ಶೈಕ್ಷಣಿಕ ವಲಯದೊಳಗೇ ಎಥನಾಲ್‌ ಕಾರ್ಖಾನೆ ಸ್ಥಾಪನೆ; ಡಿಸಿ ಶಿಫಾರಸ್ಸಿನ ಹಿಂದೆ ಸಂಸದ, ಸಚಿವರ ಒತ್ತಡ?

photo credit;anandsignh official twitter account

ಬೆಂಗಳೂರು; ರಾಷ್ಟ್ರೋತ್ಥಾನ ಪರಿಷತ್‌ ಸಂಸ್ಥೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿದ ವಸತಿ ಶಾಲೆ ಸೇರಿದಂತೆ ಶಾಲಾ ಕಾಲೇಜುಗಳನ್ನು ಒಳಗೊಂಡ ಶೈಕ್ಷಣಿಕ ವಲಯ ಎಂದು ಗುರುತಿಸಲಾಗಿರುವ ಜಮೀನುಗಳ ಆಸುಪಾಸಿನಲ್ಲೇ ಪ್ರಭಾವಿ ಬಿಜೆಪಿ ಸಂಸದರೊಬ್ಬರಿಗೆ ಸೇರಿದೆ ಎನ್ನಲಾಗಿರುವ ಹಂಪಿ ಶುಗರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ 84.06 ಎಕರೆ ಜಮೀನು ಮಂಜೂರು ಮಾಡಲು ವಿಜಯನಗರ ಜಿಲ್ಲಾಧಿಕಾರಿಗಳು ಕಲ್ಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಶಿಫಾರಸ್ಸು ಮಾಡಿರುವುದು ಇದೀಗ ಬಹಿರಂಗವಾಗಿದೆ.

 

ಶೈಕ್ಷಣಿಕ ವಲಯ ಮಾತ್ರವಲ್ಲದೇ ನಗರ ಪ್ರದೇಶದೊಳಗೇ ಎಥನಾಲ್ ಕಾರ್ಖಾನೆ ಸ್ಥಾಪಿಸಲು ಹಂಪಿ ಶುಗರ್ಸ್‌ಗೆ ಜಮೀನು ಮಂಜೂರು ಮಾಡಲು ಹೊಸಪೇಟೆ ತಾಲೂಕಿನ ತಹಶೀಲ್ದಾರ್‌ ಮತ್ತು ವಿಜಯನಗರ ಜಿಲ್ಲಾಧಿಕಾರಿ  ಮಾಡಿರುವ ಶಿಫಾರಸ್ಸು ವಿವಾದಕ್ಕೆ ಕಾರಣವಾಗಿದೆ.

 

ಈ ಸಂಬಂಧ ಕಂದಾಯ ಅಧಿಕಾರಿಗಳು ನೀಡಿರುವ ಸ್ಥಳ ತನಿಖಾ ಮತ್ತು ಪರಿಶೀಲನಾ ವರದಿ ಆಧರಿಸಿ ಹೊಸಪೇಟೆ ತಹಶೀಲ್ದಾರ್‌ ಅವರು ವಿಜಯನಗರ ಜಿಲ್ಲಾಧಿಕಾರಿಗೆ 2022ರ ಡಿಸೆಂಬರ್‌ 16ರಂದು ಶಿಫಾರಸ್ಸು ವರದಿ (ಸಂಖ್ಯೆ; ಕಂಇ/ಭೂಮಿ/369/2022-23) ಸಲ್ಲಿಸಿದ್ದರು. ಇದನ್ನಾಧರಿಸಿ ಇದೀಗ ವಿಜಯನಗರ ಜಿಲ್ಲಾಧಿಕಾರಿಗಳೂ ಸಹ ಕಲ್ಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಜಮೀನು ಮಂಜೂರಾತಿಯ ಪ್ರಸ್ತಾವನೆ (ಸಂಖ್ಯೆ; ಕಂ;ಭೂಮಿ/279/2022-23)ಯನ್ನು 2022ರ ಡಿಸೆಂಬರ್‌ 20ರಂದು ಸಲ್ಲಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಿಜಯನಗರ ಜಿಲ್ಲಾಧಿಕಾರಿ ಕಲ್ಬುರ್ಗಿ ಪ್ರಾದೇಶಿಕ ಆಯುಕ್ತರಿಗೆ ಮಾಡಿರುವ ಶಿಫಾರಸ್ಸು ಪ್ರತಿ

 

ಅಲ್ಲದೇ ಈ ಹಿಂದೆಯೂ ನಗರ ಪ್ರದೇಶದೊಳಗೆ ಇದ್ದ ಸಕ್ಕರೆ ಕಾರ್ಖಾನೆಯು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕಾರ್ಖಾನೆಯ ಚಟುವಟಿಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೀಗ ನಗರ ಪ್ರದೇಶದೊಳಗೆ ಮತ್ತು ಶೈಕ್ಷಣಿಕ ವಲಯ ಎಂದು ಗುರುತಿಸಲಾಗಿರುವ ಜಮೀನುಗಳಿಗೆ ಹೊಂದಿಕೊಂಡಿರುವ ಜಮೀನಿನಲ್ಲೇ ಎಥನಾಲ್‌ ಕಾರ್ಖಾನೆ ಸ್ಥಾಪನೆಗೆ ಜಮೀನು ಮಂಜೂರು ಮಾಡಲು ಶಿಫಾರಸ್ಸು ಮಾಡಿರುವುದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.

 

 

ತಹಶೀಲ್ದಾರ್‌ ತನಿಖಾ ವರದಿಯಲ್ಲೇನಿದೆ?

 

ಹೊಸಪೇಟೆ ತಾಲೂಕಿನ ಜಂಬುನಾಥನಹಳ್ಳಿ ಗ್ರಾಮದ ವಿವಿಧ ಸರ್ವೇ ನಂಬರ್‌ಗಳಲ್ಲಿ ಒಟ್ಟು 110.26 ಎಕರೆ ವಿಸ್ತೀರ್ಣದಲ್ಲಿರುವ ಸರ್ಕಾರಿ ಜಮೀನುತ್ತು 72.83 ಎಕರೆ ವಿಸ್ತೀರ್ಣದ ಖಾಸಗಿ ಜಮೀನನ್ನು ಹಂಪಿ ಶುಗರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಮಂಜೂರು ಮಾಡಿದೆ. ಸರ್ವೆ ನಂಬರ್‌ 11/3ರಲ್ಲಿ 4.14 ಎಕರೆ, ಸರ್ವೆ ನಂಬರ್‌ 113ರಲ್ಲಿ 2.10 ಎಕರೆ, ಸರ್ವೆ ನಂಬರ್‌ 114ರಲ್ಲಿ 77.82 ಎಕರೆ ವಿಸ್ತೀರ್ಣದ ಜಮೀನು ಸರ್ಕಾರ ಹೆಸರಿನಲ್ಲಿದೆ. ಈ ಪ್ರದೇಶ ಬೀಳು ಪ್ರದೇಶವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಅದೇ ರೀತಿ ಸರ್ವೆ ನಂಬರ್‌ 105ರಲ್ಲಿ ಒಟ್ಟು 28.17 ಎಕರೆ ಇದೆ. ಇದರಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಳು ಅವರ ಹೆಸರಿನಲ್ಲಿರುವ 5.00 ಎಕರೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣವಾಗಿದೆ. ಅದೇ ರೀತಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪದವಿಪೂರ್ವ ವಸತಿ ಕಾಲೇಜು ನಿರ್ಮಾಣಕ್ಕಾಗಿ 3.00 ಎಕರೆ,ಯಲ್ಲಿ ಕಾಲೇಜು ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿರುವುದು ತನಿಖಾ ವರದಿಯಿಂದ ತಿಳಿದು ಬಂದಿದೆ.

 

ಹಾಗೆಯೇ ಇನ್ನುಳಿದ 5 ಎಕರೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ಉದ್ದೇಶಿತ ಶಾಲೆಗಾಗಿ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಒಟ್ಟಾರೆ ಈ ಎಲ್ಲಾ ಜಮೀನುಗಳು ಶೈಕ್ಷಣಿಕ ಉದ್ದೇಶಕ್ಕೆ ಮೀಸಲಿರಿಸಿ ಶೈಕ್ಷಣಿಕ ವಲಯದಲ್ಲಿವೆ.

 

‘ಈ ಎಲ್ಲಾ ಸರ್ಕಾರಿ ಜಮೀನುಗಳಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಮಂಜೂರು ಮಾಡಿದ ಹಾಗೂ ಪ್ರಸ್ತಾಪಿಸಿದ ಸರ್ವೆನಂಬರ್‌ 105ರಲ್ಲಿನ 28.17 ಎಕರೆ ಪ್ರದೇಶವು ಶೈಕ್ಷಣಿಕ ವಲಯದಲ್ಲಿದ್ದು ಈ ಜಮೀನಿಗೆ ಹೊಂದಿಕೊಂಡಂತೆ ಶಾಲಾ ಕಾಲೇಜುಗಳು ಇರುತ್ತವೆ. ಹಾಗೂ ಫಾರಂ ನಂ 50 ಅರ್ಜಿ ಬಾಕಿ ಬಾಕಿ ಇರುವ ಸರ್ವೆ ನಂಬರ್ 109/2 ಮತ್ತು 109/4ರಲ್ಲಿ 5.23 ಎಕರೆ ಜಮೀನನ್ನು ಹೊರತುಪಡಿಸಿ ಜಂಬುನಾಥಹಳ್ಳಿ ಗ್ರಾಮದ ಸರ್ವೆ ನಂಬರ್‌ 11/3ರ ಲ್ಲಿನ 4.14 ಎಕರೆ, 113ರಲ್ಲಿ 2.10 ಎಕರೆ, 114ರಲ್ಲಿ 77.82 ಎಕರೆ ಸೇರಿ ಒಟ್ಟು 84.06 ಎಕರೆ ಜಮೀನು ಲಭ್ಯವಿದೆ,’ ಎಂದು ಸ್ಥಳ ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

 

ಸರ್ವೆ ನಂಬರ್‌ 105 ಮತ್ತು 109/2 ಮತ್ತು 109/4ರಲ್ಲಿನ ಜಮೀನುಗಳನ್ನು ಹೊರತುಪಡಿಸಿ ಜಂಬುನಾಥನಹಳ್ಳಿ ಗ್ರಾಮದ ಸರ್ವೆ ನಂಬರ್‌ 11/3, 113 ಮತ್ತು114ರಲ್ಲಿನ ಒಟ್ಟು 84.06 ಎಕರೆ ಜಮೀನುಗಳನ್ನು ಹಂಪಿ ಶುಗರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಎಥನಾಲ್‌ ಕಾರ್ಖಾನೆ ಸ್ಥಾಪನೆಗೆ ಮಂಜೂರು ಮಾಡಲು ಶಿಫಾರಸ್ಸು ಮಾಡಿರುವುದು ವರದಿಯಿಂದ ಗೊತ್ತಾಗಿದೆ.

 

ಜಿಲ್ಲಾಧಿಕಾರಿ ಸಲ್ಲಿಸಿರುವ ಪ್ರಸ್ತಾವನೆಯಲ್ಲೇನಿದೆ?

 

ಹಂಪಿ ಶುಗರ್ಸ್‌ ಪ್ರೈವೈಟ್‌ ಲಿಮಿಟೆಡ್‌ನ 7500 ಟಿಸಿಡಿ ಕೇನ್‌ ಶುಗರ್‌ 30ಎಂವಿ ಕೋ ಜನರೇಷನ್‌ ಮತ್ತು 360 ಕೆಪಿಎಲ್‌ಡಿ ಡಿಸ್ಟಲರಿ ಉತ್ಪಾದನೆಯುಳ್ಳ ಹೊಸ ಎಥನಾಲ್‌ ಕಾರ್ಖಾನೆಯನ್ನು ಸ್ಥಾಪಿಸಲು ಸರ್ಕಾರದಿಂದ 183.09 ಎಕರೆಗೆ ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ಉದ್ಯೋಗ ಮಿತ್ರದಲ್ಲಿ 2022ರ ಅಕ್ಟೋಬರ್‌ 21ರಂದು ನಡೆದ 135ನೇ ರಾಜ್ಯಮಟ್ಟದ ಏಕ ಗವಾಕ್ಷಿ ಸಭೆಯಲ್ಲಿ ಅನುಮೋದನೆಗೊಂಡಿದೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಿದ್ದಾರೆ.

 

ಸಿದ್ದೇಶ್ವರ ಶುಗರ್ಸ್‌ ನವರು ಈಗಾಗಲೇ ನಗರಕ್ಕೆ ಬಂದು ಜಮೀನು ನೋಡಿಕೊಂಡು ಹೋಗಿದ್ದಾರೆ. ತಾಲ್ಲೂಕಿನ ವಡ್ಡರಹಳ್ಳಿ, ಕಾರಿಗನೂರು, ಮರಿಯಮ್ಮನಹಳ್ಳಿ ಅನೇಕ ಕಡೆಗಳಲ್ಲಿ ಜಾಗ ವೀಕ್ಷಿಸಲಾಗಿತ್ತು. ಕಾರಿಗನೂರಿನಲ್ಲಿ ಅಂತಿಮಗೊಳಿಸಲಾಗಿದೆ. ಐ.ಎಸ್‌.ಆರ್‌ ಸಕ್ಕರೆ ಕಾರ್ಖಾನೆ ನಾನು ಬಂದ್‌ ಮಾಡಿಲ್ಲ. ಅದರ ಮಾಲೀಕರೇ ಬಂದ್‌ ಮಾಡಿದ್ದಾರೆ. ನನ್ನ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ’ ಎಂದು ಪರಿಸರ ಖಾತೆ ಸಚಿವ ಆನಂದ್‌ ಸಿಂಗ್‌ ಅವರು ಹೇಳಿದ್ದನ್ನು ಸ್ಮರಿಸಬಹುದು.

 

ಸಕ್ಕರೆ ಕಾರ್ಖಾನೆ ಲಾಭದಾಯಕವಲ್ಲ ಎಂಬುದು ಅನೇಕರ ಅಭಿಪ್ರಾಯವಾಗಿತ್ತು. ಆದರೆ, ಬೆಳಗಾವಿಯಲ್ಲಿ ಸುಸ್ಥಿತಿಯಲ್ಲೇ ನಡೆಯುತ್ತಿವೆ. ಆ ಜಿಲ್ಲೆಯ ಮುಖಂಡರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ್‌, ದಾವಣಗೆರೆಯ ಶ್ಯಾಮನೂರು ಅವರಲ್ಲಿ ಕಾರ್ಖಾನೆ ಆರಂಭಿಸಲು ಮನವಿ ಮಾಡಿದ್ದೆ. ಯಾರೂ ಆಸಕ್ತಿ ತೋರಿಸಿರಲಿಲ್ಲ. ಸಿದ್ದೇಶ್ವರ ಅಂಡ್ ಕಂಪೆನಿ ಒಡೆತನದಲ್ಲಿ ನಗರದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲಾಗುತ್ತಿದೆ ಎಂದೂ ಹೇಳಿದ್ದರು.

the fil favicon

SUPPORT THE FILE

Latest News

Related Posts