ಬೆಂಗಳೂರು; ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯದ ಕೋರ್ಸ್‌ಗಳ ನಿರ್ವಹಣೆಗೆ ನೇಮಿಸಿಕೊಂಡಿದ್ದ ತಾತ್ಕಾಲಿಕ ಉಪನ್ಯಾಸಕರು, ಸಿಬ್ಬಂದಿ ಮತ್ತಿತರರಿಗೆ ನೀಡಬೇಕಿರುವ ಬಾಕಿ ಮೊತ್ತವನ್ನು ಬಿಡುಗಡೆಗೊಳಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರವು ತಿರಸ್ಕರಿಸಿದೆ.
ಬಾಕಿ ವೇತನ ಬಿಡುಗಡೆಗೊಳಿಸುವ ಪ್ರಸ್ತಾವನೆ ತಿರಸ್ಕರಿಸಲು ರಾಜ್ಯ ಸರ್ಕಾರದ ಅನುಮೋದನೆಯಿಲ್ಲದೆಯೇ ತಾತ್ಕಾಲಿಕ ಉಪನ್ಯಾಸಕರನ್ನು ನೇಮಿಸಿಕೊಂಡಿರುವುದೇ ಮೂಲ ಕಾರಣ. ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ 2022ರ ನವೆಂಬರ್ 30ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಶಿಷ್ಯವೇತನ ಸೇರಿದಂತೆ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಅಹೋರಾತ್ರಿ ಪ್ರತಿಭಟನೆ ನಡುವೆಯೇ ಬಾಕಿ ಮೊತ್ತವನ್ನು ಬಿಡುಗಡೆಗೊಳಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರವು ತಿರಸ್ಕರಿಸಿರುವುದು ಮುನ್ನೆಲೆಗೆ ಬಂದಿದೆ.
ಕನ್ನಡ ವಿಶ್ವವಿದ್ಯಾಲಯದಲ್ಲಿನ ತಾತ್ಕಾಲಿಕ ಸಿಬ್ಬಂದಿ ಮತ್ತು ಕಾರ್ಮಿಕರಿಗೆ 2021ರ ಏಪ್ರಿಲ್‌ನಿಂದ ಮಾರ್ಚ್ 2022ರವರೆಗಿನ ಬಾಕಿ ವೇತನ ಪಾವತಿಸಲು ಅನುದಾನವನ್ನು ಕೋರಿ ಹಂಪಿ ಕನ್ನಡ ವಿಶ್ವವಿದ್ಯಾಲಯವು 2022ರ ಜುಲೈ 20ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಒಪ್ಪಿರಲಿಲ್ಲ.
ಮಂಜೂರಾಗಿದ್ದ ವೃಂದ ಬಲಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಹಲವು ವರ್ಷಗಳಿಂದಲೂ ತಾತ್ಕಾಲಿಕ ನೌಕರರನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ನೇಮಿಸಿಕೊಳ್ಳಲಾಗಿದೆ. ಇದೊಂದು ವಿಶೇಷ ಪ್ರಕರಣವೆಂದು ಹೇಳಲಾಗಿದ್ದರೂ ಅನುಮೋದನೆ ಇಲ್ಲದೆಯೇ ನೇಮಿಸಿಕೊಂಡಿರುವ ತಾತ್ಕಾಲಿಕ ನೌಕರರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ಎಂದು ಸರ್ಕಾರವು (ED 145 UNE 2021 DATED 06-04-2021) ಸೂಚಿಸಿತ್ತು. ಆದರೆ ವಿಶ್ವವಿದ್ಯಾಲಯವು ಈ ಎಲ್ಲಾ ನೌಕರರನ್ನು ಮುಂದುವರೆಸುವ ಮೂಲಕ ಅಶಿಸ್ತನ್ನು ಪ್ರೋತ್ಸಾಹಿಸಿದೆ ಎಂದು ಆರ್ಥಿಕ ಇಲಾಖೆಯು ಹೊರಡಿಸಿದ್ದ ಟಿಪ್ಪಣಿ (ED 679 ವೆಚ್ಚ-8/2022 ದಿನಾಂಕ 25-11-2022)ಯನ್ನು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಆರ್ಥಿಕ ಪರಿಣಾಮಗಳಿದ್ದರೂ ವಿಶ್ವವಿದ್ಯಾಲಯಗಳು ಮಂಜೂರಾಗಿರುವ ವೃಂದ ಬಲಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿವೆ. ಈ ನೇಮಕಾತಿಗಳಿಗೆ ಆಡಳಿತ ಇಲಾಖೆ ಮತ್ತು ಆರ್ಥಿಕ ಇಲಾಖೆ ಹಾಗೂ ಸರ್ಕಾರದ ಅನುಮೋದನೆಯನ್ನೂ ಪಡೆದುಕೊಳ್ಳುತ್ತಿಲ್ಲ. ತಮ್ಮ ಹಂತದಲ್ಲೇ ನೇಮಕ ಮಾಡಿಕೊಳ್ಳುವ ಉದ್ಯೋಗಿಗಳಿಗೆ ಆಂತರಿಕ ಸಂಪನ್ಮೂಲದಿಂದಲೇ ವೇತನ, ಪಿಂಚಣಿಯನ್ನು ಭರಿಸಬೇಕು. ಅನುಮೋದನೆಯಿಲ್ಲದೆಯೇ ನೇಮಕ ಮಾಡಿಕೊಂಡು ಆ ನಂತರ ವೇತನ, ಪಿಂಚಣಿಗೆ ಅನುದಾನ ಕೋರುವ ಮೂಲಕ ಸರ್ಕಾರದ ಮೇಲೆ ಹೊರೆ ಹೊರಿಸುತ್ತಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.
ವಿಶ್ವವಿದ್ಯಾಲಯಗಳಲ್ಲಿ ಖಾಯಂ ಆಗಿ ನೇಮಕಗೊಂಡಿರುವವರಿಗಷ್ಟೇ ವೇತನ, ಪಿಂಚಣಿಯನ್ನು ರಾಜ್ಯ ಸರ್ಕಾರವು ಭರಿಸುತ್ತದೆ. ಅತಿಥಿ ಉಪನ್ಯಾಸಕರೂ ಮತ್ತು ತಾತ್ಕಾಲಿಕ ಸಿಬ್ಬಂದಿ ನೇಮಕ ಮಾಡಿಕೊಳ್ಳುತ್ತಿರುವ ವಿಶ್ವವಿದ್ಯಾಲಯಗಳು ತಮ್ಮದೇ ಆಂತರಿಕ ಸಂಪನ್ಮೂಲದಿಂದ ವೇತನ ಮತ್ತು ಪಿಂಚಣಿ ಮೊತ್ತವನ್ನು ಪಾವತಿಸಬೇಕು ಮತ್ತು ಇದು ವಿಶ್ವವಿದ್ಯಾಲಯಗಳ ಜವಾಬ್ದಾರಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೇ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮುಖ್ಯಮಂತ್ರಿ ಅವರ ವಿವೇಚನಾ ನಿಧಿಯಡಿ ಹಂಪಿ ವಿಶ್ವವಿದ್ಯಾಲಯದ ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು 20 ಕೋಟಿ ರು.ಗಳ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಇದರಲ್ಲಿ ತಾತ್ಕಾಲಿಕ ಬೋಧಕ ಸಿಬ್ಬಂದಿಗಳ 14 ತಿಂಗಳ ಮತ್ತು ಬೋಧಕೇತರ ಸಿಬ್ಬಂದಿಗಳ 9 ತಿಂಗಳ ಬಾಕಿ ಇರುವ ವೇತನ ಒಟ್ಟು 251.72 ಲಕ್ಷ ಹಾಗೂ ವಿ ವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ಬಾಕಿ ಇರುವ ಮಾಸಿಕ ಆರ್ಥಿಕ ನೆರವಿನ ಮೊತ್ತ 1189.61 ಲಕ್ಷ ಹಾಗೂ ಲ್ಯಾಪ್ ಟಾಪ್ ಖರೀದಿಗೆ 117.00 ಲಕ್ಷ ರು.ಗಳನ್ನು ಅನುಮತಿ ನೀಡಲು ವಿಶ್ವವಿದ್ಯಾಲಯವು ಕೋರಿತ್ತು ಎಂದು ಗೊತ್ತಾಗಿದೆ.
ಈ ಪೈಕಿ ತಾತ್ಕಾಲಿಕ ಬೋಧಕ ಸಿಬ್ಬಂದಿಗಳ 14 ತಿಂಗಳ ಮತ್ತು ಬೋಧಕೇತರ ಸಿಬ್ಬಂದಿಯ 9 ತಿಂಗಳ ಬಾಕಿ ಇರುವ 251.72 ಲಕ್ಷ ರು., ಪ ಜಾತಿ ಮತ್ತು ಪ ಪಂಗಡ ಸಂಶೋಧನಾ ವಿದ್ಯಾರ್ಥಿಗಳಿಗೆ ಬಾಕಿ ಇರುವ 1189.61 ಲಕ್ಷ ರು. , ಲ್ಯಾಪ್ ಟಾಪ್ ಖರೀದಿಗೆ 117.00 ಲಕ್ಷ ರು. ಸೇರಿದಂತೆ ಒಟ್ಟು 15.58 ಕೋಟಿ ರು.ಗಳನ್ನು ನೀಡಲು 2022ರ ನವೆಂಬರ್ 21ರಂದು ಆದೇಶ ಹೊರಡಿಸಿದೆ.