ಅನರ್ಹರಿಗೆ 79 ಕೋಟಿ ಪಾವತಿ; ಪಿಎಸಿ ಸೂಚನೆ ಮೇರೆಗೆ ಸಿಐಡಿಗೆ ವಹಿಸಲು ನಿರ್ಧಾರ

photo credit;deccanhearlad

ಬೆಂಗಳೂರು; ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದಲ್ಲಿ 54 ಎಕರೆಗೆ ಅಕ್ರಮವಾಗಿ ಖಾತೆ ಮಾಡಿ 79.28 ಕೋಟಿ ರು.ಗಳನ್ನು ಅನರ್ಹರಿಗೆ ಪರಿಹಾರ ನೀಡಿರುವುದು ಮತ್ತು ಭೂಸ್ವಾಧೀನದ ಮಾಹಿತಿ ಇದ್ದರೂ ಪರಿಹಾರ ವಿತರಣೆ ಮಾಡಿರುವ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಐಡಿಗೆ ವಹಿಸಲು ನಿರ್ಧರಿಸಿದೆ.

 

2014-15ನೇ ಸಾಲಿನ ಭಾರತ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ವರದಿ (ಕಂಡಿಕೆ 3.13)ಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸೂಚನೆ ಮೇರೆಗೆ ಕಂದಾಯ ಇಲಾಖೆಯು ಪ್ರಕರಣವನ್ನು ಸಿಐಡಿಗೆ ವಹಿಸಲು ನಿರ್ಧರಿಸಿದೆ. ಈ ಅಕ್ರಮದಲ್ಲಿ ಭಾಗಿಯಾದ ಇಬ್ಬರು ಕೆಎಎಸ್‌ ಅಧಿಕಾರಿಗಳು ಸಿಐಡಿ ತನಿಖೆಯನ್ನು ಎದುರಿಸಬೇಕಿದೆ. ಈ ಕುರಿತು ಮೈಸೂರು ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ (ಸಂಖ್ಯೆ;ಕಂಇ 57 ಎಲ್‌ಆರ್‌ಎ 2017) ಎಂದು ಗೊತ್ತಾಗಿದೆ.

 

‘ಭಾರತ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ 2014-15ನೇ ಸಾಲಿನ ವರದಿಯ ಕಂಡಿಕೆ 3.13 ಅಂಗೀಕಾರ ಅರ್ಹವಲ್ಲದ ಭೂ ಪರಿಹಾರ ಪಾವತಿಗೆ ಸಂಬಂಧಿಸಿದಂತೆ ಅಕ್ರಮ ಎಸಗಿರುವ ಮತ್ತು ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ಅಧಿಕಾರಿ, ಸಿಬ್ಬಂದಿಗಳ ಕುರಿತು ತನಿಖೆ ನಡೆಸಲು ಪ್ರಕರಣವನ್ನು ಸಿಐಡಿಗೆ ವಹಿಸಲು ನಿರ್ಧರಿಸಲಾಗಿದೆ.

 

ಸಿಐಡಿ ತನಿಖೆಗೆ ವಹಿಸಲು ಮೊದಲಿಗೆ ಪ್ರಕರಣ ಕುರಿತು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿ, ಎಫ್‌ಐಆರ್‌ ಪ್ರತಿಯೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಮೂಲ ದಾಖಲೆಗಳನ್ನು ಸರ್ಕಾರಕ್ಕೆ ಕೂಡಲೇ ಒದಗಿಸಬೇಕು. ಹಾಗೂ ಪ್ರಕರಣವು ಒಳಗೊಂಡಿರುವ ಜಮೀನುಗಳ ಪ್ರಸ್ತುತ ವಸ್ತು ಸ್ಥಿತಿಯ ಮಾಹಿತಿಯನ್ನು ಜಿಲ್ಲಾವಾರು ಪ್ರತ್ಯೇಕವಾಗಿ ಒದಗಿಸಬೇಕು,’ ಎಂದು ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ನಿರ್ದೇಶಿಸಿರುವುದು ತಿಳಿದುಬಂದಿದೆ.

 

54 ಎಕರೆಗೆ ಅಕ್ರಮವಾಗಿ ಖಾತೆ ಮಾಡಿ 79.28 ಕೋಟಿ ರು.ಗಳನ್ನು ಅನರ್ಹರಿಗೆ ಪರಿಹಾರ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಕರೆದಿದ್ದ ಸಭೆಗೆ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್‌ ಅವರು ಗೈರು ಹಾಜರಾಗಿದ್ದರು. ಇದಕ್ಕೆ ನೀಡಿದ್ದ ಸಮಜಾಯಿಷಿಯನ್ನು ಮುಖ್ಯ ಕಾರ್ಯದರ್ಶಿಗಳು ಒಪ್ಪಿರಲಿಲ್ಲ.

 

ಅನರ್ಹರಿಗೆ 79.29 ಕೋಟಿ ಪಾವತಿ; ಪಿಎಸಿಗೆ ಗೈರಾಗಿದ್ದ ಡಿಸಿ ಬಗಾದಿ ಗೌತಮ್‌ ಸಮಜಾಯಿಷಿ ಒಪ್ಪದ ಸಿಎಸ್‌

ಈ ಕುರಿತು ಪಿಎಸಿ ಅಧ್ಯಕ್ಷ ಕೃಷ್ಣಬೈರೇಗೌಡ ಅವರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಕ್ರಮಕ್ಕೆ ಸೂಚಿಸಿದ್ದರು. ಈ ಬೆಳವಣಿಗೆ ನಡುವೆಯೇ ಇಡೀ ಪ್ರಕರಣವನ್ನು ಸಿಐಡಿಗೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಮುನ್ನೆಲೆಗೆ ಬಂದಿದೆ.

79.29 ಕೋಟಿ ರು ಪಾವತಿ; ಪಿಎಸಿ ಸಭೆಗೆ ಗೈರಾದ ಡಿಸಿ ಬಗಾದಿ ಗೌತಮ್‌ ವಿರುದ್ಧ ಕ್ರಮಕ್ಕೆ ನಿರ್ದೇಶನ

ಮೊದಲ ಪ್ರಕರಣದ ಹಿನ್ನೆಲೆ

 

ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಅಡಕ್ಕನಹಳ್ಳಿ, ತಾಂಡವಪುರ ಹಾಗೂ ಇಮ್ಮಾವು ಗ್ರಾಮಗಳಲ್ಲಿ 1,123 ಎಕರೆ ಸ್ವಾಧೀನಕ್ಕೆ ಕೆಐಎಡಿಬಿ 2007ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಬಳಿಕ 2008ರಲ್ಲಿ 1,138 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇದರಲ್ಲಿ ಇಮ್ಮಾವು ಗ್ರಾಮದ 1,015 ಎಕರೆ ಸಹ ಸೇರಿತ್ತು. ಭೂಸ್ವಾಧೀನಪಡಿಸಿಕೊಂಡ ಜಮೀನಿನ ಪೈಕಿ ಇಮ್ಮಾವು ಗ್ರಾಮದ ಹೊಸ ಸರ್ವೆ ಸಂಖ್ಯೆ 582, 583, 584, 585, 586, 587 ರ ಜಮೀನಿಗೆ ಎಚ್.ಕೆ.ಕೃಷ್ಣಮೂರ್ತಿ 79.28 ಕೋಟಿ ಪರಿಹಾರ ಪಾವತಿಸಿದ್ದರು.

 

