ವ್ಯಾಜ್ಯದಲ್ಲಿರುವ ಜಮೀನು ಹಂಚಿಕೆ; ದಲಿತರು ಉದ್ಯಮಿಗಳಾಗದಂತೆ ತಡೆಗಟ್ಟುವ ಹುನ್ನಾರ

ಬೆಂಗಳೂರು; ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವ್ಯಾಜ್ಯದಿಂದ ಕೂಡಿರುವ ಭೂಮಿಯನ್ನು ಗುರುತಿಸಿ ವ್ಯಾಜ್ಯಗಳು ಪೂರ್ಣಪ್ರಮಾಣದಲ್ಲಿ ಇತ್ಯರ್ಥವಾಗುವವರೆಗೂ ಭೂಮಿ ಹಂಚಿಕೆ ಮಾಡದೇ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ವಿಳಂಬ ಮಾಡುತ್ತಿದೆ.

 

ರಸ್ತೆಗಳ ಸಂಪರ್ಕವೇ ಇಲ್ಲದ ಜಮೀನುಗಳನ್ನು ಪ.ಜಾತಿ ಮತ್ತು ಪ.ಪಂಗಡದವರಿಗೆ ಹಂಚಿಕೆ ಮಾಡುತ್ತಿರುವ ಇಲಾಖೆಯು ಭೂಮಿ ಹಂಚಿಕೆಯಲ್ಲಿ ಅನುಸರಿಸಿರುವ ಅಸ್ಪ್ರಶ್ಯತೆಯನ್ನು ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿರುವ ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿಯು ಬಹಿರಂಗಗೊಳಿಸಿದೆ.

 

ಹೈಟೆಕ್‌ ಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್‌ ಸೇರಿದಂತೆ ರಾಜ್ಯದಾದ್ಯಂತ ಕೈಗಾರಿಕೆ, ವಿಶೇಷ ವಲಯ ರಚನೆ ಸಂಬಂಧ ಸ್ವಾಧೀನಪಡಿಸಿಕೊಂಡ ಭೂಮಿ ಹಂಚಿಕೆ ಸಂದರ್ಭದಲ್ಲಿ ಸಾಮಾನ್ಯ ಜನಾಂಗದವರಿಗೆ ಪ್ರಥಮ ಆದ್ಯತೆ ನೀಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗದವರಿಗೆ ವಂಚನೆ ಮಾಡಲಾಗುತ್ತಿರುವುದನ್ನು ಸಮಿತಿಯು ಹೊರಗೆಡವಿದೆ.

 

2021-22ನೇ ಸಾಲಿಗೆ ಸಂಬಂಧಿಸಿದಂತೆ ಸಮಿತಿಯು ವಿಧಾನಮಂಡಲಕ್ಕೆ 2022ರ ಸೆ.21ರಂದು ಸಲ್ಲಿಸಿರುವ ಐದನೇ ವರದಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವನ್ನು ಹೇಗೆ ಶೋಷಿಸುತ್ತಿದೆ ಎಂಬುದರ ಕುರಿತು ವಿಶ್ಲೇಷಿಸಿದೆ.

 

ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದಂತೆ ಹೈಟೆಕ್‌ ಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್‌ ಮೊದಲನೇ ಹಂತಕ್ಕೆ ಒಟ್ಟು 2,737.1 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಈ ಪೈಕಿ 353.45 ಎಕರೆ ಹಂಚಿಕೆ ಮಾಡಬೇಕಿತ್ತು. ಆದರೆ ಕೇವಲ 193 ಎಕರೆಯನ್ನಷ್ಟೇ ಹಂಚಿಕೆ ಮಾಡಿರುವ ಇಲಾಖೆಯು ಇನ್ನೂ 90 ಎಕರೆಯನ್ನು ಹಂಚಿಕೆ ಮಾಡಿಲ್ಲ. ಹೀಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕೇವಲ ಶೇ.22.65ರಷ್ಟೇ ಹಂಚಿಕೆಯಾದಂತಿದೆ. ನಿಯಮಾನುಸಾರ ಶೇ.24.1ರಷ್ಟು ಹಂಚಿಕೆ ಮಾಡುವಲ್ಲಿ ಇಲಾಖೆಯು ವಿಫಲವಾಗಿದೆ ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಿದೆ.

 

‘ಏರೋಸ್ಪೇಸ್‌ ಪಾರ್ಕ್‌ ಮೊದಲನೇ ಹಂತದಲ್ಲಿ ಪ.ಜಾತಿ ಜನಾಂಗದವರಿಗೆ ನಿರ್ದಿಷ್ಟಪಡಿಸಿದ ಶೇ.24.1ರಷ್ಟು ಭೂಮಿಯನ್ನು ಆದ್ಯತೆ ಮೇರೆಗೆ ಹಂಚಿಕೆ ಮಾಡದೇ ಸ್ವಾಧೀನಪಡಿಸಿಕೊಂಡಿರುವ ಭೂಮಿಯಲ್ಲಿ ಸಾಮಾನ್ಯ ಜನಾಂಗದವರಿಗೆ ಪ್ರಥಮ ಆದ್ಯತೆ ನೀಡಿ ಹಂಚಿಕೆ ಮಾಡಲಾಗಿದೆ. ಮೊದಲ ಹಂತದಲ್ಲಿ ಭೂಮಿ ಪಡೆಯಲು ಪ.ಜಾತಿ ಮತ್ತು ಪ.ಪಂಗಡದ ಜನಾಂಗದವರು ವಂಚಿತರಾಗಿದ್ದಾರೆ,’ ಎಂದು ಸಮಿತಿಯು ಗಂಭೀರವಾಗಿ ಪರಿಗಣಿಸಿದೆ.

 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹಂಚಿಕೆ ಮಾಡುವ ಭೂಮಿಯು ವ್ಯಾಜ್ಯದಲ್ಲಿರುತ್ತವೆ. ಈ ಜನಾಂಗದವರಿಗೆ ಭೂಮಿ ಹಂಚಿಕೆ ಮಾಡುವಾಗ ವ್ಯಾಜ್ಯದಲ್ಲಿರುವ ಭೂಮಿಯನ್ನು ಗುರುತಿಸಿ ಈ ವ್ಯಾಜ್ಯಗಳು ಪೂರ್ಣ ಪ್ರಮಾಣದಲ್ಲಿ ಇತ್ಯರ್ಥವಾಗುವವರೆಗೆ ಭೂಮಿ ಹಂಚಿಕೆ ಮಾಡದೆಯೇ ವಿಳಂಬ ಮಾಡಲಾಗುತ್ತಿದೆ ಎಂದು ಸಮಿತಿಯು ಆಕ್ಷೇಪಿಸಿರುವುದು ವರದಿಯಿಂದ ಗೊತ್ತಾಗಿದೆ.

 

ಹಾಗೆಯೆ ಪ.ಜಾತಿ ಮತ್ತು ಪ.ಪಂಗಡದವರಿಗೆ ಭೂಮಿ ಹಂಚಿಕೆ ಮಾಡಲು ವ್ಯಾಜ್ಯರಹಿತ ಭೂಮಿಯನ್ನು ಗುರುತಿಸಿ ಅವರುಗಳಿಗೆ ಮೊದಲ ಆದ್ಯತೆ ಮೇರೆಗೆ ಆಯಾಯ ಹಂತಗಳಲ್ಲಿಯೇ ಹಂಚಿಕೆ ಮಾಡಬೇಕಿತ್ತು. ಕಾಯ್ದೆ ಉಲ್ಲಂಘಿಸಿ ಭೂಮಿ ಹಂಚಿಕೆಯಲ್ಲಿ ಕೊರತೆಯುಂಟು ಮಾಡಿದ ಅಧಿಕಾರಿಗಳ ವಿರುದ್ಧ ಶಿಸ್ತು, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಮಿತಿಯು ನಿರ್ದೇಶಿಸಿದೆ.

 

ಲ್ಯಾಂಡ್‌ ಆಡಿಟ್‌ ಕಮಿಟಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರಿಗೆ ಹಂಚಿಕೆಗೆ ನಿಗದಿಯಾಗಿದ್ದ 2 ಎಕರೆ ಭೂಮಿಯನ್ನು ಏಕ ಗವಾಕ್ಷಿ ಸಮಿತಿಯು ಒಂದು ಎಕರೆಗೆ ಇಳಿಸಿ ತಿದ್ದುಪಡಿ ಮಾಡಿರುವುದಕ್ಕೆ ತೀವ್ರವಾಗಿ ವಿರೋಧಿಸಿರುವ ಸಮಿತಿಯು ‘2 ಎಕರೆ ಭೂಮಿಯನ್ನು ಒಂದು ಎಕರೆಗೆ ಇಳಿಸಿರುವುದ್ನನು ಪುನರ್‌ ಪರಿಶೀಲಿಸಬೇಕು. ನಿಗದಿಪಡಿಸಿರುವಂತೆ 2 ಎಕರೆ ಭೂಮಿಯನ್ನು ಹಂಚಿಕೆ ಮಾಡಲು ಕ್ರಮವಹಿಸಬೇಕು,’ ಎಂದು ನಿರ್ದೇಶಿಸಿದೆ.

the fil favicon

SUPPORT THE FILE

Latest News

Related Posts