ಹೊಸ ಕುಮಾರಕೃಪ; ಲಂಗುಲಗಾಮಿಲ್ಲ, ಸಿಸಿಟಿವಿ ಬಳಸುವ ತಂತ್ರಜ್ಞರಿಲ್ಲ, ಅತಿಥಿಗಳಲ್ಲದವರದ್ದೇ ದರ್ಬಾರು

photo credit;basavarajbommai twitter

ಬೆಂಗಳೂರು; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರಿ ಗೃಹ ಕಚೇರಿ ಕೃಷ್ಣದಿಂದ ಕೂಗಳತೆ ದೂರದಲ್ಲಿರುವ ಹೊಸ ಕುಮಾರಕೃಪ ಅತಿಥಿ ಗೃಹ ಆರಂಭವಾಗಿ 3 ವರ್ಷವಾದರೂ  ಮೇಲ್ವಿಚಾರಣೆ ಹೊತ್ತಿರುವ ಪ್ರವಾಸೋದ್ಯಮ ಅಭಿವೃದ್ದಿ ನಿಗಮವು  ಸಿಸಿಟಿವಿಗಳನ್ನು ಸದುಪಯೋಗಪಡಿಸಿಕೊಂಡಿಲ್ಲ,  ಸಿಬ್ಬಂದಿಗಳನ್ನೂ ನಿಯೋಜಿಸಿಲ್ಲ. ಹೀಗಾಗಿ ಹೊಸ ಕುಮಾರಕೃಪ ಅತಿಥಿ ಗೃಹಕ್ಕೆ ಇತರೆ ಸಾರ್ವಜನಿಕರು ಸುಲಭವಾಗಿ ಪ್ರವೇಶಿಸುತ್ತಾರಲ್ಲದೇ ಅತಿಥಿಗಳಲ್ಲದವರೂ ಜಮಾಯಿಸಿ ಗುಂಪುಗೂಡುತ್ತಿದ್ದಾರೆ ಎಂಬುದು ಇದೀಗ ಬಹಿರಂಗವಾಗಿದೆ.

 

ಕುಮಾರಕೃಪಾ ಅತಿಥಿ ಗೃಹದಲ್ಲೇ ಕುಳಿತು ಸ್ಯಾಂಟ್ರೋ ರವಿ ಎಂಬಾತ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸಿದ್ದಾನೆ. ಆತನಿಗೆ ಅಲ್ಲಿ ಕೊಠಡಿ ನೀಡಿದವರು ಯಾರು, ಅದಕ್ಕೆ ಶಿಫಾರಸು ಮಾಡಿದ್ದವರು ಯಾರು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರವನ್ನು ಪ್ರಶ್ನಿಸಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತನಿಖೆಗೆ ಆದೇಶಿಸಿದ್ದರು. ಇದೀಗ ಹೊಸ ಕುಮಾರಕೃಪಾ ಅತಿಥಿ ಗೃಹದ ಮೇಲ್ವಿಚಾರಣೆಯಲ್ಲಿನ ವೈಫಲ್ಯವೂ ಮುನ್ನೆಲೆಗೆ ಬಂದಿದೆ.

 

ಈ ಕುರಿತು ರಾಜ್ಯ ಆತಿಥ್ಯ ಸಂಸ್ಥೆಯು ನಿರ್ದೇಶಕರು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ 2023ರ ಜನವರಿ 9ರಂದು ನಾಲ್ಕು ಪುಟಗಳ ಪತ್ರ (ಸಂಖ್ಯೆ;ಕೆಕೆಜಿಹೆಚ್‌ /20/ ಎಸಿಸಿ/ 2019-20 ಭಾಗ (2) ಬರೆದಿದ್ದಾರೆ ಎಂದು ಗೊತ್ತಾಗಿದೆ. ಈ ಪತ್ರ ಬಂದಿರುವ ಬಗ್ಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ.

 

ಹೊಸ ಕುಮಾರಕೃಪಾ ಅತಿಥಿ ಗೃಹ ಮೇಲ್ವಿಚಾರಣೆ ನಡೆಸಲು ರಾಜ್ಯ ಆತಿಥ್ಯ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಪ್ರವಾಸೋದ್ಯಮ ನಿಗಮದ ಬೇಜವಾಬ್ದಾರಿತನದಿಂದಾಗಿ ಅತಿಥಿಗಳಲ್ಲದವರು ಗುಂಪುಗೂಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ರಾಜ್ಯ ಆತಿಥ್ಯ ಸಂಸ್ಥೆಯು ನಿರ್ದೇಶಕರು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದಿರುವ ಪತ್ರವು ಕುಮಾರಕೃಪಾ ಅತಿಥಿ ಗೃಹದ ಆಡಳಿತವೇ ಕುಸಿದು ಬಿದ್ದಿದೆ ಎಂಬುದಕ್ಕೆ ಸಾಕ್ಷ್ಯವನ್ನು ಒದಗಿಸಿದಂತಾಗಿದೆ.

 

ಕುಮಾರಕೃಪಾ ಮುಖ್ಯ ದ್ವಾರದಲ್ಲಿ ಬ್ಯಾಗೇಜ್‌ ಸ್ಕ್ಯಾನರ್‌, ಬಾಡಿ ಸ್ಕ್ಯಾನರ್‌, ಬೂಮ್‌ ಬ್ಯಾರಿಯರ್‌ ಅಳವಡಿಸಲು ಪಾರ್ಕಿಂಗ್‌ ದ್ವಾರದಲ್ಲಿ ವಾಹನ ಸ್ಕ್ಯಾನರ್‌ಗಳೂ ಅಳವಡಿಕೆಯಾಗಿಲ್ಲ. ಭದ್ರತಾ ಸಲಕರಣೆಗಳನ್ನು ಅಳವಡಿಸುವ ಕಾರ್ಯಕ್ಕೆ ಹೆಚ್ಚಿನ ಅನುದಾನವನ್ನೂ ಸರ್ಕಾರ ಒದಗಿಸಿಲ್ಲ. ಅನುದಾನ ಬಿಡುಗಡೆ ಸಂಬಂಧ ಪತ್ರ ವ್ಯವಹಾರದಲ್ಲಿ ಕಾಲಹರಣ ಮಾಡಲಾಗುತ್ತಿದೆ. ಅತಿಥಿಗಳ ಭದ್ರತಾ ವ್ಯವಸ್ಥೆ ಹೆಚ್ಚಿಸಲು 2022ರ ಅಕ್ಟೋಬರ್‌ 17ರಂದು ಬರೆದಿದ್ದ ಪತ್ರದ ಮೇಲೂ ಯಾವುದೇ ಕ್ರಮವಹಿಸಿಲ್ಲ ಎಂದು ಗೊತ್ತಾಗಿದೆ.

 

‘ಬೇಸ್‌ಮೆಂಟ್‌ನಿಂದ ಮತ್ತು ಮುಖ್ಯ ದ್ವಾರದಿಂದ ಸಾರ್ವಜನಿಕರು ನೇರವಾಗಿ ರೆಸ್ಟೋರೆಂಟ್‌ಗೆ, ಲಾಬಿಗೆ ಹಾಗೂ ಇತರೆ ಮಹಡಿಗಳಿಗೆ ಬಂದು ಹೋಗುತ್ತಿದ್ದು ಅತಿಥಅತಿಥಿಗಳಲ್ಲದವರು ಜಮಾಯಿಸುವುದು, ಗುಂಪುಗೂಡುವುದು ಹೆಚ್ಚಳವಾಗಿದ್ದು ಇದು ಸರಿಯಾದ ಕ್ರಮವಲ್ಲ,’ ಎಂದು ರಾಜ್ಯ ಆತಿಥ್ಯ ಸಂಸ್ಥೆಯ ನಿರ್ದೇಶಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಹೊಸ ಕುಮಾರಕೃಪಾ ಅತಿಥಿ ಗೃಹದಲ್ಲಿ 120 ಸಿಸಿಟಿವಿಗಳ ಪೈಕಿ 116 ಸಿಸಿಟಿ ಕ್ಯಾಮರಾಗಳು ಮತ್ತು ಸಲಕರಣೆಗಳು ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ಹೊಸ ಕುಮಾರ ಕೃಪ ಅತಿಥಿ ಗೃಹಕ್ಕೆ ಸಿಸಿ ಕ್ಯಾಮರಾಗಳನ್ನು ವೀಕ್ಷಣೆ ಮಾಡುವ ಸಲುವಾಗಿ ಮೂರು ಪಾಳಿಗಳಲ್ಲಿ ನುರಿತ ಸಿಬ್ಬಂದಿಗಳನ್ನು ಕೂಡಲೇ ನಿಯೋಜಿಸಲು ಸೂಚಿಸಿತ್ತು. ಆದರೂ ಸಹ ಸಿಬ್ಬಂದಿಗಳನ್ನು ಸಹ ಸಿಬ್ಬಂದಿಗಳನ್ನು ನಿಯೋಜಿಸಿಲ್ಲ. ಹೀಗಾಗಿ ಅತಿಥಿಗಳ ಭದ್ರತೆ ಸಲುವಾಗಿ ಅಳವಡಿಸಿದ್ದ ಸಿಸಿಟಿವಿಗಳ ಸದುಪಯೋಗವಾಗಿಲ್ಲ ಎಂಬುದು ಗೊತ್ತಾಗಿದೆ.

 

ಹೊಸ ಕುಮಾರಕೃಪ ಅತಿಥಿ ಗೃಹದಲ್ಲಿ ಸೌಲಭ್ಯಗಳು ಮತ್ತು ಸಲಕರಣೆಗಳನ್ನು ಒದಗಿಸುವ ಸಂಬಂಧ ಕಳೆದ 2 ವರ್ಷದಿಂದಲೂ ಸರ್ಕಾರದೊಂದಿಗೆ ಪತ್ರವ್ಯವಹಾರ ನಡೆದಿದ್ದರೂ ಸಹ ಇದುವರೆಗೂ ಅನುದಾನವನ್ನು ಒದಗಿಸಿಲ್ಲ. ಹೀಗಾಗಿ ಸಿಸಿಟಿವಿಗಳ ಮೇಲ್ವಿಚಾರಣೆಗೆ ಸಿಬ್ಬಂದಿಗಳನ್ನೇ ನೇಮಿಸಿಲ್ಲ ಎಂದು ಗೊತ್ತಾಗಿದೆ.

 

‘ಸಿಸಿಟಿಟಿವಿ ಅಳವಡಿಕೆ ಕಾರ್ಯ ಮುಕ್ತಾಯವಾದ ನಂತರವೂ ಮೌಖಿಕವಾಗಿ ಹ ಹಲವು ಬಾರಿ ಹಲವಾರು ಬಾರಿ ಸಿಸಿಟಿವಿ ವೀಕ್ಷಣೆಗೆ ನುರಿತ ಸಿಬ್ಬಂದಿಗಳನ್ನು ಮೂರು ಪಾಳಿಗಳಲ್ಲಿ ನಿಯೋಜಿಸಲು ಸೂಚಿಸಲಾಗಿತ್ತು. ಅದರೂ ಸಹ ಸಿಬ್ಬಂದಿಗಳನ್ನು ಸಹ ಸಿಬ್ಬಂದಿಗಳನ್ನು ನಿಯೋಜಿಸಿ ಅತಿಥಿಗಳ ಭದ್ರತೆ ಸಲುವಾಗಿ ಸಿಸಿಟಿವಿಗಳ ಸದುಪಯೋಗಪಡಿಸಿಕೊಳ್ಳುವ ಕಾರ್ಯ ಆಗಿರುವುದಿಲ್ಲ,’ ಎಂದು ಪತ್ರದಲ್ಲಿ ವಿವರಿಸಲಾಗಿದೆ ಎಂದು ತಿಳಿದು ಬಂದಿದೆ.

 

ಅದೇ ರೀತಿ ಹೊಸ ಕುಮಾರಕೃಪ ಅತಿಥಿ ಗೃಹ ಆರಂಭವಾಗಿ ಸುಮಾರು 2 ವರ್ಷ ಕಳೆದರೂ ಅತಿಥಿಗಳ ಭದ್ರತೆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯ ಆತಿಥ್ಯ ಸಂಸ್ಥೆ ಮತ್ತು ಕೆಎಸ್‌ಟಿಡಿಸಿ ನಡುವಿನ ಒಡಂಬಂಡಿಕೆಯೂ ಉಲ್ಲಂಘನೆಯಾಗಿದೆ. ಹೊಸ ಕುಮಾರಕೃಪಾ ಅತಿಥಿ ಗೃಹದ ಕಟ್ಟಡದ ಮತ್ತು ಅತಿಥಿಗಳ ಭದ್ರತೆ ಬಗ್ಗೆ ಕೈಗೊಂಡಿರುವ ಬಗ್ಗೆ ವರದಿಯನ್ನು ಸರ್ಕಾರಕ್ಕೆ ಇದುವರೆಗೂ ನಿಗಮವು ಸಲ್ಲಿಸಿಲ್ಲ ಎಂಬ ಅಂಶವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಗೊತ್ತಾಗಿದೆ.

 

ಹೊಸ ಕುಮಾರಕೃಪ ಅತಿಥಿಗೃಹ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರು, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ, ಕೆಎಸ್‌ಟಿಡಿಸಿ ಸಿಬ್ಬಂದಿ ವರ್ಗದವರು, ಅತಿಥಿಗಳು, ಅತಿಥಿಗಳ ಕಡೆಯವರು ಮತ್ತು ಸಿಆಸುಇ ಅಧಿಕಾರಿಗಳು ಸೂಚಿಸುವ ವ್ಯಕ್ತಿಗಳನ್ನು ಹೊರತುಪಡಿಸಿ ಉಳಿದವರುಗಳನ್ನು ಹೊಸ ಕುಮಾರಕೃಪ ಅತಿಥಿ ಗೃಹದ ಕಟ್ಟಡದ ಒಳಗೆ ಪ್ರವೇಶಿಸದಂತೆ ನೋಡಿಕೊಳ್ಳುವುದು ಕೆಎಸ್‌ಟಿಡಿಸಿ ಜವಾಬ್ದಾರಿ. ಈ ಅಂಶವನ್ನೂ ಒಡಂಬಡಿಕೆಯಲ್ಲಿ ಉಲ್ಲೇಖಿಸಲಾಗಿದೆ. ಆದರೂ ನಿಗಮದ ಲೋಪದಿಂದಾಗಿಯೇ ಅತಿಥಿಗಳಲ್ಲದವರು ಹೊಸ ಕುಮಾರಕೃಪಾ ಅತಿಥಿ ಗೃಹದಲ್ಲಿ ಗುಂಪು ಗುಂಪಾಗಿ ಜಮಾಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

‘ಹೊಸ ಕುಮಾರ ಕೃಪ ಅತಿಥಿ ಗೃಹದ ಕಟ್ಟಡದ ಮತ್ತು ಅತಿಥಿಗಳ ಭದ್ರತೆ ವಿಷಯದಲ್ಲಿ ಯಾವುದೇ ವಿನಾಯಿತಿಯನ್ನು ಕೇಳದೇ ರಾಜ್ಯ ಆತಿಥ್ಯ ಸಂಸ್ಥೆ ಮತ್ತು ಕೆಎಸ್‌ಟಿಡಿಸಿ ನಡುವಿನ ಒಡಂಬಡಿಕೆಯಲ್ಲಿ ಸೂಚಿಸಿರುವಂತೆ ಕೂಡಲೇ ಸೂಕ್ತ ಕ್ರಮ ಕೈಗೊಂಡು ಕೈಗೊಂಡಿರುವ ಕ್ರಮದ ಕುರಿತು ವರದಿಯನ್ನು ಕೂಡಲೇ ಸಲ್ಲಿಸಲು ಕೋರಲಾಗಿತ್ತು. ಆದರೆ ಕೈಗೊಂಡಿರುವ ಕ್ರಮದ ಬಗ್ಗೆ ವರದಿಯನ್ನು ಸಲ್ಲಿಸಿಲ್ಲ,’ ಎಂದು ರಾಜ್ಯ ಆತಿಥ್ಯ ಸಂಸ್ಥೆಯ ನಿರ್ದೇಶಕರು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

 

ಹಾಗೆಯೇ ರಾಜ್ಯ ಆತಿಥ್ಯ ಸಂಸ್ಥೆ ಮತ್ತು ಕೆಎಸ್‌ಟಿಡಿಸಿ ನಡುವಿನ ಒಡಂಬಡಿಕೆಯಂತೆ ಪ್ರಸ್ತುತ ಇರುವ ಸಿಬ್ಬಂದಿಗಳನ್ನೇ ಬಳಸಿಕೊಂಡು ಹೊಸ ಕುಮಾರಕೃಪ ಅತಿಥಿ ಗೃಹದ ಕಟ್ಟಡ ಮತ್ತು ಅತಿಥಿಗಳ ಭದ್ರತೆ ಒದಗಿಸಬೇಕಿತ್ತು. ಅಲ್ಲದೇ ವಾಹನಗಗಳನ್ನು ಕ್ರಮಬದ್ಧವಾಗಿ ಬೇಸ್‌ಮೆಂಟ್‌ನಲ್ಲಿ ನಿಲುಗಡೆ ಮಾಡುವ ಬಗ್ಗೆ ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಎಸ್‌ಟಿಡಿಸಿಗೆ 2021ರ ಜೂನ್‌ 25ರಂದು ನಿರ್ದೇಶಿಸಲಾಗಿತ್ತು. ಆದರೆ ಕ್ರಮ ಕೈಗೊಂಡಿರುವುದಿಲ್ಲ ಎಂದು ಪತ್ರದಲ್ಲಿ ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ.

 

‘ಹೊಸ ಕುಮಾರಕೃಪ ಅತಿಥಿ ಗೃಹ ಆರಂಭವಾಗಿ 3 ವರ್ಷ 6 ತಿಂಗಳಾದರೂ ಅತಿಥಿ ಗೃಹ ಕಟ್ಟಡದ ಮತ್ತು ಅತಿಥಿಗಳ ಭದ್ರತೆ ಬಗ್ಗೆ ಈಗಾಗಲೇ ಉಲ್ಲೆಖಿತ ಈ ಕಛೇರಿ ಪತ್ರಗಳಲ್ಲಿ ಮತ್ತು ಸರ್ಕಾರದ ಪತ್ರದಲ್ಲಿ ಸೂಚಿಸಿರುವಂತೆ ಸರಿಯಾದ ಕ್ರಮಗಳನ್ನು ಸಹ ಕೈಗೊಂಡಿರುವುದಿಲ್ಲ. ಇದು ವಿಷಾದನೀಯ ಸಂಗತಿಯಾಗಿರುತ್ತದೆ,’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಗೊತ್ತಾಗಿದೆ.

SUPPORT THE FILE

Latest News

Related Posts