ಆರ್ಥಿಕ ಇಲಾಖೆಯನ್ನೂ ಕತ್ತಲಲ್ಲಿಟ್ಟು 465 ಕೋಟಿ ಕಾಮಗಾರಿ ಗುತ್ತಿಗೆ; ಸ್ಪಷ್ಟ ಉಲ್ಲಂಘನೆಯೆಂದ ಕೌರ್‌

ಬೆಂಗಳೂರು; ನಾರಾಯಣಪುರ ಎಡದಂಡೆ ಕಾಲುವೆಯ ಆಧುನೀಕರಣ, ವಿಸ್ತರಣೆ, ನವೀಕರಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮೂಲ ಯೋಜನಾ ಮೊತ್ತವಾದ 3,060 ಕೋಟಿ ರು. ನಿಂದ 4,233.98 ಕೋಟಿ ರು.ಗೆ ಪರಿಷ್ಕರಣೆಗೆ ಆಡಳಿತಾತ್ಮಕ ಅನುಮೋದನೆ ಪಡೆದ ನಂತರವೂ 465.02 ಕೋಟಿ ರು. ಮೊತ್ತದ ಹೆಚ್ಚಳ ಕಾಮಗಾರಿ ಗುತ್ತಿಗೆ ನೀಡಿರುವುದು ಆರ್ಥಿಕ ಇಲಾಖೆ ಗಮನಕ್ಕೇ ಬಂದಿಲ್ಲ ಎಂಬುದು ಆರ್‌ಟಿಐ ದಾಖಲೆಗಳಿಂದ ಬಹಿರಂಗವಾಗಿದೆ.

 

ಈ ಕುರಿತು ‘ದಿ ಫೈಲ್‌’ 500 ಕ್ಕೂ ಹೆಚ್ಚು ಪುಟಗಳನ್ನೊಳಗೊಂಡಿರುವ ಸಮಗ್ರ ಕಡತವನ್ನು ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

ಎನ್‌ಆರ್‌ಬಿಸಿ ಎಡದಂಡೆ ಕಾಲುವೆ ಕಾಮಗಾರಿಗೆ ಸಂಬಂಧಿಸಿದಂತೆ ಕೇಂದ್ರದ ಅನುದಾನ ಹಂಚಿಕೆಯ ಅನುಪಾತದಲ್ಲಿನ ಇಳಿಕೆಯಿಂದಾಗಿ ಕಾಮಗಾರಿ ಮೊತ್ತ ಹೆಚ್ಚಳವಾಗಿದ್ದರೂ ಹೆಚ್ಚಳವಾಗಿರುವ ಮೊತ್ತಕ್ಕೆ ಅನುಮೋದನೆ ಪಡೆಯುವ ಮುನ್ನ ಆರ್ಥಿಕ ಇಲಾಖೆಗೆ ಕಡತ ಸಲ್ಲಿಸಬೇಕಿತ್ತು. ಆದರೆ ಆರ್ಥಿಕ ಇಲಾಖೆ ಗಮನಕ್ಕೆ ತಾರದೆಯೇ ಗುತ್ತಿಗೆ ನೀಡಿರುವುದು ಅಕ್ರಮಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

ಕೃಷ್ಣಭಾಗ್ಯ ಜಲನಿಗಮ ಮತ್ತು ಜಲಸಂಪನ್ಮೂಲ ಇಲಾಖೆಯು ನಿಯಮಾವಳಿಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ ಎಂದು ಆರ್ಥಿಕ ಇಲಾಖೆಯ ಕಾರ್ಯದರ್ಶಿ ಡಾ ಏಕರೂಪ್‌ ಕೌರ್‌ ಅವರು ಟಿಪ್ಪಣಿಯಲ್ಲಿ ಅಭಿಪ್ರಾಯ ದಾಖಲಿಸಿದ್ದಾರೆ.

 

ಏಕ್‌ರೂಪ್‌ ಕೌರ್‌ ನೀಡಿದ್ದ ಅಭಿಪ್ರಾಯವೇನು?

 

ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977ರ ಮೊದಲನೆ ಅನುಸೂಚಿಯ 15(iii)ನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಈ ನಿಯಮಗಳಂತೆ ಮೂಲ ಅಂದಾಜು 10.00 ಕೋಟಿ ಮೀರಿದಲ್ಲಿ ಮತ್ತು ಪರಿಷ್ಕೃತ ಅಂದಾಜುಗಳು ಮೂಲ ಅಂದಾಜುಗಳಿಗಿಂತ ಶೇ.25ರಷ್ಟು ಅಥವಾ 10.00 ಕೋಟಿಗಳಷ್ಟು ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟನ್ನು ಮೀರಿದರೇ ಅದನ್ನು ಮತ್ತೆ ಸಚಿವ ಸಂಪುಟದ ಮುಂದೆ ಮಂಡಿಸಿ ಆಡಳಿತಾತ್ಮಕ ಅನುಮೋದನೆ ಪಡೆಯಬೇಕು. ಆದರೆ ಆಡಳಿತ ಇಲಾಖೆಯು ಅರ್ಥಿಕ ಇಲಾಖೆ ಗಮನಕ್ಕೆ ತಂದಿಲ್ಲ. ಮತ್ತು ಸಚಿವ ಸಂಪುಟದ ಒಪ್ಪಿಗೆಯಿಲ್ಲದೆಯೇ ಕಾಮಗಾರಿ ಕೈಗೆತ್ತಿಕೊಂಡಿದೆ ಎಂದು ಟಿಪ್ಪಣಿ ಹಾಕಿದ್ದಾರೆ. ಆದರೂ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಈ ಬಗ್ಗೆ ಕ್ರಮವಹಿಸಿಲ್ಲ ಎಂದು ಗೊತ್ತಾಗಿದೆ.

 

ಅರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಏಕರೂಪ್‌ ಕೌರ್‌ ಅವರ ಟಿಪ್ಪಣಿ ಪ್ರತಿ

 

ನಾರಾಯಣಪುರ ಎಡದಂಡೆ ಕಾಲುವೆಯ ಇಆರ್‌ಎಂ ಕಾಮಗಾರಿಯ ಅಂದಾಜು ಮೊತ್ತದಲ್ಲಿ 465.02 ಕೋಟಿ ರು. ಹೆಚ್ಚುವರಿಯಾಗಿದ್ದು ಮೂಲ ಅಂದಾಜು ಪಟ್ಟಿ ತಯಾರಿಕೆಯಲ್ಲಿ ಯಾವುದೇ ಲೋಪದೋಷವಾಗಿರುವುದಿಲ್ಲ ಎಂದು ಜಲಸಂಪನ್ಮೂಲ ಇಲಾಖೆಯು ಸಮಜಾಯಿಷಿ ನೀಡಿತ್ತು.

 

ಸರ್ಕಾರದ ಅನುಮೋದನೆ ಪಡೆಯದೇ ಮತ್ತು ನಿಯಮ ಉಲ್ಲಂಘಿಸಿ 465 ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ಗುತ್ತಿಗೆ ನೀಡಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಪಟ್ಟಿಯನ್ನು ಕೃಷ್ಣಭಾಗ್ಯ ಜಲನಿಗಮ ಒದಗಿಸಿಲ್ಲ. ಪಟ್ಟಿ ಒದಗಿಸಬೇಕು ಎಂದು ಆರ್ಥಿಕ ಇಲಾಖೆಯ ನಿರ್ದೇಶನವನ್ನೂ ನಿಗಮವು ಉಲ್ಲಂಘಿಸಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts