ಬೆಂಗಳೂರು; ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಶುಲ್ಕ ಮರುಪಾವತಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲಿನ ಶಾಸನ ಬದ್ಧ ಅನುದಾನದ ಪೈಕಿ ಒಟ್ಟು 103 ಕೋಟಿ ರು.ಗಳನ್ನು ಮಾರ್ಗಪಲ್ಲಟಗೊಳಿಸಿ ಸುಮಾರು 64 ಸಾವಿರಕ್ಕೂ ಹೆಚ್ಚು ಮಕ್ಕಳು ಉತ್ತಮ ಗುಣಮಟ್ಟದ ಖಾಸಗಿ ಶಾಲೆಗಳಲ್ಲಿನ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.
ಆರ್‌ಟಿಇ ಅನುದಾನದಲ್ಲಿ ಉಳಿಕೆಯಾಗಿದೆ ಎಂಬ ನೆಪ ಮುಂದಿರಿಸಿದ್ದ ರಾಜ್ಯ ಸರ್ಕಾರವು 2021 ಮತ್ತು 2022ರಲ್ಲಿನ ಒಟ್ಟು ಅನುದಾನದ ಪೈಕಿ 103 ಕೋಟಿ ರು.ಗಳನ್ನು ಖಾಸಗಿ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳಿಗೆ ಕೋವಿಡ್ ಪರಿಹಾರ ಹೆಸರಿನಲ್ಲಿ ಮಾರ್ಗಪಲ್ಲಟಗೊಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಉಚಿತ ಶಿಕ್ಷಣ ನೀಡುವ ಖಾಸಗಿ ಶಾಲೆಗೆ ಆರ್‌ಟಿಇ ಅಡಿಯಲ್ಲಿ ಒಂದು ಮಗುವಿಗೆ ಅಂದಾಜು 16,000 ರು.ನಂತೆ ನೀಡಲಾಗುತ್ತದೆ. ಈ ಅನುದಾನವನ್ನು ಆರ್‌ಟಿಇ ಅಡಿಯಲ್ಲಿ ಅರ್ಹರಿರುವ ಮಕ್ಕಳಿಗೆ ಒದಗಿಸಬೇಕು ಮತ್ತು ಆಯಾ ಶೈಕ್ಷಣಿಕ ವರ್ಷದಲ್ಲಿ ಪೂರ್ಣವಾಗಿ ಬಳಸಬೇಕು. ಆದರೆ ರಾಜ್ಯ ಸರ್ಕಾರವು 2021 ಮತ್ತು 2022ರಲ್ಲಿ ಕೋವಿಡ್ ಅವಧಿಯಲ್ಲಿ ಖಾಸಗಿ ಶಾಲೆಗಳ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಈ ಅನುದಾನವನ್ನು ನೀಡುವ ಮೂಲಕ ದುರ್ಬಳಕೆ ಮಾಡಿಕೊಂಡಿದೆ ಎಂಬ ಆಪಾದನೆಯೂ ಕೇಳಿ ಬಂದಿದೆ.
‘ಆರ್‌ಟಿಇ ಅನುದಾನವನ್ನು ಉಳಿಕೆ ಮಾಡುವಂತಿಲ್ಲ. ಈ ಅನುದಾನಕ್ಕೆ ಅರ್ಜಿ ಸಲ್ಲಿಕೆಯಾಗಿಲ್ಲ ಎಂಬುದನ್ನು ಮುಂದಿರಿಸಿಕೊಂಡು ಅನ್ಯ ಉದ್ಧೇಶಕ್ಕೆ ಹಂಚಿಕೆ ಮಾಡುವಂತಿಲ್ಲ. ಇದೊಂದು ಶಾಸನಬದ್ಧ ಅನುದಾನ. ಅರ್ಜಿ ಸಲ್ಲಿಕೆಯಾಗಿಲ್ಲ ಎಂದರೆ ರಾಜ್ಯದಲ್ಲಿ ಬಡ ಮಕ್ಕಳು ಇಲ್ಲವೆಂದೇ ಅರ್ಥ. ಎಲ್ಲಾ ಮಕ್ಕಳೂ ಶ್ರೀಮಂತ ಮಕ್ಕಳೆಂದೇ ಭಾವಿಸಬೇಕಾಗುತ್ತದೆ. ನೆರೆಹೊರೆ ರಾಜ್ಯಗಳು ಆರ್‌ಟಿಇ ಅಡಿಯಲ್ಲಿ ಹೆಚ್ಚುವರಿ ಅನುದಾನಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿವೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ಅನುದಾನ ಉಳಿಕೆಯಾಗಿದೆ ಎಂದು ಖಾಸಗಿ ಶಾಲೆಗಳ ಶಿಕ್ಷಕರಿಗೆ ನೀಡಿರುವುದು ದುರ್ಬಳಕೆ ಅಲ್ಲದೇ ಮತ್ತೇನು. ಸರ್ಕಾರವು ಮಾರ್ಗಪಲ್ಲಟಗೊಳಿಸಿರುವ ಕಾರಣ ಸುಮಾರು 64 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿನ ಶಿಕ್ಷಣದಿಂದ ವಂಚನೆಯಾಗಿದೆ ಎಂದೇ ಭಾವಿಸಬೇಕಾಗುತ್ತದೆ, ‘ ಎನ್ನುತ್ತಾರೆ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್’ಗೆ ಪ್ರತಿಕ್ರಿಯಿಸಿದ್ದಾರೆ.
2021-22ನೇ ಸಾಲಿನ ಆಯವ್ಯಯದಲ್ಲಿ ಸರ್ಕಾರೇತರ ಪ್ರಾಥಮಿಕ ಶಾಲೆಗಳಿಗೆ ಸಹಾಯ-ಆರ್‌ಟಿಇ ಅಡಿಯ ಖಾಸಗಿ ಶಾಲೆಗಳ ಶುಲ್ಕ ಮರುಪಾವತಿ ಕಾರ್ಯಕ್ರಮದ ಅನುಷ್ಠಾನಕ್ಕಾಗಿ (ಲೆಕ್ಕ ಶೀರ್ಷಿಕೆ; 2202-01-102-0-05) ಅಡಿ 700 ಕೋಟಿ ರು. ನಿಗದಿಪಡಿಸಿತ್ತು. ಈ ಪೈಕಿ 103.47 ಕೋಟಿ ರು. ಅನುದಾನವನ್ನು ಕೋವಿಡ್ ಪರಿಹಾರ ನಿಧಿ ಹೆಸರಿನಲ್ಲಿ ಮಾರ್ಗಪಲ್ಲಟಗೊಳಿಸಲಾಗಿತ್ತು. ಸಚಿವ ಬಿ ಸಿ ನಾಗೇಶ್ ಅವರ ಅನುಮೋದನೆಯೊಂದಿಗೆ ಅನುದಾನವನ್ನು ಮಾರ್ಗಪಲ್ಲಟಗೊಳಿಸಲಾಗಿತ್ತು ಎಂದು ತಿಳಿದು ಬಂದಿದೆ.
‘2021-22ನೇ ಸಾಲಿಗೆ ರಾಜ್ಯದ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1,72,945 ಮತ್ತು 34,000 ಬೋಧಕೇತರ ಸಿಬ್ಬಂದಿ ಒಳಗೊಂಡಂತೆ 2,06,945 ಸಿಬ್ಬಂದಿಗಳಿಗೆ ತಲಾ 5,000 ರು.ನಂತೆ ಒಟ್ಟಾರೆಯಾಗಿ 103.47 ಕೋಟಿ ರು ಅನುದಾನವನ್ನು ಕೋವಿಡ್ 19 ವಿಶೇಷ ಪ್ಯಾಕೇಜ್ ಪರಿಹಾರ ಧನವಾಗಿ ಬಿಡುಗಡೆಗೊಳಿಸಿ,’ ಎಂದು 2021ರ ಜುಲೈ 2ರಂದು ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿತ್ತು. ಇದಕ್ಕೆ ಆರ್ಥಿಕ ಇಲಾಖೆಯು (ಟಿಪ್ಪಣಿ ಸಂಖ್ಯೆ; ಆಇ 278 ವೆಚ್ಚ-8/2021, 15.06.2021)ರಂದು ಸಹಮತಿ ನೀಡಿತ್ತು.
ಹಾಗೆಯೇ ಒಟ್ಟು 103.47 ಕೋಟಿ ರು ಪೈಕಿ ಉಳಿಕೆಯಾಗಿದ್ದ 31.14 ಕೋಟಿ ರು.ಗಳನ್ನು ರಾಜ್ಯ ಸರ್ಕಾರವು ಮಾರ್ಗಪಲ್ಲಟಗೊಳಿಸುವ ಮೂಲಕ ಖಾಸಗಿ ಶಾಲೆಗಳಿಗೆ ಮರುಪಾವತಿಸಲು 2022ರ ಜುಲೈ 13ರಂದು ಆದೇಶ ಹೊರಡಿಸಿತ್ತು.
2020-21ನೇ ಸಾಲಿಗೆ ರಾಜ್ಯದ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ತಲಾ 5,000 ರು.ನಂತೆ ಪರಿಹಾರ ಧನ ಒದಗಿಸಲಾಗಿತ್ತು.