ಬೆಂಗಳೂರು; ಸರ್ಕಾರದ ಅನುಮೋದನೆ ಪಡೆಯದೇ 465 ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ಗುತ್ತಿಗೆ ನೀಡಿರುವುದು ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977ರ ಮೊದಲನೇ ಅನುಸೂಚಿಯ ನಿಯಮವು ಉಲ್ಲಂಘನೆಯಾಗಿದೆ ಎಂದು ಅರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಯೇ ಸ್ಪಷ್ಟವಾಗಿ ಹೇಳಿದ್ದರೂ ಆ ನಂತರ ನಡೆದ ಬೆಳವಣಿಗೆಗಳಲ್ಲಿ ಆರ್ಥಿಕ ಇಲಾಖೆಯು ತನ್ನ ಆಕ್ಷೇಪವನ್ನೇ ಬದಿಗಿರಿಸಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಕೃಷ್ಣಭಾಗ್ಯ ಜಲನಿಗಮದ ಅಧಿಕಾರಿಗಳು ಸರ್ಕಾರವನ್ನೂ ಕತ್ತಲಲ್ಲಿಟ್ಟು ನೂರಾರು ಕೋಟಿ ರು. ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದನ್ನು ಪತ್ತೆ ಹಚ್ಚಿದ್ದ ಆರ್ಥಿಕ ಇಲಾಖೆಯು ಆಡಳಿತಾತ್ಮಕ ಅನುಮೋದನೆಗೆ ಅನುಮತಿ ನೀಡಿರುವುದರ ಹಿಂದೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಒತ್ತಡವೇ ಕಾರಣ ಎಂದು ತಿಳಿದು ಬಂದಿದೆ.
ಅಡಳಿತ ಇಲಾಖೆಯು ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೇ, ಅರ್ಥಿಕ ಇಲಾಖೆಯ ಗಮನಕ್ಕೂ ತರದೇ ರೂ 465.00 ಕೋಟಿ ರು.ಗಳ ಕಾಮಗಾರಿಗಳಿಗೆ ಗುತ್ತಿಗೆ ನೀಡಿ ಕೈಗೆತ್ತಿಕೊಂಡಿರುವುದು ನಿಯಮಗಳ ಉಲ್ಲಂಘನೆಯಾಗಿದೆ. ಈ ಸಂಬಂಧ ಸದರಿ ಪ್ರಕ್ರಿಯೆಯಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆರ್ಥಿಕ ಇಲಾಖೆಯ ನಿರ್ದೇಶನ ಪಾಲಿಸದ ಜಲಸಂಪನ್ಮೂಲ ಇಲಾಖೆಯು ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮವನ್ನೂ ಜರುಗಿಸಿಲ್ಲ ಎಂದು ತಿಳಿದು ಬಂದಿದೆ.
ನಿಯಮ ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಜಲಸಂಪನ್ಮೂಲ ಇಲಾಖೆಯು ತರಾತುರಿಯಲ್ಲಿ 4,699.00 ಕೋಟಿ ರು. ಮೊತ್ತದ ಯೋಜನೆಗೆ 2022ರ ಡಿಸೆಂಬರ್ 29ರಂದು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶವನ್ನು (ಸರ್ಕಾರದ ಆದೇಶ ಸಂಖ್ಯೆ ಜಸಂಇ 94 ಕೆಬಿಎನ್ 2021 ಬೆಂಗಳೂರು ದಿನಾಂಕ 29.12.2022) ಹೊರಡಿಸಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ನಾರಾಯಣಪುರ ಎಡದಂಡೆ ಕಾಲುವೆಯು ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಕಾಲುವೆ ಜಾಲದ ಅತ್ಯಂತ ಮುಖ್ಯ ಕಾಲುವೆ. 10,000 ಕ್ಯುಸೆಕ್ಸ್ ನೀರಿನ ಹರಿವಿನ ಸಾಮರ್ಥ್ಯ ಹೊಂದಿದೆ. ಉತ್ತರ ಕರ್ನಾಟಕದ ಕಲಬುರುಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಡಿಯಲ್ಲಿ 4.50 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಇದಾಗಿದೆ. ನಾರಾಯಣಪುರ ಎಡದಂಡೆ ಕಾಲುವೆ ಜಾಲವು ಶಹಾಪುರ, ಇಂಡಿ, ಜೇವರ್ಗಿ, ಮುಡಬಾಳ, ಇಂಡಿ ಏತ ನೀರಾವರಿ ಯೋಜನೆಯ ವಿತರಣಾ ಕಾಲುವೆ ಜಾಲವನ್ನು ಒಳಗೊಂಡಿದೆ.
