ಪುಸ್ತಕ ಖರೀದಿ; 30 ಪೈಸೆಯಂತೆ ಅನುದಾನ ಒದಗಿಸಲು ಶಕ್ತವಾಗಿಲ್ಲವೆಂದ ಸರ್ಕಾರ

photo credit;thenewindianexpress

ಬೆಂಗಳೂರು; ಸಗಟು ಪುಸ್ತಕ ಖರೀದಿ ಯೋಜನೆಯಡಿಯಲ್ಲಿ ಪ್ರತಿ ಪುಟಕ್ಕೆ 30 ಪೈಸೆಯ ದರದಲ್ಲಿ ಪುಸ್ತಕಗಳನ್ನು ಖರೀದಿಸುತ್ತಿರುವುದಕ್ಕೆ ತಕರಾರು ಎತ್ತಿರುವ ಆರ್ಥಿಕ ಇಲಾಖೆಯು ಸದ್ಯದ ದರದಲ್ಲಿಯೇ ಪುಸ್ತಕಗಳ ಖರೀದಿಗೆ ಅನುದಾನ ಒದಗಿಸಲು ಶಕ್ತವಾಗಿಲ್ಲ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸಿರುವುದು ಇದೀಗ ಬಹಿರಂಗವಾಗಿದೆ.

 

ಹಂಚಿಕೆ ಮಾಡಿರುವ ಅನುದಾನಕ್ಕಿಂತಲೂ ಹೆಚ್ಚಿನ ಮೊತ್ತದಲ್ಲಿ ಪುಸ್ತಕಗಳನ್ನು ಖರೀದಿಸುತ್ತಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಡೆಗೆ ಆರ್ಥಿಕ ಇಲಾಖೆಯು ಆಕ್ಷೇಪ ಎತ್ತಿದೆ. ಹಾಗೆಯೇ ಒದಗಿಸುವ ಅನುದಾನದೊಳಗೇ ಪುಸ್ತಕ ಖರೀದಿಸಲು ಇಲಾಖೆಗೆ ನಿರ್ಬಂಧ ಹೇರಬೇಕು ಎಂದು ಅಭಿಪ್ರಾಯಿಸಿದೆ.

 

ಪುಸ್ತಕ ಖರೀದಿಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗೆ ಆರ್ಥಿಕ ಇಲಾಖೆಯು 2022ರ ಡಿಸೆಂಬರ್‌ 13ರಂದು ಅಭಿಪ್ರಾಯಿಸಿದೆ. (N0; FD 483 EXP-8/2022, EP89 LIB 2021, EP 39 LIB 2022) ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಗಟು ಪುಸ್ತಕ ಖರೀದಿಗೆ ಪ್ರತಿವರ್ಷ ಆಯವ್ಯಯದಲ್ಲಿ 25 ಕೋಟಿ ಅನುದಾನ ಮೀಸಲಿಡಬೇಕು ಮತ್ತು ಮುದ್ರಣ ವೆಚ್ಚ ದುಬಾರಿಯಾಗಿರುವುದರಿಂದ ಪುಟಕ್ಕೆ 30 ಪೈಸೆ ಹೆಚ್ಚಿಸಬೇಕು ಎಂದು ಕರ್ನಾಟಕ ಪ್ರಕಾಶಕರ ಸಂಘವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಬೆನ್ನಲ್ಲೇ ಆರ್ಥಿಕ ಇಲಾಖೆಯು ಎತ್ತಿರುವ ಆಕ್ಷೇಪವು ಮುನ್ನೆಲೆಗೆ ಬಂದಿದೆ. ಆರ್ಥಿಕ ಇಲಾಖೆಯು ನೀಡಿರುವ ಅಭಿಪ್ರಾಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸಹ ಅನುಮೋದಿಸಿದ್ದಾರೆ.

