ಬೆಂಗಳೂರು; ‘ನರೇಗಾ‘ ಯೋಜನೆ ಅಡಿಯಲ್ಲಿ ನಡೆದಿದ್ದ ಚೆಕ್ ಡ್ಯಾಂ ಕಾಮಗಾರಿಗಳ ನಿರ್ಮಾಣದಲ್ಲಿ ಸರ್ಕಾರಕ್ಕೆ ಆರ್ಥಿಕ ನಷ್ಟಕ್ಕೆ ಕಾರಣರಾಗಿದ್ದ ಇಂಜಿನಿಯರ್‌ಗಳ ವಿರುದ್ಧ ಒಂದೂವರೇ ವರ್ಷಗಳ ಕಳೆದರೂ ದೋಷಾರೋಪಣೆ ಪಟ್ಟಿ ಸಲ್ಲಿಸಿಲ್ಲ.
ಕುಷ್ಟಗಿ ತಾಲೂಕಿನ ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪವಿಭಾಗದಿಂದ 2019-20ನೇ ಸಾಲಿನಲ್ಲಿ ನಡೆದಿದ್ದ 635 ಚೆಕ್ ಡ್ಯಾಂ ಕಾಮಗಾರಿಗಳ ನಿರ್ಮಾಣದಲ್ಲಿ ಸರ್ಕಾರಕ್ಕೆ ಆರ್ಥಿಕ ನಷ್ಟವುಂಟಾಗಿತ್ತು. ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿ ಆಪಾದಿತ ಅಧಿಕಾರಿ, ನೌಕರರು, ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವ ಸಂಬಂಧ ದೋಷಾರೋಪಣೆ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಿತ್ತು. ಆದರೆ ಕೊಪ್ಪಳ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯು ಒಂದೂವರೇ ವರ್ಷ ಕಳೆದರೂ ಸರ್ಕಾರಕ್ಕೆ ಯಾವ ಮಾಹಿತಿಯನ್ನೂ ನೀಡಿಲ್ಲ.
ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು 2022ರ ಅಕ್ಟೋಬರ್ 7ರಂದು ಕೊಪ್ಪಳ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಎರಡನೇ ನೆನಪೋಲೆಯನ್ನು ಬರೆದಿದ್ದಾರೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
‘ಕುಷ್ಟಗಿ ತಾಲೂಕಿನ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಳ್ಳಲಾಗಿರುವ 635 ಕಾಮಗಾರಿಗಳನ್ನು ಜಿಲ್ಲಾ ಗುಣ ನಿಯಂತ್ರಣ ಮಾನಿಟರ್ ಮತ್ತು ರಾಜ್ಯ ಗುಣನಿಯಂತ್ರಣ ಮಾನಿಟರ್‌ಗಳಿಂದ ಸ್ಥಳ ಪರಿಶೀಲನೆ ಕೈಗೊಳ್ಳಲಾಗಿದೆ. ಈ ಪೈಕಿ 115 ಕಾಮಗಾರಿಗಳ ಸ್ಥಳ ತೋರಿಸಿಲ್ಲದ ಕಾರಣ ಪರಿವೀಕ್ಷಣೆ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ 115 ಕಾಮಗಾರಿಗಳಿಗೆ ಮಾಡಿರುವ ವೆಚ್ಚವನ್ನು ಲೆಕ್ಕಾಚಾರ ಮಾಡಿ ಇದಕ್ಕೆ ಕಾರಣರಾದ ಎಲ್ಲಾ ಅಧಿಕಾರಿ, ನೌಕರರ ಹಾಗೂ ಜನಪ್ರತಿನಿಧಿಗಳು ಭಾಗಿಯಾಗಿದ್ದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು. ಅಧಿಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ದೋಷಾರೋಪಣೆ ಪಟ್ಟಿಯೊಂದಿಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಕೋರಲಾಗಿತ್ತು. ಆದರೆ ಸುಮಾರು ಒಂದೂವರೆ ವರ್ಷಕ್ಕೂ ಹೆಚ್ಚಿನ ಅವಧಿ ಕಳೆದರೂ ಮಾಹಿತಿಯು ಲಭ್ಯವಾಗಿಲ್ಲ,’ ಎಂದು ನೆನಪೋಲೆಯಲ್ಲಿ ವಿವರಿಸಲಾಗಿದೆ.
