ಅಂಬೇಡ್ಕರ್‌ ಭವನಕ್ಕೆ ಮಂಜೂರಾಗದ 8 ಗುಂಟೆ ಜಾಗ, ಕೇಂದ್ರ ಸಚಿವರ ಪತ್ರಕ್ಕೂ ಕಿಮ್ಮತ್ತಿಲ್ಲ

photo credit; oneindiateleugu

ಬೆಂಗಳೂರು; ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಹಾನಗಲ್‌ ಗ್ರಾಮದಲ್ಲಿ ಹೆದ್ದಾರಿ ರಸ್ತೆ ವಿಸ್ತೀರ್ಣಕ್ಕಾಗಿ ಡಾ ಬಿ ಆರ್‌ ಅಂಬೇಡ್ಕರ್‌ ಭವನವನ್ನು ನೆಲಸಮಗೊಳಿಸಿರುವ ಕಾರಣ ಪರ್ಯಾಯ ಜಾಗವನ್ನು ಮಂಜೂರು ಮಾಡಬೇಕು ಎಂದು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಸಚಿವ ಎ ನಾರಾಯಣಸ್ವಾಮಿ ಅವರು ಕಂದಾಯ ಇಲಾಖೆ ಮತ್ತು ಜಿಲ್ಲಾಧಿಕಾರಿಗೆ ಪತ್ರ ಬರೆದು ವರ್ಷ ಕಳೆದರೂ ಇದುವರೆಗೂ ಪರ್ಯಾಯ ಜಾಗವನ್ನು ಮಂಜೂರು ಮಾಡಿಲ್ಲ.

 

ಅಲ್ಲದೇ ತಹಶೀಲ್ದಾರ್‌, ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಯು ಕಂದಾಯ ಇಲಾಖೆಗೆ ಸಲ್ಲಿಸಿರುವ ವರದಿ ಮತ್ತು ಪ್ರಸ್ತಾವನೆಯಲ್ಲಿ ಹಾನಗಲ್‌ ಗ್ರಾಮದಲ್ಲಿ ಜಾನುವಾರು ಸಂಖ್ಯೆಗಳನ್ನು ಕೃತಕವಾಗಿ ಹೆಚ್ಚಿಸಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಜಾಗ ದೊರಕದಂತೆ ಸಂಚು ಹೂಡಿರುವುದು ಇದೀಗ ಬಹಿರಂಗವಾಗಿದೆ.

 

ಪರಿಶಿಷ್ಟ ವರ್ಗಗಳ ಸಚಿವರೂ ಆಗಿರುವ ಬಿ ಶ್ರೀರಾಮುಲು ಅವರು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದರೂ ಸಹ ಕಳೆದೊಂದು ವರ್ಷದಿಂದಲೂ ಅಂಬೇಡ್ಕರ್‌ ಭವನ ನಿರ್ಮಾಣ ಮಾಡಲು ಕಂದಾಯ ಇಲಾಖೆಯು ಪರ್ಯಾಯ ಜಾಗವನ್ನು ನೀಡದಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ‘ದಿ ಫೈಲ್‌’ಗೆ ಸಮಗ್ರ ದಾಖಲೆಗಳು ಲಭ್ಯವಾಗಿವೆ.

 

ಆದರೆ ಸಂಘ ಪರಿವಾರದ ಅಂಗಸಂಸ್ಥೆಯಾಗಿರುವ ರಾಷ್ಟ್ರೋತ್ಥಾನ ಪರಿಷತ್,‌ ವಿದ್ಯಾಕೇಂದ್ರ ಮತ್ತು ಜನಸೇವಾ ಟ್ರಸ್ಟ್‌ಗಳಿಗೆ ಹತ್ತಾರು ಎಕರೆ ವಿಸ್ತೀರ್ಣದ ಗೋಮಾಳವನ್ನು ಮಂಜೂರು ಮಾಡುವ ಉದ್ದೇಶದಿಂದ ರಾಜ್ಯ ಬಿಜೆಪಿ ಸರ್ಕಾರವು ಗೋಮಾಳ ಶೀರ್ಷಿಕೆಯಿಂದಲೇ ತಗ್ಗಿಸುತ್ತಲೇ ಬಂದಿದೆ.

ರಾಷ್ಟ್ರೋತ್ಥಾನ ಪರಿಷತ್‌, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್‌’ನ 13 ವರದಿಗಳು

ಮೊಳಕಾಲ್ಮೂರು ತಾಲೂಕಿನ ಹಾನಗಲ್‌ 0-08 ಗುಂಟೆ ಜಮೀನನ್ನು ಡಾ ಬಿ ಆರ್‌ ಅಂಬೇಡ್ಕರ್‌ ಭವನ ಮತ್ತು ಗ್ರಂಥಾಲಯ ಕಟ್ಟಡ ನಿರ್ಮಾಣದ ಉದ್ದೇಶಕ್ಕಾಗಿ ಮೀಸಲಿರಿಸಿ ಮಂಜೂರು ಮಾಡಿಕೊಡಬೇಕು ಎಂದು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಸಚಿವ ಎ ನಾರಾಯಣಸ್ವಾಮಿ ಅವರು 2021ರ ನವೆಂಬರ್‌ 29ರಂದು ಚಿತ್ರದುರ್ಗ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.

 

ಕೇಂದ್ರ ಸಚಿವರ ಪತ್ರದಲ್ಲೇನಿದೆ?

 

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು ಕಸಬಾ ಹೋಬಳಿ ಹಾನಗಲ್‌ ಗ್ರಾಮದಲ್ಲಿದ್ದ ಡಾ ಬಿ ಆರ್‌ ಅಂಬೇಡ್ಕರ್‌ ಭವನವನ್ನು ರಾಷ್ಟ್ರೀಯ ಹೆದ್ದಾರಿ 150 (ಎ) ನಿರ್ಮಾಣಕ್ಕಾಗಿ ರಸ್ತೆ ವಿಸ್ತರಣೆ ವೇಳೆಯಲ್ಲಿ ನೆಲಸಮ ಮಾಡಲಾಗಿತ್ತು. ಇದರಿಂದ ಪರಿಶಿಷ್ಟ ಜಾತಿಯ ಸಾರ್ವಜನಿಕರಿಗೆ ಸಭೆ, ಸಮಾರಂಭ ನಡೆಸಲು ತೊಂದರೆಯಾಗಿತ್ತು. ಈ ಗ್ರಾಮದಲ್ಲಿ ಹೊಸದಾಗಿ ಡಾ ಬಿ ಆರ್‌ ಅಂಬೇಡ್ಕರ್‌ ಭವನ ಹಾಗೂ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕಾಗಿ ಗ್ರಾಮದ ಸರ್ವೆ ನಂಬರ್‌ 121/1ರಲ್ಲಿ 0-16 ಗುಂಟೆ ಸರ್ಕಾರಿ ಬಂಜರು ಜಮೀನಿನ ಪೈಕಿ 0-08 ಗುಂಟೆ ಜಮೀನನ್ನು ಮಂಜೂರು ಮಾಡಿಕೊಡಬೆಕು ಎಂದು ಡಾ ಬಿ ಆರ್‌ ಅಂಬೇಡ್ಕರ್‌ ಯುವಶಕ್ತಿ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಈ ಹಿಂದೆ ತಹಶೀಲ್ದಾರ್‌, ಅವರಿಗೆ ಮನವಿ ನೀಡಿದ್ದರು ಎಂದು ಎ ನಾರಾಯಣಸ್ವಾಮಿ ಅವರು ಪತ್ರದಲ್ಲಿ ವಿವರಿಸಿದ್ದರು.

 

ಈ ಪತ್ರವನ್ನಾಧರಿಸಿ ಚಿತ್ರದುರ್ಗ ಜಿಲ್ಲಾಧಿಕಾರಿ ಅವರು 0-08 ಗುಂಟೆ ಜಮೀನನ್ನು ಡಾ ಅಂಬೇಡ್ಕರ್‌ ಸಮುದಾಯ ಭವನ ಮತ್ತು ಗ್ರಂಥಾಲಯ ನಿರ್ಮಾಣ ಉದ್ದೇಶಕ್ಕಾಗಿ ಜಮೀನು ಮಂಜೂರು ಮಾಡಬೇಕು ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2022ರ ಮೇ 18ರಂದು ಪತ್ರ ಬರೆದಿದ್ದರು.

 

ಡಿ ಸಿ ಪತ್ರದಲ್ಲೇನಿದೆ?

 

‘ಹಾನಗಲ್‌ ಗ್ರಾಮದಲ್ಲಿ ನಮೂನೆ 2ರಂತೆ 2.00 ಎಕರೆ ವಿಸ್ತೀರ್ಣದಲ್ಲಿ ಗೋಮಾಳವಿದೆ. ಹಾಗೂ 1534.00 ಎಕರೆ ಸರ್ಕಾರಿ ಖರಾಬು ಜಮೀನಿದೆ. ಪಶು ಸಂಗೋಪನಾ ಇಲಾಖೆಯುವರು ನೀಡಿರುವ ವರದಿಯಂತೆ ಹಾನಗಲ್‌ ಗ್ರಾಮದಲ್ಲಿ 5,127 ಜಾನುವಾರುಗಳಿವೆ. ಪ್ರತಿ 100 ಎಕರೆಗೆ 30 ಎಕರೆಯಂತೆ ಜಮೀನು ಕಾಯ್ದಿರಿಸಬೇಕಾಗಿದ್ದು ಸದರಿ ಗ್ರಾಮದಲ್ಲಿ ಜಾನುವಾರುಗಳಿಗೆ ಅನುಗುಣವಾಗಿ ಕಡಿಮೆ ಗೋಮಾಳವಿರುವುದಾಗಿ ಇದೆ,’ ಎಂದು ಜಿಲ್ಲಾಧಿಕಾರಿ ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

 

ಹೀಗಾಗಿ ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(4) ರಡಿ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ ಹಾನಗಲ್‌ ಗ್ರಾಮದ ಸರ್ವೇ ನಂಬರ್‌ 121/1ರಲ್ಲಿ 0-08 ಗುಂಟೆ ಜಮೀನನ್ನು ಅಂಬೇಡ್ಕರ್‌ ಸಮುದಾಯ ಭವನ ಮತ್ತು ಗ್ರಂಥಾಲಯ ನಿರ್ಮಾಣ ಉದ್ದೇಶಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಗೆ ಮಂಜೂರು ಮಾಡಬೇಕು ಎಂದು ದಾಖಲಾತಿಗಳನ್ನು ಸಲ್ಲಿಸಿದ್ದರು.

 

ಜಾನುವಾರುಗಳ ಸಂಖ್ಯೆ ಸೃಷ್ಟಿಸಿದರೇ ಜಿಲ್ಲಾಧಿಕಾರಿ?

 

ಜಿಲ್ಲಾಧಿಕಾರಿಯು ಕಂದಾಯ ಇಲಾಖೆಗೆ ಬರೆದಿರುವ ಪತ್ರದಲ್ಲಿ ಹಾನಗಲ್‌ ಗ್ರಾಮದಲ್ಲಿ 5,127 ಜಾನುವಾರುಗಳಿವೆ ಎಂದು ಉಲ್ಲೇಖಿಸಿದ್ದಾರೆ. ಅದರೆ ಕೇಂದ್ರ ಸಾಮಾಜಿಕ ನ್ಯಾಯ ಸಚಿವ ಎ ನಾರಾಯಣಸ್ವಾಮಿ ಅವರು ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದ ಪ್ರಕಾರ ಹಾನಗಲ್‌ ಗ್ರಾಮದಲ್ಲಿ 5,127 ಜಾನುವಾರುಗಳೇ ಇಲ್ಲ. ವಾಸ್ತವದಲ್ಲಿ 50-100 ಜಾನುವಾರುಗಳು ಮಾತ್ರ ಇವೆ. ಗ್ರಾಮದಲ್ಲಿ ಇಲ್ಲದೇ ಇರುವ ಜಾನುವಾರುಗಳನ್ನು ಸೃಷ್ಟಿಸಿರುವ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ ಅಂಬೇಡ್ಕರ್‌ ಭವನ ಮತ್ತು ಗ್ರಂಥಾಲಯ ನಿರ್ಮಾಣಕ್ಕೆ ಜಾಗ ಕೊಡದಂತೆ ಪರೋಕ್ಷವಾಗಿ ಜಾನುವಾರುಗಳ ಸಂಖ್ಯೆಯನ್ನು ಕೃತಕವಾಗಿ ಹೆಚ್ಚಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ವಿಶೇಷವೆಂದರೆ ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಹುರುಳಿಚಿಕ್ಕನಹಳ್ಳಿ ಮತ್ತು ತಾವರೆಕೆರೆ ಹೋಬಳಿಯಲ್ಲಿ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಗೋಮಾಳ ವಿಸ್ತೀರ್ಣ ಕಡಿಮೆ ಇದ್ದರೂ ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಜನಸೇವಾ ಟ್ರಸ್ಟ್‌ಗೆ ಹತ್ತಾರು ಎಕರೆ ಗೋಮಾಳವನ್ನು ಈಗಾಗಲೇ ಮಂಜೂರು ಮಾಡಲಾಗಿದೆ.

the fil favicon

SUPPORT THE FILE

Latest News

Related Posts