ಅರಣ್ಯ ಉತ್ಪನ್ನ ಸಾಗಾಣಿಕೆಯಲ್ಲಿ ಭ್ರಷ್ಟಾಚಾರ; 7.50 ಕೋಟಿ ಮುಂಗಡ ಹಣಕ್ಕೆ ಲೆಕ್ಕವೇ ಇಲ್ಲ

ಬೆಂಗಳೂರು; ಅರಣ್ಯ ಉತ್ಪನ್ನಗಳನ್ನು ಸಾಗಾಣಿಕೆ ಮಾಡುವ ಸಂಬಂಧ ನೀಡಿದ್ದ ಕೋಟ್ಯಂತರ ರುಪಾಯಿ ಮುಂಗಡ ಹಣವನ್ನು ಬಳಸಿಕೊಂಡಿರುವ ಅರಣ್ಯಾಧಿಕಾರಿಗಳು , ಲಾಗಿಂಗ್‌ ಮೇಲ್ವಿಚಾರಕರು , ಆರ್‌ಎಂಪಿ ಘಟಕದ ಪ್ರಾದೇಶಿಕ ವ್ಯವಸ್ಥಾಪಕರು ಲೆಕ್ಕಪತ್ರಗಳನ್ನು ಸಲ್ಲಿಸಲು ಮುಂದಾಗಿಲ್ಲ.

 

ಅಲ್ಲದೇ ಮುಂಗಡ ಹಣಕ್ಕೆ ಸರಿ ಹೊಂದಿಸದೇ ಇರುವ ಹಲವಾರು ಪ್ರಕರಣಗಳು ಮತ್ತು ನಿಗಮಕ್ಕೆ ಬರಬೇಕಿರುವ ಬಹುಕೋಟಿ ರು.ಗಳಷ್ಟು ಬಾಕಿ ಹಣವನ್ನೂ ವಸೂಲು ಮಾಡಲು ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ ಎಂಬುದು ಸೇರಿದಂತೆ ಆರ್ಥಿಕ ಅಶಿಸ್ತಿನ ಹಲವು ಪ್ರಕರಣಗಳು ಇದೀಗ ಬಹಿರಂಗವಾಗಿದೆ.
ಅಲ್ಲದೇ ನೆಡುತೋಪುಗಳಲ್ಲಿನ ಯೋಗ್ಯವಾದ ವಿವಿಧ ಜಾತಿಯ ಮರಗಳನ್ನು ಕಡಿದು ನಿಗದಿಪಡಿಸಿದ ಡಿಪೋಗಳಿಗೆ ಅರಣ್ಯ ಉತ್ಪನ್ನಗಳನ್ನು ಸಾಗಾಣಿಕೆ ಮಾಡುವುದರಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದೆ ಎಂಬ ಗುರುತರವಾದ ಆರೋಪಗಳು ಕೇಳಿ ಬಂದಿವೆ.

 

ಇದಕ್ಕೆ ಪೂರಕವಾಗಿ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಆರ್‌ಎಂಪಿ ಘಟಕದ ಪ್ರಾದೇಶಿಕ ವ್ಯವಸ್ಥಾಪಕ ಎಂ ಬಿ ಸುಧೀಂದ್ರನಾಯಕ್‌ ಅವರ ಪ್ರಕರಣವು ನಿದರ್ಶನವನ್ನು ಒದಗಿಸಿದೆ. 7.82 ಕೋಟಿ ರು. ಮುಂಗಡ ಹಣ ಪಡೆದಿದ್ದ ಸುಧೀಂದ್ರನಾಯಕ್‌ ಅವರು ಈ ಹಣವನ್ನು ವಿನಿಯೋಗಿಸಿದ ಬಗ್ಗೆ ಲೆಕ್ಕಪತ್ರಗಳನ್ನು ಸಲ್ಲಿಸಿಲ್ಲ. ಹಾಗೂ ಮುಂಗಡ ಹಣಕ್ಕೆ ಸರಿಹೊಂದಿಸಿಲ್ಲ. ಹೀಗಾಗಿ ಇವರನ್ನು ಅಮಾನತು ಮಾಡಿ 2022ರ ಅಕ್ಟೋಬರ್‌ 25ರಂದು ಆದೇಶ ಹೊರಡಿಸಲಾಗಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ಹಿನ್ನೆಲೆಯಲ್ಲಿ ‘ಕರ್ನಾಟಕ ನಾಗರಿಕ ಸೇವಾ ನಿಯಮಗಳು 1966ರ ನಿಯಮ 3ರಂತೆ ಕರ್ತವ್ಯದಲ್ಲಿ ಅಶಿಸ್ತು ಮತ್ತು ಅನಧಿಕೃತ ಗೈರು ಹಾಜರಿ ಇರುವುದರಿಂದ ಮತ್ತು ತೀವ್ರ ಆರ್ಥಿಕ ದುರ್ಬಳಕೆ ಅಶಿಸ್ತಿನ ಕಾರಣ ಎಂ ಬಿ ಸುಧೀಂದ್ರನಾಯಕ ಅವರ ವಿರುದ್ಧ ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಿ ನಿಗಮದ ಸೇವೆಯಿಂದ ಅಮಾನತುಗೊಳಿಸಲಾಗಿದೆ,’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

 

ಆದೇಶದಲ್ಲೇನಿದೆ?

 

ಅರಣ್ಯ ಇಲಾಖೆಯು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮಕ್ಕೆ ವಹಿಸಿಕೊಡುವ ವಿವಿಧ ವಿಭಾಗಗಳಲ್ಲಿನ ಆಯ್ದ ನೆಡುತೋಪುಗಳಲ್ಲಿನ ಮರಗಳನ್ನು ಕಡಿಯಲು ಯೋಗ್ಯವಾದ ವಿವಿಧ ಜಾತಿಯ ಮರಗಳನ್ನು ಕಡಿದು ನಿಗದಿಪಡಿಸಿದ ಡಿಪೋಗಳಿಗೆ ಅರಣ್ಯ ಉತ್ಪನ್ನಗಳನ್ನು ಸಾಗಾಣಿಕೆ ಮಾಡಬೇಕಿದೆ. ಈ ರೀತಿ ಕಾಮಗಾರಿಗಳಿಗಾಗಿ ಆರ್‌ಎಂಪಿ ಘಟಕದ ಪ್ರಾದೇಶಿಕ ವ್ಯವಸ್ಥಾಪಕ (ಹೆಚ್ಚುವರಿ ಪ್ರಭಾರ) ಎಂ ಬಿ ಸುಧೀಂದ್ರನಾಯಕ್‌ ಎಂಬುವರಿಗೆ 7.82 ಕೋಟಿ ರು. ಮುಂಗಡ ಹಣ ನೀಡಲಾಗಿತ್ತು.

 

ಆದರೆ ಈ ಹಣವನ್ನು ಉಪಯೋಗಿಸಿಕೊಂಡು ಕಾಮಗಾರಿ ಕೈಗೊಂಡ ಅರಣ್ಯ ಉತ್ಪನ್ನಗಳನ್ನು ತಯಾರಿಸಿ ಡಿಪೋಗಳಿಗೆ ಸಾಗಿಸಿದ ಕುರಿತು ಯಾವುದೇ ಪ್ರಗತಿ ವರದಿಗಳನ್ನು ಸಲ್ಲಿಸಿಲ್ಲ. ಅಲ್ಲದೇ ಈ ಹಣವನ್ನು ವಿನಿಯೋಗಿಸಿದ ಬಗ್ಗೆ ಲೆಕ್ಕಪತ್ರಗಳನ್ನು ಸಲ್ಲಿಸಿ ಮುಂಗಡ ಹಣಕ್ಕೆ ಸರಿ ಹೊಂದಿಸಿರುವುದಿಲ್ಲ.

 

ಅಲ್ಲದೆ ಖರೀದಿದಾರರಿಂದ ಹಾಗೂ ಇತರರಿಗೆ ನಿಗಮಕ್ಕೆ ಬರಬೇಕಿದ್ದ ಬಾಕಿ 3.78 ಕೋಟಿ ರು. ವಸೂಲಿ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆದೇಶದಲ್ಲಿ ವಿವರಿಸಲಾಗಿದೆ.

SUPPORT THE FILE

Latest News

Related Posts