ಅಬಕಾರಿ ಹಗರಣ; ಸಚಿವ ಗೋಪಾಲಯ್ಯ ಸೇರಿ ಅಧಿಕಾರಿಗಳ ವಿರುದ್ಧ ಪ್ರಧಾನಿಗೆ ದೂರು

photo credit;kgopalaiah twitteraccount

ಬೆಂಗಳೂರು; ನಿಯಮ ಉಲ್ಲಂಘಿಸಿ ಮುಂಬೈ ಮೂಲದ ಕೆ ಎನ್‌ ರಿಸೋರ್ಸ್‌ ಕಂಪನಿಗೆ 2 ಲಕ್ಷ ಮೆಟ್ರಿಕ್‌ ಟನ್‌ ಪ್ರಮಾಣದ ರಾಜ್ಯದ ಕಾಕಂಬಿಯನ್ನು ರಫ್ತು ಮಾಡಲು ಅನುಮತಿ ನೀಡುವಲ್ಲಿ ಅಕ್ರಮ ಮತ್ತು ಅಧಿಕಾರ ದುರುಪಯೋಗವಾಗಿದೆ ಎಂಬ ಪ್ರಕರಣವು ಇದೀಗ ಪ್ರಧಾನ ಮಂತ್ರಿ ಕಚೇರಿ ಮೆಟ್ಟಿಲೇರಿದೆ.

 

ದೆಹಲಿ ಅಬಕಾರಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿರುವ ಬೆನ್ನಲ್ಲೇ ಕರ್ನಾಟಕದ ಅಬಕಾರಿ ಹಗರಣವನ್ನೂ ಸಿಬಿಐಗೆ ವಹಿಸಬೇಕು ಎಂದು ಪ್ರಧಾನಿಗೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಇ-ಮೈಲ್‌ ಮೂಲಕ ದೂರು ಸಲ್ಲಿಸಿದೆ. ಜತೆಗೆ ಸಂಬಂಧ ದಾಖಲೆಗಳನ್ನೂ ಒದಗಿಸಿದೆ. ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ದೂರಿನಲ್ಲಿ ಅಬಕಾರಿ ಸಚಿವ ಕೆ ಗೋಪಾಲಯ್ಯ, ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಏಕ್‌ರೂಪ್‌ ಕೌರ್‌, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌, ಅಬಕಾರಿ ಇಲಾಖೆ ಆಯುಕ್ತ, ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಂಜುಳ ನಟರಾಜ್‌, ಉಪ ಕಾರ್ಯದರ್ಶಿ ಅರುಳ್‌ ಕುಮಾರ್‌ ಅವರ ಹೆಸರನ್ನೂ ಉಲ್ಲೇಖಿಸಿದೆ.

 

ರಾಜ್ಯದ ಕಾಕಂಬಿಯನ್ನು ಗೋವಾ ಬಂದರು ಮೂಲಕ ರಫ್ತು ಮಾಡಲು ಅನುಮತಿ ನೀಡಿರುವ ಅಬಕಾರಿ ಇಲಾಖೆಯು ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದೆ. ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಲಿದ್ದ ಆದಾಯಕ್ಕೂ ಕಲ್ಲು ಬಿದ್ದಿದೆ. ಎಂ-2 ಲೈಸೆನ್ಸ್‌ ಇಲ್ಲದಿದ್ದರೂ ಮುಂಬೈ ಮೂಲದ ಕಂಪನಿಗೆ ಅನುಮತಿ ನೀಡಿರುವುದರ ಹಿಂದೆ ಅವ್ಯವಹಾರ ನಡೆದಿದೆ ಎಂದು ವೇದಿಕೆಯು ದೂರಿನಲ್ಲಿ ಆಪಾದಿಸಿದೆ.

 

ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಪಿಎಂಒಗೆ ಇ-ಮೈಲ್‌ ಮೂಲಕ ಸಲ್ಲಿಸಿರುವ ದೂರಿನ ಪ್ರತಿ

 

ಹೊರ ರಾಜ್ಯದ ಕಾಕಂಬಿ ರಫ್ತುದಾರರು ಮತ್ತು ಕಂಪನಿಗಳು ರಾಜ್ಯದ ಕಾಕಂಬಿಯನ್ನು ಗೋವಾ ಮತ್ತು ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಗೆ ರಫ್ತು ಮಾಡಲು ಸಲ್ಲಿಸಿದ್ದ ಪ್ರಸ್ತಾವನೆಗಳನ್ನು ಹಿಂದಿನ ಸರ್ಕಾರಗಳು ತಿರಸ್ಕರಿಸಿದ್ದವು. ಆದರೆ ಹಾಲಿ ಸರ್ಕಾರವು ಗುಜರಾತ್‌ ಮತ್ತು ಮಹಾರಾಷ್ಟ್ರ ಬಂದರು ಮೂಲಕ ರಫ್ತು ಮಾಡುವ ಮಹಾರಾಷ್ಟ್ರ ಮೂಲದ ಕೆ ಎನ್‌ ರಿಸೋರ್ಸ್‌ ಪ್ರೈ ಲಿಮಿಟೆಡ್‌ಗೆ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ಎತ್ತುವಳಿ ಮಾಡಿ ರಫ್ತು ಮಾಡಲು ಅನುಮತಿ ಪಡೆದುಕೊಳ್ಳುವುದರ ಹಿಂದೆ ಅಧಿಕಾರ ದುರುಪಯೋಗ ಮಾತ್ರವಲ್ಲದೇ ಭ್ರಷ್ಟಾಚಾರ ನಡೆದಿದೆ ಎಂದು ದೂರಿನಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಬಿ ಎಸ್‌ ಮಲ್ಲಿಕಾರ್ಜುನಯ್ಯ ಅವರು ಆರೋಪಿಸಿದ್ದಾರೆ.

 

ನಿಯಮ ಉಲ್ಲಂಘಿಸಿ ಕೆ ಎನ್‌ ರಿಸೋರ್ಸ್‌ ಪ್ರೈ ಲಿಮಿಟೆಡ್‌ಗೆ ನೀಡಿರುವ ಅನುಮತಿಯನ್ನು ತಕ್ಷಣವೇ ಹಿಂಪಡೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ವೇದಿಕೆಯು ದೂರಿನಲ್ಲಿ ಕೋರಿದೆಯಲ್ಲದೆ ಚುನಾವಣೆ ಹೊತ್ತಿನಲ್ಲಿಯೇ ಅನುಮತಿ ನೀಡುವ ಮೂಲಕ ಅಗ್ಗದ ಮದ್ಯ ತಯಾರಿಕೆಗೂ ದಾರಿಮಾಡಿಕೊಟ್ಟಿದೆ ಎಂದು ಹೇಳಿದೆ.

ನಿಯಮ ಉಲ್ಲಂಘಿಸಿ ಕಾಕಂಬಿ ರಫ್ತಿಗೆ ನೀಡಿರುವ ಅನುಮತಿಯು, ಅಗ್ಗದ ಮದ್ಯ ತಯಾರಿಕೆಗೆ ದಾರಿ?

 

ಹೊರರಾಜ್ಯದ ಕಂಪನಿಯಿಂದ ಪ್ರತಿ ಮೆಟ್ರಿಕ್‌ ಟನ್‌ಗೆ 400 ರು.ನಂತೆ 2 ಲಕ್ಷ ಮೆಟ್ರಿಕ್‌ ಟನ್‌ಗೆ 8 ಕೋಟಿ ರು. ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂಬ ಆಪಾದನೆಗೂ ಸಚಿವ ಗೋಪಾಲಯ್ಯ ಅವರು ಗುರಿಯಾಗಿದ್ದರು. ಈ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

ಅಬಕಾರಿ ಹಗರಣ; ಗೋವಾ ಬಂದರು ಮೂಲಕ ಕಾಕಂಬಿ ರಫ್ತಿನ ಅನುಮತಿಗೆ 8 ಕೋಟಿ ಕಿಕ್‌ಬ್ಯಾಕ್‌ ಆರೋಪ

ಅಲ್ಲದೇ ಈ ಕಂಪನಿಗೆ ಎಂ-2 ಲೈಸೆನ್ಸ್‌ ಇಲ್ಲದಿರುವುದನ್ನೂ ಮರೆಮಾಚಿರುವ ಅಬಕಾರಿ ಇಲಾಖೆಯು ಕರ್ನಾಟಕ ರಾಜ್ಯದ ಬೊಕ್ಕಸಕ್ಕೆ ಸಂದಾಯವಾಗಬೇಕಿದ್ದ ಹಡಗು ನಿರ್ವಹಣೆ ಶುಲ್ಕ, ಬಂದರು ನಿರ್ವಹಣೆ ಇನ್ನಿತರೆ (wharfage) ಸೇರಿದಂತೆ ಇನ್ನಿತರೆ ಶುಲ್ಕದ ರೂಪದಲ್ಲಿ ಸಂದಾಯವಾಗಬೇಕಿದ್ದ ಕೋಟ್ಯಂತರ ರುಪಾಯಿಯನ್ನೂ ರಾಜ್ಯದ ಬೊಕ್ಕಸದಿಂದ ತಪ್ಪಿಸಿದಂತಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

 

ಅಲ್ಲದೇ ಈ ಕಂಪನಿಗೆ ಎಂ-2 ಲೈಸೆನ್ಸ್‌ ಇಲ್ಲದಿರುವುದನ್ನೂ ಮರೆಮಾಚಿರುವ ಅಬಕಾರಿ ಇಲಾಖೆಯು ಕರ್ನಾಟಕ ರಾಜ್ಯದ ಬೊಕ್ಕಸಕ್ಕೆ ಸಂದಾಯವಾಗಬೇಕಿದ್ದ ಹಡಗು ನಿರ್ವಹಣೆ ಶುಲ್ಕ, ಬಂದರು ನಿರ್ವಹಣೆ ಇನ್ನಿತರೆ (wharfage) ಸೇರಿದಂತೆ ಇನ್ನಿತರೆ ಶುಲ್ಕದ ರೂಪದಲ್ಲಿ ಸಂದಾಯವಾಗಬೇಕಿದ್ದ ಕೋಟ್ಯಂತರ ರುಪಾಯಿಯನ್ನೂ ರಾಜ್ಯದ ಬೊಕ್ಕಸದಿಂದ ತಪ್ಪಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಕಾಕಂಬಿ ಹಗರಣ; ಬೊಕ್ಕಸಕ್ಕೆ ನಷ್ಟವಾದರೂ ನಿಯಮ ಉಲ್ಲಂಘಿಸಿ ಮುಂಬೈ ಕಂಪನಿಗೆ ಅನುಮೋದನೆ?

ಅಬಕಾರಿ ಆಯುಕ್ತರ ಕಚೇರಿಯು ಸಲ್ಲಿಸಿದ್ದ ಪ್ರಸ್ತಾವನೆ ಮೇಲೆ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌ ಮತ್ತು ಕಾರ್ಯದರ್ಶಿ ಡಾ ಏಕ್‌ರೂಪ್‌ಕೌರ್‌ ಅವರೂ ಸೇರಿದಂತೆ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಕಂಪನಿಯು ಎಂ 2 ಲೈಸೆನ್ಸ್‌ ಇಲ್ಲದಿರುವ ಅಂಶವನ್ನು ಪ್ರಸ್ತಾವನೆಯಲ್ಲಿನ ಕಡತದಲ್ಲಿ ಎಲ್ಲಿಯೂ ನಮೂದಿಸಿಲ್ಲ ಮತ್ತು ದಾಖಲಿಸಿಲ್ಲ. ಕರಡು ಪತ್ರವನ್ನು ತಯಾರಿಸಿರುವ ಆರ್ಥಿಕ ಇಲಾಖೆಯು ಎಂ 2 ಲೈಸೆನ್ಸ್‌ ಇಲ್ಲದಿರುವುದರ ಕುರಿತು ಇ-ಆಫೀಸ್‌ ಕಡತದಲ್ಲಿ ಎಲ್ಲಿಯೂ ಚರ್ಚೆ ನಡೆಸದಿರುವುದು ಸಂಶಯಗಳಿಗೆ ಕಾರಣವಾಗಿದೆ ಎಂದು ವೇದಿಕೆಯು ಪ್ರಧಾನಿ ಕಚೇರಿಯ ಗಮನಸೆಳೆದಿದೆ.

 

ಅಬಕಾರಿ ಆಯುಕ್ತರ ಕಚೇರಿಯು ಸಲ್ಲಿಸಿದ್ದ ಪ್ರಸ್ತಾವನೆ ಮೇಲೆ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌ ಮತ್ತು ಕಾರ್ಯದರ್ಶಿ ಡಾ ಏಕ್‌ರೂಪ್‌ಕೌರ್‌ ಅವರೂ ಸೇರಿದಂತೆ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಕಂಪನಿಯು ಎಂ 2 ಲೈಸೆನ್ಸ್‌ ಇಲ್ಲದಿರುವ ಅಂಶವನ್ನು ಪ್ರಸ್ತಾವನೆಯಲ್ಲಿನ ಕಡತದಲ್ಲಿ ಎಲ್ಲಿಯೂ ನಮೂದಿಸಿಲ್ಲ ಮತ್ತು ದಾಖಲಿಸಿಲ್ಲ. ಕರಡು ಪತ್ರವನ್ನು ತಯಾರಿಸಿರುವ ಆರ್ಥಿಕ ಇಲಾಖೆಯು ಎಂ 2 ಲೈಸೆನ್ಸ್‌ ಇಲ್ಲದಿರುವುದರ ಕುರಿತು ಇ-ಆಫೀಸ್‌ ಕಡತದಲ್ಲಿ ಎಲ್ಲಿಯೂ ಚರ್ಚೆ ನಡೆಸಿಲ್ಲ.

 

ಹೊರರಾಜ್ಯದ ಕಂಪನಿಯು ಹೊರರಾಜ್ಯದ ಬಂದರು ಮೂಲಕ ರಾಜ್ಯದ ಕಾಕಂಬಿಯನ್ನು ರಫ್ತು ಮಾಡಲು ಅನುಮತಿ ನೀಡುವುದರಿಂದ ಕರ್ನಾಟಕ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ನಷ್ಟವಾಗಲಿದೆ ಎಂಬ ಅಂಶವನ್ನು ಯಾವೊಬ್ಬ ಅಧಿಕಾರಿಯೂ ಉಲ್ಲೇಖಿಸದೆಯೆ ಮರೆಮಾಚಿದ್ದರು.

 

‘ಅಬಕಾರಿ ಆಯುಕ್ತರು ಪ್ರಸ್ತಾಪಿಸಿರುವಂತೆ ಕೆ ಎನ್‌ ರಿಸೋರ್ಸ್‌ ಪ್ರೈ ಲಿ., ಮಹಾರಾಷ್ಟ್ರ ಇಂಡಿಯಾ ಇವರಿಗೆ 2022-23ನೇ ಸಾಲಿಗೆ 2,00,000 ಮೆಟ್ರಿಕ್‌ ಟನ್‌ ಕಾಕಂಬಿಯನ್ನು ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳಿಂದ ಎತ್ತುವಳಿ ಮಾಡಿ ರಫ್ತು ಮಾಡಲು ಅನುಮತಿ ನೀಡುವ ಕುರಿತು ಅಬಕಾರಿ ಸಚಿವರ ಅನುಮೋದನೆ ಪಡೆಯಬಹುದಾಗಿದೆ,’ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಮಂಜುಳಾ ನಟರಾಜ್‌ ಅವರು ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದರು.

 

‘2022-23 ಮತ್ತು 2023-24ನೇ ಸಾಲಿಗೆ 2,00,00ಮೆಟ್ರಿಕ್‌ ಟನ್‌ ಕಾಕಂಬಿಯನ್ನು ಎತ್ತುವಳಿ ಮಾಡಿ ಹೊರದೇಶಗಳಿಗೆ ರಫ್ತು ಮಾಡಲು ಅನುಮೋದನೆ ನೀಡಿದೆ,’ ಎಂದು ಸಚಿವ ಗೋಪಾಲಯ್ಯ ಅವರೂ ಸಹಿ ಮಾಡಿದ್ದನ್ನು ಸ್ಮರಿಸಬಹುದು.

 

ಇದೇ ಪ್ರಕರಣ ಸಂಬಂಧ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ದಾಖಲೆ ಸಹಿತ ದೂರು ದಾಖಲಿಸಿರುವುದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts