ಹಕ್ಕುಪತ್ರ ವಿತರಣೆ ಹೆಸರಿನಲ್ಲಿ 7.00 ಕೋಟಿ ದುಂದುವೆಚ್ಚ; 4(ಜಿ)ವಿನಾಯಿತಿಗೆ ಆರ್ಥಿಕ ಇಲಾಖೆ ಸಮ್ಮತಿ

ಬೆಂಗಳೂರು; ವಾಸದ ಹಕ್ಕು ಪತ್ರ ದಾಖಲೆ ವಿತರಿಸುವ ಕೆಲವೇ ಕೆಲವು ಗಂಟೆಗಳ ಕಾರ್ಯಕ್ರಮಕ್ಕೆ 8.96 ಕೋಟಿ ರು. ವೆಚ್ಚದ ಪ್ರಸ್ತಾವನೆ ಪೈಕಿ ಆರ್ಥಿಕ ಇಲಾಖೆಯು ಇದೀಗ 7.00 ಕೋಟಿ ರು. ವೆಚ್ಚ ಮಾಡಲು ಅನುಮತಿ ನೀಡಿದೆ.

 

ಯಾದಗಿರಿ ಜಿಲ್ಲೆಯ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮದ ಭಾಗವಾಗಿ ಪರಿವರ್ತಿಸಿ ಅಲ್ಲಿಯ ನಿವಾಸಿಗಳಿಗೆ ವಾಸದ ಹಕ್ಕು ದಾಖಲೆ ವಿತರಿಸುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ನೀಡಿದ್ದ 8.96 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಪರಿಶೀಲಿಸಿರುವ ಆರ್ಥಿಕ ಇಲಾಖೆಯು ಈ ಸಂಬಂಧ 7.00 ಕೋಟಿ ರು.ಗೆ ಅನುಮತಿ ನೀಡಿದೆ.

 

ಅಲ್ಲದೆ ಇದಕ್ಕೆ ಕರ್ನಾಟಕ ಪಾರದರ್ಶಕ ಅಧಿನಿಯಮದ 1999ರ ಕಲಂ 4(ಜಿ) ವಿನಾಯಿತಿ ನೀಡಿದೆ. ಈ ಕುರಿತು 2022ರ ನವೆಂಬರ್‌ 17ರಂದು ಅಧಿಸೂಚನೆಯನ್ನು (ಸಂಖ್ಯೆ; ಆಇ700 ವೆಚ್ಚ-12/2022. 17.11.2022) ಹೊರಡಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮದ ಭಾಗವಾಗಿ ಪರಿವರ್ತಿಸಿ ಅಲ್ಲಿಯ ನಿವಾಸಿಗಳಿಗೆ ವಾಸದ ಹಕ್ಕು ದಾಖಲೆ ವಿತರಿಸುವ ಕಾರ್ಯಕ್ರಮಕ್ಕೆ ಯಾದಗಿರಿ ಜಿಲ್ಲಾಧಿಕಾರಿ 8.96 ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಿದ್ದರು. ಈ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

ಹಕ್ಕುಪತ್ರ ವಿತರಣೆ ಕಾರ್ಯಕ್ರಮಕ್ಕೆ 8.96 ಕೋಟಿ ವೆಚ್ಚದ ಪ್ರಸ್ತಾವನೆ;ಸರ್ಕಾರದ ಹಣದಿಂದ ಬಿಜೆಪಿ ಶಕ್ತಿ ಪ್ರದರ್ಶನ

 

ಮೊದಲನೇ ಪ್ರಸ್ತಾವನೆಯಲ್ಲೇನಿತ್ತು?

 

ಇದೇ ನವೆಂಬರ್‌ (2022) ಕೊನೆಯಲ್ಲಿ ಯಾದಗಿರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಯಾದಗಿರಿ, ಬೀದರ್‌, ಕಲ್ಬುರ್ಗಿ, ವಿಜಯಪುರ, ರಾಯಚೂರು ಜಿಲ್ಲೆಗಳಲ್ಲಿ ಗುರುತಿಸಿರುವ ಜನವಸತಿ ಪ್ರದೇಶದಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಲು ಸರ್ಕಾರವು ತೀರ್ಮಾನಿಸಿದೆ. ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2022ರ ಅಕ್ಟೋಬರ್‌ 28ರಂದು ಯಾದಗಿರಿ ಜಿಲ್ಲಾಧಿಕಾರಿ ಪ್ರಸ್ತಾವನೆ (ಸಂ/ಕಂ/ಭೂಮಂ/01/2021-22) ಸಲ್ಲಿಸಿದ್ದರು.

 

‘ಈ ಕಾರ್ಯಕ್ರಮವು ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದ್ದು ಈ ಕಾರ್ಯಕ್ರಮಕ್ಕೆ ಐದು ಜಿಲ್ಲೆಗಳಿಂದ ಸುಮಾರು 1.30 ಲಕ್ಷಕ್ಕೂ ಹೆಚ್ಚು ಜನ ಸೇರುವುದಾಗಿ ನಿರೀಕ್ಷಿಸಲಾಗಿದೆ. ಈ ಕಾರ್ಯಕ್ರಮವನ್ನು ಅತೀ ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ಆಯೋಜಿಸಲು ಕಂದಾಯ ಸಚಿವರು ಸೂಚಿಸಿರುತ್ತಾರೆ. ಈ ಕಾರ್ಯಕ್ರಮಕ್ಕೆ 8.96 ಕೋಟಿ ರು. ವೆಚ್ಚವಾಗಲಿದೆ. ಈ ಅನುದಾನವನ್ನು ಬಿಡುಗಡೆಗೊಳಿಸಬೇಕು,’ ಎಂದು ಯಾದಗಿರಿ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ವಿವರಿಸಿದ್ದಾರು.

 

ವೇದಿಕೆ, ಪೈಪ್‌ ಪೆಂಡಾಲ್‌, ಸ್ಟೇಜ್‌ ಕಾರ್ಪೆಟ್‌, ಎಕ್ಸಿಕ್ಯೂಟಿವ್‌ ಚೇರ್ಸ್‌, ಬ್ಯಾರಿಕೇಡ್‌, ವಿಐಪಿ ಚೇರ್ಸ್‌, ವಿಐಪಿಗಳಿಗೆ ಕಾರ್ಪೆಟ್‌, ಮಾಧ್ಯಮ ವಿಭಾಗ, ಎಲೆಕ್ಟ್ರಾನಿಕ್‌ ಮೀಡಿಯಾ ವಿಭಾಗ, ವಿಐಪಿಗಳಿಗೆ ಮೊಬೈಲ್‌ ಟಾಯ್ಲೆಟ್‌ ವ್ಯವಸ್ಥೆ, ಎಲ್‌ಇಡಿ ವಾಲ್‌, ಸಭಿಕರಿಗೆ ಎಲ್‌ಇಡಿ, ಫೈಬರ್‌ ಚೇರ್ಸ್‌, ಸಾರ್ವಜನಿಕರಿಗೆ ಮೊಬೈಲ್‌ ಟಾಯ್ಲೆಟ್‌ ವ್ಯವಸ್ಥೆ, ಪೋಡಿಯಂ, ಹೂವಿನ ಅಲಂಕಾರ, ಟೀ ಕಪ್ಪುಗಳು ಸೇರಿದಂತೆ ಒಟ್ಟು 23 ಉಪಕರಣಗಳಿಗೆ 3 ಕೋಟಿ ರು. ವೆಚ್ಚವಾಗಲಿದೆ.

 

ಬೀದರ್‌, ಕಲ್ಬುರ್ಗಿ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳ ಸುತ್ತಮುತ್ತ 10,064 ಕಿ ಮೀ ಗಳಿಂದ ಫಲಾನುಭವಿಗಳನ್ನು ಕರೆತರಲು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸುಮಾರು 2,900 ಬಸ್‌ ವ್ಯವಸ್ಥೆ ಮಾಡಬೇಕಿದೆ. ಇದಕ್ಕಾಗಿ 300 ಕಿ ಮೀ ಗೆ 12,650 ರು. ಲೆಕ್ಕದಲ್ಲಿ ಒಟ್ಟು 3,66,85,000 ರು., ಸಾರ್ವಜನಿಕರಿಗೆ ತಿಂಡಿ ಮತ್ತು ನೀರಿನ ವ್ಯವಸ್ಥೆಗೆ 30,00,000 ರು. ಖರ್ಚಾಗಲಿದೆ. ಅದೇ ರೀತಿ 1.35 ಲಕ್ಷ ಮಂದಿಗೆ ಊಟೋಪಚಾರ, ರಸ್ತೆ ಕಾಮಗಾರಿ, ಪಾರ್ಕಿಂಗ್‌, ಸಿಸಿಟಿವಿ,ಹೆಲ್ಪ್‌ ಸೆಂಟರ್‌, ವಾಹನಗಳಿಗೆ ಡೀಸೆಲ್‌ ಸೇರಿದಂತೆ ಒಟ್ಟು 2.00 ಕೋಟಿ ರು. ವೆಚ್ಚವಾಗಲಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಅಂದಾಜು ಪಟ್ಟಿಯನ್ನು ಒದಗಿಸಿದ್ದರು.

 

ಹಕ್ಕುಪತ್ರ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳಿಗೆ ನಗದು, ಪ್ರಮಾಣ ಪತ್ರ ವಿತರಣೆ ಮಾಡುವ ತಾಲೂಕು ಮಟ್ಟದ ಕಾರ್ಯಕ್ರಮಗಳನ್ನು ಮತಬ್ಯಾಂಕ್‌ ಆಗಿ ಮತ್ತು ಬಲಪ್ರದರ್ಶನಕ್ಕೆ ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿ ಬಂದಿರುವ ನಡುವೆಯೇ ರಾಜ್ಯ ಬಿಜೆಪಿ ಸರ್ಕಾರವು ಇದಕ್ಕಾಗಿ ಆಯೋಜಿಸುತ್ತಿರುವ ಒಂದು ದಿನದ ಕಾರ್ಯಕ್ರಮ, ಕೆಲವೇ ಗಂಟೆಗಳ ಕಾರ್ಯಕ್ರಮಕ್ಕೆ ಸರ್ಕಾರಿ ಬೊಕ್ಕಸದಿಂದ ಕೋಟ್ಯಂತರ ರುಪಾಯಿಗಳನ್ನು ವ್ಯಯಿಸುತ್ತಿದೆ ಎಂಬ ಆರೋಪವು ಕೇಳಿ ಬಂದಿದೆ.

 

ಯಾದಗಿರಿ ಜಿಲ್ಲೆಯ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮದ ಭಾಗವಾಗಿ ಪರಿವರ್ತಿಸಿ ಅಲ್ಲಿಯ ನಿವಾಸಿಗಳಿಗೆ ವಾಸದ ಹಕ್ಕು ದಾಖಲೆ ವಿತರಿಸುವ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಸರ್ಕಾರವು 8.96 ಕೋಟಿ ವೆಚ್ಚ ಮಾಡಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಬೆಂಗಳೂರು ನಗರದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಪ್ರಧಾನಿ ಮೋದಿ ಅವರು ಭಾಗವಹಿಸಿದ್ದ ಕೆಲವೇ ಗಂಟೆಗಳ ಕಾರ್ಯಕ್ರಮಕ್ಕೆ ಅಂದಾಜು 48 ಕೋಟಿ ರು. ಖರ್ಚಾಗಿದ್ದರ ಬೆನ್ನಲ್ಲೇ ಯಾದಗಿರಿ ಜಿಲ್ಲೆಯಲ್ಲಿಯೂ ಕೆಲವೇ ಗಂಟೆಗಳ ಕಾರ್ಯಕ್ರಮಕ್ಕೆ 8.96 ಕೋಟಿ ರು. ಖರ್ಚು ಮಾಡಲು ಮುಂದಾಗಿರುವುದು ತೆರಿಗೆದಾರರ ಹಣವನ್ನು ದುಂದುವೆಚ್ಚಕ್ಕೆ ಕಾರಣವಾದಂತಿದೆ ಎಂಬ ಮಾತುಗಳು ಕೇಳಿಬಂದಿದ್ದವು.

SUPPORT THE FILE

Latest News

Related Posts