ಬೆಂಗಳೂರು; ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ದುಂದುವೆಚ್ಚ, ಹಣದ ದುರ್ಬಳಕೆ, ಅಧಿಕಾರ ಮತ್ತು ಹಣದ ದುರುಪಯೋಗ ಸೇರಿದಂತೆ ಇನ್ನಿತರೆ ಅವ್ಯವಹಾರಗಳ ಕುರಿತು ತನಿಖೆ, ವಿಚಾರಣೆ ನಡೆಸಲು ನೇಮಕವಾಗಿರುವ ವಿಚಾರಣೆ ಸಮಿತಿಗಳಿಂದ ಸಿಂಡಿಕೇಟ್ ಸದಸ್ಯರಿಗೆ ರಾಜ್ಯ ಬಿಜೆಪಿ ಸರ್ಕಾರವು ಕೊಕ್ ನೀಡಿದೆ.
ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ನೇಮಕ ಸಂಬಂಧ ಶೋಧನಾ ಸಮಿತಿ ಸದಸ್ಯರಿಗೆ ವಿಶ್ವವಿದ್ಯಾಲಯದ ಅಧಿಕಾರಿಗಳು ಖರೀದಿಸಿದ್ದ 10 ಸೂಟ್‌ಕೇಸ್, ಸಮಿತಿ ಸದಸ್ಯರಿಗೆ ಊಟೋಪಚಾರಕ್ಕೆ ಮಾಡಿದ್ದ ಖರ್ಚು ಮತ್ತು ನ್ಯಾಕ್ ಪರಿಶೀಲನೆ ಸಮಿತಿಗೆ 2 ಕೋಟಿ ರು. ವೆಚ್ಚ ಮಾಡಿದ್ದನ್ನು ಸಿಂಡಿಕೇಟ್ ಸದಸ್ಯರ ಉಪ ಸಮಿತಿಯು ಬಯಲಿಗೆಳೆದಿತ್ತು. ಅಲ್ಲದೆ ಈ ರೀತಿ ಮಾಡಿರುವ ವೆಚ್ಚವು ವಿಶ್ವವಿದ್ಯಾಲಯಕ್ಕೆ ಆರ್ಥಿಕ ಹೊರೆಗೆ ಕಾರಣವಾಗುತ್ತದೆ ಎಂದು ವರದಿಯನ್ನೂ ಸರ್ಕಾರಕ್ಕೆ ನೀಡಿ ದೂರು ಸಲ್ಲಿಸಿದ್ದರು.
ಈ ವರದಿ ನೀಡಿದ ಕೆಲವೇ ದಿನಗಳಲ್ಲೇ ರಾಜ್ಯ ಬಿಜೆಪಿ ಸರ್ಕಾರವು ವಿಚಾರಣೆ ಸಮಿತಿಗಳಿಂದಲೇ ಸಿಂಡಿಕೇಟ್ ಸದಸ್ಯರನ್ನು ಕೈಬಿಟ್ಟಿದೆ. ಈ ಸಂಬಂಧ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ 2022ರ ನವೆಂಬರ್ 24ರಂದು ಸುತ್ತೋಲೆ ಹೊರಡಿಸಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಸ್ಥಳೀಯ ವಿಚಾರಣೆ ಸಮಿತಿಗಳಿಗೆ ಸಿಂಡಿಕೇಟ್ ಸದಸ್ಯರನ್ನು ಅಧ್ಯಕ್ಷ ಮತ್ತು ಸದಸ್ಯರನ್ನಾಗಿ ನೇಮಿಸುವುದರಿಂದ ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂಬ ಕಾರಣವನ್ನು ಮುಂದೊಡ್ಡಿರುವ ಉನ್ನತ ಶಿಕ್ಷಣ ಇಲಾಖೆಯು ಹೊರಡಿಸಿರುವ ಸುತ್ತೋಲೆಯು ಪರೋಕ್ಷವಾಗಿ ವಿಶ್ವವಿದ್ಯಾಲಯಗಳಲ್ಲಿ ಅಕ್ರಮ ಅವ್ಯವಹಾರಗಳಿಗೆ ಕುಮ್ಮಕ್ಕು ನೀಡಿದಂತಾಗಿದೆ.
‘ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರನ್ನು ಸ್ಥಳೀಯ ವಿಚಾರಣೆ ಸಮಿತಿಗಳಿಗೆ ಸದಸ್ಯ, ಅಧ್ಯಕ್ಷರನ್ನಾಗಿ ನೇಮಕ ಮಾಡಿದಾಗ ಸಮಿತಿ ಸದಸ್ಯರಾಗಿ ಕಾಲೇಜುಗಳ ಪರಿವೀಕ್ಷಣೆ ನಡೆಸಿದ ಸದಸ್ಯರೇ ಮುಂದೆ ಸಮಿತಿ ವರದಿಯ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳುವುದು ನೈಸರ್ಗಿಕ ನ್ಯಾಯತತ್ವದ ಉಲ್ಲಂಘನೆಯಾಗುವ ಸಾಧ್ಯತೆ ಇರುತ್ತದೆ. ಮತ್ತು ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿರಲು ಸಾಧ್ಯವಾಗುವುದಿಲ್ಲ. ಇದು ಹಿತಾಸಕ್ತಿ ಸಂಘರ್ಷಕ್ಕೂ ಕಾರಣವಾಗುತ್ತದೆ,’ ಎಂದು ಉನ್ನತ ಶಿಕ್ಷಣ ಇಲಾಖೆಯು ಅಭಿಪ್ರಾಯಪಟ್ಟಿದೆ.
ಹೀಗಾಗಿ ಸ್ಥಳೀಯ ವಿಚಾರಣೆ ಸಮಿತಿಗಳಿಗೆ ಸಿಂಡಿಕೇಟ್ ಸದಸ್ಯರ ಬದಲಿಗೆ ವಿಷಯ ತಜ್ಞರು ಮತ್ತು ಶಿಕ್ಷಣ ತಜ್ಞರನ್ನು ನೇಮಿಸಲು ಕುಲಪತಿಗಳಿಗೆ ಸೂಚಿಸಿದೆ. ‘ಸಾಮಾಜಿಕ ಮತ್ತು ನೈಸರ್ಗಿಕ ನ್ಯಾಯದ ಪರಿಪಾಲನೆಯೊಂದಿಗೆ ಶೈಕ್ಷಣಿಕ ಹಿರಿಮೆಯನ್ನು ಸಾಧಿಸಲು ಹಾಗೂ ಶಿಕ್ಷಣ ಗುಣಮಟ್ಟವನ್ನು ವೃದ್ಧಿಸಲು ಅವಶ್ಯಕವಾದ ನ್ಯಾಯೋಚಿತ, ಪಾರದರ್ಶಕ ಹಾಗೂ ನಿಷ್ಪಕ್ಷಪಾತ ಸಂಯೋಜನೆ ಪ್ರಕ್ರಿಯೆ ರೂಪಿಸಬೇಕಾದಲ್ಲಿ ಸ್ಥಳೀಯ ವಿಚಾರಣೆ ಸಮಿತಿಗಳಿಗೆ ವಿಷಯ ಪಾರಂಗತರನ್ನು ಹಾಗೂ ಶೈಕ್ಷಣಿಕ ತಜ್ಞರನ್ನು ನೇಮಿಸುವ ಅವಶ್ಯಕತೆ ಇದೆ,’ ಎಂದೂ ಸೂಚನಾ ಪತ್ರದಲ್ಲಿ ಉಲ್ಲೇಖಿಸಿದೆ.
ವಿಶ್ವವಿದ್ಯಾಲಯಗಳಲ್ಲಿ ಅಕ್ರಮ, ಅವ್ಯವಹಾರ, ಹಣದ ದುರ್ಬಳಕೆ, ದುರುಪಯೋಗಪಡಿಸಿಕೊಂಡಿರುವ ಕುರಿತು ಸಿಂಡಿಕೇಟ್ ಸದಸ್ಯರ ತನಿಖೆ ನಡೆಸಿ ವರದಿ ನೀಡುತ್ತಿದ್ದರು. ಆದರೀಗ ವಿಚಾರಣೆ ಸಮಿತಿಯಲ್ಲಿ ಸಿಂಡಿಕೇಟ್ ಸದಸ್ಯರನ್ನು ಕೈ ಬಿಟ್ಟು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ವಿಷಯ ತಜ್ಞರನ್ನು ನೇಮಿಸಿದರೆ ತನಿಖೆಯು ನಿಷ್ಪಕ್ಷಪಾತವಾಗಿ ನಡೆಯುವುದಿಲ್ಲ. ಬದಲಿಗೆ ಅವರ ಹಂತದಲ್ಲಿಯೇ ಎಲ್ಲಾ ರೀತಿಯ ಅಕ್ರಮಗಳನ್ನು ಮುಚ್ಚಿ ಹಾಕಲಾಗುತ್ತದೆ ಎನ್ನುತ್ತಾರೆ ವಿಶ್ವವಿದ್ಯಾಲಯವೊಂದರ ಪ್ರಾಧ್ಯಾಪಕರೊಬ್ಬರು.
ದಾವಣಗೆರೆ ಸೇರಿದಂತೆ ರಾಜ್ಯದ ಪ್ರತಿ ವಿಶ್ವವಿದ್ಯಾಲಯದಲ್ಲಿಯೂ ವಿವಿಧ ರೀತಿಯ ಅಕ್ರಮ, ಹಣ ದುರುಪಯೋಗ, ದುರ್ಬಳಕೆ, ಅವ್ಯವಹಾರ ಕುರಿತು ಲೋಕಾಯುಕ್ತ, ರಾಜ್ಯಪಾಲರಿಗೂ ಹಲವು ದೂರುಗಳು ಸಲ್ಲಿಕೆಯಾಗುತ್ತಿವೆ. ಅಲ್ಲದೇ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ನೀಡಿರುವ ವರದಿಗಳಲ್ಲೂ ಹಲವು ನ್ಯೂನತೆ, ಲೋಪಗಳು ಬಹಿರಂಗಗೊಂಡಿವೆ.
ಇಂತಹ ವರದಿಗಳ ಮೇಲೆ ಕ್ರಮ ಕೈಗೊಳ್ಳಲು ಸಿಂಡಿಕೇಟ್ ಸದಸ್ಯರು ಸಭೆಗಳಲ್ಲಿ ಚರ್ಚೆ ನಡೆಸುತ್ತಿದ್ದರು. ಹಾಗೆಯೇ ಇದಕ್ಕಾಗಿ ವಿಚಾರಣೆ ಸಮಿತಿಗಳನ್ನೂ ಕುಲಪತಿಗಳು ನೇಮಿಸುತ್ತಿದ್ದರು. ಆದರೀಗ ಸರ್ಕಾರವು ಸಿಂಡಿಕೇಟ್ ಸದಸ್ಯರನ್ನು ವಿಚಾರಣೆ ಸಮಿತಿಗಳಿಂದ ಕೈಬಿಟ್ಟಿರುವುದಕ್ಕೆ ಹಲವು ಸಿಂಡಿಕೇಟ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.