ಸಾಂಬಶಿವ ಪ್ರಹಸನ; ಅನುಮತಿ ಇಲ್ಲದೇ ನಾಟಕ ಪ್ರದರ್ಶನ, ಅಸಹ್ಯವಾಗಿ ತಿರುಚಿದ ರಂಗಾಯಣ; ದೂರು

photo credit;deccanherald

ಬೆಂಗಳೂರು; ಮೈಸೂರಿನ ರಂಗಾಯಣದಲ್ಲಿ ಕಳೆದ ಎರಡು ದಿನದ ಹಿಂದೆ ನಡೆದಿದ್ದ ಸಾಂಬಶಿವ ಪ್ರಹಸನದಲ್ಲಿ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಅವಹೇಳನ ಮಾಡಲಾಗಿದೆ ಎಂಬ ದೂರುಗಳು ಕೇಳಿಬಂದ ಬೆನ್ನಲ್ಲೇ ಇದೀಗ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ ಚಂದ್ರಶೇಖರ ಕಂಬಾರ ಅವರ ಅನುಮತಿಯಿಲ್ಲದೆಯೇ ರಂಗಾಯಣವು ಪ್ರದರ್ಶಿಸಿತ್ತು ಎಂಬುದು ಇದೀಗ ಬಹಿರಂಗವಾಗಿದೆ.

 

ಈ ಕುರಿತು ಖುದ್ದು ಡಾ ಚಂದ್ರಶೇಖರ ಕಂಬಾರ ಅವರು ಮೈಸೂರು ಪೊಲೀಸ್‌ ಕಮಿಷನರ್‌ ಅವರಿಗೆ 2023ರ ಜನವರಿ 2ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅನುಮತಿ ಇಲ್ಲದೇ ಪ್ರದರ್ಶಿಸಿರುವುದು ಮತ್ತು ಪ್ರಹಸನವನ್ನು ಅಸಹ್ಯವಾಗಿ ತಿರುಚಿರುವುದು, ವ್ಯಕ್ತಿ ನಿಂದನೆ ಇಲ್ಲದೇ ಇದ್ದರೂ ವ್ಯಕ್ತಿ ನಿಂದನೆ ಮಾಡುವ ಮೂಲಕ ಅಹಿತಕರ ವಾತಾವರಣಕ್ಕೆ ಕಾರಣರಾದ ಎಲ್ಲರ ಮೇಲೂ ಸೂಕ್ತ ಕ್ರಮ ಜರುಗಿಸಬೇಕು ಎಂದು ಪತ್ರದಲ್ಲಿ ಕಂಬಾರ ಅವರು ಒತ್ತಾಯಿಸಿದ್ದಾರೆ.

 

ಕಂಬಾರ ಅವರು ಬರೆದಿರುವ ಪತ್ರದಲ್ಲೇನಿದೆ?

 

ಮೈಸೂರಿನ ರಂಗಾಯಣದಲ್ಲಿ ನನ್ನ ನಾಟಕ ಸಾಂಬಶಿವ ಪ್ರಹಸನವನ್ನು ಅಸಹ್ಯವಾಗಿ ತಿರುಚಿ ಪ್ರದರ್ಶಿಸಿರುವ ಬಗ್ಗೆ ನನಗೆ ತುಂಬಾ ವಿಷಾದವಿದೆ. ಮೊದಲನೆಯದಾಗಿ ನನ್ನ ನಾಟಕ ಪ್ರದರ್ಶಿಸುವುದಕ್ಕೆ ನನ್ನ ಅನುಮತಿ ಕೇಳಲೇಬೇಕಾಗಿತ್ತು. ಆದರೆ ಇವರು ಕೇಳಿಲ್ಲ. ರಂಗಾಯಣದವರಾದರೂ ನನ್ನ ಅನುಮತಿ ಇಲ್ಲದ ನಾಟಕ ಪ್ರದರ್ಶನಕ್ಕೆ ಅವಕಾಶ ಕೊಟ್ಟಿರುವುದು ವಿಷಾದಕರ.

 

ಎರಡನೆಯದಾಗಿ ನನ್ನ ಯಾವುದೇ ನಾಟಕಗಳಲ್ಲಿ ವ್ಯಕ್ತಿಗತ ನಿಂದನೆ ಇರುವುದು ಸಾಧ್ಯವಿಲ್ಲ. ಅನುಮತಿ ಇಲ್ಲದೇ ನಾಟಕವನ್ನು ಪ್ರದರ್ಶಿಸಿದ್ದಕ್ಕೆ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟವರಿಗೂ ಮತ್ತು ಇಲ್ಲದ ಸಾಹಿತ್ಯವನ್ನು ಸೇರಿಸಿದ್ದಕ್ಕೆ  ನಿರ್ದೇಶಕರ ಮೆಲೂ ಹಾಗೂ ಈ ಅಹಿತಕರ ವಾತಾವರಣಕ್ಕೆ ಕಾರಣರಾದ ಸಂಬಂಧಪಟ್ಟ ಎಲ್ಲರ ಮೇಲೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ ಚಂದ್ರಶೇಖರ ಕಂಬಾರ ಅವರು ಮೈಸೂರು ಪೊಲೀಸ್‌ ಕಮಿಷನರ್‌ ಅವರಿಗೆ 2023ರ ಜನವರಿ 2ರಂದು ದೂರು ದಾಖಲಿಸಿದ್ದಾರೆ.

 

ಚಂದ್ರಶೇಖರ ಕಂಬಾರ ಅವರು ಬರೆದಿರುವ ಪತ್ರದ ಪ್ರತಿ

 

ಚಂದ್ರಶೇಖರ ಕಂಬಾರರ ‘ಸಾಂಬಶಿವ ಪ್ರಹಸನ’ ನಾಟಕವನ್ನು ಕಾರ್ತಿಕ್ ಉಪಮನ್ಯು ನಿರ್ದೇಶನದಲ್ಲಿ ‘ನಾಗರತ್ನಮ್ಮ’ ರಂಗ ಕಾರ್ಯಾಗಾರದ ಶಿಬಿರಾರ್ಥಿಗಳು ಪ್ರದರ್ಶಿಸುತ್ತಿದ್ದರು. ‘ಭಾಗ್ಯಗಳನ್ನು ನೀಡಿ ಸೋಮಾರಿ ಮಾಡುತ್ತಿದ್ದೀರಿ, ಬರೀ ನಿದ್ದೆ ಮಾಡುತ್ತಿದ್ದೀರಿ ಎಂದೆಲ್ಲ ಹೇಳಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ವ್ಯಂಗ್ಯ ಮಾಡುತ್ತಿದ್ದೀರಿ. ಮೂಲ ನಾಟಕದಲ್ಲಿ ಹೀಗಿದೆಯೇ ದುರುದ್ದೇಶಪೂರ್ವಕವಾಗಿ ನಾಟಕ ರೂಪಿಸಿದ್ದೀರಿ’ ಎಂದು ವೇದಿಕೆಗೇರಿ ಹಲವರು ಕಿಡಿಕಾರಿದ್ದರು.

 

 

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ‘ಕೆ.ಡಿ.ಅಂಕಲ್‌’ ಎಂದು ವ್ಯಂಗ್ಯ ಮಾಡಲಾಗಿತ್ತು. ‘ನಾಟಕ ತಂಡದಲ್ಲಿದ್ದ 18 ಮಂದಿ ವಿರುದ್ಧ ಭಾನುವಾರ ದೂರು ನೀಡಿದ್ದೇನೆ. ಚುನಾವಣೆ ಸಮೀಪಿಸುತ್ತಿರುವುದರಿಂದಾಗಿ, ಸಿದ್ದರಾಮಯ್ಯ ಅವರನ್ನು ಉದ್ದೇಶಪೂರ್ವಕವಾಗಿ ಅವಹೇಳನ ಮಾಡಲಾಗಿದೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿದೆ’ ಎಂದು ಬಿ.ಸುಬ್ರಹ್ಮಣ್ಯ ದೂರಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts