ಸರ್ಕಾರಕ್ಕೆ ಆದಾಯ ನಷ್ಟ; ಸಂಗ್ರಹಾಲಯಗಳಲ್ಲೇ ಕೊಳೆತ ನಾಟ, ಹಾಳುಬಿದ್ದ ಅರಣ್ಯ ಉತ್ಪನ್ನ

ಬೆಂಗಳೂರು; ಸರ್ಕಾರಿ ನಾಟಾ ಸಂಗ್ರಹಾಲಯಗಳಲ್ಲಿ ನಾಟಾ ಮತ್ತು ಇತರೆ ಅರಣ್ಯ ಉತ್ಪನ್ನಗಳನ್ನು ಬಹಿರಂಗ ಹರಾಜು ಮೂಲಕ ವಿಲೇ ಮಾಡಲು ಅನುಮತಿ ಸಿಗದ ಕಾರಣ ಸರ್ಕಾರಿ  ಸಂಗ್ರಹಾಲಯಗಳಲ್ಲಿ ನಾಟ, ಅರಣ್ಯ ಉತ್ಪನ್ನಗಳು ಹಾಳಾಗುತ್ತಿದೆ. ಅಲ್ಲದೇ ಇದರಿಂದ ಸರ್ಕಾರಕ್ಕೆ ಬಹುಕೋಟಿಗಳಷ್ಟು ಆದಾಯವು ನಷ್ಟವುಂಟಾಗುತ್ತಿದೆ.

 

ಬಹಿರಂಗ ಹರಾಜಿಗೆ ಅವಕಾಶ ಮಾಡಿಕೊಡಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಕಳೆದ 2 ವರ್ಷಗಳಿಂದಲೂ ಪ್ರಸ್ತಾವನೆ ಸಲ್ಲಿಸುತ್ತಿದ್ದರೂ ಸರ್ಕಾರ ಮಾತ್ರ ಇದುವರೆಗೂ ಅನುಮತಿ ನೀಡುತ್ತಿಲ್ಲ. ಈ ಸಂಬಂಧ 2022ರ ನವೆಂಬರ್‌ 7ರಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು) ಅರಣ್ಯ ಪರಿಸರ ಜೀವಿಶಾಸ್ತ್ರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ನಾಟಾ ಮತ್ತು ಅರಣ್ಯ ಉತ್ಪನ್ನಗಳನ್ನು 2017ರ ನವೆಂಬರ್‌ 30ರಿಂದ ಇ-ಹರಾಜು ಮೂಲಕ ವಿಲೇ ಮಾಡುತ್ತಿದೆ. ಆದರೆ ಇ-ಹರಾಜಿನಲ್ಲಿ ಸರ್ಕಾರಿ ನಾಟಾ ಸಂಗ್ರಹಾಲಯಗಳಲ್ಲಿನ ಅರಣ್ಯ ಉತ್ಪನ್ನಗಳನ್ನು ವಿಲೇ ಮಾಡುವಲ್ಲಿ ನಿರೀಕ್ಷಿತ ಪ್ರಗತಿ ಕಂಡು ಬಂದಿಲ್ಲ. ಅಲ್ಲದೆ ಹರಾಜಾಗದೇ ಉಳಿದಿರುವ ಅರಣ್ಯ ಉತ್ಪನ್ನಗಳ ಲಾಟುಗಳು ಮುಂದಿನ ದಿನಗಳಲ್ಲಿ ಇ-ಹರಾಜಿನಲ್ಲಿ ವಿಲೇವಾರಿಯಾಗುವುದು ಸಹ ಕಷ್ಟಸಾಧ್ಯವಾಗುತ್ತದೆ ಎಂಬ ಅಂಶವನ್ನು ಪತ್ರದಲ್ಲಿ ಉಲ್ಲೇಖಿಸಿದೆ.

 

 

ಧಾರವಾಡ ವಿಭಾಗಕ್ಕೆ ಸಂಬಂಧಿಸಿದಂತೆ ಹರಾಜಾಗದೇ ಉಳಿದಿರುವ ಲಾಟುಗಳನ್ನು ಮತ್ತೊಂದು ಬಾರಿ ಇ-ಹರಾಜಿಗೆ ಇಟ್ಟು ಅವುಗಳು ಹರಾಜಾಗದೇ ಇದ್ದಲ್ಲಿ ಈ ಲಾಟುಗಳು ಬಿಸಿಲು, ಮಳೆ, ಗಾಳಿಗೆ ಸಿಲುಕಿ ಹಾಳಾಗುತ್ತಿವೆ. ಮಂಗಳೂರು ವಿಭಾಗದ ನೆಟ್ಟಣ ಕೇಂದ್ರೀಯ ನಾಟಾ ಸಂಗ್ರಹಾಲಯದಲ್ಲಿ ಕೆಲವು ನಾಟಾಗಳು ಕುಂಬಾಗಿ ಮಣ್ಣಾಗಿವೆ. ಹೀಗಾಗಿ ಈ ನಾಟಾಗಳು ಗುಣಮಟ್ಟ ಕಳೆದುಕೊಂಡಿವೆ. ಇಂತಹ ಉತ್ಪನ್ನಗಳನ್ನು ಇ-ಹರಾಜು ಹಾಕಿದರೆ ಬಿಡ್‌ದಾರರು ಭಾಗವಹಿಸಲು ಆಸಕ್ತಿ ವಹಿಸುವುದಿಲ್ಲ ಎಂದು ಪತ್ರದಲ್ಲಿ ವಿವರಿಸಲಾಗಿದೆ.

 

 

‘ಶಿವಮೊಗ್ಗ ವಿಭಾಗ ವ್ಯಾಪ್ತಿಯ ಅಲ್ಕೋಳದಲ್ಲಿರುವ ಸರ್ಕಾರಿ ನಾಟಾ ಸಂಗ್ರಹಾಲಯದಲ್ಲಿ ಅರಣ್ಯ ಮೊಕದ್ದಮೆಗಳಿಗೆ ಸಂಬಂಧಿಸಿದ ನಾಟಾ ಮತ್ತು ಅರಣ್ಯ ಉತ್ಪನ್ನಗಳು ಕ್ಷೀಣಿಸುತ್ತಿವೆ. ಇದು ಇನ್ನಷ್ಟು ಹಾಳಾಗುವ ಮುನ್ನ ಸಾರ್ವಜನಿವಾಗಿ ಬಹಿರಂಗ ಹರಾಜು ಮೂಲಕ ವಿಲೇ ಮಾಡಲು ಸರ್ಕಾರವು ಅನುಮತಿ ನೀಡಬೇಕು ಎಂದು ಅರಣ್ಯಾಧಿಕಾರಿಗಳು ಪದೇಪದೇ ಪ್ರಸ್ತಾವನೆಗಳನ್ನು ಸಲ್ಲಿಸುತ್ತಿದ್ದರೂ ಸರ್ಕಾರ ಇದುವರೆಗೂ ಪರಿಗಣಿಸುತ್ತಿಲ್ಲ ಎಂಬುದು ಪತ್ರಗಳಿಂದ ತಿಳಿದು ಬಂದಿದೆ.

 

 

‘ಅರಣ್ಯ ಉತ್ಪನ್ನಗಳನ್ನು ಹಾಗೆಯೇ ಬಿಟ್ಟರೆ ಬಿಸಲು, ಗಾಳಿ, ಮಳೆಗೆ ಸಿಲುಕಿ ಹಾಳಾಗುವ ಸಂಭವ ಇರುವುದರಿಂದ ಹಾಗೂ ಸರ್ಕಾರಕ್ಕೆ ಹೆಚ್ಷಿನ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಇ-ಹರಾಜಿನಲ್ಲಿ ಕನಿಷ್ಠ ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಹರಾಜಾಗದೇ ಉಳಿದಿರುವ ಲಾಟುಗಳನ್ನು ವಿಲೇಗೊಳಿಸಲು ಒಂದು ಬಾರಿ ಅನ್ವಯವಾಗುವಂತೆ ಹಾಗೂ ಇಲಾಖೆಗೆ ಕೋಟ್ಯಂತರ ರುಪಾಯಿಗಳಷ್ಟು ಆದಾಯ ನಷ್ಟವಾಗುವುದನ್ನು ತಪ್ಪಿಸಬೇಕು,’ ಎಂದು ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು.

 

ಇ-ಹರಾಜಿನಲ್ಲಿ ವಿಲೇವಾರಿಯಾಗದೇ ಇರುವ ಲಾಟುಗಳಲ್ಲಿ ಮೆದು ಜಾತಿಯ ಅರಣ್ಯ ಉತ್ಪನ್ನಗಳಲ್ಲದೇ ಇತರೆ ಜಾತಿಯ ಅರಣ್ಯ ಉತ್ಪನ್ನಗಳು ಸಹ ಇವೆ. ಅವುಗಳನ್ನು ಹಾಗೆಯೇ ಇಟ್ಟಲ್ಲಿ ಕ್ರಮೇಣವಾಗಿ ಹಾಳಾಗುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಲಾಟುಗಳನ್ನು ಬಹಿರಂಗ ಹರಾಜಿಗೆ ಒಳಪಡಿಸಿದಲ್ಲಿ ತಕ್ಷಣವೇ ವಿಲೇಯಾಗುವ ಸಾಧ್ಯತೆ ಇವೆ. ಇದಕ್ಕೆ ಅನುಮತಿ ನೀಡಿದರೆ ಸರ್ಕಾರಕ್ಕೆ ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ ಎಂಬ ಅಂಶವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

 

ನಾಟಾ ಮತ್ತು ಇತರೆ ಅರಣ್ಯ ಉತ್ಪನ್ನಗಳ ಇ-ಹರಾಜಿನಲ್ಲಿ ಎಲ್ಲಾ ಸಣ್ಣ ಮತ್ತು ದೊಡ್ಡ ಬಿಡ್‌ದಾರರು ಭಾಗವಹಿಸುತ್ತಿಲ್ಲ. ಕೆಲ ಬಿಡ್‌ದಾರರು ಬಳಿ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ ಸೌಲಭ್ಯವಿಲ್ಲ. ಅಥವಾ ಬಳಸಲು ಅವರಿಗೆ ಜ್ಞಾನವಿಲ್ಲ. ಹೀಗಾಗಿ ಇ-ಹರಾಜಿನಲ್ಲಿ ಭಾಗವಹಿಸುತ್ತಿಲ್ಲ ಎಂದು ಪತ್ರದಲ್ಲಿ ಸರ್ಕಾರದ ಗಮನಕ್ಕೆ ತರಲಾಗಿದೆ.

 

2020-21ರಲ್ಲಿ 87,058 ಲಾಟುಗಳು, 2021-22ರಲ್ಲಿ 71,1414, 2022-23ರ ಸೆಪ್ಟಂಬರ್‌ ಅಂತ್ಯಕ್ಕೆ 30,502 ಸೇರಿ ಕಳೆದ ಮೂರು ಸಾಲಿನಲ್ಲಿ ಸರಾಸರಿ 62,901 ಲಾಟುಗಳು ಇ-ಹರಾಜಿನಲ್ಲಿ ವಿಲೇ ಮಾಡಲು ಇಡಲಾಗಿದೆ. ಅದೇ ರೀತಿ 2021-21ರಲ್ಲಿ 50,478, 2021-22ರಲ್ಲಿ 43,337, 2022-23ರ ಸೆಪ್ಟಂಬರ್‌ ಅಂತ್ಯಕ್ಕೆ 23,173 ಲಾಟುಗಳು ವಿಲೇಯಾಗಿವೆ.

 

ಬಹಿರಂಗ ಹರಾಜಿಗೆ ಅನುಮತಿ ನೀಡಬೇಕು ಎಂದು ಹಿಂದಿನ ಅರಣ್ಯ ಸಚಿವರಾಗಿದ್ದ ಉಮೇಶ್‌ ಕತ್ತಿ ಅವರ ಗಮನಕ್ಕೂ ತರಲಾಗಿತ್ತು. ಈಗ ಈ ಖಾತೆಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಇದೆ. ಅವರು ಕಾರ್ಯದ ಒತ್ತಡದಿಂದಾಗಿ ಈ ಬಗ್ಗೆ ಗಮನಹರಿಸಲಾಗುತ್ತಿಲ್ಲ. ಹೀಗಾಗಿ ಬಹಿರಂಗ ಹರಾಜಿಗೆ ಅನುಮತಿ ನೀಡಬೇಕೇ ಅಥವಾ ಇ-ಹರಾಜಿನಲ್ಲಿ ಯಾವ ಸುಧಾರಣೆ ತರಬೇಕು ಎಂಬ ಬಗ್ಗೆ ಇಲಾಖೆಯ ಉನ್ನತ ಅಧಿಕಾರಿಗಳು ಗೊಂದಲದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts