ಪತ್ರಕರ್ತರಿಗೆ ದೀಪಾವಳಿ ಗಿಫ್ಟ್‌, ನಗದು ನೀಡಿಕೆ ಪ್ರಕರಣ; ಲೋಕಾಯುಕ್ತಕ್ಕೆ ಸಾಕ್ಷ್ಯ ಒದಗಿಸಿದ ಜೆಎಸ್‌ಪಿ

ಬೆಂಗಳೂರು; ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ್‌ ಪಾಗೋಜಿ ಎಂಬುವರು ಡೆಕ್ಕನ್‌ ಹೆರಾಲ್ಡ್‌ ಮತ್ತು ಪ್ರಜಾವಾಣಿಯ ಪ್ರಧಾನ/ಮುಖ್ಯ ವರದಿಗಾರರಿಬ್ಬರಿಗೆ ದೀಪಾವಳಿ ಹಬ್ಬದ ಸೋಗಿನಲ್ಲಿ ಸ್ವೀಟ್‌ ಬಾಕ್ಸ್‌ನೊಂದಿಗೆ 1 ಲಕ್ಷ ರು.  ನಗದು ನೀಡಿದ್ದಾರೆ ಎಂದು ಆರೋಪಿಸಿ ಒಂದು ತಿಂಗಳ ಹಿಂದೆ ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ದೂರು ನೀಡಿದ್ದ ಜನಾಧಿಕಾರ ಸಂಘರ್ಷ ಪರಿಷತ್‌ ಇದೀಗ ಮತ್ತಷ್ಟು ಬಲವಾದ ಸಾಕ್ಷ್ಯಗಳನ್ನು ಒದಗಿಸಿದೆ.

 

ಲೋಕಾಯುಕ್ತ ಎಸ್‌ಪಿ (5) ವಿವೇಕಾನಂದ ತುಳಸಿಗೇರಿ ಅವರನ್ನು 2022ರ ನವೆಂಬರ್‌ 30ರಂದು  ಭೇಟಿ ಮಾಡಿದ್ದ ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷರಾದ ಆದರ್ಶ ಐಯ್ಯರ್‌, ಪ್ರಕಾಶ್‌ ಬಾಬು, ನೈಜ ಹೋರಾಟಗಾರರ ವೇದಿಕೆಯ ಹೆಚ್ ಎಂ ವೆಂಕಟೇಶ್‌, ಸಾಮಾಜಿಕ ಹೋರಾಟಗಾರ ನರಸಿಂಹಮೂರ್ತಿ ಅವರ ನಿಯೋಗವು, ಪ್ರಜಾವಾಣಿ ಮುಖ್ಯ ವರದಿಗಾರ ವೈ ಗ ಜಗದೀಶ್‌, ಡೆಕ್ಕನ್‌ ಹೆರಾಲ್ಡ್‌ನ ಮುಖ್ಯ ವರದಿಗಾರ ಭರತ್‌ ಜೋಷಿ ಅವರು ವಾಟ್ಸಾಪ್‌ ಗ್ರೂಪ್‌ನಲ್ಲಿ ನೀಡಿದ್ದಾರೆ ಎನ್ನಲಾದ ಸ್ಪಷ್ಟೀಕರಣವನ್ನು ಪುರಾವೆಯನ್ನಾಗಿ ಸಲ್ಲಿಸಿದೆ.

 

ಹಾಗೆಯೇ ಕನ್ನಡ ಪ್ರಭ ಸಂಪಾದಕ ರವಿ ಹೆಗಡೆ ಅವರು ಹಣವನ್ನು ನಿರಾಕರಿಸಿದ್ದಾರೆ ಎಂದು ಪೀಪಲ್‌ ಮೀಡಿಯಾ ಸುದ್ದಿ ಜಾಲತಾಣ ಪ್ರಕಟಿಸಿರುವ ವರದಿಯನ್ನೂ ಲಗತ್ತಿಸಿದೆ. ಜನಾಧಿಕಾರ ಸಂಘರ್ಷ ಪರಿಷತ್‌ ಅಕ್ಟೋಬರ್‌ 28ರಂದು ನೀಡಿದ್ದ ದೂರಿನಲ್ಲಿ ವೈ ಗ ಜಗದೀಶ್‌ ಅವರು ವಾಟ್ಸಾಪ್‌ನಲ್ಲಿ ನೀಡಿದ್ದರು ಎನ್ನಲಾದ ಸ್ಪಷ್ಟೀಕರಣವನ್ನು ಪುರಾವೆಯನ್ನಾಗಿ ಒದಗಿಸಿರಲಿಲ್ಲ. ದೂರು ಸಲ್ಲಿಕೆಯಾಗಿ ಒಂದು ತಿಂಗಳ ನಂತರ ವಾಟ್ಸಾಪ್‌ ಸ್ಪಷ್ಟೀಕರಣವನ್ನು ಲೋಕಾಯುಕ್ತ ಎಸ್ಪಿಗೆ ಒದಗಿಸಿದೆ. ಜನಾಧಿಕಾರ ಸಂಘರ್ಷ ಪರಿಷತ್‌ ಒದಗಿಸಿರುವ  ಸಾಕ್ಷ್ಯವು ಈ ಪ್ರಕರಣಕ್ಕೆ ಮಹತ್ವ ತಂದುಕೊಟ್ಟಂತಾಗಿದೆ.

 

‘ಈ ಸಾಕ್ಷ್ಯಗಳನ್ನಾಧರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ್‌ ಪಾಗೋಜಿ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿ ವಿಚಾರಣೆ ನಡೆಸಬೇಕು,’ ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

 

ಮುಖ್ಯಮಂತ್ರಿ ಕಚೇರಿಯಿಂದ ಪತ್ರಕರ್ತರಿಗೆ ಲಂಚ ನೀಡಲಾಗಿದೆ ಎಂದು ಪೀಪಲ್‌ ಮೀಡಿಯಾ ಜಾಲತಾಣವು ಪ್ರಕಟಿಸಿದ್ದ ವರದಿಯು ಮಾಧ್ಯಮ ಸಂಸ್ಥೆಗಳಲ್ಲಿ ತೀವ್ರ ಸಂಚಲನ ಎಬ್ಬಿಸಿತ್ತು. ಈ ವರದಿಯ ನಂತರ ಲೇಖಕ ರಾಜರಾಂ ತಲ್ಲೂರು ಅವರು ಇದೊಂದು ಚುನಾವಣಾ ಪೂರ್ವ ಭ್ರಷ್ಟಾಚಾರ ಎಂದು ಪರಿಗಣಿಸಬೇಕಲ್ಲದೇ ಲೋಕಾಯುಕ್ತರು ತನಿಖೆ ನಡೆಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಜನಾಧಿಕಾರ ಸಂಘರ್ಷ ಪರಿಷತ್‌ ಕೂಡ ಲೋಕಾಯುಕ್ತರು ಮತ್ತು ಎಡಿಜಿಪಿ ಅವರಿಗೆ ಸಲ್ಲಿಸಿದ್ದ ದೂರು ಮಹತ್ವ ಪಡೆದುಕೊಂಡಿತ್ತು.

 

ದೂರಿನಲ್ಲೇನಿತ್ತು?

 

ರಾಜ್ಯದ ಹಲವಾರು ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವರದಿಗಾರರಿಗೆ ಮುಖ್ಯಮಂತ್ರಿ ಕಚೇರಿಯು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ ಪಾಗೋಜಿ ಅವರ ಮೂಲಕ ನಗದು ಹಣವನ್ನು ನೀಡಲಾಗಿದೆ. ವಿಶ್ವಸನೀಯ ಮೂಲಗಳ ಪ್ರಕಾರ ಡೆಕ್ಕನ್‌ ಹೆರಾಲ್ಡ್‌ನ ಮುಖ್ಯ ವರದಿಗಾರ ಭರತ್‌ ಜೋಷಿ ಅವರಿಗೆ ತಲುಪಿಸಿದ್ದ ಸ್ವೀಟ್‌ ಬಾಕ್ಸ್‌ನಲ್ಲಿಯೇ 1 ಲಕ್ಷ ರು. ನಗದನ್ನು ತಲುಪಿಸಲಾಗಿತ್ತು. ಇದು ಅವರ ಗಮನಕ್ಕೆ ಬಂದ ನಂತರ ಡೆಕ್ಕನ್‌ ಹೆರಾಲ್ಡ್‌ನ ಸಂಪಾದಕರು ಮತ್ತು ಸಿಇಒ ಅವರ ಗಮನಕ್ಕೆ ತಂದು ಅವರ ಸೂಚನೆಯಂತೆ ಹಣವನ್ನು ಹಿಂದಿರುಗಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು.

 

ಅಲ್ಲದೇ ಪ್ರಜಾವಾಣಿಯ ಮುಖ್ಯ ವರದಿಗಾರ ವೈ ಜಿ ಜಗದೀಶ್‌ ಎಂಬುವರಿಗೂ ಹಣ ತಲುಪಿಸಲಾಗಿತ್ತು. ಈ ಬಗ್ಗೆ ಖುದ್ದು ವೈ ಜಿ ಜಗದೀಶ್‌ ಅವರೇ ಹಣ ಪಡೆದಿದ್ದನ್ನು ಖಚಿತಪಡಿಸಿ ಒಪ್ಪಿಕೊಂಡಿದ್ದರು. ಇವರೂ ಸಹ ಸಂಸ್ಥೆಯ ಸಿಇಒ ಮತ್ತು ಸಂಪಾದಕರ ಗಮನಕ್ಕೆ ತಂದು ಹಣವನ್ನು ಹಿಂದಿರುಗಿಸಿದ್ದರು. ಅಲ್ಲದೇ ವೈ ಜಿ ಜಗದೀಶ್‌ ಅವರೇ ಒಪ್ಪಿಕೊಂಡಿರುವಂತೆ ಈ ಸಂಬಂಧ ಮುಖ್ಯಮಂತ್ರಿ ಅವರಿಗೆ ಸಂಸ್ಥೆಯಿಂದ ಖಂಡನಾ ಪತ್ರವನ್ನು ಬರೆಯಲಾಗಿದೆ. ಮತ್ತು ಇದಕ್ಕೆ ಮುಖ್ಯಮಂತ್ರಿ ಅವರು ಕ್ಷಮೆಯನ್ನೂ ಯಾಚಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿತ್ತು.

 

ಮುಖ್ಯಮಂತ್ರಿ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪ, ಕೆಟ್ಟ ಆಡಳಿತದ ಕುರಿತು ಪತ್ರಿಕೆಯಲ್ಲಿ ಪ್ರಕಟಿಸದಂತೆ ಹಣ ನೀಡಲಾಗಿದೆ ಎಂಬುದಕ್ಕೆ ಪುಷ್ಠಿ ನೀಡಿದಂತಾಗಿದೆ. ಮುಖ್ಯಮಂತ್ರಿ ಕಚೇರಿಯೇ ನೇರವಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಲಂಚ ನೀಡಿರುವುದು ಅನೈತಿಕವಾದದ್ದಾಗಿದೆ. ಅಲ್ಲದೇ ಮಾಧ್ಯಮ ಸಂಸ್ಥೆಗಳ ಮೇಲೆ ಪ್ರಭಾವ ಬೀರಿ ಸರ್ಕಾರದ ಪರವಾಗಿ ಇರುವಂತೆ ನೋಡಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು  ಜನಾಧಿಕಾರ ಸಂಘರ್ಷ ಪರಿಷತ್‌  ದೂರಿನಲ್ಲಿ  ತಿಳಿಸಿತ್ತು.

 

‘ಸರ್ಕಾರದ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಹಲವಾರು ದೂರುಗಳನ್ನು ನೀಡಿದ್ದರೂ ಮಾಧ್ಯಮಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ ಮತ್ತು ಪ್ರಶ್ನಿಸುತ್ತಿರಲಿಲ್ಲ. ಮಾಧ್ಯಮಗಳನ್ನು ಸರ್ಕಾರವು ಕೊಳ್ಳುತ್ತಿರುವ ಬಗ್ಗೆ ಬಹುತೇಕ ಜನರಿಗೆ ಅನುಮಾನವಿದೆ. ಈ ಪ್ರಕರಣವು ಆ ಅನುಮಾನವನ್ನು ಸಾಬೀತುಗೊಳಿಸಿದೆ. ಇದು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಮತ್ತು ಸಂವಿಧಾನವನ್ನು ಬುಡಮೇಲು ಮಾಡಲು ಬಿಜೆಪಿಯು ಹುನ್ನಾರ ನಡೆಸುತ್ತಿರುವ ಹಲವಾರು ಪ್ರಯತ್ನಗಳಲ್ಲಿ ಇದು ಕೂಡ ಒಂದಾಗಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದು ತಕ್ಷಣವೇ ಲೋಕಾಯುಕ್ತರು ಈ ದೂರನ್ನಾಧರಿಸಿ ತನಿಖೆ ನಡೆಸಿ ಆಪಾದಿತ ಮುಖ್ಯಮಂತ್ರಿ ಮತ್ತು ಅವರ ಮಾಧ್ಯಮ ಸಂಯೋಜಕರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ 2018ರ ತಿದ್ದುಪಡಿ ಅಧಿನಿಯಮ ಅನ್ವಯ ಕ್ರಮ ಕೈಗೊಳ್ಳಬೇಕು,’ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷ ಆದರ್ಶ ಐಯ್ಯರ್‌ ಅವರು ಒತ್ತಾಯಿಸಿದ್ದಾರೆ.

 

ಮುಖ್ಯಮಂತ್ರಿ ಕಚೇರಿಯು ದೀಪಾವಳಿ ಉಡುಗೊರೆ ಮತ್ತು  ಹಣದ ಆಮಿಷವೊಡ್ಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಮತ್ತು ಸಂಪಾದಕರು ಮಾಧ್ಯಮಗಳ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಖಾಸಗಿಯಾಗಿ ಮಾತನಾಡಿದರೇ ಹೊರತು ಅವರ ಪತ್ರಿಕೆಗಳಲ್ಲಿ ಇದುವರೆಗೂ ಮುಖಪುಟದಲ್ಲಿ ಸುದ್ದಿ ಬರೆಯದಿರುವುದು ಸೋಜಿಗದ ವಿಚಾರ. ಅಲ್ಲದೇ ಅಧಿಕಾರಸ್ಥರು ಆಮಿಷ ಒಡ್ಡಿದಾಗ ಅದರ ಕುರಿತು ಸಾರ್ವಜನಿಕವಾಗಿ ಮಾತನಾಡಿದ್ದರೆ ಒಂದು ಮೇಲ್ಪಂಕ್ತಿ ಎಂದೇ ತಿಳಿಯಲಾಗುತ್ತದೆ.

the fil favicon

SUPPORT THE FILE

Latest News

Related Posts