ಬೆಂಗಳೂರು; ಯುದ್ಧಪೀಡಿತವಾಗಿದ್ದ ಉಕ್ರೇನ್‌ನಿಂದ ವೈದ್ಯಕೀಯ ವಿದ್ಯಾಭ್ಯಾಸ ಮೊಟಕುಗೊಳಿಸಿ ರಾಜ್ಯಕ್ಕೆ ಹಿಂದಿರುಗಿರುವ ಅಂದಾಜು 700 ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಇನ್ನೂ ಅತಂತ್ರವಾಗಿಯೇ ಇದೆ. ಯುದ್ಧ ಮುಗಿದು ಹಲವು ತಿಂಗಳಾದರೂ ಸಹ ಅಲ್ಲಿಂದ ಹೊರಬಂದಿರುವ ವೈದ್ಯಕೀಯ ಶಿಕ್ಷಣ ಕುರಿತು ತೀರ್ಮಾನವಾಗಲೀ, ರಾಷ್ಟ್ರೀಯ ಮಟ್ಟದಲ್ಲೂ ಏಕರೂಪದ ನೀತಿಯೂ ಸಹ ಇದುವರೆಗೂ ರೂಪಿತಗೊಂಡಿಲ್ಲ.
ಉಕ್ರೇನ್‌ನಿಂದ ಹೊರಬಿದ್ದಿರುವ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯದ ಕುರಿತು ವಿಧಾನಸಭೆಯಲ್ಲಿ ಶಾಸಕ ಯಶವಂತರಾಯಗೌಡ ವಿಠಲಗೌಡ ಪಾಟೀಲ ಅವರು ನಿಯಮ 351ರಡಿ ಪ್ರಸ್ತಾಪಿಸಿದ್ದ ಸೂಚನೆಗೆ ವೈದ್ಯಕೀಯ ಹಾಗೂ ಆರೋಗ್ಯ ಕುಟುಂಬ ಕಲ್ಯಾಣ ಸಚಿವ ಸಚಿವ ಡಾ ಕೆ ಸುಧಾಕರ್ ಅವರು ನೀಡಿರುವ ಉತ್ತರದಲ್ಲಿ ಮೇಲಿನ ಅಂಶವನ್ನು ಉಲ್ಲೇಖಿಸಿದೆ.
ಉಕ್ರೇನ್ ಯುದ್ಧ ಪರಿಣಾಮವಾಗಿ ವ್ಯಾಸಂಗವನ್ನು ಮೊಟಕುಗೊಳಿಸಿ ಸ್ವದೇಶಕ್ಕೆ ವಾಪಸ್ಸಾದ ವೈದ್ಯಕೀಯ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಶೀಲಿಸಲು ಹಾಗೂ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಲು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಆದರೆ ವೈದ್ಯಕೀಯ ಶಿಕ್ಷಣ ಸಂಬಂಧಿಸಿದಂತೆ ಅಗ್ರಮಾನ್ಯ ಶಾಸನಬದ್ಧ ಸಂಸ್ಥೆಯಾದ ರಾಷ್ಟ್ರೀಯ ವೈದ್ಯಕೀಯ ಆಯೋಗದ ತೀರ್ಮಾನದತ್ತ ಮುಖ ಮಾಡಿರುವ ಕಾರಣ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳ ಮುಂದಿನ ವ್ಯಾಸಂಗದ ಕುರಿತು ಇನ್ನು ಯಾವುದೇ ಅಂತಿಮ ತೀರ್ಮಾನ ಹೊರಬಿದ್ದಿಲ್ಲ.
ಅಲ್ಲದೇ ಈ ಕುರಿತು ರಾಷ್ಟ್ರೀಯ ವೈದ್ಯಕೀಯ ಆಯೋಗವು ಇನ್ನೂ ಏಕರೂಪದ ನೀತಿ ರೂಪಿಸದ ಕಾರಣ ರಾಜೀವ್‌ಗಾಂಧಿ ವಿಶ್ವವಿದ್ಯಾಲಯದ ಕುಲಪತಿ ಅಧ್ಯಕ್ಷತೆಯ ಸಮಿತಿಯೂ ಯಾವುದೇ ಸ್ಪಷ್ಟ ಹೆಜ್ಜೆಗಳನ್ನಿಟ್ಟಿಲ್ಲ ಎಂದು ಗೊತ್ತಾಗಿದೆ.
‘ವೈದ್ಯಕೀಯ ಶಿಕ್ಷಣ ಸಂಬಂಧಿಸಿದಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗ ನಮ್ಮ ರಾಷ್ಟ್ರದಲ್ಲಿ ವೈದ್ಯಕೀಯ ಶಿಕ್ಷಣ ನೀತಿಯನ್ನು ರೂಪಿಸುವ ಅಗ್ರಮಾನ್ಯ ಶಾಸನಬದ್ಧ ಸಂಸ್ಥೆಯಾಗಿದೆ. ಉಕ್ರೇನ್‌ನಿಂದ ವೈದ್ಯಕೀಯ ವಿದ್ಯಾಭ್ಯಾಸ ಮೊಟಕುಗೊಳಿಸಿ ರಾಜ್ಯಕ್ಎಕ ಹಿಂತಿರುಗಿರುವ ಪ್ರಕರಣಗಳು ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲದೇ ಭಾರತದ ಇತರೆ ರಾಜ್ಯಗಳ ವಿದ್ಯಾರ್ಥಿಗಳನ್ನು ಸಹ ಒಳಗೊಂಡಿರುವ ಕಾರಣ ಈ ವಿಷಯದಲ್ಲಿ ಏಕರೂಪದ ನೀತಿ ಕೈಗೊಳ್ಳಬೇಕಿರುತ್ತದೆ,’ ಎಂದು ಸಚಿವ ಡಾ ಕೆ ಸುಧಾಕರ್ ಅವರು ಉತ್ತರದಲ್ಲಿ ವಿವರಿಸಿದ್ದಾರೆ.
ಇದೊಂದು ವಿಶೇಷ ಸಂದರ್ಭವಾಗಿದ್ದು ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂಧ್ರ ಮತ್ತು ರಾಜ್ಯ ಸರ್ಕಾರವು ಅವಶ್ಯಕ ಕ್ರಮ ಕೈಗೊಳ್ಳುವ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿ ಹಾಗೂ ಕ್ಷೇತ್ರ ಪರಿಣಿತರೊಂದಿಗೆ ಚರ್ಚಿಸಿ ರಾಷ್ಟ್ರೀಯ ವೈದ್ಯಕೀಯ ಆಯೋಗವು ನೀಡುವ ಸೂಚನೆಗಳನ್ನು ನಿರೀಕ್ಷಿಸಲಾಗುತ್ತಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗವು ನೀಡುವ ಸೂಚನೆಗಳನುಸಾರ ಅಗತ್ಯ ಕ್ರಮವಹಿಸಲಾಗುವುದು ಎಂದೂ ಉತ್ತರದಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ವೈದ್ಯಕೀಯ ಆಯೋಗವು 2022ರ ಸೆ.15ರಂದು ಸಾರ್ವಜನಿಕ ಸೂಚನೆ ಹೊರಡಿಸಿತ್ತು. ಉಕ್ರೇನ್‌ನಲ್ಲಿ ವ್ಯಾಸಂಗ ಮೊಟಕುಗೊಳಿಸಿರುವ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಶೈಕ್ಷಣಿಕ ಚಲಶೀಲತೆಗಾಗಿ ತಾತ್ಕಾಲಿಕವಾಗಿ ಹೊರದೇಶಗಳಾದ ಪೋಲೆಂಡ್, ಆಸ್ಟ್ರಿಯಾ , ಜೆಕ್ ರಿಪಬ್ಲಿಕ್, ಫ್ರಾನ್ಸ್, ಜಾರ್ಜಿಯಾ, ಕಝಕಿಸ್ತಾನ, ಮಾಲ್ಡಿವಿಯಾ, ಸ್ಪೈನ್, ಉಜ್ಬೇಕಿಸ್ತಾನ, ಯುಎಸ್, ಇಟಲಿ, ಬೆಲ್ಜಿಯಂ, ಈಜಿಪ್ಟ್, ಲಾಟ್ವಿಯಾ, ಗ್ರೀಸ್, ರುಮೇನಿಯಾ, ಸ್ವೀಡನ್, ಇಸ್ರೇಲ್, ಇರಾನ್, ಬಲ್ಗೇರಿಯಾ, ಜರ್ಮನಿ, ಟರ್ಕಿ, ಹಂಗೇರಿ ಸೇರಿ ಇನ್ನಿತರೆಡಗಳಲ್ಲಿ ವ್ಯಾಸಂಗ ಮುಗಿಸಿ ಮಾತೃ ಸಂಸ್ಥೆ ಉಕ್ರೇನ್ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿ ಮೊಬಿಲಿಟಿ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿರುವುದು ಗೊತ್ತಾಗಿದೆ.