ಎನ್‌ಆರ್‌ಬಿಸಿ ಕಾಲುವೆಯ ವಿಸ್ತರಣೆ, ನವೀಕರಣ ಹಾಗೂ ಆಧುನೀಕರಣದ ಯೋಜನೆಯ 4,085 ಕೋಟಿ ರು. ಅಂದಾಜು ಮೊತ್ತಕ್ಕೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ದೊರೆತಿತ್ತು. ಇದರಡಿಯಲ್ಲಿ ನಾರಾಯಣಪುರ ಎಡದಂಡೆ ಕಾಲುವೆಯ ಹಾಗೂ ಅದರಿಯ ಕಾಲುವೆ ಜಾಲದಡಿ ಅಚ್ಚುಕಟ್ಟಿನ ಶೇ. 25ರಷ್ಟು ಅಚ್ಚುಕಟ್ಟು ಕ್ಷೇತ್ರದಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಲು 1,020 ಕೋಟಿ ಹಾಗೂ ಜಿಐಎಸ್ ಆಧಾರಿತ ನೀರು ನಿರ್ವಹಣೆ ಪದ್ಧತಿ ಅಳವಡಿಕೆಯಾಗಿ 5,00 ಕೋಟಿ ರು.ಗಳನ್ನು ಕೆಬಿಜೆಎನ್‌ಎಲ್ ಸೇರಿಸಿತ್ತು ಎಂಬುದು ಆದೇಶದಿಂದ ತಿಳಿದು ಬಂದಿದೆ.
‘ಕೇಂದ್ರ ಸರ್ಕಾರದ ಜಲಸಂಪನ್ಮೂಲ ಮಂತ್ರಾಲಯವು 2015-16ರಲ್ಲಿ ಜಾರಿಗೆ ತಂದಿರುವ ಎಐಬಿಪಿ-ಪಿಎಂಕೆಎಸ್‌ವೈ ಯೋಜನೆಯಡಿ ಪರಿಷ್ಕೃತ ಮಾರ್ಗಸೂಚಿಯಂತೆ ಮತ್ತು ಎನ್‌ಎಲ್‌ಬಿಸಿ ಇಆರ್‌ಎಂ ಯೋಜನೆಯಡಿ ಸ್ಕಾಡಾ ಎರಡನೇ ಹಂತ ಅನುಷ್ಟಾನದಿಂದಾಗಿ ರಾಜ್ಯದ ಪಾಲಿನಲ್ಲಿ ಏರಿಕೆ ಪರಿಗಣಿಸಿ ಯೋಜನೆಯ ಪರಿಷ್ಕೃತ ಅಂದಾಜು ಮೊತ್ತವಾದ 4,699.00 ಕೋಟಿ ರು.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ,’ ಎಂದು ಜಲಸಂಪನ್ಮೂಲ ಇಲಾಖೆಯು ಆದೇಶದಲ್ಲಿ ವಿವರಿಸಿದೆ.
ನಾರಾಯಣಪುರ ಎಡದಂಡೆ ಕಾಲುವೆಯ ನೀರಿನ ಬಳಕೆಯಲ್ಲಿ ದಕ್ಷತೆ ಹೆಚ್ಚಿಸುವ ಉದ್ದೇಶದಿಂದ ಕಾಲುವೆ ವಿಸ್ತರಣೆ, ನವೀಕರಣ ಮತ್ತು ಆಧುನೀಕರಣದ ಪ್ರಸ್ತಾವನೆ, ಅಂದಾಜು ಮೊತ್ತವನ್ನು ಎರಡೆರಡು ಬಾರಿ ಪರಿಷ್ಕರಿಸಿರುವುದರ ಹಿಂದೆ ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳು ಬಹುದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪಗಳಿವೆ.