ನಿಯಮಗಳ ಅರಿವಿಲ್ಲ, ಸ್ಪಷ್ಟತೆಯಿಲ್ಲ, ನೌಕರರು ಸಮರ್ಥರೂ ಅಲ್ಲ; ಕಳಪೆ ಆಡಳಿತಕ್ಕೆ ಪುರಾವೆ

ಬೆಂಗಳೂರು; ಅನುಕಂಪ ಆಧಾರದ ಮೇಲೆ ನೇಮಕಗೊಂಡಿರುವ ನೌಕರರು ಕಾರ್ಯನಿರ್ವಹಣೆಯಲ್ಲಿ ಹಲವು ತಪ್ಪುಗಳೆನ್ನೆಸುಗುತ್ತಾರೆ. ನಿಯಮಗಳ ಪರಿಜ್ಞಾನವಿರುವುದಿಲ್ಲ. ಅಧೀನ ಕಾರ್ಯದರ್ಶಿ, ಉಪಕಾರ್ಯದರ್ಶಿಗಳಿಗೆ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಸ್ಪಷ್ಟತೆಯಿಲ್ಲ. ಮಧ್ಯಮ ಹಂತದ ಸಿಬ್ಬಂದಿಗೆ ಕನಿಷ್ಠ ಜ್ಞಾನವೂ ಇಲ್ಲ, ಉನ್ನತ ಅಧಿಕಾರಿಗಳಿಗೂ ನಿಯಮ, ಮಾರ್ಗಸೂಚಿಗಳ ಅರಿವಿಲ್ಲ, ಗುಣಮಟ್ಟದ ಕಾರ್ಯಾಚರಣೆ ನಡೆಸುವುದಿಲ್ಲ. ಕೆಟಿಪಿಪಿ ಕಾಯ್ದೆ ವಿಷಯಗಳನ್ನು ನಿಭಾಯಿಸಲು ಪಿಡಬ್ಲೂಡಿ ಸೇರಿ ಹಲವು ಇಲಾಖೆಗಳ ಅಧಿಕಾರಿ, ನೌಕರರು ಸಮರ್ಥರಲ್ಲ.

 

ಹೀಗೆ ‘ಇಲ್ಲ’ ಗಳ ಕೊರತೆಯನ್ನು ಹೊಂದಿರುವ ಸಚಿವಾಲಯ ಮತ್ತು ಇಲಾಖಾ ಅಧಿಕಾರಿಗಳು, ನೌಕರರು ಸಾರ್ವಜನಿಕ ಆಡಳಿತವನ್ನು ಮುನ್ನೆಡೆಸುತ್ತಿದ್ದಾರೆ. ಸೂಕ್ತ ಮತ್ತು ಸಮರ್ಥ ತರಬೇತಿಯೇ ಇಲ್ಲದ ಅಧಿಕಾರಿ ನೌಕರರಿಂದಾಗಿಯೇ ಸಾರ್ವಜನಿಕ ಆಡಳಿತವು ಹಳಿ ತಪ್ಪುತ್ತಿದೆಯಲ್ಲದೇ ಅವರ ಅಸಮರ್ಥತೆಯಿಂದಾಗಿ ನ್ಯಾಯಾಲಯಗಳೂ ಸರ್ಕಾರಕ್ಕೆ ಛೀಮಾರಿ ಹಾಕುತ್ತಿವೆ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

 

ಆಡಳಿತಾತ್ಮಕ ಸುಧಾರಣೆ ಮತ್ತು ತರಬೇತಿ ನೀಡುವ ನಿಟ್ಟಿನಲ್ಲಿ 2022ರ ಸೆ.29ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಂತದ ಐಎಎಸ್‌ ಅಧಿಕಾರಿಗಳು ಸಾರ್ವಜನಿಕ ಆಡಳಿತದಲ್ಲಿನ ಮಧ್ಯಮ ಮತ್ತು ಕೆಳಹಂತದ ಅಧಿಕಾರಿ, ನೌಕರರ ಕಾರ್ಯಕ್ಷಮತೆಯನ್ನು ಒರೆಗೆ ಹಚ್ಚಿದ್ದಾರೆ.

 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು  ಕೆಡಿಪಿ ಸಭೆಗಳಲ್ಲಿ ಮೈಗಳ್ಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರೂ ಹಳಿ ತಪ್ಪಿರುವ ಆಡಳಿತ ಇನ್ನೂ ಸರಿದಾರಿಗೆ ಬಂದಿಲ್ಲ ಎಂಬ ಆರೋಪಗಳ ನಡುವೆಯೇ ಸಾರ್ವಜನಿಕ ಆಡಳಿತದಲ್ಲಿ ಅಧಿಕಾರಿಶಾಹಿಯ ಕಾರ್ಯವೈಖರಿ ಮತ್ತು ಅವರ ಸಾಮರ್ಥ್ಯದ ಕುರಿತು ನಡೆಸಿರುವ ಸಭೆ ನಡವಳಿಗಳು ಮುನ್ನೆಲೆಗೆ ಬಂದಿವೆ.  ಈ ಸಭೆಯ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಚಿವಾಲಯ, ನಿರ್ದೇಶನಾಲಯ ಮತ್ತು ಕಾರ್ಯಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ನೌಕರರ ಕಾರ್ಯಕ್ಷಮತೆ, ದಕ್ಷತೆ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆಯಲ್ಲದೇ ಅಧಿಕಾರಿ, ನೌಕರರಿಗೆ ಹಲವು ಹಂತಗಳಲ್ಲಿ ತರಬೇತಿಯ ಅವಶ್ಯಕತೆ ಇದೆ ಎಂದು ವಿಶ್ಲೇಷಿಸಿರುವುದು ಸಭೆಯ ನಡವಳಿಯಿಂದ ತಿಳಿದು ಬಂದಿದೆ.

 

‘ಕಂದಾಯ ಇಲಾಖೆಯಲ್ಲಿಯೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಅನುಕಂಪ ಆಧಾರಿತ ನೇಮಕಗಳಾಗುತ್ತಿವೆ. ಅನುಕಂಪದ ಆಧಾರದ ಮೇಲೆ ನೇಮಕಗೊಳ್ಳುವವರಿಗೆ ತರಬೇತಿ ಕೊರತೆ ಇದೆ. ಅಲ್ಲದೆ ಹಲವು ತನಿಖಾ ಸಂಸ್ಥೆಗಳ ದಾಳಿಯಲ್ಲಿ ಸಿಕ್ಕುಬೀಳುತ್ತಿದ್ದಾರೆ. ನಿಯಮಗಳ ಜ್ಞಾನದ ಕೊರತೆಯಿಂದಾಗಿ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ,’ ಎಂದು ಕೌಶಲ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ ಸೆಲ್ವಕುಮಾರ್‌ ಮತ್ತು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಪಿ ಸಿ ಜಾಫರ್‌ ಅವರು ಸಭೆಯಲ್ಲಿ ವಿವರ ಒದಗಿಸಿರುವುದು ಗೊತ್ತಾಗಿದೆ.

 

ಇ-ಆಫೀಸ್‌ ತಂತ್ರಾಂಶ ಬಳಕೆ ಕುರಿತು ಅಧಿಕಾರಿ, ನೌಕರರಿಗಿರುವ ಜ್ಞಾನದ ಕುರಿತೂ ಸಭೆಯಲ್ಲಿ ಚರ್ಚೆಯಾಗಿದೆ. ‘ಇ ಆಫೀಸ್‌ ತಂತ್ರಾಂಶವು ಕೇವಲ ಕಡತಗಳನ್ನು ತಳ್ಳುವುದಕ್ಕಷ್ಟೇ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಅನುದಾನ ಬಿಡುಗಡೆ ಸಂಬಂಧ ಇ-ಆಫೀಸ್‌ ತಂತ್ರಜ್ಞಾನವನ್ನು ನಿರ್ಧರಿಸುವ ವೇದಿಕೆಯನ್ನಾಗಿ ಪರಿವರ್ತಿಸಬೇಕು. ಆಯವ್ಯಯದ ಅನುದಾನ ಬಳಕೆಗೆ ಅಧಿಕಾರ ಪ್ರತ್ಯಾಯೋಜಿಸಿದ್ದರೂ ಇಲಾಖೆಗಳ ಕಾರ್ಯದರ್ಶಿಗಳು ಕಡತವನ್ನು ಕೆಳಹಂತದ ಅಧಿಕಾರಿ, ನೌಕರರಿಗೆ ಕಳಿಸುತ್ತಿದ್ದಾರೆ,’ ಎಂದು ಪಿ ಸಿ ಜಾಫರ್‌ ಅವರು ಸಭೆಯ ಗಮನಕ್ಕೆ ತಂದಿರುವುದು ತಿಳಿದು ಬಂದಿದೆ.

