ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ವೈನ್‌ಶಾಪ್ (ಸಿಎಲ್2), ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್9) ಹಾಗೂ ಇಂಡಿಪೆಂಡೆಂಟ್ ರಿಟೇಲ್ ವೆಂಡರ್ ಬಿಯರ್(ಆರ್‌ವಿಬಿ) ಪಬ್ ತೆರೆಯುವುದಕ್ಕೆ ಪರವಾನಗಿ ನೀಡಲು ಸದ್ದಿಲ್ಲದೇ ತಯಾರಿ ನಡೆಸುತ್ತಿರುವ ರಾಜ್ಯ ಸರ್ಕಾರವು ಹೊಸ ಪರವಾನಗಿ ನೀಡುವ ಉದ್ದೇಶದಿಂದ ‘ಅಬಕಾರಿ ನೀತಿ’ಗೆ ತಿದ್ದುಪಡಿ ತರಲು ಮುಂದಾಗಿದೆ.
ದೆಹಲಿ ಸರ್ಕಾರದಲ್ಲಿ ಅಬಕಾರಿ ನೀತಿ ಹಗರಣ ಮತ್ತು ಇದಕ್ಕೆ ಪೂರಕವಾಗಿಯೇ ಹಣ ಅಕ್ರಮ ವರ್ಗಾವಣೆಯಾಗಿದೆ ಎಂಬ ಆರೋಪಕ್ಕೆ ಜಾರಿ ನಿರ್ದೇಶನಾಲಯವು(ಇ.ಡಿ) ಮೊದಲ ದೋಷಾರೋಪ ಪಟ್ಟಿ ಸಲ್ಲಿಸಿರುವ ಬೆನ್ನಲ್ಲೇ ಕರ್ನಾಟಕದಲ್ಲಿಯೂ ಅಬಕಾರಿ ನೀತಿಗೆ ತರಲಿರುವ ತಿದ್ದುಪಡಿಯತ್ತ ಹಲವು ಅನುಮಾನಗಳು ವ್ಯಕ್ತವಾಗಿವೆ.
ಹೊಸದಾಗಿ ವೈನ್‌ಶಾಪ್‌ಗಳಿಗೆ ಪರವಾನಿಗೆ ನೀಡುವ ಉದ್ದೇಶದಿಂದಲೇ ಅಬಕಾರಿ ನೀತಿಗೆ ತಿದ್ದುಪಡಿ ತರಲು ನಿವೃತ್ತ ಐಎಎಸ್ ಅಧಿಕಾರಿ ಯಶವಂತಕುಮಾರ್ ಎಂಬುವರ ನೇತೃತ್ತದಲ್ಲಿ ಸಮಿತಿ ರಚನೆಯಾಗಿದೆ. ಈಗಾಗಲೇ ಸಮಿತಿಯು ಕರಡು ನಿಯಮಾವಳಿಗಳನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಇದಿನ್ನೂ ಅಂತಿಮಗೊಂಡಿಲ್ಲ. ಈ ನಡುವೆಯೇ ಸಮಿತಿಯಲ್ಲಿ ಇರುವ ಕೆಲ ಅಧಿಕಾರಿಗಳು ತಮಗೆ ಬೇಕಾದ ತಿದ್ದುಪಡಿ ಮಾಡುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ.
ಹೊಸ ಮದ್ಯದಂಗಡಿಗಳನ್ನು ಆರಂಭಿಸಲು ಲೈಸೆನ್ಸ್ ನೀಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಆದ್ದರಿಂದ ಲೈಸೆನ್ಸ್ ಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸಚಿವ ಕೆ ಗೋಪಾಲಯ್ಯ ಅವರು ಸ್ಪಷ್ಟೀಕರಣ ನೀಡಿರುವ ಮಧ್ಯೆಯೇ ಅಬಕಾರಿ ನೀತಿಗೆ ತಿದ್ದುಪಡಿ ಮಾಡಲು ಹೊರಟಿರುವುದು ಸಂಶಯಕ್ಕೆ ದಾರಿಮಾಡಿಕೊಟ್ಟಿದೆ.
ರಾಜ್ಯದಲ್ಲಿ ಒಟ್ಟು 3,618 ಬಾರ್ ಆ್ಯಂಡ್ ರೆಸ್ಟೋರೆಂಟ್ ಮದ್ಯದಂಗಡಿಗಳಿವೆ. ಇದರಲ್ಲಿಯೂ ಕೋಟಾ ಉಲ್ಲಂಘನೆಯಾಗಿದೆ ಎಂಬ ದೂರುಗಳನ್ನೇ ನೆಪಮಾಡಿಕೊಂಡು ಹೊಸದಾಗಿ ಸಿಎಲ್9 ತೆರೆಯಲು ಪರವಾನಗಿ ನೀಡಲು ಸರ್ಕಾರ ಗಂಭೀರ ಚಿಂತಿಸಿದೆ ಎಂದು ಗೊತ್ತಾಗಿದೆ. ಕೋಟಾದಡಿ ಬಾಕಿ ಉಳಿದಿರುವ ಲೈಸೆನ್ಸ್ ನೀಡಲು ಏನು ಮಾಡಬೇಕು? ಯಾವೆಲ್ಲ ಕ್ರಮ ಕೈಗೊಳ್ಳಬೇಕು, ಏನೇನು ತಿದ್ದುಪಡಿ ಮಾಡಬೇಕು ಎಂದು ಎದುರಾಗುವ ಸಮಸ್ಯೆಗಳ ಬಗೆಹರಿಸುವುದು ಹೇಗೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಸದ್ಯ 12,113 ಮದ್ಯದಂಗಡಿಗಳಿವೆ. ವೈನ್‌ಶಾಪ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಹೊರತುಪಡಿಸಿ ಸಿಎಲ್7,ಕ್ಲಬ್ (ಸಿಎಲ್4), ಸ್ಟಾರ್ ಹೋಟೆಲ್(ಸಿಎಲ್6ಎ),ಮಿಲಿಟರಿ ಕ್ಯಾಂಟಿನ್ (ಸಿಎಲ್8) ಹಾಗೂ ಎಂಎಸ್‌ಐಎಲ್ (11ಸಿ) ಸೇರಿ ಇತರ ಮಾದರಿ ಮದ್ಯದಂಗಡಿ ತೆರೆಯಲು ಪರವಾನಗಿ ನೀಡಲಾಗುತ್ತಿದೆ.
ಎಂಎಸ್‌ಐಎಲ್ ಮದ್ಯದಂಗಡಿ ತೆರೆಯುವುದಕ್ಕೆ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿ.ಗೆ (ಎಂಎಸ್‌ಐಎಲ್) ಸರ್ಕಾರವೇ ಅನುಮತಿ ಕೊಟ್ಟಿದೆ. ಹಾಗಾಗಿ, ಎಂಎಸ್‌ಐಎಲ್ ವತಿಯಿಂದ ರಾಜ್ಯಾದ್ಯಂತ ಈಗಾಗಲೇ 1,001 ಮದ್ಯದಂಗಡಿ ತೆರೆಯಲಾಗಿದೆ. ಆದರೆ, ಹೊಸ ಸಿಎಲ್2 ಹಾಗೂ ಸಿಎಲ್9 ಮದ್ಯದಂಗಡಿ ತೆರೆಯಲು ಪರವಾನಗಿ ನೀಡುವುದನ್ನು 1992-93ರಲ್ಲಿ ಹಾಗೂ ಇಂಡಿಪೆಂಡೆಂಟ್ ಪಬ್‌ಗೆ ಪರವನಾಗಿ ನೀಡುವುದನ್ನು 15 ವರ್ಷ ಹಿಂದೆಯೇ ಸ್ಥಗಿತಗೊಳಿಸಲಾಗಿತ್ತು.
