ಬೆಂಗಳೂರು; ಸಿದ್ದರಾಮಯ್ಯ ಅವರ ನೇತೃತ್ವದಲ್ಲಿದ್ದ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೀನದಯಾಳ್ ಉಪಾಧ್ಯಾಯ ಗ್ರಾಮೀಣ ವಿದ್ಯುತ್ ಯೋಜನೆಯನ್ನು ಕಾರ್ಯಗತಗೊಳಿಸುವ ವೇಳೆಯಲ್ಲಿ ಒಳಸಂಚು, ವಂಚನೆ ನಡೆಸುವ ಮೂಲಕ ಅಂದಾಜು ವೆಚ್ಚಕ್ಕಿಂತ 121.81 ಕೋಟಿ ರು. ಹೆಚ್ಚಿನ ಮೊತ್ತಕ್ಕೆ ಗುತ್ತಿಗೆ ನೀಡಲಾಗಿತ್ತು ಎಂಬುದು ಬಹಿರಂಗವಾಗಿದೆ.
ಚಿಕ್ಕಮಗಳೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ನಿಗದಿಪಡಿಸಿದ್ದ ಅಂದಾಜು ಮೊತ್ತಕ್ಕಿಂತ 74.39 ಕೋಟಿ ರು. ಹೆಚ್ಚಿನ ಮೊತ್ತಕ್ಕೆ ಗುತ್ತಿಗೆ ನೀಡಲಾಗಿತ್ತು. ಈ ಯೋಜನೆಯನ್ನುಅನುಷ್ಠಾನಗೊಳಿಸುವ ವೇಳೆಯಲ್ಲಿ ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿದ್ದಲ್ಲದೇ ನಿಯಮಗಳನ್ನೇ ಮಾರ್ಗಪಲ್ಲಟಗೊಳಿಸಿ ಗುತ್ತಿಗೆ ನೀಡುವ ಮೂಲಕ ಭಾರೀ ಅಕ್ರಮಕ್ಕೆ ದಾರಿಮಾಡಿಕೊಡಲಾಗಿತ್ತು.
ಮೀಟರ್ ಪೆಟ್ಟಿಗೆ, ಇನ್ಸುಲೇಟರ್, ಕಂಡಕ್ಟರ್ ಮುಂತಾದ ಸಾಮಗ್ರಿಗಳನ್ನು ಖರೀದಿಸುವಲ್ಲಿ ಗುತ್ತಿಗೆದಾರರು ವಿಳಂಬ ಎಸಗಿದ್ದರು. ಕಾಮಗಾರಿಗಳನ್ನು ನೀಡಿದ್ದ ವರ್ಷದ ಬಳಿಕ ಸಾಮಗ್ರಿಗಳನ್ನು ಖರೀದಿಸಿದ್ದರು. ಕೆಲ ಜಿಲ್ಲೆಗಳಲ್ಲಿ ಜುಲೈ 2018ಕ್ಕೆ ಪ್ರತಿಯಾಗಿ ಆಗಸ್ಟ್ 2018ರಿಂದ ಮಾರ್ಚ್ 2019ರ ನಡುವೆ ಖರೀದಿಸಿದ್ದರು. ಹೀಗಾಗಿ ಅಂದಾಜು ವೆಚ್ಚಕ್ಕಿಂತಲೂ ಹೆಚ್ಚಿನ ಗುತ್ತಿಗೆ ಮೌಲ್ಯವನ್ನು ನಿಗದಿಯಾಗಿತ್ತು. ಹೀಗಾಗಿ ಇಡೀ ಯೋಜನೆ ಗುತ್ತಿಗೆಯಲ್ಲಿ ಒಳಸಂಚು, ವಂಚನೆ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ದೀನದಯಾಳ್ ಉಪಾಧ್ಯಾಯ ಗ್ರಾಮೀಣ ವಿದ್ಯುತ್ ಯೋಜನೆ ಕಾಮಗಾರಿಗಳ ಸಂಬಂಧ ಟೆಂಡರ್‌ಗಿಟ್ಟ ಅಂದಾಜು ಮೊತ್ತಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ಗುತ್ತಿಗೆ ನೀಡಿರುವ ಕುರಿತು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿಯಲ್ಲಿ ವಿವರಿಸಲಾಗಿದೆ.
ವಿಶೇಷವೆಂದರೆ ಈ ಯೋಜನೆಗಳಡಿಯಲ್ಲಿ ಕಾಮಗಾರಿಗಳ ಟೆಂಡರ್‌ನ್ನು ಕೆಲವೇ ಕೆಲವು ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಮಾಡಲಾಗಿದೆ ಮತ್ತು ಭೂಗತ ಕೇಬಲ್ ಅಳವಡಿಸುವುದರಲ್ಲಿ ಭಾರೀ ಅವ್ಯವಹಾರಗಳು ನಡೆದಿರುವ ಕುರಿತು ಹಲವು ದೂರುಗಳು ಸಲ್ಲಿಕೆಯಾಗಿದ್ದವು.
ಆದರೆ ದೂರುದಾರರು ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು 2021ರ ಫೆ.4ರಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸದನಕ್ಕೆ ಮಾಹಿತಿ ಒದಗಿಸಿದ್ದರು. ಆದರೀಗ ಒಂದು ವರ್ಷದ ಅಂತರದಲ್ಲೇ ಸಿಎಜಿ ನೀಡಿರುವ ವರದಿಯಲ್ಲಿ ಈ ಕಾಮಗಾರಿಗಳ ಟೆಂಡರ್‌ನಲ್ಲಿ ಹೇಗೆಲ್ಲಾ ಒಳಸಂಚು ಮತ್ತು ವಂಚನೆ ನಡೆದಿದೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ.
ಡಿ ಕೆ ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದ ಅವಧಿಯಲ್ಲಿ (2014 ನವಂಬರ್‌ನಿಂದ 2017ರ ಏಪ್ರಿಲ್ ಅವಧಿ) ಬೆಂಗಳೂರು ಗ್ರಾಮಾಂತರ, ಮೈಸೂರು, ತುಮಕೂರು, ಬೀದರ್, ರಾಯಚೂರು, ಮಂಡ್ಯ, ಚಿಕ್ಕಮಗಳೂರು, ಹಾವೇರಿ, ಶಿವಮೊಗ್ಗ ಮತ್ತು ಉಡುಪಿ ಸೇರಿ ಒಟ್ಟು 10 ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ಕಂಪನಿಗಳು 556.4 ಕೋಟಿ ರು.ಅಂದಾಜು ಮೊತ್ತವನ್ನು ಟೆಂಡರ್‌ಗಿಡಲಾಗಿತ್ತು. ಆದರೆ ಈ ಜಿಲ್ಲೆಗಳಲ್ಲಿ ಗುತ್ತಿಗೆ ಮೌಲ್ಯವನ್ನು 678.21 ಕೋಟಿ ರು.ಗೆ ನಿಗದಿಪಡಿಸಿ ಅಂದಾಜು ಮೊತ್ತಕ್ಕಿಂತಲೂ ಒಟ್ಟು 121.81 ಕೋಟಿ ರು.ಗೆ ಹೆಚ್ಚಳ ಮಾಡಲಾಗಿತ್ತು. ಅಂದಾಜುಗಳಿಗಿಂತ ಗಮನಾರ್ಹವಾದಂತಹ ಅಧಿಕ ದರಗಳಲ್ಲಿ ಅಂದರೆ ಶೇ. 