ಚೆಕ್‌ಡ್ಯಾಂ ನಿರ್ಮಾಣದ ಹೆಸರಿನಲ್ಲಿ ನಡೆದ ಕೋಟ್ಯಂತರ ಅನುದಾನ ದುರ್ಬಳಕೆಗೆ ಸಂಬಂಧಿಸಿದಂತೆ ಸಮರ್ಪಕ ದಾಖಲೆಗಳೊಂದಿಗೆ ವಿವರಣೆ ನೀಡುವಂತೆ ಕಳೆದ ಮಾರ್ಚ್ 13 ರಂದು ನೋಟಿಸ್ ನೀಡಲಾಗಿತ್ತು. ಆದರೆ ಉತ್ತರ ನೀಡುವುದಕ್ಕೆ ಎಂಜಿನಿಯರ್‌ಗಳು ಒಂದು ತಿಂಗಳ ಕಾಲಾವಕಾಶ ಕೇಳಿದ್ದರು. ತಿಂಗಳು ಕಳೆದರೂ ಉತ್ತರ ನೀಡದೆ ನಿರ್ಲಕ್ಷ್ಯ ವಹಿಸಿದ್ದರು.
ಎಇಇ ಶಂಕರ ಮಳಗಿ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಉಪ ವಿಭಾಗದ ಈ ಹಿಂದಿನ ಪ್ರಭಾರ ಎಇಇ ಶಿವಾನಂದ ನಾಗೋಡ, ಹಾಗೂ ಕಿರಿಯ ಎಂಜಿನಿಯರ್‌ಗಳಾದ ಎಂ.ಇಲಿಯಾಸ್, ಅಶ್ವಿನಿ (ಸದ್ಯ ಹಗರಿಬೊಮ್ಮನಹಳ್ಳಿಯ ಗ್ರಾಮೀಣ ಕುಡಿಯುವ ನೀರು ಉಪ ವಿಭಾಗದಲ್ಲಿ), ರಿಝ್ವಾನಾ ಮತ್ತು ಅಜಿತ್ ದಳವಾಯಿ ಎಂಬುವವರಿಗೆ ನೋಟಿಸ್ ನೀಡಲಾಗಿತ್ತು.
ಯಾರಿಂದ ಎಷ್ಟು ನಷ್ಟ: ಶಿವಾನಂದ ನಾಗೋಡ ಅವರು 198 ಕಾಮಗಾರಿಗಳಿಗೆ ಸಂಬಂಧಿಸಿದಂತೆ ₹ 19.47 ಕೋಟಿ ಮೊತ್ತದ ಅಂದಾಜು ವರದಿ ತಯಾರಿಸಿ, ಎಂಬಿ ದಾಖಲೆಯಲ್ಲಿ ₹ 5.57 ಕೋಟಿ ಮೊತ್ತವನ್ನು ನಮೂದಿಸಿದ್ದರು. ಎಂಐಎಸ್‌ದಲ್ಲಿ 3.70 ಕೋಟಿ ಅಳವಡಿಸಲಾಗಿದೆ. ಅಲ್ಲದೆ ಅನುಷ್ಠಾನಗೊಳ್ಳದ ಕಾಮಗಾರಿಗಳಿಗೂ 4.54 ಕೋಟಿ ಹಣವನ್ನು ಹೆಚ್ಚುವರಿಯಾಗಿ ಅಳತೆ ಪುಸ್ತಕದಲ್ಲಿ ದಾಖಲಿಸಲಾಗಿದೆ. ಇದರಿಂದಾಗಿ ಅವರು, 2.70 ಕೋಟಿ ಹಣ ದುರ್ಬಳಕೆಗೆ ಕಾರಣರಾಗಿದ್ದಾರೆ ಎಂದು ನೋಟಿಸ್‌ನಲ್ಲಿ ವಿವರಿಸಲಾಗಿತ್ತು.
ಕಿರಿಯ ಎಂಜಿನಿಯರ್ ಎಂ.ಇಲಿಯಾಸ್ ಅವರು, ಅನುಷ್ಠಾನಗೊಳ್ಳದ ಕಾಮಗಾರಿಗಳಿಗೂ ಹೆಚ್ಚುವರಿಯಾಗಿ ₹ 3.38 ಕೋಟಿ ಹಣವನ್ನು ನಮೂದಿಸಿರುವುದು, ಅಳತೆಗಿಂತಲೂ ಹೆಚ್ಚುವರಿ ಮೊತ್ತವನ್ನು ಎಂಐಎಸ್‌ದಲ್ಲಿ ಅಳವಡಿಸಿ 2.51 ಕೋಟಿ ಹಣ ದುರ್ಬಳಕೆಗೆ ಕಾರಣರಾಗಿದ್ದರು ಎಂದು ಆರೋಪಿಸಲಾಗಿತ್ತು. ಕಿರಿಯ ಎಂಜಿನಿಯರ್ ಅಶ್ವಿನಿ ಎಂಬುವವರು ಅನುಷ್ಠಾನಗೊಳ್ಳದೇ ಇರುವ ಕಾಮಗಾರಿಗಳಿಗೆ ಅಳತೆ ಪುಸ್ತಕದಲ್ಲಿ ₹ 24.17 ಲಕ್ಷ ಮೊತ್ತವನ್ನು ಹೆಚ್ಚುವರಿಯಾಗಿ ನಮೂದಿಸಿರುವುದು, ಅಳತೆಗಿಂತಲೂ ಹೆಚ್ಚುವರಿ ಹಣವನ್ನು ಎಂಐಎಸ್‌ದಲ್ಲಿ ಅಳವಡಿಸಿ ₹ 27 ಲಕ್ಷ ಹಣ ದುರ್ಬಳಕೆಗೆ ಕಾರಣರಾಗಿದ್ದಾರೆ ಎಂಬ ಆಪಾದನೆ ಕೇಳಿ ಬಂದಿತ್ತು.
ಕಿರಿಯ ಎಂಜಿನಿಯರ್ ಶ್ರೀಮತಿ ರಿಝ್ವಾನಾ ಎಂಬುವವರು ಅನುಷ್ಠಾನಗೊಳ್ಳದೇ ಇರುವ ಕಾಮಗಾರಿಗಳಿಗೆ ಅಳತೆ ಪುಸ್ತಕದಲ್ಲಿ 81.44 ಲಕ್ಷ ಮೊತ್ತವನ್ನು ಹೆಚ್ಚುವರಿಯಾಗಿ ನಮೂದಿಸಿದ್ದರು. ಎಂಐಎಸ್‌ದಲ್ಲಿ ಅಳತೆಗಿಂತಲೂ ಹೆಚ್ಚುವರಿ ಹಣ ಪಾವತಿಸುವ ಮೂಲಕ ₹ 81.44 ಲಕ್ಷ ಹಣ ದುರ್ಬಳಕೆಗೆ ಕಾರಣರಾಗಿ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂದು ವಿವರಿಸಲಾಗಿತ್ತು.
ಮತ್ತೊಬ್ಬ ಕಿರಿಯ ಎಂಜಿನಿಯರ್ ಅಜಿತ್ ದಳವಾಯಿ ಎಂಬುವವರಿಗೆ ನೀಡಿರುವ ನೋಟಿಸ್‌ದಲ್ಲಿ ಅನುಷ್ಠಾನಗೊಳ್ಳದ ಕಾಮಗಾರಿಗಳಿಗೆ 2.46 ಲಕ್ಷ ಹಣವನ್ನು ಅಳತೆ ಪುಸ್ತಕದಲ್ಲಿ ಹೆಚ್ಚುವರಿಯಾಗಿ ನಮೂದಿಸಿ ಸರ್ಕಾರಕ್ಕೆ ಅಷ್ಟು ಮೊತ್ತದ ಹಣ ದುರುಪಯೋಗಕ್ಕೆ ಕಾರಣರಾಗಿರುವುದನ್ನು ನೋಟಿಸ್‌ದಲ್ಲಿ ವಿವರಿಸಲಾಗಿತ್ತು.