ಅಂದಿನಿಂದ ಇಂದಿನವರೆಗೆ ಇವುಗಳಿಗೆ ಯಾವುದೇ ಪರವಾನಗಿ ನೀಡಲಾಗುತ್ತಿಲ್ಲ. ಆದರೆ, ಈಗ ಇವುಗಳಿಗೆ ಪರವಾನಗಿ ನೀಡುವಂತೆ ಸರ್ಕಾರ ಮಟ್ಟದಲ್ಲಿ ಅಬಕಾರಿ ಉದ್ಯಮಿಗಳು ಲಾಬಿ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ.
ಹೊಸ ಸಿಎಲ್ 2 ಲೈಸೆನ್ಸ್ ನೀಡಿಕೆ
ರಾಜ್ಯದಲ್ಲಿ 3,974 ವೈನ್‌ಶಾಪ್‌ಗಳಿವೆ. ಅಬಕಾರಿ ಇಲಾಖೆ ನಿಯಮ 12ರಂತೆ ರಾಜ್ಯದ ಪ್ರತಿ ತಾಲೂಕು ಹಾಗೂ ನಗರದ ಪ್ರದೇಶಕ್ಕೆ 7,500 ಜನಕ್ಕೆ ಒಂದು ಸಿಎಲ್2 ಹಾಗೂ 3,500 ಜನಕ್ಕೆ ಹೆಚ್ಚುವರಿ ಸನ್ನದು ನಿಗದಿಪಡಿಸಲಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ 15 ಸಾವಿರ ಮಂದಿಗೆ ಒಂದು ಸಿಎಲ್2 ಹಾಗೂ 7500 ಜನಕ್ಕೆ ಹೆಚ್ಚುವರಿ ಒಂದು ಸನ್ನದು ನಿಗದಿಯಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ 1987ರಲ್ಲಿ ನಿಯಮ 12ರಂತೆ ಅಂದಿನ ಸರ್ಕಾರವು, ಎಲ್ಲ ತಾಲೂಕಿನಲ್ಲಿ ಕೋಟಾ ನಿಗದಿಪಡಿಸಿತ್ತು.
ನಿಯಮ 12ರಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಿಎಲ್2 ಹೆಚ್ಚುವರಿ ಸನ್ನದು ನಿಗದಿಯಂತೆ ಒಟ್ಟು 385 ಸಿಎಲ್ ಶಾಪ್ ಮಂಜೂರು ಮಾಡಲಾಗಿತ್ತು. ಆದರೆ, 1994ರಲ್ಲಿ ಹೆಚ್ಚುವರಿ ನೀಡಲಾಗಿದ್ದ ವೈನ್ ಶಾಪ್‌ಗಳನ್ನು ರದ್ದುಪಡಿಸುವಂತೆ ರಾಜ್ಯ ಸರ್ಕಾರ ಮತ್ತು ಹೈಕೋರ್ಟ್ ಆದೇಶಿತ್ತು. ಆದರೆ, ಸರ್ಕಾರ ಹಾಗೂ ಹೈಕೋರ್ಟ್ ಹೊರಡಿಸಿದ್ದ ಆದೇಶಗಳನ್ನು ಅಬಕಾರಿ ಇಲಾಖೆಯು ಕಸದ ಬುಟ್ಟಿಗೆ ಎಸೆದಿದೆ.
ಬೆಂಗಳೂರು 289, ರಾಮನಗರ 10, ಕೊಡಗು 49, ಹಾಸನ 28, ಧಾರವಾಡ 7 ಹಾಗೂ ಚಿಕ್ಕಮಗಳೂರು 2 ಸೇರಿ ಒಟ್ಟು 385 ಸಿಎಲ್2 ವೈನ್ ಶಾಪ್ ಕೋಟಾ ಉಲ್ಲಂಸಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿವೆ. ಇವುಗಳನ್ನು ಸಕ್ರಮಗೊಳಿಸಲು ಅಥವಾ ಹೆಚ್ಚುವರಿಯಾಗಿ ನಗರ ಪ್ರದೇಶದಲ್ಲಿ ನೀಡಲಾಗಿದ್ದ ಸಿಎಲ್2 ಶಾಪ್‌ಗಳನ್ನು ರದ್ದುಪಡಿಸಿ ಕೋಟಾದಂತೆ ಬಾಕಿ ಉಳಿದ 258 ಸಿಎಲ್2 ಶಾಪ್‌ಗಳ ಭರ್ತಿ ಮಾಡುವುದಕ್ಕೆ ಲೈಸೆನ್ಸ್ ನೀಡುವಂತೆ ಕೆಲವರು ಭಾರೀ ಲಾಬಿ ನಡೆಸುತ್ತಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳು ಇಲಾಖೆಯಲ್ಲಿ ಶುರುವಾಗಿದೆ.
ಇಂಡಿಪೆಂಡೆಂಟ್ ಪಬ್ ಲೈಸನ್ಸ್
ರಾಜ್ಯದಲ್ಲಿ 65 ಇಂಡಿಪೆಂಡೆಂಟ್, 625 ಅಟ್ಯಾಚ್ಡು ಸೇರಿ ಒಟ್ಟು 690 ಪಬ್‌ಗಳಿವೆ. ಮದ್ಯದಂಗಡಿ ಹೊಂದಿರುವ ಮಾಲೀಕರಿಗೆ ಮಾತ್ರ ಅಟ್ಯಾಚ್ಡು ಪಬ್ ತೆರೆಯುವುದಕ್ಕೆ ಸದ್ಯ ಲೈಸೆನ್ಸ್ ನೀಡಲಾಗುತ್ತದೆ. ಆದರೆ ಇಂಡಿಪೆಂಡೆಂಟ್ ಪಬ್ ತೆರೆಯಲು 15 ವರ್ಷಗಳ ಹಿಂದೆ ಲೈಸೆನ್ಸ್ ಕೊಡುವುದನ್ನು ಸರ್ಕಾರ ನಿಲ್ಲಿಸಿತ್ತು.
ಈಗ ಇಂಡಿಪೆಂಡೆಂಟ್ ಪಬ್‌ಗೆ ಪರವಾನಗಿ ನೀಡುವುದಕ್ಕೆ ‘ಅಬಕಾರಿ ನೀತಿ’ಯನ್ನೇ ತಿದ್ದುಪಡಿ ಮಾಡುವುದಕ್ಕೆ ಇಲಾಖೆ ಮುಂದಾಗಿದೆ. ಎಷ್ಟು ಪಬ್ ನೀಡಬೇಕೆಂಬುದು ನಿಗದಿಗೊಳಿಸದೆ ಸಾವಿರಾರು ಪಬ್‌ಗಳಿಗೆ ಪರವಾನಗಿ ನೀಡಲು ಇಲಾಖೆ ಆಲೋಚಿಸುತ್ತಿದೆ. ಇದಕ್ಕೆ ಇಲಾಖೆಯ ಕೆಲ ಅಧಿಕಾರಿಗಳು ಕೈಜೋಡಿಸಿದ್ದಾರೆ ಎಂದು ತಿಳಿದು ಬಂದಿದೆ.
1987ರ ಜೂ.30ರಂದು ರಾಜ್ಯದ ಎಲ್ಲ ತಾಲೂಕುಗಳಲ್ಲಿ ನಗರ ಪ್ರದೇಶ(ಎ) ಹಾಗೂ ಗ್ರಾಮೀಣ ಪ್ರದೇಶಕ್ಕೆ (ಬಿ) ಬೇಡಿಕೆ ಅನುಗುಣವಾಗಿ ನಿಗದಿತ ಕೋಟಾಕ್ಕಿಂತ ಹೆಚ್ಚುವರಿ ಸಿಎಲ್ 2 ಮದ್ಯದಂಗಡಿ ಮಂಜೂರು ಮಾಡಲಾಗಿತ್ತು. 1994 ಮಾ.4ರಂದು ಅಬಕಾರಿ ನಿಯಮ 12 ಸಬ್‌ರೂಲ್ (3ಎ) ನಿಗದಿತ ಕೋಟಾಕ್ಕಿಂತ ಹೆಚ್ಚುವರಿ ಮಂಜೂರಾಗಿರುವ ಸಿಎಲ್ ಮದ್ಯದಂಗಡಿ ರದ್ದುಪಡಿಸಲು ಆದೇಶ ಹೊರಡಿಸಿತ್ತು.
1999 ಜೂ.15ರಂದು ನಾಗರಾಜು ವರ್ಸಸ್ ಕರ್ನಾಟಕ ಸರ್ಕಾರ ನಡುವಿನ ಪ್ರಕರಣ ಸಂಬಂಧ ನಿಯಮ 12ರಲ್ಲಿ ಹೆಚ್ಚುವರಿ ಸನ್ನದುಗಳನ್ನು ರದ್ದುಪಡಿಸಲು ಆದೇಶ ಹೊರಡಿಸಿರುವ ಹೈಕೋರ್ಟ್. * 2016 ಜೂ.29ರಂದು ಪ್ರೇಮ್‌ಕುಮಾರ್ ವರ್ಸಸ್ ಕರ್ನಾಟಕ ಸರ್ಕಾರ ನಡುವಿನ ಪ್ರಕರಣ ಸಂಬಂಧ ನಿಯಮ 12ರಲ್ಲಿ ಹೆಚ್ಚವರಿ ಸನ್ನದು ರದ್ದತಿಗೆ ಆದೇಶ ಹೊರಡಿಸಿದ್ದನ್ನು ಸ್ಮರಿಸಬಹುದು.
ಅಬಕಾರಿ ಇಲಾಖೆ ಈವರೆಗೆ 19,244 ಕೋಟಿ ಆದಾಯ ಗಳಿಸಿದ್ದು, ಮಾರ್ಚ್ ವೇಳೆಗೆ ಆ ಮೊತ್ತ 30 ಸಾವಿರ ಕೋಟಿಯನ್ನು ತಲುಪಲಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 16,641 ಕೋಟಿ ಆದಾಯ ಬಂದಿತ್ತು. ಕಳೆದ ವರ್ಷಕ್ಕಿಂತ ಸುಮಾರು 2,603 ಕೋಟಿ ಹೆಚ್ಚು ಆದಾಯ ಬಂದಿದೆ.
ಈ ಸಾಲಿಗೆ 29,000 ಕೋಟಿ ಸಂಗ್ರಹದ ಗುರಿ ನಿಗದಿ ಮಾಡಲಾಗಿತ್ತು. ಆ ಗುರಿಯನ್ನು ಮೀರಿ ಸುಮಾರು 1,000 ಕೋಟಿ ಹೆಚ್ಚುವರಿ ಗಳಿಕೆಯಾಗುವ ನಿರೀಕ್ಷೆ ಇದೆ. ಡಿಸೆಂಬರ್ ಮತ್ತು ಮಾರ್ಚ್‌ನಲ್ಲಿ ಹೆಚ್ಚು ಆದಾಯ ಬರಲಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಸುಮಾರು 10,000 ಕೋಟಿ ಸಂಗ್ರಹವಾಗಲಿದೆ ಎಂದು ಸಚಿವ ಗೋಪಾಲಯ್ಯ ಅವರು ಮಾಹಿತಿ ನೀಡಿದ್ದನ್ನು ಸ್ಮರಿಸಬಹುದು.