ಪತ್ರಕರ್ತರಿಗೆ ಲಂಚ; ಲೋಕಾಯುಕ್ತ ಪೊಲೀಸ್‌ ಡಿವೈಎಸ್ಪಿಗೆ ವಿಡಿಯೋ ಸಾಕ್ಷ್ಯ, ದಾಖಲೆ ಒದಗಿಸಿದ ಜೆಎಸ್‌ಪಿ

ಬೆಂಗಳೂರು; ಪತ್ರಕರ್ತರಿಗೆ ದೀಪಾವಳಿ ಉಡುಗೊರೆ ಹಂಚಿಕೆ ಮಾಡುವ ಸೋಗಿನಲ್ಲಿ ನಗದು ಹಣವನ್ನಿರಿಸಿದ್ದ ಪ್ರಕರಣವು ವಿವಾದಕ್ಕೀಡಾಗಿರುವ ಬೆನ್ನಲ್ಲೇ ಜನಾಧಿಕಾರ ಸಂಘರ್ಷ ಪರಿಷತ್‌ ಇದೀಗ ಲೋಕಾಯುಕ್ತ ಪೊಲೀಸರಿಗೆ ವಿಡಿಯೋ ಮತ್ತು ದಾಖಲೆಯೊಂದನ್ನು ಹೆಚ್ಚಿನ ಪುರಾವೆಯನ್ನಾಗಿ ಒದಗಿಸಿದೆ.

 

ದೀಪಾವಳಿ ಉಡುಗೊರೆ ಮತ್ತು ನಗದು ಹಂಚಿಕೆ ಮಾಡಲು ಮಾಧ್ಯಮ ಸಲಹೆಗಾರರಿಗೆ ಹಂಚಿಕೆಯಾಗಿದ್ದ ಸರ್ಕಾರಿ ವಾಹನವನ್ನು ಬಳಸಲಾಗಿತ್ತು ಎಂಬುದನ್ನು ಸಾಬೀತುಪಡಿಸುವ ವಿಡಿಯೋ ಮತ್ತು ಬಳಸಿದ್ದ ವಾಹನವು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಿಗೆ ಹಂಚಿಕೆಯಾಗಿತ್ತು ಎಂಬುದಕ್ಕೆ ದಾಖಲೆಯನ್ನೂ ಒದಗಿಸಿದೆ.

 

ಈಗಾಗಲೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾಧಿಕಾರ ಸಂಘರ್ಷ ಪರಿಷತ್‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಧ್ಯಮ ಸಂಯೋಜಕ ಶಂಕರ ಪಾಗೋಜಿ ಎಂಬುವರ ವಿರುದ್ಧ ಲೋಕಾಯುಕ್ತದಲ್ಲಿ ಈಗಾಗಲೇ ದೂರು ದಾಖಲಿಸಿದೆ. ಆದರೂ ಲೋಕಾಯುಕ್ತ ಬಿ ಎಸ್‌ ಪಾಟೀಲ್‌ ಅವರಾಗಲೀ, ಲೋಕಾಯುಕ್ತ ಎಡಿಜಿಪಿ ಪ್ರಶಾಂತಕುಮಾರ್‌ ಠಾಕೂರ್‌ ಆಗಲಿ ಲೋಕಾಯುಕ್ತ ಪೊಲೀಸ್‌ ಬೆಂಗಳೂರು ವಿಭಾಗದ ಡಿವೈಎಸ್ಪಿ ಆಂತೋಣಿ ಎಂಬುವರಿಗೆ ಇದುವರೆಗೂ ಯಾವುದೇ ಮಾಹಿತಿಯನ್ನು ನೀಡಿಲ್ಲ ಮತ್ತು ಚರ್ಚೆಯನ್ನೂ ನಡೆಸಿಲ್ಲ ಎಂದು ಗೊತ್ತಾಗಿದೆ.

 

ಜನಾಧಿಕಾರ ಸಂಘರ್ಷ ಪರಿಷತ್‌ ಹೆಚ್ಚುವರಿ ಸಾಕ್ಷ್ಯ ಒದಗಿಸಿರುವುದು

ದೂರಿನ ಪ್ರಗತಿ ಕುರಿತು ಜನಾಧಿಕಾರ ಸಂಘರ್ಷ ಪರಿಷತ್‌ನ ಆದರ್ಶ ಐಯ್ಯರ್‌ ಮತ್ತು ನೈಜ ಹೋರಾಟಗಾರರ ವೇದಿಕೆಯ ಹೆಚ್‌ ಎಂ ವೆಂಕಟೇಶ್‌, ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ, ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ವೀರೇಶ್‌  ಮತ್ತಿತರ ನಿಯೋಗವು ಉಪ ಲೋಕಾಯುಕ್ತ ಫಣೀಂದ್ರ ಮತ್ತು ಲೋಕಾಯುಕ್ತ ಡಿವೈಎಸ್ಪಿ ಅವರನ್ನು ಭೇಟಿ ಮಾಡಿದಾಗಲೇ ಈ ವಿಚಾರವು ಅವರ ಗಮನಕ್ಕೆ ಬಂದಿದೆ ಎಂಬುದು ತಿಳಿದು ಬಂದಿದೆ.

 

 

‘ಸಾರ್ವಜನಿಕ ವಲಯದಲ್ಲಿ ಅಂದರೆ ಸಾಮಾಜಿಕ ಜಾಲತಾಣದಲ್ಲಿ ಮುಕ್ತವಾಗಿ ಬಹಿರಂಗವಾಗಿರುವ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಿಗೆ ಹಂಚಿಕೆಯಾಗಿದ್ದ ಸರ್ಕಾರಿ ವಾಹನ ಚಾಲಕನ ಹೇಳಿಕೆಯು ಪತ್ರಕರ್ತರಿಗೆ ಲಂಚ ನೀಡಲಾಗಿದೆ ಎಂಬ ಆರೋಪವನ್ನು ಬಲಪಡಿಸಿದೆ. ಈ ವಿಡಿಯೋ ಮತ್ತು ವಾಹನ ಹಂಚಿಕೆಯಾಗಿರುವ ಸರ್ಕಾರದ ಅಧಿಕೃತ ಪತ್ರವನ್ನು ನಾವು ಲೋಕಾಯುಕ್ತ ಪೊಲೀಸ್‌ ಡಿವೈಎಸ್ಪಿಗೆ ಹೆಚ್ಚಿನ ಪುರಾವೆಯನ್ನಾಗಿ ಒದಗಿಸಿದ್ದೇವೆ. ಇನ್ನಾದರೂ ಕುಂಟು ನೆಪ ಹೇಳದೇ ವಿಳಂಬಕ್ಕೆ ಅವಕಾಶ ನೀಡದೇ ತತ್‌ಕ್ಷಣವೇ ಮುಖ್ಯಮಂತ್ರಿ, ಅವರ ಮಾಧ್ಯಮ ಸಲಹೆಗಾರ ಹಾಗೂ ಮಾಧ್ಯಮ ಸಂಯೋಜಕ ಈ ಮೂವರ ವಿರುದ್ಧವೂ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದೇವೆ,’ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ನ ಆದರ್ಶ ಐಯ್ಯರ್‌ ಅವರು ‘ದಿ ಫೈಲ್‌’ಗೆ ಪ್ರತಿಕ್ರಿಯೆ ನೀಡಿದರು.

 

ಉಡುಗೊರೆ ಹಂಚಲು ತಮ್ಮ ವಾಹನವನ್ನು ಕಳಿಸಿಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮೋಹನ್‌ ಕೃಷ್ಣ ಅವರು ಪ್ರತಿಪಾದಿಸಿದ್ದರ ಬೆನ್ನಲ್ಲೇ ಅವರಿಗೆ ಅಧಿಕೃತವಾಗಿ ಹಂಚಿಕೆ ಮಾಡಿದ್ದ ಇನ್ನೋವಾ ಕಾರನ್ನೇ ಇದೇ ಉದ್ದೇಶಕ್ಕೆ ಬಳಸಲಾಗಿತ್ತು ಎಂಬುದನ್ನು ‘ದಿ ಫೈಲ್‌’ ದಾಖಲೆ ಸಹಿತ 2022ರ ನವೆಂಬರ್‌ 1ರಂದೇ  ಬಯಲಿಗೆಳೆದಿತ್ತು.

ಉಡುಗೊರೆ ವಿತರಣೆಗೆ ಸಿಎಂ ಮಾಧ್ಯಮ ಸಲಹೆಗಾರರ ಅಧಿಕೃತ ವಾಹನ ಬಳಕೆ; ದಾಖಲೆ ಬಹಿರಂಗ

ಕೆಎ-01-ಜಿ-5898 ವಾಹನವು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಪೈಪ್‌ಲೈನ್‌ ರಸ್ತೆಯಲ್ಲಿ ನಿಂತಿದ್ದ ವೇಳೆಯಲ್ಲಿ ಕರ್ನಾಟಕ ರಾಷ್ಟ್ರಸಮಿತಿಯ ಕಾರ್ಯಕರ್ತರೊಬ್ಬರು ಚಾಲಕನನ್ನು ಪ್ರಶ್ನಿಸಿದಾಗ ‘ಮುಖ್ಯಮಂತ್ರಿಯ ಕಾರ್ಯಾಲಯದಿಂದ ಕಳಿಸಲಾಗಿದೆ, ದೀಪಾವಳಿ ಗಿಫ್ಟ್‌ ಕೊಡಲು ಬಂದಿದ್ದೇನೆ’ ಎಂದು ಉತ್ತರಿಸಿದ್ದರು. ಇದನ್ನು ಕೆಆರ್‌ಎಸ್‌ನ ಕಾರ್ಯಕರ್ತರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು.

 

ಈ ಕುರಿತು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮೋಹನ್‌ ಕೃಷ್ಣ ಅವರಿಂದ ಪ್ರತಿಕ್ರಿಯೆ ಕೇಳಿ ‘ದಿ ಫೈಲ್‌’ 2022ರ ಅಕ್ಟೋಬರ್‌ 31ರ ರಾತ್ರಿ 8.29ಕ್ಕೆ ವಾಟ್ಸಾಪ್‌ ಮೂಲಕ ಸಂದೇಶವನ್ನು ಕಳಿಸಿತ್ತು.

 

‘ದಿ ಫೈಲ್‌’ ಕೇಳಿದ್ದ ಪ್ರಶ್ನೆಗಳಿವು

 

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪತ್ರಕರ್ತರಿಗೆ ಸ್ವೀಟ್‌ ಬಾಕ್ಸ್‌ ಮತ್ತು ಲಕ್ಷಾಂತರ ರುಪಾಯಿ ನಗದನ್ನು ಪತ್ರಕರ್ತರ ಕಚೇರಿ ಮತ್ತು ಪತ್ರಕರ್ತರ ನಿವಾಸಗಳಿಗೆ ತಲುಪಿಸಲು ತಮಗೆ ಹಂಚಿಕೆಯಾಗಿರುವ ಕೆಎ-01-ಜಿ-5898 ವಾಹನವನ್ನು ಬಳಕೆ ಮಾಡಲಾಗಿದೆ ಎಂಬ ಅರೋಪ ಸಂಬಂಧ ತಮ್ಮ ಪ್ರತಿಕ್ರಿಯೆ ಏನು?

 

ಕೆಎ-01-ಜಿ-5898 ಸಂಖ್ಯೆಯ ವಾಹನವು ಸರ್ಕಾರಿ ರಜೆ ದಿನವಾದ ಅಕ್ಟೋಬರ್‌ 24ರಂದು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿ ಸಂಚರಿಸಿತ್ತು. ಈ ವಾಹನದ ಚಾಲಕ ದೀಪಾವಳಿ ಸ್ವೀಟ್‌ ಬಾಕ್ಸ್‌ನ್ನು ತಲುಪಿಸಲು ಬಂದಿದ್ದೇನೆ ಎಂದು ಕರ್ನಾಟಕ ರಾಷ್ಟ್ರಸಮಿತಿ ಕಾರ್ಯಕರ್ತರೊಬ್ಬರಿಗೆ ಹೇಳಿರುವುದು ಮೊಬೈಲ್‌ ವಿಡಿಯೋದಲ್ಲಿ ಸೆರೆಯಾಗಿದೆ. ನಿಮ್ಮ ನಿರ್ದೇಶನದ ಮೇರೆಗೆ ನಿಮಗೆ ಹಂಚಿಕೆಯಾದ ವಾಹನವನ್ನು ಇದಕ್ಕೆ ಬಳಕೆಯಾದಂತಲ್ಲವೇ? ಈ ಬಗ್ಗೆ ಪ್ರತಿಕ್ರಿಯೆ ನೀಡಬಹುದೇ?

 

ಈ ಪ್ರಶ್ನೆಗಳಿಗೆ ಮೋಹನ್‌ ಕೃಷ್ಣ ಅವರು ‘No it hasn’t been sent for that’ ಎಂದು  ವಾಟ್ಸಾಪ್‌ ಮೂಲಕ ಪ್ರತಿಕ್ರಿಯೆ ನೀಡಿದ್ದರು.

 

ಇದಾದ ನಂತರ ಇನ್ನೂ ಒಂದಷ್ಟು ಪ್ರಶ್ನೆಗಳನ್ನು ಮೋಹನ್‌ ಕೃಷ್ಣ ಅವರಿಗೆ ಕೇಳಲಾಗಿತ್ತು.

 

ಹಾಗಾದರೇ ನಿಮಗೆ ಹಂಚಿಕೆಯಾಗಿದ್ದ ಕೆಎ-01-ಜಿ-5898 ವಾಹನವು ಅಕ್ಟೋಬರ್‌ 24ರಂದು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿ ಇತ್ತು ಎಂಬುದು ವಿಡಿಯೋದಲ್ಲಿ ಸೆರೆಯಾಗಿದೆಯಲ್ಲ..

 

ಕರ್ನಾಟಕ ರಾಷ್ಟ್ರಸಮಿತಿಯ ಕಾರ್ಯಕರ್ತರ ಪ್ರಶ್ನೆಗಳಿಗೆ ನಿಮಗೆ ಹಂಚಿಕೆಯಾದ ವಾಹನದ ಚಾಲಕನು ದೀಪಾವಳಿ ಗಿಫ್ಟ್‌ ಕೊಡಲು ಬಂದಿದ್ದೇನೆ ಎಂದು ಹೇಳಿರುವುದು ವಿಡಿಯೋದಲ್ಲಿ ಇದೆಯಲ್ಲ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

 

ನೀವು ಸ್ವೀಟ್‌ ಬಾಕ್ಸ್‌ ತಲುಪಿಸಲು ಕಳಿಸಿಲ್ಲ ಎಂದಾದ ಮೇಲೆ ನಿಮ್ಮ ನಿರ್ದೇಶನವಿಲ್ಲದೇ ಆ ವಾಹನವು ಅಲ್ಲಿಗೆ ಹೋಗಿದ್ದಾದರೂ ಹೇಗೆ?

 

ಒಂದೊಮ್ಮೆ ನಿಮ್ಮ ನಿರ್ದೇಶನವಿಲ್ಲದೇ ಅನ್ಯರ ನಿರ್ದೇಶನದ ಮೇರೆಗೆ ವಾಹನ ಕೊಂಡೊಯ್ದಿರುವ ಚಾಲಕನ ಮೇಲೆ ನೀವು ಕ್ರಮ ಕೈಗೊಂಡಿದ್ದೀರಿಯೇ?

 

ಯಾವ ಉದ್ದೇಶಕ್ಕೆ ನಿಮಗೆ ಹಂಚಿಕೆಯಾಗಿದ್ದ ವಾಹನವನ್ನು ಕುಮಾರಸ್ವಾಮಿ ಲೇಔಟ್‌ಗೆ ಕಳಿಸಲಾಗಿತ್ತು?

 

ಈ ಮೇಲಿನ ಪ್ರಶ್ನೆಗಳಿಗೆ ಮೋಹನ್‌ ಕೃಷ್ಣ ಅವರು ಇದುವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

the fil favicon

SUPPORT THE FILE

Latest News

Related Posts