ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ,ವಿಶೇ‍ಷ ಹೂಡಿಕೆ ವಲಯ ಸ್ಥಾಪನೆಗೆ ವಿಧೇಯಕ;ಆರ್ಥಿಕ ಹೊರೆ ಹೆಚ್ಚಿಸಿದರೇ ನಿರಾಣಿ?

ಬೆಂಗಳೂರು; ಕೈಗಾರಿಕೆ ವಲಯಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯನಿರ್ವಹಿಸುತ್ತಿದ್ದರೂ ವಿಶೇಷ ಹೂಡಿಕೆ ವಲಯ ಹೆಸರಿನಲ್ಲಿ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲು ಹೊರಟಿರುವ ರಾಜ್ಯ ಬಿಜೆಪಿ ಸರ್ಕಾರವು ಈ ಸಂಬಂಧ ವಿಧೇಯಕವನ್ನು ಮಂಡಿಸಲು ಮುಂದಾಗಿದೆ.

 

ಹಾಗೆಯೇ ವಿಶೇಷ ಹೂಡಿಕೆ ವಲಯವನ್ನು ಸ್ಥಾಪಿಸಿದರೆ ಆರ್ಥಿಕ ಹೊರೆಯಾಗಲಿದೆ ಎಂದು ಶಾಸನ ರಚನಾ ಇಲಾಖೆ ಅಭಿಪ್ರಾಯಿಸಿದ್ದರೂ ಸಹ ವಿಶೇಷ ಹೂಡಿಕೆ ಪ್ರದೇಶವನ್ನು ಸ್ಥಾಪಿಸುವ ಮೂಲಕ ಆರ್ಥಿಕ ಹೊರೆಯನ್ನು ಮೈ ಮೇಲೆ ಎಳೆದುಕೊಳ್ಳಲು ಹೊರಟಿದೆ.

 

ವಿಶೇಷ ಹೂಡಿಕೆ ವಲಯ ಮತ್ತು ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರದ ರಚನೆಯು ಕೆಐಎಡಿಬಿಯ ನಕಲು ಮಾಡಿದಂತಾಗುತ್ತದೆ ಎಂದೂ ಶಾಸನ ರಚನೆ ಮತ್ತು ಸಂಸದೀಯ ಇಲಾಖೆಯು ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಬದಿಗಿರಿಸಿರುವ ಸರ್ಕಾರವು ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ 2022ನ್ನು ಮಂಡಿಸಲು ಅತ್ಯಾಸಕ್ತಿ ವಹಿಸಿದೆ. ಮುಂಬರುವ ಅಧಿವೇಶನದಲ್ಲಿ ಈ ವಿಧೇಯಕವನ್ನು ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ಅವರು ಮಂಡಿಸಲಿದ್ದಾರೆ. ವಿಧೇಯಕದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಜಾಗತಿಕ ಬಂಡವಾಳ ಹೂಡಿಕದಾರರ ಸಮಾವೇಶಕ್ಕೆ ಸಜ್ಜುಗೊಳ್ಳುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರವು ಮಂಡಿಸಲು ಉದ್ದೇಶಿಸಿರುವ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ,2022 ಮಹತ್ವ ಪಡೆದುಕೊಂಡಿದೆ.

 

‘ಕರ್ನಾಟಕ ರಾಜ್ಯದಲ್ಲಿ ದೊಡ್ಡ ಅಥವಾ ಅತಿ ದೊಡ್ಡ ಅಥವಾ ಬೃಹತ್‌ ಅತಿದೊಡ್ಡ ಗಾತ್ರದ ಹೂಡಿಕೆಯ ಪ್ರದೇಶಗಳು, ಕೈಗಾರಿಕೆ ಪ್ರದೇಶಗಳು, ಕ್ಲಸ್ಟರ್‌ಗಳನ್ನು ಸ್ಥಾಪಿಸುವುದು, ನಿಯಂತ್ರಣೆ, ನಿರ್ವಹಣೆ, ಕರ್ನಾಟಕವನ್ನು ಜಾಗತಿಕ ಉತ್ಪಾದನಾ ಮುಖ್ಯ ಸ್ಥಳವನ್ನಾಗಿ ಉಳಿಸಿಕೊಳ್ಳಲು, ವಿಶ್ವದರ್ಜೆಯ ಮೂಲಸೌಕರ್ಯ, ವಿಶಿಷ್ಟ ನಾಗರಿಕ ಸೌಲಭ್ಯಗಳು, ಶ್ರೇಷ್ಠತೆಯ ಕೇಂದ್ರಗಳು, ಪೂರ್ವಭಾವಿ ನೀತಿಚೌಕಟ್ಟಿನ ಮೂಲಕ ವಿಶೇಷ ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ 2022ನ್ನು ರೂಪಿಸಲಾಗಿದೆ,’ ಎಂದು ವಿಧೇಯಕದ ಉದ್ದೇಶವನ್ನು ವಿವರಿಸಿದೆ.

 

ಕೈಗಾರಿಕೆ ವಲಯಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಈಗಾಗಲೇ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯನಿರ್ವಹಿಸುತ್ತಿರುವುದರಿಂದ ವಿಧೇಯಕದಲ್ಲಿ ಪ್ರಸ್ತಾಪಿಸಿರುವ ವಿಶೇಷ ಹೂಡಿಕೆ ವಲಯ ಮತ್ತು ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರದ ರಚನೆಯು ಕೆಐಎಡಿಬಿಯ ನಕಲು ಮಾಡಿದಂತಾಗುತ್ತದೆ ಎಂದೂ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.

 

ಗುಜರಾತ್‌ ಮಾದರಿ ವಿಶೇಷ ಹೂಡಿಕೆ ವಲಯಕ್ಕೆ ವಿಧೇಯಕ; ಶಾಸನ ರಚನೆ ಇಲಾಖೆ ಅಸಮ್ಮತಿ?

ಶಾಸನ ರಚನೆ ಇಲಾಖೆ ನೀಡಿದ್ದ ಅಭಿಪ್ರಾಯ

 

ಪ್ರಸ್ತುತ ಕೈಗಾರಿಕೆ ಪ್ರದೇಶಾಭಿವೃದ್ಧಿಗಾಗಿ ಭೂಮಿಯನ್ನು ನಿಯಮಾನುಸಾರ ಸರ್ಕಾರದಿಂದ ಪಡೆದು ಕೈಗಾರಿಕೆ ವಲಯಗಳನ್ನು ಸ್ಥಾಪಿಸುವ ಕಾರ್ಯವನ್ನು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು ನಿರ್ವಹಿಸುತ್ತಿದೆ. ಈಗ ಪ್ರಸ್ತಾಪಿಸಿರುವ ವಿಶೇಷ ಹೂಡಿಕೆ ವಲಯವನ್ನು (The Karnataka Special Investment Region Bill 2021) ಸಹ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯೇ ನಿರ್ವಹಿಸುವುದು ಸೂಕ್ತ. ಇಲ್ಲದಿದ್ದರೆ ಇದು Duplication of work and Authority ಆಗುತ್ತದೆ ಹಾಗೂ ಇದರಿಂದ ಆರ್ಥಿಕ ಹೊರೆಯಾಗುತ್ತದೆ ಎಂದು ಶಾಸನ ರಚನೆ ಇಲಾಖೆ ಹೇಳಿತ್ತು.

 

ಆರ್ಥಿಕ ಹೊರೆ; ಇಲಾಖೆ ಎಚ್ಚರಿಕೆ ನಡುವೆಯೂ ವಿಶೇಷ ಹೂಡಿಕೆ ವಲಯ ರಚನೆ ಕುರಿತು ಬಜೆಟ್‌ನಲ್ಲಿ ಘೋಷಣೆ

ಪ್ರಸ್ತಾಪಿಸಿರುವ ವಿಧೇಯಕದಲ್ಲಿ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರವು ನಿರ್ವಹಿಸುವ ಕಾರ್ಯವನ್ನು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು ನಿರ್ವಹಿಸುತ್ತಿರುವುದರಿಂದ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರದ ಅಗತ್ಯತೆ ಇದೆಯೇ ಎಂಬುದನ್ನು ಪರಿಶೀಲಿಸುವಂತೆ ಆಡಳಿತ ಇಲಾಖೆಯನ್ನು ಕೋರಿತ್ತು.
Special Investment Region ಯಾವ ಆಧಾರದ ಮೇಲೆ ಗುರುತಿಸಲಾಗುವುದು ಎಂಬುದರ ಬಗ್ಗೆ ಮರು ಪರಿಶೀಲಿಸುವಂತೆ ಕೋರಿತ್ತು. ವಿಧೇಯಕದಲ್ಲಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯನ್ನೇ Apex Authorityಯನ್ನಾಗಿ ಮಾಡುವುದರಿಂದ ಪ್ರಸ್ತಾವಿತ ವಿಧೇಯಕದ ಅಗತ್ಯತೆ ಕಂಡು ಬರುವುದಿಲ್ಲ ಎಂದು ಹೇಳಿತ್ತು.

 

Special Investment Region to be Industrial Township ಇದು ನಗರ ಮತ್ತು ಗ್ರಾಮ ಸ್ಥಳೀಯ ಸಂಸ್ಥೆಗಳ ಕಾರ್ಯ ಸ್ವರೂಪಕ್ಕೆ ವ್ಯತಿರಿಕ್ತವಾಗುತ್ತದೆ. Industrial Townships ನ್ನು muncipalities Act ಅಡಿಯಲ್ಲಿ ರಚಿಸಬೇಕು ಎಂದಿತ್ತು.

 

ಪ್ರಸ್ತಾಪಿಸಿರುವ ವಿಧೇಯಕದಲ್ಲಿನ Special Investment Region and Regional Development Authorityಯ ಉಪ ಬಂಧಗಳನ್ನು ಅಗತ್ಯವಾದಲ್ಲಿ the karnataka industrial area developement act 1966ಗೆ ಸೂಕ್ತ ತಿದ್ದುಪಡಿಯನ್ನು ತರುವುದರ ಮೂಲಕ ಅಳವಡಿಸುವ ಬಗ್ಗೆ ಪರಿಶೀಲಿಸುವಂತೆ ಕೋರಿರುವುದು ತಿಳಿದು ಬಂದಿದೆ.

 

ಸರ್ಕಾರವು ಮಂಡಿಸಲು ಉದ್ದೇಶಿಸಿರುವ ವಿಧೇಯಕದಲ್ಲಿ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ ರಚನೆ ಕುರಿತು ಪ್ರಸ್ತಾಪಿಸಿದೆ. ಈ ಮೂಲಕ ಶಾಸನ ರಚನೆ ಇಲಾಖೆಯ ಅಭಿಪ್ರಾಯವನ್ನು ಬದಿಗಿರಿಸಿ ಕೆಐಎಡಿಬಿಗೆ ಎದುರಾಗಿ ಮತ್ತೊಂದು ಪ್ರಾಧಿಕಾರ ರಚಿಸಲು ಹೊರಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಅಲ್ಲದೇ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರದಲ್ಲಿ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಧಾನ ವ್ಯವಸ್ಥಾಪಕರು, ರಾಜ್ಯ ಸರ್ಕಾರದ ಇಬ್ಬರು ಸಿಬ್ಬಂದಿ ಇರಲಿದ್ದಾರೆ. ಅಧ್ಯಕ್ಷರನ್ನು ರಾಜ್ಯ ಸರ್ಕಾರವು ನೇಮಕ ಮಾಡಲಿದೆ ಎಂದು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆಯಾದರೂ ಮುಖ್ಯಮಂತ್ರಿ ಅಥವಾ ಕೈಗಾರಿಕೆ ಸಚಿವರು ಅಧ್ಯಕ್ಷರಾಗಲಿದ್ದಾರೆಯೇ ಅಥವಾ ಖಾಸಗಿ ಉದ್ಯಮಿ ಇರಲಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ.

 

ಹಾಗೆಯೇ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಅಧಿನಿಯಮ, 1966 (1966ರ ಕರ್ನಾಟಕ ಅಧಿನಿಯಮ 18)ರ 5ನೇ ಪ್ರಕರಣದ ಅಡಿಯಲ್ಲಿ ಸ್ಥಾಪಿಸಲಾದ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು ವಿಶೇಷ ಹೂಡಿಕೆ ಪ್ರದೇಶ ಅಗ್ರ ಪ್ರಾಧಿಕಾರವಾಗಲಿದೆ ಎಂದು ಹೇಳಲಾಗಿದೆ.

 

ಈ ಪ್ರಾಧಿಕಾರವು ರಾಜ್ಯದೊಳಗಿನ ವಿಶೇಷ ಹೂಡಿಕೆ ಪ್ರದೇಶಗಳ ಅಭಿವೃದ್ಧಿ ಕಾರ್ಯಾಚರಣೆ, ನಿಯಂತ್ರಣ, ವ್ಯವಸ್ಥಾಪನೆಗಾಗಿ ಹಾಗೂ ವಿಶೇಷ ಹೂಡಿಕೆ ಪ್ರದೇಶದೊಳಗೆ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ವಿನಿಯಮಗಳನ್ನು ರಚಿಸಲಿದೆ. ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರವು ಸಿದ್ಧಪಡಿಸಿದ ಮತ್ತು ಪ್ರಸ್ತಾವಿಸಿದ ಅಭಿವೃದ್ಧಿ ಯೋಜನೆ, ನಗರ ಯೋಜನೆ, ಸಾಮಾನ್ಯ ಅಭಿವೃದ್ಧಿ ವಿನಿಯಮಗಳನ್ನು ಮಾರ್ಪಾಡಿನೊಂದಿಗೆ ಅಥವಾ ಮಾರ್ಪಾಡಿಲ್ಲದೇ ಅನುಮೋದಿಸಲಿದೆ.

 

ದೊಡ್ಡ ಗಾತ್ರ ಹೂಡಿಕೆ ಪ್ರದೇಶ, ಕೈಗಾರಿಕೆ ವಸಾಹತುಗಳ ಸ್ಥಾಪನೆ, ಕಾರ್ಯಾಚರಣೆ, ನಿಯಂತ್ರಣ ಮತ್ತು ನಿರ್ವಹಣೆಗೆಗಾಗಿ ಗುಜರಾತ್‌ ಮಾದರಿಯಲ್ಲಿ ಶಿವಮೊಗ್ಗ, ಕಲ್ಬುರ್ಗಿ ಮತ್ತು ಧಾರವಾಡದಲ್ಲಿ ವಿಶೇಷ ಹೂಡಿಕೆ ವಲಯ ಸ್ಥಾಪಿಸಲು ಮುಂದಾಗಿದೆ.

the fil favicon

SUPPORT THE FILE

Latest News

Related Posts