12.57ರಿಂದ ಶೇ.30.68ರವರೆಗಿನ ಅಧಿಕ ದರಗಳಲ್ಲಿ ಗುತ್ತಿಗೆ ನೀಡಲಾಗಿತ್ತು ಎಂಬುದನ್ನು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ಗುತ್ತಿಗೆಗಳನ್ನು ಗಮನಾರ್ಹವಾದಂತಹ ಅಧಿಕ ಪ್ರೀಮಿಯಂಗೆ ನೀಡಲಾಗಿತ್ತು. ಅದು ಕರ್ನಾಟಕ ಸಾರ್ವಜನಿಕ ಖರೀದಿಗಳು ಹಾಗೂ ಸೇವೆಗಳನ್ನು ಪಡೆದುಕೊಳ್ಳುವಲ್ಲಿ ಪಾರದರ್ಶಕತೆ ಅಧಿನಿಯಮ ಅನುವುಗಳ ಅನುಸಾರ ಆಗಿರಲಿಲ್ಲ ಎಂಬುದು ವಾಸ್ತವಾಂಶವಾಗಿತ್ತು. ದೀನ್‌ದಯಾಳ್ ಉಪಾಧ್ಯಾಯ ಗ್ರಾಮೀಣ ವಿದ್ಯುತ್ ಯೋಜನೆ ಸಂಬಂಧದ ಕಾಮಗಾರಿಗಳ ಬಗ್ಗೆ ವಿದ್ಯುತ್ ಸರಬರಾಜು ಕಂಪನಿಗಳು ಮೌನವಾಗಿದ್ದವು,’ ಎಂದು ವರದಿಯಲ್ಲಿ ಹೇಳಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 117.53 ಕೋಟಿ ರು. ಟೆಂಡರ್‌ಗಿಟ್ಟ ಮೊತ್ತವಾಗಿದ್ದರೆ ಅದನ್ನು 144.39 ಕೋಟಿ ರು. ಹೆಚ್ಚಾಗಿತ್ತು. ಅಂದರೆ 26.86 ಕೋಟಿ ರು. ಹೆಚ್ಚಾಗಿತ್ತು. ಶಿವಮೊಗ್ಗ ಜಿಲ್ಲೆಯಲ್ಲಿ 147.44 ಕೋಟಿ ರು. ಟೆಂಡರ್‌ಗಿಟ್ಟ ಮೊತ್ತವಾಗಿದ್ದರೆ 181.35 ಕೋಟಿ ರು. ಗೆ. ಗುತ್ತಿಗೆ ಮೌಲ್ಯ ನಿಗದಿಪಡಿಸುವ ಮೂಲಕ 32.91 ಕೋಟಿ ರು.ಗೆ ಹೆಚ್ಚಳಗೊಂಡಿತ್ತು. ತುಮಕೂರು ಜಿಲ್ಲೆಯಲ್ಲಿ 70.48 ಕೋಟಿ ರು.ಗಳನ್ನು ಟೆಂಡರ್‌ಗಿಟ್ಟ ಅಂದಾಜು ಮೊತ್ತವಾಗಿದ್ದರೆ, ಅದನ್ನು ನೀಡಿದ್ದು 84.17 ಕೋಟಿ ರು. ಗೆ ನಿಗದಿಪಡಿಸಿ 14.62 ಕೋಟಿ ರು. ಹೆಚ್ಚಳಗೊಂಡಿತ್ತು ಎಂಬುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.
ಇನ್ನುಳಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ (2014ರ ನವೆಂಬರ್‌ನಲ್ಲಿ ಗುತ್ತಿಗೆ ಕಾಮಗಾರಿ) ಟೆಂಡರ್‌ಗೆ 3.98 ಕೋಟಿ ರು. ಅಂದಾಜಿಸಿದ್ದರೆ ಗುತ್ತಿಗೆ ಮೌಲ್ಯವನ್ನು 5.33 ಕೋಟಿ ರು.ಗೆ (ಶೇಕಡವಾರು ಪ್ರೀಮೀಯಂ 30.68) ನಿಗದಿಪಡಿಸಲಾಗಿತ್ತು. ಮೈಸೂರು (ನವೆಂಬರ್ 2014) 23.50 ಕೋಟಿ ರು. ಅಂದಾಜು ಮೊತ್ತವಾಗಿದ್ದರೆ 26.49 ಕೋಟಿ (ಶೇ. 12.70) ಮೌಲ್ಯ ನಿಗದಿಪಡಿಸಿತ್ತು. ತುಮಕೂರು (ಜನವರಿ 2017) 69.55 ಕೋಟಿ ರು. ಅಂದಾಜು ವೆಚ್ಚವಾಗಿದ್ದರೇ ಅದನ್ನು 84.17 ಕೋಟಿ ರು. ಗೆ (ಶೇ. 26.90) ಹೆಚ್ಚಳಗೊಳಿಸಿತ್ತು.
ಬೀದರ್ (ಜುಲೈ 2017)ನಲ್ಲಿ 70.48 ಕೋಟಿ ರು. ಅಂದಾಜು ವೆಚ್ಚವಾಗಿದ್ದರೆ 84.19 ಕೋಟಿ (ಶೇ. 19.44)ಗೆ ನಿಗದಿಗೊಳಿಸಿದ್ದರೇ ರಾಯಚೂರು (ಜುಲೈ 2017) ಜಿಲ್ಲೆಯಲ್ಲಿ ನಿಗದಿಗೊಳಿಸಿದ್ದ 41.96 ಕೋಟಿ ರು. ಅಂದಾಜು ವೆಚ್ಚಕ್ಕೆ ಬದಲಾಗಿ 51.98 ಕೋಟಿ (ಶೇ. 23.90) ಗೆ ಏರಿಸಲಾಗಿತ್ತು. ಮಂಡ್ಯ ಜಿಲ್ಲೆಯಲ್ಲಿ (2017 ಫೆಬ್ರುವರಿ) 47.81 ಕೋಟಿ ರು. ಬದಲಿಗೆ 58.56 ಕೋಟಿ (ಶೇ. 22.49), ಚಿಕ್ಕಮಗಳೂರು (2017 ಏಪ್ರಿಲ್) 117.53 ಕೋಟಿ ರು. ಅಂದಾಜು ವೆಚ್ಚಕ್ಕೆ ಬದಲಿಗೆ 144.39 ಕೋಟಿ (ಶೇ. 18.92ರಿಂದ 23.00), ಹಾವೇರಿ ಜಿಲ್ಲೆಯಲ್ಲಿ (2017 ಏಪ್ರಿಲ್) 26.33 ಕೋಟಿ ರು. ಅಂದಾಜು ವೆಚ್ಚಕ್ಕೆ ಬದಲಿಗೆ 31.85 ಕೋಟಿ (ಶೆ. 12.57ರಿಂದ 20.95), ಶಿವಮೊಗ್ಗ ಜಿಲ್ಲೆಯಲ್ಲಿ (ಏಪ್ರಿಲ್ 2017) 147.44 ಕೋಟಿ ರು. ಅಂದಾಜು ವೆಚ್ಚಕ್ಕೆ ಬದಲಿಗೆ 181.35 ಕೋಟಿ ರು. (ಶೇ. 18.92ರಿಂದ 23.00) ಉಡುಪಿ ಜಿಲ್ಲೆಯಲ್ಲಿ (ಏಪ್ರಿಲ್ 2017) ನಿಗದಿಗೊಳಿಸಿದ್ದ 7.82 ಕೋಟಿ ರು. ಅಂದಾಜು ವೆಚ್ಚಕ್ಕೆ ಬದಲಿಗೆ 9.90ಕೋಟಿ (ಶೇ.30.00)ಗೆ ಏರಿಸಲಾಗಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.
ಐದು ಎಸ್ಕಾಂಗಳು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಕಾಯ್ದೆ (ಕೆಟಿಪಿಪಿ), ಕಲಂ ೪ಜಿ ಅಡಿ ವಿನಾಯಿತಿಯನ್ನು ಪಡೆದು, ಟೆಂಡರ್ ಗಳನ್ನು ಆಹ್ವಾನಿಸದೆಯೇ ಯೋಜನೆ ನಿರ್ವಹಣಾ ಏಜೆನ್ಸಿಯನ್ನು (ಪಿಎಂಎ) ನೇಮಕಾ ಮಾಡಿದೆ ಎಂದು ಸಿಎಜಿ ವರದಿ ತಿಳಿಸಿದೆ.
ಗುತ್ತಿಗೆ ಮಂಜೂರಾತಿಗೆ ಸಂಬಂಧಪಟ್ಟಂತೆ ಬಿಡ್ಡರ್ ಆಯ್ಕೆ ಮಾಡುವಲ್ಲಿಯೂ ಗಂಭೀರ ಲೋಪಗಳಾಗಿವೆ. ಬಿಡ್ ಷರತ್ತುಗಳ ಪ್ರಕಾರ ಅಗತ್ಯವಿದ್ದಂತಹ ಅಂಶಗಳನ್ನು ಪೂರೈಸದೇ ಇರುವಂತಹ ಬಿಡ್ಡರ್ ಗಳನ್ನು ಪರಿಗಣಿಸಲಾಗಿತ್ತು. ಆದರೆ ಈ ಕುರಿತು ಯಾವುದೇ ಸ್ಪಷ್ಟನೆಗಳಿರಲಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.
ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಅನುಷ್ಠಾನದಲ್ಲಿ ಲೋಪಗಳಾಗಿವೆ. ತಕ್ಷಣ ತಪ್ಪಿತಸ್ಥ ಎಂಜಿನಿಯರ್‌ಗಳನ್ನು ತಕ್ಷಣ ಅಮಾನತುಗೊಳಿಸಲಾಗುವುದು. ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗುವುದು ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದನ್ನು ಸ್ಮರಿಸಬಹುದು.