ಪತ್ರಕರ್ತರಿಗೆ ಲಂಚ; ಸಿಎಂ ಮಾಧ್ಯಮ ಸಲಹೆಗಾರರ ವಾಹನದ ಲಾಗ್‌ ಪುಸ್ತಕದಲ್ಲಿದೆ ಅ.24ರ ರಹಸ್ಯ

ಬೆಂಗಳೂರು;  ದೀಪಾವಳಿ ಉಡುಗೊರೆ ವಿತರಣೆ ಸೋಗಿನಲ್ಲಿ ಸ್ವೀಟ್‌ ಬಾಕ್ಸ್‌ ಮತ್ತು ಲಕ್ಷಾಂತರ ರುಪಾಯಿ ಮೊತ್ತದ ನಗದು ಹಣವನ್ನು   ಪತ್ರಕರ್ತರಿಗೆ ತಲುಪಿಸಲು  ಅಕ್ಟೋಬರ್‌ 24ರಂದು (ಸರ್ಕಾರಿ ರಜೆ)  ಬಳಕೆಯಾಗಿತ್ತು  ಎನ್ನಲಾದ  ಮುಖ್ಯಮಂತ್ರಿಗಳ  ಮಾಧ್ಯಮ ಸಲಹೆಗಾರರಿಗೆ  ಹಂಚಿಕೆಯಾಗಿರುವ ಸರ್ಕಾರಿ  ವಾಹನವು  ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ ಸೇರಿದಂತೆ ವಿವಿಧೆಡೆ  ‘ಮುಖ್ಯಮಂತ್ರಿಗಳ ಕಾರ್ಯನಿಮಿತ್ತ’ ಎಂಬ ಹೆಸರಿನಲ್ಲಿ  ಅಕ್ಟೋಬರ್‌ 24ರಂದೇ  ಸಂಚರಿಸಿತ್ತು  ಎಂಬುದನ್ನು ‘ದಿ ಫೈಲ್‌’ ಇದೀಗ ದಾಖಲೆ ಸಹಿತ ಹೊರಗೆಡವುತ್ತಿದೆ.

 

ಪತ್ರಕರ್ತರಿಗೆ ಸ್ವೀಟ್‌ ಬಾಕ್ಸ್‌  ಮತ್ತು  ಲಕ್ಷಾಂತರ ರುಪಾಯಿ ನಗದು ಮೊತ್ತವನ್ನು ತಲುಪಿಸಿರುವ ಬಗ್ಗೆ ಜನಾಧಿಕಾರ ಸಂಘರ್ಷ ಪರಿಷತ್‌ ಸಲ್ಲಿಸಿದ್ದ ದೂರನ್ನು  ಒಂದು ತಿಂಗಳಾದರೂ ಲೋಕಾಯುಕ್ತ ಪೊಲೀಸರು ಯಾವುದೇ ಕ್ರಮವನ್ನೂ ಕೈಗೊಳ್ಳದೇ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ ಮಾಧ್ಯಮ ಸಲಹೆಗಾರರಿಗೆ ಹಂಚಿಕೆಯಾಗಿರುವ ಸರ್ಕಾರಿ ವಾಹನವು ಮುಖ್ಯಮಂತ್ರಿಗಳ ಕಾರ್ಯನಿಮಿತ್ತ ಎಂಬ ಹೆಸರಿನಲ್ಲಿ  ಕುಮಾರಸ್ವಾಮಿ ಲೇಔಟ್‌ನಲ್ಲಿ  ಸರ್ಕಾರಿ ರಜೆ ದಿನದಂದು ಸಂಚರಿಸಿರುವ ಸಂಬಂಧ ಹೊರಬಿದ್ದಿರುವ ದಾಖಲೆಗಳು ಮಹತ್ವ ಪಡೆದುಕೊಂಡಿದೆ.

 

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಎನ್‌ ಮೋಹನ್‌ ಕೃಷ್ಣ ಅವರಿಗೆ ಅಧಿಕೃತವಾಗಿ ಹಂಚಿಕೆಯಾಗಿರುವ ಸರ್ಕಾರಿ ವಾಹನದ ಸಂಚಾರದ (ಲಾಗ್‌) ಪುಸ್ತಕದ ಹಾಳೆಗಳನ್ನು ‘ದಿ ಫೈಲ್‌’ ಆರ್‌ಟಿಐ ಮೂಲಕ ಪಡೆದುಕೊಂಡಿದೆ.

 

ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರು ಅಕ್ಟೋಬರ್‌ 24ರಂದು ಬೆಳಗಾವಿಯ  ಕಿತ್ತೂರಿನಲ್ಲಿ ಪ್ರವಾಸದಲ್ಲಿದ್ದರೂ   ಅವರ ಮಾಧ್ಯಮ ಸಲಹೆಗಾರ ಎನ್‌ ಮೋಹನ್‌ ಕೃಷ್ಣ ಅವರಿಗೆ ಹಂಚಿಕೆಯಾಗಿರುವ ವಾಹನವು  ‘ಮುಖ್ಯಮಂತ್ರಿಗಳ ಕಾರ್ಯನಿಮಿತ್ತ’ ಎಂದು  ಬೆಂಗಳೂರಿನಲ್ಲಿ  ಸಂಚರಿಸಿತ್ತು ಎಂದು ವಾಹನದ ಲಾಗ್‌ ಪುಸ್ತಕದಲ್ಲಿ ನಮೂದಾಗಿರುವುದು ಪ್ರಕರಣವನ್ನು ಮತ್ತೊಂದು ಮಗ್ಗುಲಿಗೆ ಹೊರಳಿಸಿದಂತಾಗಿದೆ.

 

 

ಉಡುಗೊರೆ ಹಂಚಲು ತಮ್ಮ ವಾಹನವನ್ನು ಕಳಿಸಿಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮೋಹನ್‌ ಕೃಷ್ಣ ಅವರು ಪ್ರತಿಪಾದಿಸಿದ್ದರ ಬೆನ್ನಲ್ಲೇ ಅವರಿಗೆ ಅಧಿಕೃತವಾಗಿ ಹಂಚಿಕೆ ಮಾಡಿದ್ದ ಇನ್ನೋವಾ ಕಾರು (ವಾಹನ ಸಂಖ್ಯೆ ಕೆ ಎ -01 ಜಿ-5898) ಅಕ್ಟೋಬರ್‌ 24ರ ಸರ್ಕಾರಿ ರಜೆ ದಿನದಂದು ಮುಖ್ಯಮಂತ್ರಿ ಅವರ ಕಾರ್ಯನಿಮಿತ್ತವೆಂದು ಬೆಂಗಳೂರು ನಗರದೊಳಗೇ 44 ಕಿ ಮೀ ಸಂಚರಿಸಿತ್ತು ಎಂಬುದು ಲಾಗ್‌ ಪುಸ್ತಕದ ಹಾಳೆಗಳಿಂದ ತಿಳಿದು ಬಂದಿದೆ.

 

 

ಮಾಧ್ಯಮ ಸಲಹೆಗಾರ ಮೋಹನ್‌ ಕೃಷ್ಣ ಅವರಿಗೆ ಹಂಚಿಕೆಯಾಗಿರುವ ಸರ್ಕಾರಿ ವಾಹನವು ಮುಖ್ಯಮಂತ್ರಿಯವರ ಕಾರ್ಯನಿಮಿತ್ತ ಸಂಚರಿಸಿತ್ತು ಎಂದು ಮುಖ್ಯಮಂತ್ರಿಯವರ ಸಚಿವಾಲಯವು ಲಿಖಿತ ಮಾಹಿತಿ ನೀಡಿದೆಯಾದರೂ ಮುಖ್ಯಮಂತ್ರಿಗಳ ಕಾರ್ಯಕ್ರಮದ ವಿವರ ಮತ್ತು ಮಾಧ್ಯಮ ಸಲಹೆಗಾರರು ಬಳಸಿರುವ ಸರ್ಕಾರಿ ವಾಹನದ ಜಿಪಿಎಸ್‌ ಹಾಗೂ  ವಾಹನದಲ್ಲಿ ಪ್ರಯಾಣ ಮಾಡಿದ್ದ ವ್ಯಕ್ತಿಗಳ ಮತ್ತು ಸ್ಥಳದ  ಮಾಹಿತಿಯನ್ನು ಒದಗಿಸಿಲ್ಲ.  ಆದರೆ ಈ ವಾಹನವು ಅಕ್ಟೋಬರ್‌ 24ರಂದು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿ ಸಂಚರಿಸಿತ್ತು ಎಂಬುದನ್ನು ಕೆಆರ್‌ಎಸ್‌ ಪಕ್ಷದ ಕಾರ್ಯಕರ್ತರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದನ್ನು ಸ್ಮರಿಸಬಹುದು.

 

ಮತ್ತೊಂದು ವಿಶೇಷ ಸಂಗತಿ ಎಂದರೆ ಅಕ್ಟೋಬರ್‌ 24ರಂದು ಮುಖ್ಯಮಂತ್ರಿಗಳ ಕಾರ್ಯಕ್ರಮವು ಬೆಂಗಳೂರಿನಲ್ಲಿ ನಿಗದಿಯಾಗಿರಲೇ ಇಲ್ಲ.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಹೆಚ್‌ಎಎಲ್‌ ವಿಮಾನ ನಿಲ್ದಾಣದಿಂದ  ವಿಶೇಷ ವಿಮಾನದ ಮೂಲಕ ಧಾರವಾಡ ಮತ್ತು ಸವದತ್ತಿಗೆ ಅಕ್ಟೋಬರ್‌ 23ರಂದೇ ತೆರಳಿದ್ದರು. ಅಂದು ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಅಕ್ಟೋಬರ್‌ 24ರ ಸೋಮವಾರದಂದು ಕಾಯ್ದಿರಿಸಲಾಗಿತ್ತು. ಸಂಜೆ 5ಕ್ಕೆ ಹುಬ್ಬಳ್ಳಿಯಿಂದ ರಸ್ತೆ ಮೂಲಕ ತೆರಳಿದ್ದ ಬಸವರಾಜ ಬೊಮ್ಮಾಯಿ ಅವರು ಸಂಜೆ 6ಕ್ಕೆ ಬೆಳಗಾವಿ ಜಿಲ್ಲೆಯ ಕಿತ್ತೂರಿಗೆ ತೆರಳಿದ್ದರು ಎಂಬುದು ಅವರ ಪ್ರವಾಸದ ಪಟ್ಟಿಯಿಂದ ತಿಳಿದು ಬಂದಿದೆ.

 

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮೋಹನ್‌ ಕೃಷ್ಣ ಅವರಿಗೆ ಹಂಚಿಕೆಯಾಗಿರುವ ಸರ್ಕಾರಿ ವಾಹನವು ಅಕ್ಟೋಬರ್‌ 24ರಂದು ಮುಖ್ಯಮಂತ್ರಿಗಳ ಕಾರ್ಯನಿಮಿತ್ತವೆಂದು ಬೆಂಗಳೂರು ನಗರದಲ್ಲೇ 44 ಕಿ ಮೀ ಸಂಚರಿಸಿರುವುದು ಲಾಗ್‌ ಪುಸ್ತಕದಲ್ಲಿ ನಮೂದಾಗಿದೆ. ಹೀಗಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರ ವಾಹನವು ಅಕ್ಟೋಬರ್‌ 24ರಂದು ಮುಖ್ಯಮಂತ್ರಿಗಳ ನಿಗದಿತ ಹುಬ್ಬಳ್ಳಿ, ಬೆಳಗಾವಿ ಪ್ರವಾಸಕ್ಕೆ ತೆರಳಿರಲಿಲ್ಲ ಎಂಬುದು ಪ್ರವಾಸದ ಪಟ್ಟಿಯಿಂದ ಮೇಲ್ನೋಟಕ್ಕೆ ಕಂಡು ಬರುತ್ತದೆ.

 

ಹೀಗಾಗಿ ಅಕ್ಟೋಬರ್‌ 24ರ ಸರ್ಕಾರಿ ರಜೆ ದಿನದಂದು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿದ್ದ ಈ ವಾಹನವು ಪತ್ರಕರ್ತರಿಗೆ ಸಿಹಿ ಉಡುಗೊರೆ ಮತ್ತು ನಗದನ್ನು ಹಂಚಲು ಬಳಕೆಯಾಗಿತ್ತು ಎಂಬ ಆರೋಪಗಳನ್ನು ಬಲಪಡಿಸಿದಂತಾಗಿದೆ.

 

‘ಅಕ್ಟೋಬರ್ 24, 2022 ಸರ್ಕಾರಿ ರಜೆ ನಾನು ಆಕಸ್ಮಿಕವಾಗಿ ಕುಮಾರಸ್ವಾಮಿ ಬಡಾವಣೆಯ ಪೈಪ್ಲೈನ್ ರಸ್ತೆಯಲ್ಲಿ ಚಲಿಸುವಾಗ ಸರ್ಕಾರಿ ವಾಹನವು ನಿಂತಿರುವುದು ಕಣ್ಣಿಗೆ ಬಿದ್ದು ಚಾಲಕನಿಗೆ ಪ್ರಶ್ನಿಸಿದ್ದೆ.  ಅದು ಸಿ ಎಂ ಕಾರ್ಯಾಲಯದ ವಾಹನ ಮತ್ತು ದೀಪಾವಳಿಯ ಸಿಹಿ ಹಂಚಿಕೆಗೆ ಬಂದಿರುವುದಾಗಿ ಹೇಳಿರುತ್ತಾರೆ. ಇದನ್ನು ನಾನು ನನ್ನ ಮೊಬೈಲ್ನಲ್ಲಿ ಸೆರೆಹಿಡಿದಿದ್ದೆ.  ಈಗ ವಾಹನದ ಲಾಗ್ ಬುಕ್ ಪ್ರಕಾರ ಅದೇ ದಿನ ಅಂದರೆ ಅಕ್ಟೋಬರ್ 24ರಂದು ಮುಖ್ಯಮಂತ್ರಿಗಳ ಕಾರ್ಯನಿಮಿತ್ತ ಎಂದು ನಮೂದಾಗಿರುವುದು ಚಾಲಕನ ಹೇಳಿಕೆಗೂ ಮತ್ತು ಲಾಗ್ ಪುಸ್ತಕದಲ್ಲಿ ನಮೂದಾಗಿರುವುದರ ನಡುವೆ ಒಂದಕ್ಕೊಂದು  ಸಾಮ್ಯತೆಯಿದೆ. ಮುಖ್ಯಮಂತ್ರಿಗಳ ಮತ್ತು ಮಾಧ್ಯಮ  ಸಲಹೆಗಾರರ ನಿರ್ದೇಶನವಿಲ್ಲದೆ ಈ ವಾಹನ ಬಂದಿರಲಾರದು. ಇದನ್ನು ತನಿಖೆಗೆ ಒಳಪಡಿಸಿದರೆ ಮುಖ್ಯಮಂತ್ರಿಗಳ ಕಾರ್ಯನಿಮಿತ್ತ ಎಂಬುದರ ಹಿಂದಿನ ರಹಸ್ಯ ಹೊರಬರಲಿದೆ,’ ಎನ್ನುತ್ತಾರೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಸುರೇಂದ್ರರಾಜು.

 

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಿಗೆ ಹಂಚಿಕೆಯಾಗಿರುವ ಸರ್ಕಾರಿ ವಾಹನದ ಚಲನವಲನದ ರಿಜಿಸ್ಟರ್‌ನಲ್ಲಿ ಅಕ್ಟೋಬರ್‌ 1, 2022ರಿಂದ ಅಕ್ಟೋಬರ್‌ 31ರವರೆಗೂ ಮುಖ್ಯಮಂತ್ರಿಗಳ ಕಾರ್ಯನಿಮಿತ್ತ ಎಂದೇ ನಮೂದಿಸಲಾಗಿದೆ. ಈ ವಾಹನವು ಅಕ್ಟೋಬರ್‌ 22ರಂದು ಗರಿಷ್ಠ 126 ಕಿ ಮೀ ಸಂಚರಿಸಿದೆ. ಇನ್ನುಳಿದ ದಿನಗಳಲ್ಲಿ 100 ಕಿ ಮೀ ಗಡಿ ದಾಟಿಲ್ಲ.

 

ಕೆಎ-01-ಜಿ-5898 ವಾಹನವು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಪೈಪ್‌ಲೈನ್‌ ರಸ್ತೆಯಲ್ಲಿ ಅಕ್ಟೋಬರ್‌ 24ರಂದು ನಿಂತಿದ್ದ ವೇಳೆಯಲ್ಲಿ ಕರ್ನಾಟಕ ರಾಷ್ಟ್ರಸಮಿತಿಯ ಕಾರ್ಯಕರ್ತರೊಬ್ಬರು ಚಾಲಕನನ್ನು ಪ್ರಶ್ನಿಸಿದ್ದರು. ‘ಮುಖ್ಯಮಂತ್ರಿಯ ಕಾರ್ಯಾಲಯದಿಂದ ಕಳಿಸಲಾಗಿದೆ, ದೀಪಾವಳಿ ಗಿಫ್ಟ್‌ ಕೊಡಲು ಬಂದಿದ್ದೇನೆ’ ಎಂದು ವಾಹನ ಚಾಲಕ ಉತ್ತರಿಸಿದ್ದರು. ಈ ಕುರಿತು ಅಕ್ಟೋಬರ್‌ 31ರಂದು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

 

ಲಂಚ; ಸಿಎಂ ಸಚಿವಾಲಯದ ವಾಹನದಲ್ಲೇ ಪತ್ರಕರ್ತರ ನಿವಾಸಕ್ಕೂ ನಗದು, ಉಡುಗೊರೆ ಸಾಗಿಸಲಾಗಿತ್ತೇ?

ಈ ವಾಹನವು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮೋಹನ್ ಕೃಷ್ಣ ಅವರಿಗೇ ಹಂಚಿಕೆಯಾಗಿತ್ತು ಎಂಬುದನ್ನೂ 2022ರ ನವೆಂಬರ್‌ 1ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

ಉಡುಗೊರೆ ವಿತರಣೆಗೆ ಸಿಎಂ ಮಾಧ್ಯಮ ಸಲಹೆಗಾರರ ಅಧಿಕೃತ ವಾಹನ ಬಳಕೆ; ದಾಖಲೆ ಬಹಿರಂಗ

‘ಈಗ ಆರ್‌ಟಿಐ ಅಡಿ ಲಭ್ಯವಾಗಿರುವ ಮಾಹಿತಿಯಂತೆ ಅಕ್ಟೋಬರ್‌ 24ರಂದು ಸಂಚರಿಸಿದ್ದ ಮಾಧ್ಯಮ ಸಲಹೆಗಾರರ ವಾಹನದ ಲಾಗ್ ಪುಸ್ತಕದಲ್ಲಿ ನಮೂದಾಗಿರುವ ಪ್ರಕಾರ ಸದರಿ ವಾಹನವು ಮುಖ್ಯಮಂತ್ರಿಗಳ ಕಾರ್ಯನಿಮಿತ್ತವಾಗಿಯೇ ಸಂಚರಿಸಿತ್ತು ಎಂದು ನಮೂದಾಗಿರುವುದು ನಾವು ಮಾಡಿರುವ ಆರೋಪಕ್ಕೆ ಪುಷ್ಠಿ ಸಿಕ್ಕಂತಾಗಿದೆ. ಈ ಬೆಳವಣಿಗೆ ಮತ್ತು ಲಾಗ್‌ ಪುಸ್ತಕದಲ್ಲಿ ನಮೂದಾಗಿರುವ ಮಾಹಿತಿಯನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಿದರೇ ದೀಪಾವಳಿ ಉಡುಗೊರೆಯನ್ನು ಪತ್ರಕರ್ತರಿಗೆ ತಲುಪಿಸಲು ಮುಖ್ಯಮಂತ್ರಿ ಅವರ ಸೂಚನೆ, ಕುಮ್ಮಕ್ಕು ಇತ್ತು ಎಂಬುದು ನಿಚ್ಚಳವಾಗಿದೆ. ಆಶ್ಚರ್ಯವೆಂದರೆ ಹೈಕೋರ್ಟ್‌ ತೀರ್ಪಿನ ಮೂಲಕ ಪೊಲೀಸ್‌ ತನಿಖಾಧಿಕಾರವನ್ನು ಹೊಂದಿರುವ ಲೋಕಾಯುಕ್ತ ಪೊಲೀಸರಿಗೆ ಈ ಮಾಹಿತಿಯನ್ನು ಪಡೆದಿಲ್ಲವೇ, ಪಡೆದಿದ್ದ ಪಕ್ಷದಲ್ಲಿ ಪ್ರಮುಖ ಸಾಕ್ಷ್ಯವಾಗಿರುವ ಇದನ್ನಾಧರಿಸಿ ಎಫ್‌ಐಆರ್‌ನ್ನೇಕೆ ದಾಖಲಿಸಿಲ್ಲ,’ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷ ಆದರ್ಶ ಐಯ್ಯರ್‌ ಅವರು ಪ್ರಶ್ನಿಸುತ್ತಾರೆ.

the fil favicon

SUPPORT THE FILE

Latest News

Related Posts