ನಿಯಮ ಉಲ್ಲಂಘಿಸಿ ಕಾಕಂಬಿ ರಫ್ತಿಗೆ ನೀಡಿರುವ ಅನುಮತಿಯು, ಅಗ್ಗದ ಮದ್ಯ ತಯಾರಿಕೆಗೆ ದಾರಿ?

ಬೆಂಗಳೂರು; ನಿಯಮ ಉಲ್ಲಂಘಿಸಿ ಮುಂಬೈ ಮೂಲದ ಕೆ ಎನ್‌ ರಿಸೋರ್ಸ್‌ ಕಂಪನಿಗೆ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿ ರಫ್ತು ಮಾಡಲು ರಾಜ್ಯ ಅಬಕಾರಿ ಇಲಾಖೆಯು ನೀಡಿರುವ ಅನುಮತಿಯು ಅಗ್ಗದ ಮದ್ಯ ತಯಾರಿಕೆಗೆ ದಾರಿಮಾಡಿಕೊಟ್ಟಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

 

ಗೋವಾ ಬಂದರು ಮೂಲಕ ಕಾಕಂಬಿಯನ್ನು ರಫ್ತು ಮಾಡಲಾಗಿದೆ ಎಂಬ ದಾಖಲೆಗಳನ್ನು ಸೃಷ್ಟಿಸಿ 2 ಲಕ್ಷ ಮೆಟ್ರಿಕ್‌ ಟನ್‌ನಿಂದ 520 ಲಕ್ಷ ಲೀಟರ್‌ ಅಗ್ಗದ ಮದ್ಯ ತಯಾರಿಕೆಗೆ ಪರೋಕ್ಷವಾಗಿ ಸರ್ಕಾರವೇ ದಾರಿಮಾಡಿಕೊಟ್ಟಂತಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮುಂಬೈ ಮೂಲದ ಕಂಪನಿಗೆ ಕಾನೂನುಬಾಹಿರವಾಗಿ ಕಾಕಂಬಿ ರಫ್ತು ಮಾಡಲು ಅನುಮತಿ ನೀಡಿರುವುದರ ಹಿಂದೆ ಕಿಕ್‌ಬ್ಯಾಕ್‌ ಆರೋಪ ಕೇಳಿ ಬಂದಿತ್ತು. ಈ ನಡುವೆಯೇ ಅಗ್ಗದ ಮದ್ಯ ತಯಾರಿಕೆಗೆ ದಾರಿಮಾಡಿಕೊಟ್ಟಿರುವ ಸರ್ಕಾರದ ಪಾತ್ರವೂ ಇದೀಗ ಮುನ್ನೆಲೆಗೆ ಬಂದಂತಾಗಿದೆ.

ಅಬಕಾರಿ ಹಗರಣ; ಗೋವಾ ಬಂದರು ಮೂಲಕ ಕಾಕಂಬಿ ರಫ್ತಿನ ಅನುಮತಿಗೆ 8 ಕೋಟಿ ಕಿಕ್‌ಬ್ಯಾಕ್‌ ಆರೋಪ

 

ಹೊರ ರಾಜ್ಯದ ಕಾಕಂಬಿ ರಫ್ತುದಾರರು ಮತ್ತು ಕಂಪನಿಗಳು ರಾಜ್ಯದ ಕಾಕಂಬಿಯನ್ನು ಗೋವಾ ಮತ್ತು ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಗೆ ರಫ್ತು ಮಾಡಲು ಸಲ್ಲಿಸಿದ್ದ ಪ್ರಸ್ತಾವನೆಗಳನ್ನು ಹಿಂದಿನ ಸರ್ಕಾರಗಳು ತಿರಸ್ಕರಿಸಿದ್ದವು. ಆದರೆ ಹಾಲಿ ಸರ್ಕಾರವು ಗುಜರಾತ್‌ ಮತ್ತು ಮಹಾರಾಷ್ಟ್ರ ಬಂದರು ಮೂಲಕ ರಫ್ತು ಮಾಡುವ ಮಹಾರಾಷ್ಟ್ರ ಮೂಲದ ಕೆ ಎನ್‌ ರಿಸೋರ್ಸ್‌ ಪ್ರೈ ಲಿಮಿಟೆಡ್‌ಗೆ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ಎತ್ತುವಳಿ ಮಾಡಿ ರಫ್ತು ಮಾಡಲು ಅನುಮತಿ ಪಡೆದುಕೊಳ್ಳುವುದರ ಹಿಂದೆ ಮದ್ಯದ ಲಾಬಿಗೆ ಮಣಿದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಅಬಕಾರಿ ಹಗರಣ; ಪರವಾನಿಗೆ ಇಲ್ಲದಿದ್ದರೂ ಮರೆಮಾಚಿ ಮುಂಬೈ ಕಂಪನಿಗೆ ಕಾಕಂಬಿ ರಫ್ತಿಗೆ ಅನುಮತಿ

‘ರಾಜ್ಯದ ಎಂ-2 ಲೈಸೆನ್ಸ್‌ ಹೊಂದಿರದೇ ಇರುವ ಕಂಪನಿಗೆ ಕಾಕಂಬಿ ರಫ್ತು ಮಾಡಲು ಕಾನೂನುಬಾಹಿರವಾಗಿ ಅನುಮತಿ ನೀಡಿರುವುದು ಅಕ್ಷ್ಯಮ್ಯ. 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ಗೋವಾಕ್ಕೆ ಸಾಗಾಣಿಕೆ ಮಾಡಲಾಗಿದೆ ಎಂಬ ದಾಖಲೆಗಳು ಸೃಷ್ಟಿಯಾಗಲಿವೆ. ಬಂದರು ಮೂಲಕ ಕಾಕಂಬಿಯನ್ನು ರಫ್ತು ಮಾಡದೇ ಅನಧಿಕೃತವಾಗಿ ಅಗ್ಗದ ಮದ್ಯ ತಯಾರಿಸಲು ಬಳಕೆಯಾಗಲಿದೆ. ಈ ಮದ್ಯವನ್ನು ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಹಂಚುವ ಎಲ್ಲಾ ಸಾಧ್ಯತೆಗಳಿವೆ,’ ಎಂದು ಅಬಕಾರಿ ಇಲಾಖೆಯ ಹೆಸರು ಹೇಳಲಿಚ್ಛಿಸದ ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದಾರೆ.

 

ಕರ್ನಾಟಕ ರಾಜ್ಯದ ಕಾಕಂಬಿಯನ್ನು ಗೋವಾ ಬಂದರು ಮೂಲಕ ರಫ್ತು ಮಾಡಲಾಗುವುದು ಎಂದು ಮುಂಬೈ ಮೂಲದ ಕೆ ಎನ್‌ ರಿಸೋರ್ಸ್‌ ಕಂಪನಿಯು ರಾಜ್ಯ ಅಬಕಾರಿ ಇಲಾಖೆಗೆ ತಿಳಿಸಿತ್ತು. ಇದನ್ನಾಧರಿಸಿ ಅನುಮತಿ ನೀಡಬೇಕು ಎಂದು ಕೋರಿಕೆ ಸಲ್ಲಿಸಿತ್ತು. ಇದನ್ನು ಪುರಸ್ಕರಿಸಿರುವ ಅಬಕಾರಿ ಇಲಾಖೆಯು ಯಾವ ಮಾನದಂಡ ಮತ್ತು ಯಾವ ಕಾನೂನಿನಡಿಯಲ್ಲಿ ಪರವಾನಿಗೆ ನೀಡಿದೆ ಎಂಬ ಪ್ರಶ್ನೆಗಳು ಕೇಳಿ ಬಂದಿವೆ.

 

ಅಲ್ಲದೇ ಈ ಕಂಪನಿಗೆ ಎಂ-2 ಲೈಸೆನ್ಸ್‌ ಇಲ್ಲದಿರುವುದನ್ನೂ ಮರೆಮಾಚಿರುವ ಅಬಕಾರಿ ಇಲಾಖೆಯು ಕರ್ನಾಟಕ ರಾಜ್ಯದ ಬೊಕ್ಕಸಕ್ಕೆ ಸಂದಾಯವಾಗಬೇಕಿದ್ದ ಹಡಗು ನಿರ್ವಹಣೆ ಶುಲ್ಕ, ಬಂದರು ನಿರ್ವಹಣೆ ಇನ್ನಿತರೆ (wharfage) ಸೇರಿದಂತೆ ಇನ್ನಿತರೆ ಶುಲ್ಕದ ರೂಪದಲ್ಲಿ ಸಂದಾಯವಾಗಬೇಕಿದ್ದ ಕೋಟ್ಯಂತರ ರುಪಾಯಿಯನ್ನೂ ರಾಜ್ಯದ ಬೊಕ್ಕಸದಿಂದ ತಪ್ಪಿಸಿದಂತಾಗಿದೆ.

ಕಾಕಂಬಿ ಹಗರಣ; ಬೊಕ್ಕಸಕ್ಕೆ ನಷ್ಟವಾದರೂ ನಿಯಮ ಉಲ್ಲಂಘಿಸಿ ಮುಂಬೈ ಕಂಪನಿಗೆ ಅನುಮೋದನೆ?

ಅಬಕಾರಿ ಆಯುಕ್ತರ ಕಚೇರಿಯು ಸಲ್ಲಿಸಿದ್ದ ಪ್ರಸ್ತಾವನೆ ಮೇಲೆ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌ ಮತ್ತು ಕಾರ್ಯದರ್ಶಿ ಡಾ ಏಕ್‌ರೂಪ್‌ಕೌರ್‌ ಅವರೂ ಸೇರಿದಂತೆ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಕಂಪನಿಯು ಎಂ 2 ಲೈಸೆನ್ಸ್‌ ಇಲ್ಲದಿರುವ ಅಂಶವನ್ನು ಪ್ರಸ್ತಾವನೆಯಲ್ಲಿನ ಕಡತದಲ್ಲಿ ಎಲ್ಲಿಯೂ ನಮೂದಿಸಿಲ್ಲ ಮತ್ತು ದಾಖಲಿಸಿಲ್ಲ. ಕರಡು ಪತ್ರವನ್ನು ತಯಾರಿಸಿರುವ ಆರ್ಥಿಕ ಇಲಾಖೆಯು ಎಂ 2 ಲೈಸೆನ್ಸ್‌ ಇಲ್ಲದಿರುವುದರ ಕುರಿತು ಇ-ಆಫೀಸ್‌ ಕಡತದಲ್ಲಿ ಎಲ್ಲಿಯೂ ಚರ್ಚೆ ನಡೆಸದಿರುವುದು ಸಂಶಯಗಳಿಗೆ ಕಾರಣವಾಗಿದೆ.

 

ಪ್ರಸ್ತುತ ಮೇ 2022ರ ಅಂತ್ಯಕ್ಕೆ ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳಲ್ಲಿ ಒಟ್ಟು 7,65,694 ಮೆಟ್ರಿಕ್‌ ಟನ್‌ ಕಾಕಂಬಿ ದಾಸ್ತಾನು ಇದೆ. ಈಗಾಗಲೇ ಮೈಸೂರು ಮರ್ಕಂಟೈಲ್‌ ಕಂಪನಿಗೆ 3 ಲಕ್ಷ ಮೆಟ್ರಿಕ್‌ ಟನ್‌, ಚೆನ್ನೈನ ಇಂಕೋಲಾ (ಎಕ್ಸ್‌ಪೋರ್ಟ್ಸ್‌ ಲಿ)ಗೆ 1 ಲಕ್ಷ ಮೆಟ್ರಿಕ್‌ ಟನ್‌ ಹೀಗೆ ಒಟ್ಟು 4 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ರಫ್ತು ಮಾಡಲು ಅನುಮತಿ ನೀಡಿದೆ. ಇನ್ನು 3,65,694 ಮೆಟ್ರಿಕ್‌ ಟನ್‌ ಕಾಕಂಬಿ ದಾಸ್ತಾನು ಬಾಕಿ ಇದೆ. ಇದರಲ್ಲಿ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ಮುಂಬೈನ ಕೆ ಎನ್‌ ರಿಸೋರ್ಸ್‌ ಪ್ರೈ ಲಿಮಿಟೆಡ್‌ಗೆ ರಫ್ತು ಮಾಡಲು 2022ರ ನವಂಬರ್‌ 3ರಂದೇ ಅನುಮತಿ ನೀಡಿ ನಿರ್ದೇಶನ ನೀಡಿದೆ. ಇದನ್ನು ಸಚಿವ ಗೋಪಾಲಯ್ಯ ಅವರು ಅನುಮೋದಿಸಿದ್ದಾರೆ.

 

ಅಬಕಾರಿ ಆಯುಕ್ತರು 2022ರ ಅಕ್ಟೋಬರ್‌ 1ರಂದು ಸಲ್ಲಿಸಿದ್ದ ಶಿಫಾರಸ್ಸಿನಲ್ಲಿ 2022ರ ಮೇ 31ರ ಅಂತ್ಯದಲ್ಲಿದ್ದ ಕಾಕಂಬಿ ಶೇಖರಣೆ ವರದಿಯನ್ನಿರಿಸಿದ್ದಾರೆ. ಪ್ರತಿ ವರ್ಷ ಏಪ್ರಿಲ್‌ ತಿಂಗಳಿನಿಂದ ಅಕ್ಟೋಬರ್‌ ತಿಂಗಳವರೆಗೂ ಕಬ್ಬು ಇಲ್ಲದ (NON-CRUSHING) ಅವಧಿಯಾಗಿದೆ. ಸೆಪ್ಟಂಬರ್‌ ತಿಂಗಳವರೆಗಿನ ಕಾಕಂಬಿ ಶೇಖರಣೆ ವರದಿಯನ್ನು ಕಡತದಲ್ಲಿ ಇರಿಸಿಲ್ಲ. ಬದಲಿಗೆ 6 ತಿಂಗಳ ಹಿಂದಿನ ಕಾಕಂಬಿ ಶೇಖರಣೆ ವರದಿಯನ್ನು ಅಬಕಾರಿ ಆಯುಕ್ತರು ಸಲ್ಲಿಸುವ ಮೂಲಕ ಸರ್ಕಾರವನ್ನೇ ದಾರಿತಪ್ಪಿಸಿದೆ ಎಂಬ ಆರೋಪಕ್ಕೂ ಗುರಿಯಾಗಿದ್ದಾರೆ.

the fil favicon

SUPPORT THE FILE

Latest News

Related Posts