ಬೆಂಗಳೂರು; ಸಂಗಮೇಶ ಆರ್ ನಿರಾಣಿ ನಿರ್ದೇಶಕರಾಗಿರುವ ನಿರಾಣಿ ಶುಗರ್ಸ್ ಪ್ರೈವೈಟ್ ಲಿಮಿಟೆಡ್‌ಗೆ ಸಂಬಂಧಿಸಿದ ಸರ್ವೆ ನಂಬರ್‌ಗಳನ್ನು ಮುಧೋಳ ಮಹಾಯೋಜನೆ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರೂ ಮತ್ತು ಎಂಆರ್‌ಎನ್ ಗ್ರೂಪ್‌ನ ಅಧ್ಯಕ್ಷರೂ ಆಗಿರುವ ಡಾ ಮುರುಗೇಶ ಆರ್ ನಿರಾಣಿ ಅವರು ಸರ್ಕಾರಕ್ಕೆ ಬರೆದಿರುವ ಟಿಪ್ಪಣಿಯು ಇದೀಗ ಬಹಿರಂಗವಾಗಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ನಗರ ವಿಸ್ತರಿಸುವ ತಾತ್ಕಾಲಿಕ ಹೊಸ ಯೋಜನೆಯಲ್ಲಿ ನಿರಾಣಿ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದ ಸರ್ವೆ ನಂಬರ್‌ಗಳನ್ನು ಸೇರಿಸಲಾಗಿತ್ತು. ಈ ಕುರಿತು ಕಾರ್ಖಾನೆಯ ನಿರ್ದೇಶಕ ಸಂಗಮೇಶ ಆರ್ ನಿರಾಣಿ ಅವರು 2021ರ ಸೆಪ್ಟಂಬರ್ 30ರಂದು ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಈ ಪತ್ರ ಬರೆದ ಒಂದು ವರ್ಷದ ನಂತರ ಕೈಗಾರಿಕೆ ಸಚಿವ ಡಾ ಮುರುಗೇಶ ಆರ್ ನಿರಾಣಿ ಅವರು 2022ರ ಆಗಸ್ಟ್ 24ರಂದು ಟಿಪ್ಪಣಿ ಬರೆದಿದ್ದಾರೆ. ಪತ್ರ ಮತ್ತು ಟಿಪ್ಪಣಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಮುಧೋಳ ಸ್ಥಳೀಯ ಯೋಜನಾ ಪ್ರಾಧಿಕಾರ ತಯಾರಿಸಿರುವ ವಿಸ್ತರಿತ ತಾತ್ಕಾಲಿಕ ಮಹಾ ಯೋಜನೆಯಲ್ಲಿ ಮುಧೋಳ ತಾಲೂಕಿನ ಕುಳಲಿ ಮತ್ತು ಮಾಲಾಪುರ ಗ್ರಾಮದ ವ್ಯಾಪ್ತಿಯಲ್ಲಿ ಬರುವ ನಿರಾಣಿ ಸಕ್ಕರೆ ಕಾರ್ಖಾನೆಗೆ ಸೇರಿದ ಭೂಮಿಯೂ ಸೇರಿರುವುದು ಪತ್ರದಿಂದ ತಿಳಿದು ಬಂದಿದೆ.
ಮುಧೋಳ (ಗ್ರಾಮಾಂತರ) ಗ್ರಾಮಕ್ಕೆ ಸಂಬಂಧಿಸಿದ ಸರ್ವೇ ನಂಬರ್ 166, 165, 158, 157, 143, 144, 154, 145, 156, 155, 159, 154, ಈ ಜಮೀನುಗಳು ಮಾಲಾಪುರ, ಕುಳಲಿ, ಸೋರಗಾವಿ ಗ್ರಾಮದ ಸರ್ವೆ ನಂಬರ್‌ಗಳು ಹೊಂದಿಕೊಂಡಿವೆ. ಮಾಲಾಪುರ ಗ್ರಾಮದ ಸರ್ವೆ ನಂಬರ್‌ಗಳಾದ 15,16,17,18,19,20,21,52,53,54,55,56,57,58 ಸರ್ವೆ ನಂಬರ್‌ಗಳಲ್ಲಿನ ಜಮೀನುಗಳು ಈ ಆದೇಶದಲ್ಲಿ ಸೇರ್ಪಡೆಗೊಂಡಿರುವುದು ಸಂಗಮೇಶ ಆರ್ ನಿರಾಣಿ ಅವರ ಪತ್ರದಿಂದ ಗೊತ್ತಾಗಿದೆ.
‘ನಮ್ಮ ಕೈಗಾರಿಕೆ ಪ್ರದೇಶದ ಸರ್ವೆ ನಂಬರ್‌ಗಳನ್ನು ಮುಧೋಳ ಪಟ್ಟಣದ ಮಹಾಯೋಜನೆಯ ವ್ಯಾಪ್ತಿಯಿಂದ ಹೊರಗುಳಿಸಿ ಕುಳಲಿ ಮತ್ತು ಮಾಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡಿಸುವಂತೆ ಠರಾವು ಕೋರಿರುವುದರಿಂದ ಹಾಗೂ ಸಕ್ಕರೆ ಕಾರ್ಖಾನೆಯುಕೃಷಿ ಆಧರಿತ ಗ್ರಾಮೀಣ ಕೈಗಾರಿಕೆಯೆಂದು ಸರ್ಕಾರವು ಘೋಷಿಸಿರುವುದರಿಂದ ಸರ್ವೆ ನಂಬರ್‌ಗಳಲ್ಲಿನ ಜಮೀನುಗಳನ್ನು ಮುಧೋಳ ಮಹಾ ಯೋಜನೆಯ ವ್ಯಾಪ್ತಿಯಿಂದ ಹೊರಗಿಡುವಂತೆ ಆಕ್ಷೇಪಣೆ ಸಲ್ಲಿಸಲಾಗಿದೆ. ನಿರಾಣಿ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದ ಕೈಗಾರಿಕೆ ಜಮೀನುಗಳನ್ನು ಮಹಾಯೋಜನೆಯ ವ್ಯಾಪ್ತಿಯಿಂದ ಹೊರಗಿಡಲು ತಮ್ಮ ಶಿಫಾರಸ್ಸಿನೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು,’ ಎಂದು ಸಂಗಮೇಶ ಆರ್ ನಿರಾಣಿ ಅವರು ಪತ್ರದಲ್ಲಿ ಕೋರಿದ್ದರು.
ಈ ಪತ್ರ ಬರೆದ ಒಂದು ವರ್ಷದ ನಂತರ ಡಾ ಮುರುಗೇಶ ಆರ್ ನಿರಾಣಿ ಅವರೂ ಸರ್ಕಾರಕ್ಕೆ 2022ರ ಆಗಸ್ಟ್ 24ರಂದು ಟಿಪ್ಪಣಿ ಬರೆದಿದ್ದಾರೆ. ತಾತ್ಕಾಲಿಕ ಮಹಾಯೋಜನೆಯನ್ನು ಅಂತಿಮಗೊಳಿಸುವ ಬಗ್ಗೆ ನಗರ ಯೋಜನಾ ಪ್ರಾಧಿಕಾರದ ಕಾರ್ಯದರ್ಶಿಗೆ ಸಲ್ಲಿಸಿರುವ ಆಕ್ಷೇಪಣೆಯನ್ನು ಪುರಸ್ಕರಿಸಬೇಕು. ಪ್ರಾದೇಶಿಕ ಆಯುಕ್ತರೂ ಸಹ ಈ ಎಲ್ಲಾ ಅಂಶಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಮುರುಗೇಶ್ ಆರ್ ನಿರಾಣಿ ಅವರು ಟಿಪ್ಪಣಿಯಲ್ಲಿ ಕೋರಿದ್ದಾರೆ ಎಂದು ಗೊತ್ತಾಗಿದೆ.