ಬಸವೇಶ್ವರ ಪುತ್ಥಳಿ ಸ್ಥಾಪನೆ ಸ್ಥಳ, ವಿನ್ಯಾಸವೂ ಬದಲು; ಅಂಬೇಡ್ಕರ್‌-ನೆಹರೂ ಪ್ರತಿಮೆ ಮಧ್ಯೆ ಸ್ಥಾಪನೆಗೆ ಒಲವು

ಬೆಂಗಳೂರು; ಶ್ರೀ ಜಗಜ್ಯೋತಿ ಬಸವೇಶ್ವರ ಪುತ್ಥಳಿಯನ್ನು ಈ ಮೊದಲು ವಿಧಾನಸೌಧದ ಆವರಣದೊಳಗೇ ಸ್ಥಾಪಿಸಲು ಸ್ಥಳ ಗುರುತಿಸಿದ್ದ ಸರ್ಕಾರವು ಇದೀಗ ವಿಧಾನಸೌಧ ಆವರಣದ ಎದುರಿನ ಸ್ಥಳವನ್ನು ಗುರುತಿಸಿದೆ ಎಂದು ತಿಳಿದು ಬಂದಿದೆ.

 

ವಿಧಾನಸೌಧದ ಆವರಣದೊಳಗೆ ಜಗಜ್ಯೋತಿ ಬಸವೇಶ್ವರ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಹಿಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಹೇಳಿದ್ದರಲ್ಲದೇ ಈ ಸಂಬಂಧ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದರು. ಆದರೀಗ ವಿಧಾನಸೌಧದ ಆವರಣದ ಎದುರಿಗಿರುವ ಸ್ಥಳವನ್ನು ಗುರುತಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಅಲ್ಲದೇ ವಿಧಾನಸೌಧ ಆವರಣದೊಳಗೆ ಅಶ್ವಾರೂಢ ಬಸವೇಶ್ವರ ಪ್ರತಿಮೆ ಸ್ಥಾಪಿಸಲು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಸೂಚಿಸಿದ್ದರು. ಆದರೀಗ ಸ್ಥಳ ಬದಲಾಯಿಸಲು ಚಿಂತಿಸಿರುವ ಬಸವರಾಜ ಬೊಮ್ಮಾಯಿ ಅವರ  ನೇತೃತ್ವದ  ಸರ್ಕಾರವು ಪ್ರತಿಮೆ ವಿನ್ಯಾಸವನ್ನೂ ಬದಲಿಸಿದೆ. ಬಸವಣ್ಣನವರು ವಚನ ಬರೆಯುತ್ತಿರುವ ರೀತಿಯ ಪ್ರತಿಮೆ ಸ್ಥಾಪಿಸಲು ಮುಂದಾಗಿದೆ ಎಂದು ಗೊತ್ತಾಗಿದೆ.

 

ವಿಧಾನಸೌಧದ ಈಶಾನ್ಯ ಭಾಗದ ರೋಸ್‌ ಗಾರ್ಡನ್‌ ಸ್ಥಳದಲ್ಲಿ ಜಗಜ್ಯೋತಿ ಬಸವೇಶ್ವರ ಪುತ್ಥಳಿಯನ್ನು ನಿರ್ಮಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ 2021ರ ಜುಲೈ 9ರಂದು ಪತ್ರ ಬರೆದಿತ್ತು. ಇದಕ್ಕೆ ಸರ್ಕಾರವು ಮಂಜೂರಾತಿಯನ್ನು ನೀಡಿತ್ತು. ಆದರೀಗ . ಜವಾಹರಲಾಲ್‌ ನೆಹರು ಮತ್ತು ಅಂಬೇಡ್ಕರ್‌ ಪ್ರತಿಮೆಯ ಮಧ್ಯಭಾಗದಲ್ಲಿ ಜಗಜ್ಯೋತಿ ಬಸವೇಶ್ವರ ಪ್ರತಿಮೆ ಮತ್ತು ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಸ್ಥಾಪಿಸಲು ಕೌಶಲ್ಯಾಭಿವೃದ್ಧಿ ಸಚಿವ ಅಶ್ವಥ್‌ನಾರಾಯಣ್‌ ಅವರು ಸೂಚಿಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದಾರೆ.

 

‘ಪರಸ್ಪರ ಅಭಿಮುಖವಾಗಿ ಹಾಲಿ ಇರುವ ಡಾ ಬಿ ಆರ್‌ ಅಂಬೇಡ್ಕರ್‌, ಜವಹರಲಾಲ್‌ ನೆಹರು ಅವರ ಪುತ್ಥಳಿಗಳು ಇರುವಂತೆಯೇ ಪ್ರಸ್ತಾಪಿತ ಪುತ್ಥಳಿಗಳನ್ನು ಪರಸ್ಪರ ಅಭಿಮುಖವಾಗಿ ನಿರ್ಮಿಸುವ ಅಥವಾ ಪೂರ್ವಾಭಿಮುಖವಾಗಿ ಪುತ್ಥಳಿಯನ್ನು ಪ್ರತಿಷ್ಠಾಪಿಸಲು,’ ನಿರ್ದೇಶನ ಕೋರಿರುವುದು  ಎಂದು ಗೊತ್ತಾಗಿದೆ.

 

12 ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದ ಸಮಾನತೆಯ ಹರಿಕಾರ ಬಸವಣ್ಣನವರ ಪುತ್ಥಳಿಯನ್ನು ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದ ಆವರಣದಲ್ಲಿ ನಿರ್ಮಿಸುವುದರಿಂದ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮುಕುಟಪ್ರಾಯವಾಗುತ್ತದೆ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಿತ್ತು.

 

ಬಸವೇಶ್ವರ ವೃತ್ತದಲ್ಲಿ ಅಶ್ವಾರೂಢ ಬಸವಣ್ಣನವರ ಕಂಚಿನ ಪ್ರತಿಮೆಯನ್ನು 1994ರ ಆ.26ರಂದು ಅನಾವರಣಗೊಳಿಸಲಾಗಿತ್ತು. ಆ ನಂತರ ಅಶ್ವಾರೂಢ ಬಸವೇಶ್ವರ ಪ್ರತಿಮೆಯನ್ನು ಬಿಬಿಎಂಪಿ ಮರುವಿನ್ಯಾಸಗೊಳಿಸಿ ನವೀಕರಣಗೊಳಿಸಿತ್ತು. ಅದನ್ನು ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ಅವರು ಲೋಕಾರ್ಪಣೆಗೊಳಿಸಿದ್ದರು.

 

ಬೆಳ್ಳಿ ಮಹೋತ್ಸವದ ಸಂದರ್ಭದಲ್ಲಿ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಈಗಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಪ್ರತಿಮೆಯ ಸುತ್ತಲೂ ಅನುಭವ ಮಂಟಪ, ಬಸವಣ್ಣನ ವಚನಗಳ ಸಾರಗಳನ್ನು ಸಾರುವ ರಚನೆಯನ್ನು ನಿರ್ಮಿಸಲು ತೀರ್ಮಾನಿಸಲಾಗಿತ್ತು. 2019–20ನೇ ಸಾಲಿನಲ್ಲಿ ಗಂಗಾಂಬಿಕೆ ಅವರು ಮೇಯರ್‌ ಆಗಿದ್ದಾಗ ಈ ಕಾಮಗಾರಿಗೆ ₹ 1.50 ಕೋಟಿ ಮಂಜೂರು ಮಾಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts