ಎನ್‌ಇಪಿ ಹೆಸರಿನಲ್ಲಿ ರಾಷ್ಟ್ರೋತ್ಥಾನಕ್ಕೆ ಮತ್ತಷ್ಟು ಗೋಮಾಳ; ನೀರಿನ ಮೂಲವಲ್ಲವೆಂದು ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಕೆ

ಬೆಂಗಳೂರು; ರಾಷ್ಟ್ರೀಯ ನೂತನ ಶೈಕ್ಷಣಿಕ ನೀತಿಯನ್ನು ವಿಸ್ತರಿಸುವ ಹೆಸರಿನಲ್ಲಿ ಆನೇಕಲ್‌ ತಾಲೂಕು ಮತ್ತು ಚಿಕ್ಕಮಗಳೂರು ತಾಲೂಕಿನ ವಿವಿಧೆಡೆ ಗೋಮಾಳ, ಸರ್ಕಾರಿ ಜಾಗಗಳ ಮಂಜೂರಾತಿಗೆ ರಾಷ್ಟ್ರೋತ್ಥಾನ ಪರಿಷತ್‌ ಸಲ್ಲಿಸಿರುವ ಪ್ರಸ್ತಾವನೆಯನ್ನು ಪುರಸ್ಕರಿಸಿರುವ ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿದೆ.

 

ಇಂದು  ನಡೆಯಲಿರುವ ಸಚಿವ ಸಂಪುಟಕ್ಕೆ ಕಡತವನ್ನು ಮಂಡಿಸಿರುವ ಕಂದಾಯ ಇಲಾಖೆಯು ಕಾನೂನು ಮತ್ತು ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯವನ್ನು ಬದಿಗೆ ಸರಿಸಿರುವುದು ಗೊತ್ತಾಗಿದೆ.

 

ಬೆಂಗಳೂರು ನಗರ ಜಿಲ್ಲೆ ಆನೇಕಲ್‌ ತಾಲೂಕಿನ ಜಿಗಳಿ ಹೋಬಳಿಯ ಹುಲಿಮಂಗಲ ಗ್ರಾಮದ ಸರ್ವೆ ನಂಬರ್‌ 155ರ ಬ್ಲಾಕ್‌ ನಂ ಬಿ 23ರಲ್ಲಿ 1-36 ಎಕರೆ ಜಾಗವಿರುವುದು ನಮ್ಮ ಗಮನಕ್ಕೆ ಬಂದಿದೆ. ಆದ್ದರಿಂದ ಈ ಜಾಗವನ್ನು ನಮ್ಮ ಸಂಸ್ಥೆಗೆ ಮಂಜೂರು ಮಾಡಿ ನಮ್ಮ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ ದಿನೇಶ್ ಹೆಗ್ಡೆ ಅವರು 2022ರ ಫೆ.2ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಹಾಗೆಯೇ ರಾಷ್ಟ್ರೋತ್ಥಾನ ಪರಿಷತ್‌ ಈಗಾಗಲೇ ರಾಜ್ಯದ ವಿವಿಧೆಡೆ ಹೊಂದಿರುವ ಜಮೀನುಗಳ ಕುರಿತಾದ ವಿವರವನ್ನು ಪ್ರಸ್ತಾವನೆಯಲ್ಲಿ ನಮೂದಿಸಿರಲಿಲ್ಲ.

 

ಈ ಪ್ರಸ್ತಾವನೆಯನ್ನು ಪುರಸ್ಕರಿಸಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್‌ ಅವರು ‘ಪ್ರಸ್ತಾಪಿತ ಜಮೀನು ಸರ್ಕಾರಿ ಗೋಮಾಳ ಜಮೀನಾಗಿದ್ದು ಯಾವುದೇ ನೀರಿನ ಮೂಲವಾಗಿರುವುದಿಲ್ಲ,’ ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ವರದಿ ಸಲ್ಲಿಸಿದ್ದರು. ನೀರಿನ ಮೂಲವಾಗಿಲ್ಲ ಎಂಬುದನ್ನೇ ನೆಪವಾಗಿರಿಸಿಕೊಂಡಿದ್ದ ಜಿಲ್ಲಾಧಿಕಾರಿಯು ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳ ಜಮೀನನ್ನು ಮಂಜೂರು ಮಾಡಲು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಶಿಫಾರಸ್ಸು ಮಾಡಿದ್ದರು. ಈ ಶಿಫಾರಸ್ಸನ್ನಾಧರಿಸಿ ಸಚಿವ ಸಂಪುಟಕ್ಕೆ ಮಂಡಿಸಲು ಸಚಿವ ಆರ್‌ ಅಶೋಕ್‌ ಅವರು ಅನುಮೋದಿಸಿದ್ದರು.

 

ಅಲ್ಲದೆ ಇದೇ ಜಮೀನನ್ನು ಮಂಜೂರು ಮಾಡುವ ಸಂಬಂಧ ತಯಾರಿಸಿದ್ದ ಚೆಕ್‌ಲಿಸ್ಟ್‌ನಲ್ಲಿ ಈ ಗ್ರಾಮದಲ್ಲಿ ಎಷ್ಟು ಜಾನುವಾರುಗಳಿವೆ ಮತ್ತು ಗೋಮಾಳ ಜಮೀನು ಮಂಜೂರು ಮಾಡುವುದರಿಂದ ಮೇವಿನ ಕೊರತೆ ಉಂಟಾಗಲಿದೆಯೆ ಎಂಬ ಕುರಿತು ಯಾವುದೇ ಮಾಹಿತಿಯನ್ನೂ ನೀಡಿರಲಿಲ್ಲ ಎಂಬುದು ಲಭ್ಯವಿರುವ ಚೆಕ್‌ಲಿಸ್ಟ್‌ನಿಂದ ತಿಳಿದು ಬಂದಿದೆ.

 

ಆದರೂ ರಾಷ್ಟ್ರೋತ್ಥಾನ ಪರಿಷತ್‌ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಜೆ ಮಂಜುನಾಥ್‌ ಅವರು 2022ರ ಏಪ್ರಿಲ್‌ 30ರಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ರಾಷ್ಟ್ರೋತ್ಥಾನ ಪರಿಷತ್‌ ಪ್ರಸ್ತಾಪಿಸಿರುವ ಗೋಮಾಳ ಸರ್ವೆನಂಬರ್‌ 155ರಲ್ಲಿನ ಜಮೀನುಗಳಿಗೆ ಸಂಬಂಧಿಸಿದಂತೆ ವಿಧಾನಮಂಡಲದ ಅರ್ಜಿಗಳ ಸಮಿತಿ ಮುಂದೆ ವಿಚಾರಣೆಯಲ್ಲಿದೆ. ಈ ಅರ್ಜಿಯು ಇನ್ನೂ ಇತ್ಯರ್ಥಗೊಳಿಸಿಲ್ಲ. ಸದ್ಯ ವಿಚಾರಣೆ ಹಂತದಲ್ಲಿದ್ದರೂ ಬೆಂಗಳೂರು ನಗರ ಜಿಲ್ಲಾಧಿಕಾರಿಯು ರಾಷ್ಟ್ರೋತ್ಥಾನ ಪರಿಷತ್‌ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸ್ವೀಕರಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಜಿಲ್ಲಾಧಿಕಾರಿ ಪತ್ರದಲ್ಲೇನಿದೆ?

 

ಆನೇಕಲ್‌ ತಾಲೂಕು ಜಿಗಣಿ ಹೋಬಳಿಯ ಹುಲಿಮಂಗಲ ಗ್ರಾಮದ ಸರ್ವೆ ನಂಬರ್‌ 155 ಮೂಲತಃ ಸರ್ಕಾರಿ ಗೋಮಾಳ ಜಮೀನಾಗಿದ್ದು ಮೂಲ ವಿಸ್ತೀರ್ಣ 185-04 ಎಕರೆ ಜಮೀನಿನ ಪೈಕಿ ಈ ಹಿಂದೆ ಪೋಡಿ ದುರಸ್ತಿ ಆಗಿ ಉಳಿಕೆ ಆಕಾರ್‌ ಬಂದ್‌ ನಂತೆ 68-30 ಎಕರೆ ಇದೆ. ಈ ಸರ್ವೆ ನಂಬರ್‌ನ ಜಮೀನುಗಳಿಗೆ ಸಂಬಂಧಿಸಿದಂತೆ ಕರ್ನಾಟಕ ವಿಧಾನಮಂಡಲದ ಅರ್ಜಿ ಸಮಿತಿಯ ವಿಚಾರಣೆ ಹಂತದಲ್ಲಿದೆ. ಇದು ಇತ್ಯರ್ಥಕ್ಕೆ ಬಾಕಿ ಇದೆ. ಈ ಜಮೀನಿನ ಸರ್ಕಾರಿ ಮಾರ್ಗಸೂಚಿ ದರ ಎಕರೆಯೊಂದಕ್ಕೆ 95 ಲಕ್ಷ ರು., ಮಾರುಕಟ್ಟೆ ಮೌಲ್ಯ ಎಕರೆಗೆ 2.50 ಕೋಟಿ ರು ಇದೆ ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಗಮನಕ್ಕೆ ತಂದಿರುವುದು ಪತ್ರದಿಂದ ಗೊತ್ತಾಗಿದೆ.

 

ಅದೇ ರೀತಿ ಚಿಕ್ಕಮಗಳೂರು ಕಸಬಾ ಹೋಬಳಿಯ ಹಿರೇಮಗಳೂರು ಗ್ರಾಮದಲ್ಲಿಯೂ ಅಂದಾಜು 6 ಎಕರೆ ವಿಸ್ತೀರ್ಣದ ಗೋಮಾಳವನ್ನು ಮಂಜೂರು ಮಾಡಲು ಕಂದಾಯ ಇಲಾಖೆಯು ಕಡತವನ್ನು ಸಚಿವ ಸಂಪುಟದ ಮುಂದಿರಿಸಿದೆ ಎಂದು ಗೊತ್ತಾಗಿದೆ.

 

ರಾಷ್ಟ್ರೀಯ ನೂತನ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ಮುಂದಿರಿಸಿಕೊಂಡು ಶೈಕ್ಷಣಿಕ ಕೇಂದ್ರಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಗೋಮಾಳ ಜಮೀನು ಮಂಜೂರಿಗಾಗಿ ವಿವಿಧ ಜಿಲ್ಲಾಧಿಕಾರಿಗಳ ಬಳಿ ಇರುವ ಪ್ರಸ್ತಾವನೆಗಳನ್ನು ಸಚಿವ ಸಂಪುಟದ ಮುಂದೆ ಮಂಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಧಾನ ಕಾರ್ಯದರ್ಶಿ ಎನ್‌ ಮಂಜುನಾಥ್‌ ಪ್ರಸಾದ್‌ ಅವರು ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಒತ್ತಡ ಹೇರುತ್ತಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

 

ಈ ಸಂಬಂಧ ಎನ್‌ ಮಂಜುನಾಥ್‌ ಪ್ರಸಾದ್‌ ಅವರು 2022ರ ಏಪ್ರಿಲ್‌ 21ರಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಟಿಪ್ಪಣಿ ಹೊರಡಿಸಿದ್ದರು. ‘ರಾಷ್ಟ್ರೋತ್ಥಾನ ಪರಿಷತ್‌ನ ವಿವಿಧ ಪ್ರಸ್ತಾವನೆಗಳು ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಬಳಿ ಬಾಕಿ ಇದ್ದು ಸದರಿ ಪ್ರಸ್ತಾವನೆಗಳನ್ನು ಕೂಡಲೇ ಜಿಲ್ಲಾಧಿಕಾರಿಯವರಿಂದ ಪಡೆದು ತುರ್ತಾಗಿ ಪಡೆದು ಸಚಿವ ಸಂಪುಟದ ಮುಂದೆ ಮಂಡಿಸಬೇಕು ಎಂದು ಮುಖ್ಯಮಂತ್ರಿಯವರು ನಿರ್ದೇಶಿಸಿದ್ದಾರೆ,’ ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

SUPPORT THE FILE

Latest News

Related Posts