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ₹79.28 ಕೋಟಿ ಮೊತ್ತವನ್ನು ನಿಯಮಬಾಹಿರವಾಗಿ ಅನರ್ಹರಿಗೆ ಪರಿಹಾರ ನೀಡುವ ಮೂಲಕ ಈ ಅಕ್ರಮದಲ್ಲಿ ಭಾಗಿಯಾದ ಇಬ್ಬರು ಕೆಎಎಸ್‌ ಅಧಿಕಾರಿಗಳ ಪೈಕಿ ಕೆಐಎಡಿಬಿ ಮೈಸೂರು ವಲಯ ಕಚೇರಿಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ ಎಚ್‌.ಕೆ.ಕೃಷ್ಣಮೂರ್ತಿ ವಿರುದ್ಧ ಸಿವಿಲ್‌ ಮೊಕದ್ದಮೆ ಹೂಡಿ ಆರ್ಥಿಕ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲು ಕರ್ನಾಟಕ ಸರ್ಕಾರ ತೀರ್ಮಾನಿಸಿತ್ತು. ಈ ನಿವೃತ್ತ ಅಧಿಕಾರಿಯ ವಿರುದ್ಧ ಮೈಸೂರಿನ ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ನಂಜನಗೂಡು ತಹಶೀಲ್ದಾರ್‌ ಆಗಿದ್ದ ನವೀನ್‌ ಜೋಸೆಫ್‌ (ಪ್ರಸ್ತುತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ) ವಿರುದ್ಧ ಇಲಾಖಾ ವಿಚಾರಣೆ ನಡೆಸಿತ್ತು. ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಸರ್ಕಾರ ನಿರ್ಧರಿಸಿತ್ತು. ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಜುಲೈ 1ರಂದು ನಡೆದ ಸಭೆಯಲ್ಲಿ ಈ ಸಂಬಂಧ ಚರ್ಚಿಸಿತ್ತಾದರೂ ಯಾವುದೇ ಕ್ರಮ ಜರುಗಿಲ್ಲ ಎಂದು ತಿಳಿದು ಬಂದಿದೆ.

 

ಎರಡನೇ ಪ್ರಕರಣದ ಹಿನ್ನೆಲೆ

 

ಇಮ್ಮಾವು ಗ್ರಾಮದ ಹಳೆಯ ಸರ್ವೆ ಸಂಖ್ಯೆ 390ರಿಂದ 400ರ ವರೆಗಿನ ಖಾತೆದಾರರು ಭೀಷ್ಮ ಪಿತಾಮಹ ಪ್ರಕರಣದಲ್ಲಿ ಅವರ ಕುಟುಂಬ ಸದಸ್ಯರಾದ ಪ್ರದೀಪ್‌ ಎಂಬುವರಿಗೆ 5.15 ಕೋಟಿ, ಸೋನು ಎಂಬುವರಿಗೆ 6.10 ಕೋಟಿ, ಹರ್ಷಕುಮಾರ್‌, ಶೋಭಾದೇವಿ, ಹೇಮಲತಾ, ನಿಶಾ ಶರ್ಮಾ, ಅಂಜನಾ ಶರ್ಮಾ, ವಿಜಯಲಕ್ಷ್ಮಿ ಎಂಬುವರಿಗೆ ತಲಾ 11.34 ಕೋಟಿ ಪರಿಹಾರ ನೀಡಲಾಗಿದೆ.

 

ಪಹಣಿಪತ್ರದ (ಆರ್‌ಟಿಸಿ) ನೈಜತೆ ಪರಿಶೀಲಿಸದೆ, ಖಾತೆದಾರರ ಮರಣ ಪ್ರಮಾಣಪತ್ರ ಹಾಗೂ ಉತ್ತರಾಧಿಕಾರಿ ಪ್ರಮಾಣಪತ್ರಗಳನ್ನು ಸಹ ಪಡೆಯದೆ ಪರಿಹಾರ ವಿತರಿಸಲಾಗಿದೆ. ಅರ್ಜಿದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸುವಂತೆ ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

 

ಅವಿವಾಹಿತರಾಗಿದ್ದ ತ್ರಿಪುರ ಭೈರವಿ ಮಠದ ಮಹಾಂತ ಪಿ.ಕೃಷ್ಣಾನಂದ ಗಿರಿ ಗೋಸ್ವಾಮಿ ಈ ಜಮೀನಿನ ಮೂಲ ಖಾತೆದಾರರಾಗಿದ್ದರು. ನಂಜನಗೂಡು ತಾಲ್ಲೂಕಿನಲ್ಲಿ 891 ಎಕರೆ ಜಾಗ ಹೊಂದಿರುವುದಾಗಿ ಅವರು ಘೋಷಿಸಿಕೊಂಡಿದ್ದರು. ಅವರ ನಿಧನದ ಬಳಿಕ ಸಹೋದರ ಭೀಷ್ಮ ಪಿತಾಮಹ ಹಾಗೂ ಮಠದ ಮಹಾಂತ ಕೃಷ್ಣ ಮೋಹನಾನಂದ ಗಿರಿ ಗೋಸ್ವಾಮಿ ನಡುವೆ ಉತ್ತರದಾಯಿತ್ವದ ಕಲಹ ಆರಂಭವಾಗಿತ್ತು. ಈ ಹಿಡುವಳಿಗಳು ಪಿತ್ರಾರ್ಜಿತ ಎಂದು ಸಹೋದರ ವಾದಿಸಿದ್ದರೇ ಇದು ಮಠಕ್ಕೆ ಸೇರಿದ್ದು ಎಂದು ಮಹಾಂತರು ವಾದಿಸಿದ್ದರು. ಭೂನ್ಯಾಯ ಮಂಡಳಿಯು ಭೀಷ್ಮ ಪಿತಾಮಹ ಕುಟುಂಬಕ್ಕೆ 90 ಯುನಿಟ್‌ ಜಮೀನು ಹಂಚಿಕೆ ಮಾಡಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

ಈ ಪ್ರಕರಣದಲ್ಲಿ ಒಂಬತ್ತು ಮಂದಿಗೆ ತಲಾ 10 ಯುನಿಟ್‌ ಜಮೀನು ಹಂಚಿಕೆ ಮಾಡಿ ಅಕ್ರಮ ಎಸಗಲಾಗಿದೆ. ಜತೆಗೆ, ಈ ಪ್ರಕರಣದಲ್ಲಿ ಮೃತಪಟ್ಟವರಿಗೂ ಪರಿಹಾರ ವಿತರಿಸಲಾಗಿತ್ತು. ಭೂಸುಧಾರಣಾ ಕಾಯ್ದೆಯ ಪ್ರಕಾರ, ಭೂನ್ಯಾಯ ಮಂಡಳಿಯು ಕುಟುಂಬದ ಐವರು ಸದಸ್ಯರಿಗೆ ಗರಿಷ್ಠ 20 ಯುನಿಟ್‌ ಜಮೀನು ಹಂಚಿಕೆ ಮಾಡಬಹುದು. ಆದರೆ, ಈ ಪ್ರಕರಣದಲ್ಲಿ 90 ಯುನಿಟ್‌ ಹಂಚಿಕೆ ಮಾಡಲಾಗಿದೆ.

 

ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 2(12) ಬದಲು ಹಿಂದೂ ಅವಿಭಕ್ತ ಕುಟುಂಬ ಕಾಯ್ದೆ 2005 ರ ಪ್ರಕಾರ ಕುಟುಂಬದ ವ್ಯಾಖ್ಯಾನ ಮಾಡಿ ಭೂ ಮಿತಿಯನ್ನು ನಿಷ್ಕರ್ಷೆ ಮಾಡಿ ಹಂಚಿಕೆ ಮಾಡಲಾಗಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಹಂಚಿಕೆಯಾದ ಜಮೀನುಗಳು ಕೆಐಎಡಿಬಿಗೆ ಭೂಸ್ವಾಧೀನ ಆಗಿರುವ ವಿಚಾರ ಭೂನ್ಯಾಯ ಮಂಡಳಿ ಅಧ್ಯಕ್ಷರಿಗೆ ತಿಳಿದಿತ್ತು. ಆದರೂ, ತರಾತುರಿಯಲ್ಲಿ ಹಂಚಿಕೆದಾರರ ಹೆಸರಿಗೆ ಆದೇಶವನ್ನು ಹೊರಡಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ಕೆಎಎಸ್‌ ಅಧಿಕಾರಿಗಳ ಜತೆಗೆ, ಹಿಂದಿನ ಶಿರಸ್ತೇದಾರ ಟಿ.ರಮೇಶ್‌ ಬಾಬು, ಹಿಂದಿನ ರಾಜಸ್ವ ನಿರೀಕ್ಷಕ ಬಿ.ಎಲ್‌.ಶಿವರಾಜ್‌, ಹಿಂದಿನ ಗ್ರಾಮ ಲೆಕ್ಕಿಗ ಎಸ್.ವೆಂಕಟೇಶ ಭಾಗಿಯಾಗಿದ್ದು, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಯುತ್ತಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅವರು ರಾಜ್ಯ ಸರ್ಕಾರಕ್ಕೆ ಅವರಿಗೆ 2022ರ ಜೂನ್‌ 24ರಂದು ವರದಿ ಸಲ್ಲಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts