಲಿ ಬಿಡುಗಡೆಯಾಗಿತ್ತು.

 

ಕಳೆದ ವರ್ಷದ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಭೀಕರ ಪ್ರವಾಹ ಎದುರಾದಾಗ ಕೇಂದ್ರ ಸರ್ಕಾರ ರಾಜ್ಯಕ್ಕೆ ಮೊದಲ ಹಂತದಲ್ಲಿ 1,369 ಕೋಟಿ ಹಾಗೂ ಎರಡನೇ ಹಂತದಲ್ಲಿ 2,261 ಕೋಟಿ ಬಿಡುಗಡೆ ಮಾಡಿತ್ತು.

 

ಹದಿನೈದನೇ ಹಣಕಾಸು ಆಯೋಗವು ರಾಜ್ಯಕ್ಕೆ ವಿವಿಧ ಲೆಕ್ಕ ಶೀರ್ಷಿಕೆಗಳಲ್ಲಿ ಹಂಚಿಕೆ ಮಾಡಿದ್ದ ಒಟ್ಟು 28,245.76 ಕೋಟಿ ರು. ಅನುದಾನದ ಪೈಕಿ 2022ರ ಜನವರಿ ಅಂತ್ಯಕ್ಕೆ 22,443.80 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ. ಇದೇ ಅವಧಿಗೆ ಇನ್ನೂ 5,801.96 ಕೋಟಿ ರು. ಬಾಕಿ ಉಳಿಸಿಕೊಂಡಿದೆ.

 

15ನೇ ಹಣಕಾಸು ಆಯೋಗದ ಅನುದಾನ ಹಂಚಿಕೆ ಮತ್ತು ಬಿಡುಗಡೆಗೆ ಸಂಬಂಧಿಸಿದಂತೆ ವಿಧಾನಪರಿಷತ್‌ ಸದಸ್ಯ ಎಸ್‌ ರವಿ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022ರ ಮಾರ್ಚ್‌ 10ರಂದು ಉತ್ತರಿಸಿದ್ದರು.

 

ಆರೋಗ್ಯ ಕ್ಷೇತ್ರಕ್ಕೆ ಬಿಡುಗಡೆಯಾಗದ 552 ಕೋಟಿ; ಅನುಷ್ಠಾನಗೊಂಡಿಲ್ಲ ಆಯೋಗದ ಶಿಫಾರಸ್ಸು?

 

ರಾಷ್ಟ್ರೀಯ ಆಹಾರ ಭದ್ರತೆ ಅಭಿಯಾನಕ್ಕೆ 2021-22ರಲ್ಲಿ 100.00 ಕೋಟಿ ರು. ಹಂಚಿಕೆ ಮಾಡಿದ್ದರೂ 2022ರ ಜನವರಿ ಅಂತ್ಯಕ್ಕೆ ರಾಜ್ಯ ಸ್ವೀಕರಿಸಿದ್ದು 24.60 ಕೋಟಿ ರು. ಮಾತ್ರ. ಈ ಲೆಕ್ಕ ಶೀರ್ಷಿಕೆಯಲ್ಲಿ ಇನ್ನೂ 75.4 ಕೋಟಿ ರು. ಬಾಕಿ ಇದೆ.  ಇದೇ ಅಭಿಯಾನಕ್ಕೆ ಗಿರಿಜನ ಉಪ ಯೋಜನೆಯಡಿಯಲ್ಲಿ 2.09 ಕೋಟಿ ರು. ಬಿಡುಗಡೆ ಮಾಡಿದೆ. ಆಹಾರ ಧಾನ್ಯ ಮತ್ತು ಎಫ್‌ಪಿಎಸ್‌ ವಿತರಕರ ಆಂತರಿಕ ರಾಜ್ಯ ಚಲನೆ ಮತ್ತು ನಿರ್ವಹಣೆಗೆ 173.00 ಕೋಟಿ ರು. ಪೈಕಿ ನೀಡಿದ್ದು 53.43 ಕೋಟಿ ಮಾತ್ರ. ಇದರಲ್ಲಿ 119.57 ಕೋಟಿ ರು. ಬಾಕಿ ಇದ್ದದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts