600 ಕೋಟಿ ಅಕ್ರಮ; ಕೃಷ್ಣಭಾಗ್ಯ ಜಲನಿಗಮ ಎಂಡಿ ಸೇರಿ ಹಲವರ ವಿರುದ್ಧ ದೂರು

photo credit;deccanheralad

ಬೆಂಗಳೂರು; ಬಾಗಲಕೋಟೆ ನಗರ ಅಭಿವೃದ್ಧಿ ಪ್ರಾಧಿಕಾರ ಮತ್ತು ಬಸವನಬಾಗೇವಾಡಿ ವಿಭಾಗದ ಹೊರ್ತಿ ಶ್ರೀ ರೇವಣಸಿದ್ದೇಶ್ವರ ಏತನೀರಾವರಿ ಯೋಜನೆಯ ಮುಖ್ಯಸ್ಥಾವರದ ಪ್ಯಾಕೇಜ್‌ ಕಾಮಗಾರಿ ಮೊತ್ತವನ್ನು ಪರಿಷ್ಕರಿಸಿ 600 ಕೋಟಿ ರುಗೆ ಏರಿಕೆ ಮಾಡಿರುವುದರ ಹಿಂದೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.

 

ಈ ಎರಡೂ ಪ್ರಕರಣಗಳ ಸಂಬಂಧ ಕೊಪ್ಪಳ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಮುಕುಂದರಾವ್‌ ಭವಾನಿ ಮಠ ಅವರು ಲೋಕಾಯುಕ್ತ ಸಂಸ್ಥೆಗೆ ಪ್ರತ್ಯೇಕವಾಗಿ ಎರಡು ದೂರುಗಳನ್ನು ದಾಖಲಿಸಿದ್ದಾರೆ. ಈ ದೂರಿನ ಪ್ರತಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿ ಮೊತ್ತವನ್ನು 23 ಸಾವಿರ ಕೋಟಿ ರು.ಗೆ ಏರಿಕೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಕೃಷ್ಣಭಾಗ್ಯ ಜಲನಿಗಮದ ವ್ಯಾಪ್ತಿಯಲ್ಲಿನ ಕಾಮಗಾರಿಗಳಲ್ಲೂ ಮೊದಲ ಅಂದಾಜು ಪತ್ರಿಕೆಯಲ್ಲಿದ್ದ ಮೊತ್ತವನ್ನು ಊಹೆಗೂ ನಿಲುಕದ ರೀತಿಯಲ್ಲಿ ಏರಿಕೆ ಮಾಡಿರುವುದು ಮುನ್ನೆಲೆಗೆ ಬಂದಿದೆ.

 

ಅಲ್ಲದೇ ಈ ಯೋಜನೆಗಳ ಅನುಷ್ಠಾನಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ಮುನ್ನವೇ ಕೆಬಿಜೆಎನ್‌ಎಲ್‌ನ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್‌ ಅವರು ಬೇನಾಮಿಯಾಗಿ 100 ಎಕರೆಯನ್ನು ಖರೀದಿಸಿ ಆ ನಂತರ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಮಾರಾಟ ಮಾಡಿದ್ದಾರೆ ಎಂದು ಮುಕುಂದರಾವ್‌ ಭವಾನಿಮಠ ಅವರು ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರಿನಲ್ಲಿ ವಿವರಿಸಿದ್ದಾರೆ.

 

ಮೊದಲ ದೂರಿನಲ್ಲೇನಿದೆ?

 

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಿಂದ ರಸ್ತೆ ನಿರ್ಮಾಣ, ನೀರು ಸರಬರಾಜು, ಜಲಾಶಯಗಳ ನೀರು ಸರಬರಾಜು ನಿರ್ವಹಣೆ, ವಿದ್ಯುತ್‌ ಸಂಪರ್ಕ, ನವನಗರದಲ್ಲಿ ಗಿಡ ನೆಡುವುದು ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ ಅಂದಾಜು 1,300 ಕೋಟಿ ರು. ಮೊತ್ತದಲ್ಲಿ ಅಂದಾಜು ಪತ್ರಿಕೆ ತಯಾರಿಸಲಾಗಿತ್ತು. ಆ ನಂತರ ಕಾಮಗಾರಿಗಳ ಅಂದಾಜು ಮೊತ್ತವನ್ನು 2,868 ಕೋಟಿ ರು.ಗೆ ಏರಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿರುವ ನಿರ್ದೇಶಕರ ಮಂಡಳಿ ಸಭೆಯಲ್ಲಿ 2022ರ ಡಿಸೆಂಬರ್‌ 5ರಂದು ಅನುಮೋದನೆಯನ್ನೂ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

ಈ ಪ್ರಕ್ರಿಯೆಯಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಾಹಕ ಇಂಜನಿಯರ್‌ ಕಲ್ಲೂರ ಮಠ, ಮುಖ್ಯ ಇಂಜನಿಯರ್‌ ಮನ್ಮಥಯ್ಯ ಸ್ವಾಮಿ, ಕೆಬಿಜೆಎನ್‌ಎಲ್‌ನ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿನ ತಾಂತ್ರಿಕ ಸಹಾಯಕ ಶಿವ ಮಾದಯ್ಯ, ವೀರಬಾಬು, ತಾಂತ್ರಿಕ ನಿರ್ದೇಶಕ ಬಿ ಕೆ ರಾಜೇಂದ್ರ, ಕೆಬಿಜೆಎನ್‌ಎಲ್‌ನ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಕುಮಾರ್‌, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಸಿದ್ದಗಂಗಪ್ಪ ಅವರು ಗುತ್ತಿಗೆದಾರರ ಸಂಸ್ಥೆಯೊಂದಿಗೆ ಅಕ್ರಮವಾಗಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ.

 

ಈ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆಯಲ್ಲಿ ಕರ್ನಾಟಕ ಪಾರದರ್ಶಕಗಳ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ 1999ರ ನಿಯಮಗಳನ್ನು ಉಲ್ಲಂಘಿಸಿ ಪ್ಯಾಕೇಜ್‌ ಟೆಂಡರ್‌ ಮಾಡುವ ಮೂಲಕ ಅಕ್ರಮ ನಡೆದಿದೆ ಎಂದೂ ದೂರಿನಲ್ಲಿ ಆಪಾದಿಸಿರುವ ಮುಕುಂದರಾವ್‌ ಭವಾನಿಮಠ ಅವರು ‘ಈ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವುದಕ್ಕಾಗಿ ಬಿಟಿಡಿಎನಿಂದ ಸುಮಾರು 100 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಭೂಮಿಗಳನ್ನು ಕೆಬಿಜೆಎನ್‌ಎಲ್‌ನ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್‌ ಅವರು ಬೇನಾಮಿಯಾಗಿ ರೈತರಿಂದ ಕಡಿಮೆ ಮೊತ್ತಕ್ಕೆ ಖರೀದಿಸಿ ಬಿಟಿಡಿಎಗೆ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ,’ ಎಂದು ಗುರುತರವಾದ ಆರೋಪ ಹೊರಿಸಿದ್ದಾರೆ.

 

ಈ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲಾ 8 ಅಧಿಕಾರಿಗಳನ್ನು ಸುಳ್ಳು ಪತ್ತೆ ಪರೀಕ್ಷೆ ನಡೆಸಲು ಮಂಪರು ಪರೀಕ್ಷೆಗೆ ಒಳಪಡಸಿದರೆ ಸಾವಿರಾರು ಕೋಟಿ ರು. ಅಕ್ರಮ ವ್ಯವಹಾರಗಳು ಮತ್ತು ಇದರಲ್ಲಿ ಭಾಗಿಯಾಗಿರುವ ಅಧಿಕಾರಸ್ಥ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಪಾತ್ರವಿರುವುದು ಬಹಿರಂಗವಾಗುತ್ತದೆ ತಕ್ಷಣವೇ ಈ ಎಲ್ಲಾ ಅಕ್ರಮಗಳನ್ನು ತನಿಖೆಗೊಳಪಡಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

 

ಎರಡನೇ ದೂರಿನಲ್ಲೇನಿದೆ?

 

ಕೃಷ್ಣಭಾಗ್ಯ ಜಲನಿಗಮ ವ್ಯಾಪ್ತಿಯ ಬಸವನಬಾಗೇವಾಡಿ ವಿಭಾಗದಲ್ಲಿನ ಹೊರ್ತಿ ಶ್ರೀ ರೇವಣಸಿದ್ದೇಶ್ವರ ಏತನೀರಾವರಿ ಯೋಜನೆಯ ಮುಖ್ಯಸ್ಥಾವರದ ಪ್ಯಾಕೇಜ್‌ ಕಾಮಗಾರಿಗೆ (ಹಂತ-1) ಸುಮಾರು 25 ಕಿ ಮೀ ಪೈಪ್‌ಲೈನ್‌ ಕಾಮಗಾರಿಗಾಗಿ ಈ ಮೊದಲು 415 ಕೋಟಿ ರು.ಗೆ ಅಂದಾಜು ಪತ್ರಿಕೆ ತಯಾರಿಸಲಾಗಿತ್ತು. ಆ ನಂತರ ಈ ಮೊತ್ತವನ್ನು 815 ಕೋಟಿ ರು.ಗೆ ಏರಿಕೆ ಮಾಡಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಭವಾನಿಮಠ ಅವರು ದೂರಿನಲ್ಲಿ ವಿವರಿಸಿದ್ದಾರೆ.

 

ಕೆಬಿಜೆಎನ್‌ಎಲ್‌ ಕಾರ್ಯನಿರ್ವಾಹಕ ಇಂಜಿನಿಯರ್‌ ಬಸವರಾಜ ದೊಡ್ಡಮನಿ, ಕೆಬಿಜೆಎನ್‌ಎಲ್‌ನ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್‌ ಮತ್ತಿತರರು ಸೇರಿಕೊಂಡು 400 ಕೋಟಿ ರು.ನಲ್ಲಿ ಪೂರ್ಣಗೊಳ್ಳುವ ಕಾಮಗಾರಿಗೆ 815 ಕೋಟಿ ರು. ಅಂದಾಜು ಪತ್ರಿಕೆ ತಯಾರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

the fil favicon

SUPPORT THE FILE

Latest News

Related Posts