 

ಸದ್ಯದ ದರದಲ್ಲಿ ಪುಸ್ತಕಗಳನ್ನು ಖರೀದಿಸಲು ಅನುದಾನ ಒದಗಿಸಲು ಶಕ್ತವಾಗಿಲ್ಲ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸಿರುವ ಆರ್ಥಿಕ ಇಲಾಖೆಯು ಪ್ರತಿ ಪುಟಕ್ಕೆ 30 ಪೈಸೆಯಂತೆ ಪುಸ್ತಕ ಖರೀದಿಸುತ್ತಿರುವುದು ದೊಡ್ಡಮಟ್ಟದ ಆರ್ಥಿಕ ಪರಿಣಾಮಗಳಿಗೆ ಕಾರಣವಾಗುತ್ತಿದೆ ಎಂದೂ ಹೇಳಿರುವುದು ಲಭ್ಯವಿರುವ ಅಭಿಪ್ರಾಯ ಪ್ರತಿಯಿಂದ ತಿಳಿದು ಬಂದಿದೆ.

 

‘ರಾಜ್ಯದಲ್ಲಿ ಈಗಾಗಲೇ ಬಹುತೇಕ ಗ್ರಂಥಾಲಯಗಳನ್ನು ಡಿಜಲೀಟಿಕರಣಗೊಳಿಸಲಾಗಿದೆ. ಓದುಗರು ಎಲ್ಲಿ ಬೇಕಾದರೂ ಪುಸ್ತಕಗಳನ್ನು ಓದಬಹುದಾಗಿದೆ. ಹೀಗಾಗಿ ಪುಸ್ತಕ ಖರೀದಿಗೆ ಆಯವ್ಯಯದಲ್ಲಿ ಒದಗಿಸಿರುವ ಅನುದಾನದ ಮಿತಿಯೊಳಗೇ ಪುಸ್ತಕ ಖರೀದಿಸಲು ನಿರ್ಬಂಧಿಸಬೇಕು. ಈಗಾಗಲೇ ಆಯವ್ಯಯದಲ್ಲಿ ಒದಗಿಸಿರುವ ಅನುದಾನವನ್ನು ಬಳಸಿಕೊಂಡು ಬಾಕಿ ಇರುವ ಮೊತ್ತವನ್ನು ಬಿಡುಗಡೆ ಮಾಡಬೇಕು,’ ಎಂದು ಆರ್ಥಿಕ ಇಲಾಖೆಯು ತನ್ನ ಅಭಿಪ್ರಾಯವನ್ನು ತಿಳಿಸಿರುವುದು ಗೊತ್ತಾಗಿದೆ.

 

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಗಟು ಪುಸ್ತಕ ಖರೀದಿ ಯೋಜನೆಯಡಿಯಲ್ಲಿ ಪ್ರತಿ ವರ್ಷ 3,700ರಿಂದ 4 ಸಾವಿರ ಶೀರ್ಷಿಕೆಗಳನ್ನು ಖರೀದಿಸುತ್ತಿದೆ. 2019ನೇ ಸಾಲಿನಲ್ಲಿ ಆಯ್ಕೆಯಾದ  3,704 ಪುಸ್ತಕಗಳನ್ನು ತಲಾ 300 ಪ್ರತಿಗಳಂತೆ ಖರೀದಿಸಿ, ಅರ್ಧದಷ್ಟು ಅಂದರೆ 8 ಕೋಟಿ ಪಾವತಿಸಿದೆ. ಏಪ್ರಿಲ್ 2022ರಲ್ಲಿ ಖರೀದಿಸಿದ ಪುಸ್ತಕಗಳ 8.40 ಕೋಟಿ ಬಾಕಿ ಉಳಿಸಿಕೊಂಡಿದೆ.

 

ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಬಿಡುಗಡೆ ಮಾಡಲು ಕೈಚೆಲ್ಲಿರುವ ಆರ್ಥಿಕ ಇಲಾಖೆಯು, ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ 2020-21ರಲ್ಲಿ ಪುಸ್ತಕ ಖರೀದಿಸಲು ಒದಗಿಸಿದ್ದ 5 ಕೋಟಿ ರು.ಗಳ ಮಿತಿಯನ್ನು ದಾಟಿ ಒಟ್ಟು 17.31 ಕೋಟಿ ರು. ಮೊತ್ತದಲ್ಲಿ ಪುಸ್ತಕಗಳನ್ನು ಖರೀದಿಸಿದೆ. ಆದರೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪುಸ್ತಕ ಖರೀದಿಸಲು 7 ಕೋಟಿ ರು.ಗಳನ್ನು ಹಂಚಿಕೆ ಮಾಡಿದೆ ಎಂದು ತನ್ನ ಅಭಿಪ್ರಾಯದಲ್ಲಿ ವಿವರಿಸಿದೆ.

 

ಗ್ರಂಥಾಲಯಗಳ ಹೆಸರಿನಲ್ಲಿ ಪ್ರತಿವರ್ಷ ನೂರಾರು ಕೋಟಿ ರೂಪಾಯಿ ಕರ ಸಂಗ್ರಹಿಸುವ ಸರ್ಕಾರ, ಏಕಗವಾಕ್ಷಿ ಯೋಜನೆಯಡಿ ಖರೀದಿಸಲಾದ 2018ನೇ ಸಾಲಿನ ಪುಸ್ತಕಗಳ ಪೂರ್ಣ ಮೊತ್ತವನ್ನು ಇನ್ನೂ ಪಾವತಿಸಿಲ್ಲ. 2019ನೇ ಸಾಲಿನ ಪುಸ್ತಕಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಅನುದಾನ ಬಿಡುಗಡೆ ಮಾಡಿಲ್ಲ.

 

ರಾಜ್ಯದಲ್ಲಿ ಸುಮಾರು 500 ಪ್ರಕಾಶನ ಸಂಸ್ಥೆಗಳಿವೆ. ಕೆಲವು ಲೇಖಕರು ಕೂಡ ಪ್ರಕಾಶನ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರತಿ ವರ್ಷ ಸುಮಾರು 8 ಸಾವಿರ ಪುಸ್ತಕಗಳು ಪ್ರಕಟವಾಗುತ್ತಿವೆ. ಬಹುತೇಕ ಪ್ರಕಾಶಕರು ಗ್ರಂಥಾಲಯ ಇಲಾಖೆಯ ಸಗಟು ಖರೀದಿಯನ್ನೇ ಅವಲಂಬಿಸಿದ್ದಾರೆ. ‌ಏಕಗವಾಕ್ಷಿ ಯೋಜನೆಯಡಿ ಆಯ್ಕೆಯಾದ ಪ್ರತಿ ಶೀರ್ಷಿಕೆಯ 300 ಪ್ರತಿಗಳನ್ನು ಇಲಾಖೆಯು ಖರೀದಿಸಲಿದೆ. ಇದಕ್ಕಾಗಿ ಪ್ರತಿವರ್ಷ 15 ಕೋಟಿ ವೆಚ್ಚ ಮಾಡಲಾಗುತ್ತಿದೆ.

 

2018ನೇ ಸಾಲಿನ ಪುಸ್ತಕಗಳ ಖರೀದಿ ಪ್ರಕ್ರಿಯೆ ಪೂರ್ಣಗೊಂಡು ವರ್ಷ ಕಳೆದಿದೆ. ಆದರೆ, ಇಲಾಖೆಯು ಅರ್ಧದಷ್ಟು ಹಣ ಮಾತ್ರ ಪಾವತಿಸಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂಬ ಕಾರಣಕ್ಕೆ ಪ್ರಕಾಶಕರಿಗೆ 7.88 ಕೋಟಿ ಬಾಕಿ ಉಳಿಸಿಕೊಂಡಿದೆ. 2019ನೇ ಸಾಲಿನ ಪುಸ್ತಕಗಳ ಖರೀದಿಯೂ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ. ಪುಸ್ತಕಗಳ ಖರೀದಿಗೆ ಅಗತ್ಯವಿರುವ 15 ಕೋಟಿ ರುಪಾಯಿ ಅನುದಾನಕ್ಕೆ ಅನುಮೋದನೆ ದೊರೆತಿಲ್ಲ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts