‘ಟೂ ತೌಸಂಡ್‌ ನಾನೊಬ್ಳೆ ಇಟ್ಕೊಳ್ಳಲ್ಲ, ಅದು ಸಾಕಾಗಲ್ಲ, ನೀವೇ ಕೊಟ್ಹೋಗಿ’; ಸರ್ಕಾರಿ ಆಸ್ಪತ್ರೆ ಕ್ರೌರ್ಯ ದರ್ಶನ

ಬೆಂಗಳೂರು; ‘ನೀವ್‌ ಕೊಡೋ ಟೂ ತೌಸಂಡ್‌ನ್ನು ನಾನೊಬ್ಳೇ ಇಟ್ಕೊಳ್ಳಲ್ಲ…ನಾನು ಎಲ್ರಿಗೂ ಡಿವೈಡ್‌ ಮಾಡ್ಬೇಕು… ನೀವ್ ಕೊಟ್ಟಿರೋ ಟೂ ತೌಸೆಂಡ್‌ನಲ್ಲಿ ಯಾರ್ಯಾರಿಗೆ ಕೊಡ್ಲಿ….ನಾನೊಬ್ಳೇ ಇಟ್ಕೊಳ್ಳಲ್ಲ..’
ಹೀಗೆಂದು ಗಾರ್ಮೆಂಟ್‌ ನೌಕರೊಬ್ಬರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯ ಸಾರ್ವಜನಿಕ ಆಸ್ಪತ್ರೆಯೊಂದರ ಮಹಿಳಾ ನೌಕರರೊಬ್ಬರು ಹಣಕ್ಕಾಗಿ ಬೇಡಿಕೆ ಇರಿಸಿದ್ದಾರೆ.

 

ಗಾರ್ಮೆಂಟ್‌ ನೌಕರ ತನ್ನ ಪತ್ನಿಯನ್ನು ಉಳಿಸಿಕೊಳ್ಳಲು ಗೋಗರೆದರೂ ಮತ್ತು ವೇತನ ಆಗಿಲ್ಲ ಎಂದು ಅಂಗಲಾಚಿದರೂ ಕಿಂಚಿತ್ತೂ ಕರಗದ ಆಸ್ಪತ್ರೆ ನೌಕರರು ಹೆಚ್ಚಿನ ಹಣಕ್ಕೆ ಬೇಡಿಕೆ ಇರಿಸುವ ಮೂಲಕ ಕ್ರೌರ್ಯವನ್ನು ಮೆರೆದಿದ್ದಾರೆ. ಈ ಸಂಬಂಧ ವಿಡಿಯೋ ತುಣುಕು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ನಡೆದ ಬಾಣಂತಿ ಮತ್ತು ಅವಳಿ ಹಸುಳೆಗಳ ಸಾವು ಮಾಸುವ ಮುನ್ನವೇ, ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಆಸ್ಪತ್ರೆಗಳು ಭ್ರಷ್ಟಾಚಾರದ ತವರುಗಳಾಗಿರುವುದಕ್ಕೆ ಈಗ ಲಭ್ಯವಾಗಿರುವ ವಿಡಿಯೋವೊಂದು ಮತ್ತಷ್ಟು ಸಾಕ್ಷ್ಯವನ್ನು ಒದಗಿಸುತ್ತಿದೆ. ಆದರೆ ಈ ವಿಡಿಯೋ ಯಾವ ತಾಲೂಕಿನದು ಎಂಬುದು ಖಚಿತಪಟ್ಟಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ.

 

ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಂದ ಆಸ್ಪತ್ರೆ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವಸೂಲಿಗಿಳಿದಿರುವ ಕುರಿತು ಹಲವು ಬಾರಿ ದೂರುಗಳು ಸಲ್ಲಿಕೆಯಾಗಿದ್ದರೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿಲ್ಲ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್‌ ಅವರು ಹೇಳಿಕೆ ನೀಡಿದ್ದರೂ ಆಸ್ಪತ್ರೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿಲ್ಲ.

 

‘ನಾನು ಅವ್ರಿಗೆ ಟೂ ತೌಸಂಡ್‌ ಕೊಡ್ಬೇಕು. ಇವ್ರಿಗೆ ಟೂ ತೌಸಂಡ್‌ ಕೊಡ್ಬೇಕು….ನೀವು ಕೊಡೋ ಟೂ ತೌಸೆಂಡ್‌ನ್ನು ಫೈವ್‌ ಹಂಡ್ರೆಡ್‌ ನಂತೆ ಹಂಚಬೇಕು.ಯಾರಿಗೆ ಕೊಡ್ಲಿ…ನೀವೇ ಕೊಟ್ಟು ಹೋಗಿ…ನನಗೆ ತಲೆನೋವೇ ಇರಲ್ಲ….ಎಲ್ರಿಗೋ ಒಂದೇ ರೂಲ್ಸು….ಪಾರ್ಟಿಯಾಲಿಟಿ ಮಾಡೋಕ್ಕಾಗಲ್ಲ….’ ಎಂದು ಗಾರ್ಮೆಂಟ್‌ ನೌಕರನಿಂದ ಹಣ ಸುಲಿಗೆ ಇಳಿದಿರುವುದು ವಿಡಿಯೋ ತುಣುಕಿನಿಂದ ತಿಳಿದು ಬಂದಿದೆ.

 

ಸಾರ್ವಜನಿಕ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳ ಬಹುತೇಕರು ಆರ್ಥಿಕವಾಗಿ ದುರ್ಬಲರು. ಗಾರ್ಮೆಂಟ್ಸ್‌, ದಿನಗೂಲಿ ಆಧಾರದ ಮೇಲೆ ದುಡಿದು ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವವರ ಸಂಖ್ಯೆಯೇ ಹೆಚ್ಚು. ಇಂತಹವರಿಂದಲೇ ಆಸ್ಪತ್ರೆ ವೈದ್ಯಾಧಿಕಾರಿಗಳು, ಸಿಬ್ಬಂದಿ ಹಣಕ್ಕಾಗಿ ಬೇಡಿಕೆ ಇರಿಸುವ ಮೂಲಕ ರೋಗಿಗಳನ್ನು ಸುಲಿಗೆ ಮಾಡುತ್ತಿರುವುದು ಸಾರ್ವಜನಿಕ ಆಸ್ಪತ್ರೆಗಳ ನರಕ ದರ್ಶನ ಮಾಡಿಸುತ್ತಿದ್ದಾರೆ

the fil favicon

SUPPORT THE FILE

Latest News

Related Posts