ಹಣ ದುರ್ಬಳಕೆ; ಲೆಕ್ಕಪರಿಶೋಧನೆ ವರದಿಗಳಿದ್ದರೂ ಕ್ರಮಕೈಗೊಳ್ಳದ ರೋಹಿಣಿ ಸಿಂಧೂರಿ ವಿರುದ್ಧ ದೂರು

ಬೆಂಗಳೂರು; ಹಿಂದೂಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿನ ದೇಗುಲಗಳಲ್ಲಿ ಹಣ ದುರ್ಬಳಕೆಯಾಗಿರುವ ಕುರಿತು ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನೆ ಇಲಾಖೆಯು ನೀಡಿರುವ ಲೆಕ್ಕತಪಾಸಣೆ ವರದಿ ಆಧರಿಸಿ ಉದ್ದೇಶಪೂರ್ವಕವಾಗಿ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂಬ ಗುರುತರವಾದ ಆರೋಪಕ್ಕೆ ಇಲಾಖೆಯ ಆಯುಕ್ತರಾದ ರೋಹಿಣಿ ಸಿಂಧೂರಿ ಅವರು ಗುರಿಯಾಗಿದ್ದಾರೆ.

 

ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಹಳೇವೂರಿನ ಹುಲಿಯೂರಮ್ಮ ದೇವಸ್ಥಾನದಲ್ಲಿ ಹಣ ದುರ್ಬಳಕೆ ಪ್ರಕರಣವನ್ನು ಉಲ್ಲೇಖಿಸಿರುವ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ರಾಜ್ಯದ ಹಲವು ದೇಗುಲಗಳಲ್ಲಿಯೂ ಹಣ ದುರ್ಬಳಕೆ ಕುರಿತಂತೆ ವರದಿಗಳಿದ್ದರೂ ರೋಹಿಣಿ ಸಿಂಧೂರಿ ಅವರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಜುರಾಯಿ ಸಚಿವರಾದ ಶಶಿಕಲಾ ಜೊಲ್ಲೆ,  ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರು ಸೇರಿದಂತೆ ಹಲವರಿಗೆ 2022ರ ನವೆಂಬರ್‌ 4ರಂದು ಲಿಖಿತ ದೂರು ಸಲ್ಲಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಮುಜುರಾಯಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಸುಮಾರು 2 ವರ್ಷ ಕಳೆದರೂ ಆಯುಕ್ತರಾದ ರೋಹಿಣಿ ಸಿಂಧೂರಿ ಅವರು ಯಾವುದೇ ಕ್ರಮಕೈಗೊಂಡಿಲ್ಲ. ಉದ್ದೇಶಪೂರ್ವಕವಾಗಿ ವಿಳಂಬ ಮಾಡಿ ಕರ್ತವ್ಯಲೋಪ ಮತ್ತು ಆಡಳಿತಾತ್ಮಕ ಅಪರಾಧವೆಸಗಿದ್ದಾರೆ,’ ಎಂದು ವೇದಿಕೆಯ ಉಪಾಧ್ಯಕ್ಷ ಎನ್‌ ನರಸಿಂಹಮೂರ್ತಿ ಅವರು ದೂರಿನಲ್ಲಿ ಆಪಾದಿಸಿದ್ದಾರೆ.

 

ಹುಲಿಯೂರು ದುರ್ಗಮ್ಮ ದೇವಸ್ಥಾನದಲ್ಲಿ 2014-15ರಿಂದ 2019-20ನೇ ಸಾಲಿನವರೆಗೆ ಹಣ ದುರ್ಬಳಕೆಯಾಗಿದೆ. ಈ ಕುರಿತು ಲೆಕ್ಕ ತಪಾಸಣೆ ವರದಿಯೂ ಸಾಬೀತುಪಡಿಸಿದೆ. ಲೆಕ್ಕ ತನಿಖಾ ವರದಿಯು ಬಹಿರಂಗಗೊಳಿಸಿರುವ ನ್ಯೂನತೆಗಳ ಬಗ್ಗೆ ಕ್ರಮ ಕೈಗೊಳ್ಳಲು ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯು 2020ರ ಅಕ್ಟೋಬರ್‌ 8 ರಂದು ಪತ್ರ (ಸಂಖ್ಯೆ ಎಲ್‌ಎಟಿ/ಲೆ.ತ.ವ/2020-21/621) ಬರೆದಿದೆ. ಆದರೆ ಇದುವರೆಗೂಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ದೂರಿನಿಂದ ತಿಳಿದು ಬಂದಿದೆ.

 

ಅಲ್ಲದೇ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆಯು ದೇವಾಲಯದ ಹಣ ದುರ್ಬಳಕೆಯಾಗಿರುವ ಬಗ್ಗೆ 2022ರ ಜೂನ್‌ 22ರರಂದು (ಕಂಪ್ಯೂಟರ್‌ ನಂ 748027 ಕಡತ ಸಂಖ್ಯೆ HRICE-ESTOEST3/37/2022-ESTEND-HRICE) ಮೂಲಕ ಹುಲಿಯೂರಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿದೆ. ಆದರೆ ಇಲ್ಲಿಯವರೆಗೂ ಯಾವುದೇ ಕ್ರಮವಾಗಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

 

ಹುಲಿಯೂರು ದುರ್ಗ ಹೋಬಳಿಯ ಹಳೇವೂರು ಗ್ರಾಮದ ಹುಲಿಯೂರಮ್ಮ ದೇವಸ್ಥಾನವು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ವ್ಯಾಪ್ತಿಯ ಎ ಶ್ರೇಣಿ ವ್ಯಾಪ್ತಿಗೆ ಸೇರಿದ ದೇವಸ್ಥಾನವಾಗಿದೆ. ಆದರೂ ಇಲ್ಲಿ ಸಾರ್ವಜನಿಕ ಮೂಲಭೂತ ಸೌಕರ್ಯಗಳಿಲ್ಲ ಎಂದು ತಿಳಿದು ಬಂದಿದೆ.

 

‘ಇದು ಕೇವಲ ಹುಲಿಯೂರು ದುರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ ಅನೇಕಕ ಧಾರ್ಮಿಕ, ದತ್ತಿ ಇಲಾಖೆಯ ವ್ಯಾಪ್ತಿಯ ದೇವಾಲಯಗಳಲ್ಲಿ ನಡೆಯುತ್ತಿದೆ. ಬೃಹತ್‌ ಪ್ರಮಾಣದಲ್ಲಿ ತನಿಖೆಯಾಗಬೇಕು,’ ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

the fil favicon

SUPPORT THE FILE

Latest News

Related Posts