 

ಲೋಕೋಪಯೋಗಿ, ಜಲಸಂಪನ್ಮೂಲ, ನೀರಾವರಿ ಇಲಾಖೆಗಳು ತಾಂತ್ರಿಕವಾಗಿ ರೂಪುಗೊಂಡಿರುವಂತಹವು. ಕಾನೂನು ಇಲಾಖೆಗೆ ಹಿರಿಯ ನ್ಯಾಯಾಧೀಶರು ಮುಖ್ಯಸ್ಥರಾಗಿದ್ದಾರೆ. ವಿಶೇಷವಾಗಿ ಕಂದಾಯ ಇಲಾಖೆಯ ಸಚಿವಾಲಯದಲ್ಲಿಯೇ ಅತಿ ಹೆಚ್ಚು ಎಂದರೆ ತಹಶೀಲ್ದಾರ್‌ಗಳು, ಹೆಚ್ಚುವರಿ ಜಿಲ್ಲಾಧಿಕಾರಿಗಳೂ, ಸಹಾಯಕ ಆಯುಕ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಯಕ್ಷೇತ್ರಕ್ಕೆ ಸಂಬಂಧಿಸಿದಂತೆ ಉಪ ಕಾರ್ಯದರ್ಶಿ ಹುದ್ದೆ ಸೃಜಿಸುವ ಅಗತ್ಯತೆ ಇದೆ. ಕಂದಾಯ, ಶಿಕ್ಷಣ, ಆರೋಗ್ಯ, ಹಣಕಾಸು ಇಲಾಖೆಗಳ ಉನ್ನತ ಹಂತದಲ್ಲಿ ತಾಂತ್ರಿಕ ಮುಖ್ಯಸ್ಥರನ್ನು ನೇಮಿಸುವ ಅವಶ್ಯಕತೆ ಇದೆ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಗಿದೆ.

 

ಸರ್ಕಾರ ಮತ್ತು ಸಚಿವಾಲಯದ ವ್ಯವಹಾರ- ನಡವಳಿಕೆಗಳ ನಿಯಮಗಳ ಕುರಿತು ಕಾರ್ಯಕ್ಷೇತ್ರದಲ್ಲಿರುವ ಅಧಿಕಾರಿ, ನೌಕರರಿಗೆ ಮಾಹಿತಿ ಇಲ್ಲ. ಭೂ ಕಂದಾಯಗಳ ಕಾನೂನು ಮಾಹಿತಿಯಿಂದ ಕಾರ್ಯಕ್ಷೇತ್ರದಲ್ಲಿನ ಅಧಿಕಾರಿಗಳಿಗೆ ತಪ್ಪಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇಂತಹ ವಿಚಾರಗಳಿಗೆ ಸಂಬಂಧಪಟ್ಟ ಕಡತಗಳ ಮೇಲೆ ಸೂಕ್ತ ನಿರ್ಧಾರ ಕೈಗೊಳ್ಳುತ್ತಿಲ್ಲ. ಇದರಿಂದಾಗಿಯೇ ಕಡತಗಳು ಚಲನೆಯಾಗದೇ ವಿಳಂಬವಾಗುತ್ತಿವೆ ಎಂಬ ಅಂಶವನ್ನು ಸಭೆಯ ಗಮನಕ್ಕೆ ತರಲಾಗಿದೆ.

 

‘ಹಲವು ಅಧೀನ ಕಾರ್ಯದರ್ಶಿ, ಉಪ ಕಾರ್ಯದರ್ಶಿಗಳಿಗೆ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಮಾಹಿತಿ ಮತ್ತು ಸ್ಪಷ್ಟತೆಯೇ ಇಲ್ಲವಾಗಿದೆ. ಕರ್ನಾಟಕ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ)ಗಳಲ್ಲಿ ಇದು ಗೊತ್ತಾಗುತ್ತಿದೆ. ಹೀಗಾಗಿ ಅವರಿಗೆ ಹೆಚ್ಚಿನ ತರಬೇತಿ ನೀಡಬೇಕಿದೆ. ಅಧಿಕಾರಿಗಳು ಕಾರ್ಯಕ್ಷೇತ್ರಗಳಿಗೆ ಭೇಟಿ ನೀಡಿದರೆ ಹಲವು ಯೋಜನೆಗಳು, ಕಾರ್ಯಕ್ರಮಗಳ ಪ್ರಗತಿಯಾಗಲಿದೆಯಲ್ಲದೆ ಸಮರ್ಥವಾಗಿ ಅನುಷ್ಠಾನವಾಗಲಿದೆ,’ ಎಂದು ಆಹಾರ ಮತ್ತು ನಾಗರಿಕ ವ್ಯವಹಾರಗಳ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎಂ ಟಿ ರೇಜು ಅವರು ಅಭಿಪ್ರಾಯಿಸಿರುವುದು ನಡವಳಿಯಿಂದ ಗೊತ್ತಾಗಿದೆ.

 

ಅಷ್ಟೇ ಅಲ್ಲ, ಮಧ್ಯಮ ಹಂತದ ಅಧಿಕಾರಿ, ನೌಕರರಿಗೆ ಕನಿಷ್ಠ ಜ್ಞಾನವೂ ಇಲ್ಲವಾಗಿದೆ. ಟಿಪ್ಪಣಿ ಬರೆಯುವುದು ಮತ್ತು ಕಡತಗಳ ನಿರ್ವಹಣೆ, ದಾಖಲಾತಿಗಳ ಅಧ್ಯಯನ ಕುರಿತು ಅವರಿಗೆ ಮಾಹಿತಿಯ ಅಗಾಧ ಕೊರತೆ ಇದೆ. ಹೀಗಾಗಿ ತರಬೇತಿ ನೀಡುವ ಅನಿವಾರ್ಯತೆ ಇದೆ ಎಂಬ ಅಭಿಪ್ರಾಯವನ್ನು ಸಚಿವಾಲಯದ ಅಧಿಕಾರಿಗಳು, ಹಲವು ಕೆಎಎಸ್‌ ಅಧಿಕಾರಿಗಳು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

 

ಇನ್ನು ಸಚಿವಾಲಯದ ಹಲವು ಅಧಿಕಾರಿಗಳು ಸಾರ್ವಜನಿಕರೊಂದಿಗೆ ನೇರವಾಗಿ ಸಂಪರ್ಕ ಹೊಂದಿಲ್ಲ. ಕೇವಲ ಕಾರ್ಯಕ್ಷೇತ್ರದಲ್ಲಿನ ಇಲಾಖೆಗಳು ಮಾತ್ರ ಸಾರ್ವಜನಿಕರೊಂದಿಗೆ ನೇರವಾಗಿ ಸಂಪರ್ಕದಲ್ಲಿರುತ್ತವೆ. ಸಾರ್ವಜನಿಕರಿಂದ ನೇರವಾಗಿ ಎದುರಿಸುವ ಸಮಸ್ಯೆಗಳ ಸ್ವರೂಪ ಮತ್ತು ಅದನ್ನು ಬಗೆಹರಿಸುವ ಕುರಿತೂ ತರಬೇತಿ ನೀಡಬೇಕಿದೆ. ಅದರಲ್ಲೂ ಬಹುತೇಕ ಸಿಬ್ಬಂದಿಗೆ ನ್ಯಾಯಾಲಯದ ಪ್ರಕರಣಗಳ ನಿರ್ವಹಣೆ ಬಗ್ಗೆ ಕಡಿಮೆ ಜ್ಞಾನವಿದೆ ಎಂಬ ಅಂಶವು ನಡವಳಿಯಿಂದ ತಿಳಿದು ಬಂದಿದೆ.

 

‘ನೇಮಕಾತಿ ನಂತರ ಕರ್ತವ್ಯ ವಹಿಸಿಕೊಳ್ಳುವ ಮುನ್ನ ಆರಂಭದಲ್ಲೇ ತರಬೇತಿ ನೀಡುವ ಅವಶ್ಯಕತೆ ಇದೆ. ನಡವಳಿಕೆ, ಸಂಪರ್ಕ ಕೌಶಲ್ಯಗಳು, ಪುನಶ್ಚೇತನ ತರಗತಿ, ಫಲಿತಾಂಶ ಆಧರಿತ, ಪ್ರಾಯೋಗಿಕ ತರಬೇತಿಗಳ ಅಗತ್ಯತೆ ಇದೆ. ತರಬೇತಿಯ ಮೌಲ್ಯಮಾಪನ, ಪರೀಕ್ಷೆಗಳು ಕಡ್ಡಾಯವಾಗಬೇಕು,’ ಎಂಬ ಸಲಹೆಗಳನ್ನು ಅಧಿಕಾರಿಗಳು ನೀಡಿದ್ದಾರೆ.

SUPPORT THE FILE

Latest News

Related Posts