ಬೆಂಗಳೂರು; ಶಾಲಾ ಮಕ್ಕಳಿಗೆ ಗುಣಮಟ್ಟದ ಶೂ ಖರೀದಿಸಲು ದಾನಿಗಳ ನೆರವು ಪಡೆಯಲು ಸೂಚಿಸಿದ್ದ ಸರ್ಕಾರವು ಇದೀಗ ಮಕ್ಕಳಿಗೆ ಡೆಸ್ಕ್, ಶಾಲೆಯ ವಿದ್ಯುತ್ ಬಿಲ್, ಶಾಲೆಯಲ್ಲಿನ ಪರಿಕರಗಳ ತುರ್ತು ರಿಪೇರಿ ಸೇರಿದಂತೆ ಇನ್ನಿತರೆ ಖರ್ಚುವೆಚ್ಚಗಳಿಗೆ ವಿದ್ಯಾರ್ಥಿಗಳ ಪೋಷಕರಿಂದಲೇ ಮಾಸಿಕ 100 ರು.ಗಳನ್ನು ದೇಣಿಗೆ ಸಂಗ್ರಹಿಸಲು ಸುತ್ತೋಲೆ ಹೊರಡಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಆಯವ್ಯಯದಲ್ಲಿ ವಾರ್ಷಿಕವಾಗಿ ಒದಗಿಸುತ್ತಿರುವ 25,000 ಕೋಟಿ ರು.ಗಳನ್ನು ಹೆಚ್ಚಿಸಿಕೊಂಡು ಸರಿದೂಗಿಸಬೇಕಿದ್ದ ಸರ್ಕಾರವು ಇದೀಗ ಪೋಷಕರಿಂದಲೇ ಮಾಸಿಕ 100 ರು.ಗಳನ್ನು ಸಂಗ್ರಹಿಸಬೇಕು ಎಂದು ಹೊರಡಿಸಿರುವ ಸುತ್ತೋಲೆಯು ಶಿಕ್ಷಕರನ್ನು ಪುನಃ ಬೀದಿಗಿಳಿಸಿದೆ. ಶಾಲಾ ದೇಣಿಗೆ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು 2022ರ ಅಕ್ಟೋಬರ್ 19ರಂದು ಹೊರಡಿಸಿರುವ ಸುತ್ತೊಲೆಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಸುತ್ತೋಲೆಯಲ್ಲೇನಿದೆ?
ವಿದ್ಯಾರ್ಥಿಗಳ ಪೋಷಕರಿಂದ ದೇಣಿಗೆ ರೂಪದಲ್ಲಿ ಮಾಸಿಕ ಸುಮಾರು 100 ರು.ನಂತೆ ಹಣವನ್ನು ಸಂಗ್ರಹಿಸಿ ಈ ಹಣವನ್ನು ನಿಗದಿತ ಎಸ್‌ಡಿಎಂಸಿ ಖಾತೆಗೆ ಪೋಷಕರಿಂದ ಸಂದಾಯ ಮಾಡಲು ಕ್ರಮವಹಿಸಬೇಕು. ಎಸ್‌ಡಿಎಂಸಿ ನಿಯಮಾವಳಿಗಳ ಪ್ರಕಾರ ನಿಗದಿತ ರಶೀದಿ ನೀಡಬೇಕು. ಪ್ರತ್ಯೇಕ ಲೆಕ್ಕಪತ್ರಗಳನ್ನು ನಿರ್ವಹಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಶೌಚಾಲಯ ಮತ್ತು ಶಾಲೆ ಶುಚಿಗೊಳಿಸಲು, ಶಾಲೆಯ ವಿದ್ಯುತ್ ಬಿಲ್, ಶಾಲೆಯಲ್ಲಿನ ಪರಿಕರಗಳ ತುರ್ತು ರಿಪೇರಿಗಳು, ಮಕ್ಕಳು ಬಿಸಿಯೂಟ ಸೇವಿಸಲು ಸಹಕಾರಿಯಾಗುವ ಪೂರಕ ವಸ್ತುಗಳು, ಇಲಾಖೆಯು ಹೆಚ್ಚುವರಿ ಶಿಕ್ಷಕರನ್ನು ಒದಗಿಸಿದ್ದರೂ ಹೆಚ್ಚುವರಿಯಾಗಿ ಅತಿಥಿ ಶಿಕ್ಷಕರನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಿಕೊಂಡಲ್ಲಿ ಅವರಿಗೆ ನೀಡುವ ಗೌರವ ಸಂಭಾವನೆ, ಗಣಕ ಯಂತ್ರಗಳ ರಿಪೇರಿ, ಅಗತ್ಯ ಬೋಧನಪಕರಣಗಳ ಸಂಗ್ರಹಣೆ, ಮಕ್ಕಳ ಉಪಯೋಗಕ್ಕಾಗಿ ಬೆಂಚ್ ಅಥವಾ ಡೆಸ್ಕ್‌ಗಳು, ಶಾಲಾ ಆಟದ ಮೈದಾನದ ಸಿದ್ಥತೆ, ಇ-ಕಲಿಕಾ ಕೇಂದ್ರದ ಸ್ಥಾಪನೆ, ಗ್ರಂಥಾಲಯ, ವಾಚನಾಲಯ ಬಲವರ್ಧನೆ, ಸ್ಕೌಟ್ಸ್, ಗೈಡ್ಸ್, ಎನ್‌ಎಸ್‌ಎಸ್, ಎನ್‌ಸಿಸಿ ಕ್ರೀಡಾ ಮಕ್ಕಳಿಗೆ ಅಗತ್ಯ ಸಮವಸ್ತ್ರ,, ಶಾಲಾ ವನ ಬಲವರ್ಧನೆಗೆ ಬಳಸಿಕೊಳ್ಳಬೇಕು ಎಂದು ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಸಮುದಾಯದ ಪೋಷಕರ ಪಾಲ್ಗೊಳ್ಳುವಿಕೆ ಅನಿವಾರ್ಯವಾಗಿದ್ದು ಈ ನಿಟ್ಟಿನಲ್ಲಿ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗಾಗಿ ಶಾಲಾಭಿವೃದ್ಧಿ ಸಮಿತಿ ರಚಿಸಿದೆ. ಶಾಲೆ ಅಭಿವೃದ್ಧಿಗೆ ಪೂರಕ ಕಾರ್ಯಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ. ಸರ್ಕಾರವು ಶಿಕ್ಷಣ ಇಲಾಖೆಗೆ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಆಯವ್ಯಯದಲ್ಲಿ ಅನುದಾನವನ್ನು ಬಿಡುಗಡೆ ಮಾಡುತ್ತಿದೆ.
‘ಕೆಲವೊಮ್ಮೆ ಅನುದಾನದ ಜತೆಗೆ ಹಾಗೂ ಶಾಲೆಗಳ ಸ್ಥಳೀಯ ಅಗತ್ಯತೆಯಂತೆ ಹೆಚ್ಚುವರಿ ಹಣಕಾಸಿನ ನೆರವು ಅಗತ್ಯವಾಗಿ ಬೇಕಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಕೆಲವೊಮ್ಮೆ ಅಗತ್ಯ ಶಿಕ್ಷಕರ ಕೊರತೆ ಉಂಟಾದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ಇಲ್ಲದಂತಾಗಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳು ಹಿನ್ನಡೆ ಉಂಟಾಗುವ ಸಂಭವವಿದೆ. ಇದನ್ನು ತಪ್ಪಿಸುವ ಸಲುವಾಗಿ ಸರ್ಕಾರ, ಇಲಾಖೆಯು ಕಾಲಾಕಾಲಕ್ಕೆ ಆದೇಶಿಸಿರುವಂತೆ ಎಸ್‌ಡಿಎಎಂಸಿ ಸಮಿತಿಯು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಮಕ್ಕಳಿಗೆ ಪಾಠ ಪ್ರವಚನಗಳನ್ನು ಮಾಡಲು ಕ್ರಮವಹಿಸಿದಲ್ಲಿ ಮಕ್ಕಳ ಬೋಧನೆಗೆ ಸಹಕಾರಿಯಾಗುತ್ತದೆ. ಕೆಲವೊಮ್ಮೆ ಮಂಜೂರಾತಿ ಇಲ್ಲದೆಯೇ ಹಾಗೂ ಅನುದಾನ ಕೊರತೆ ಉಂಟಾದಲ್ಲಿ ಶಾಲಾಭಿವೃದ್ಧಿ ಸಮಿತಿ ಇಂತಹ ಸನ್ನಿವೇಶಗಳಲ್ಲಿ ಕರ್ತವ್ಯ ನಿರ್ವಹಿಸಲು ಸಹಕಾರವಾಗಬಹುದಾಗಿದೆ,’ ಎಂದು ಸುತ್ತೋಲೆಯಲ್ಲಿ ವಿವರಿಸಿದೆ.
‘ಯಾವುದೇ ಕಾರಣಕ್ಕೂ ಯಾವುದೇ ಪೋಷಕರಿಂದ ಬಲವಂತವಾಗಿ ಹಣ/ದೇಣಿಗೆ/ದಾನವನ್ನು ಸಂಗ್ರಹಿಸುವುದನ್ನು ನಿರ್ಬಂಧಿಸುತ್ತದೆ. ಆದರೆ ಪೋಷಕರ ಮನವೊಲಿಸಿ ಶಾಲೆಯ ಅಗತ್ಯ ಖರ್ಚು ವೆಚ್ಚಗಳನ್ನು ಮನವರಿಕೆ ಮಾಡಿಕೊಟ್ಟು ಪೋಷಕರು ಸ್ವಯಂ ಪ್ರೇರಿತವಾಗಿ ಎಸ್‌ಡಿಎಂಸಿ ಖಾತೆಗೆ ಹಣ ನೀಡುವಂತೆ ಮಾಡಬೇಕು,’ ಎಂದೂ ಸುತ್ತೋಲೆಯಲ್ಲಿ ಹೇಳಲಾಗಿದೆ.
ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಚಿತವಾಗಿ ಶೂ ಮತ್ತು ಸಾಕ್ಸ್ ವಿತರಿಸಲು 132 ಕೋಟಿ ರು. ಬಿಡುಗಡೆ ಮಾಡಿ ಆದೇಶ ಹೊರಡಿಸಿರುವ ಸರ್ಕಾರವು ಕಳೆದ 5 ವರ್ಷಗಳ ಹಿಂದೆ ತಲಾ ವಿದ್ಯಾರ್ಥಿಗೆ ಬಿಡುಗಡೆ ಮಾಡಿದ್ದ ಮೊತ್ತವನ್ನೇ ನಮೂದಿಸಿ ಬಿಡುಗಡೆ ಮಾಡಿತ್ತು. ಪ್ರತಿಪಕ್ಷದ ಟೀಕೆ ಎದುರಿಸಲಾರದೇ ತರಾತುರಿಯಲ್ಲಿ ಹೊರಡಿಸಿದಂತಿರುವ ಈ ಆದೇಶವು ಶಿಕ್ಷಕರನ್ನು ದಾನಿಗಳು, ಖಾಸಗಿ ಸಂಸ್ಥೆಗಳ ಬಳಿ ಕೈಯೊಡ್ಡಲು ಪರೋಕ್ಷವಾಗಿ ಸೂಚಿಸಿತ್ತು.
ಶಾಲಾ ಮಕ್ಕಳಿಗೆ ಶೂ ಖರೀದಿ; 5 ವರ್ಷದ ಹಿಂದಿನ ದರ ನಮೂದು, ದಾನಿಗಳ ಬಳಿ ಕೈಯೊಡ್ಡಬೇಕಿರುವ ಶಿಕ್ಷಕರು
ಅಲ್ಲದೆ ದಾನಿಗಳು, ಖಾಸಗಿ ಸಂಸ್ಥೆಗಳು ಈ ಉದ್ದೇಶಕ್ಕಾಗಿ ಹೆಚ್ಚುವರಿ ಹಣ ನೀಡಿದರೆ ಅದನ್ನು ಬಳಸಿಕೊಂಡು ಇನ್ನೂ ಉತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್‌ಗಳನ್ನು ಖರೀದಿಸಿ ವಿತರಿಸಬಹುದು ಎಂದೂ ಆದೇಶದಲ್ಲಿ ಹೇಳಿರುವುದು ಉತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್ ಖರೀದಿಸಲು ದಾನಿಗಳು ಮತ್ತು ಖಾಸಗಿ ಸಂಸ್ಥೆಗಳ ಬಳಿ ಶಿಕ್ಷಕರು ಕೈಯೊಡ್ಡುವ ಸ್ಥಿತಿಯನ್ನು ತಂದಿಟ್ಟಂತಾಗಿತ್ತು.
ಕಲಿಕಾ ಚೇತರಿಕೆ ಹಾಳೆಗಳನ್ನು ಜೆರಾಕ್ಸ್ ಮಾಡಿಸಲು ದಾನಿಗಳ ನೆರವು ಪಡೆಯಬೇಕು ಎಂದು ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆದುಕೊಂಡಿರುವ ಬೆನ್ನಲ್ಲೇ ಶೂ, ಸಾಕ್ಸ್ ಖರೀದಿ ಸಂಬಂಧ ಹೊರಡಿಸಿದ್ದ ಆದೇಶವೂ ಚರ್ಚೆಗೆ ಗ್ರಾಸವಾಗಿದ್ದನ್ನು ಸ್ಮರಿಸಬಹುದು.
ಅಗತ್ಯವಿರುವ ಹಣವನ್ನು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ ಮೂಲಕ ಒದಗಿಸಲಾಗುವುದು ಎಂದು ಸಚಿವ ನಾಗೇಶ್ ಹೇಳಿದ್ದರು. ಈ ಶೈಕ್ಷಣಿಕ ವರ್ಷದಲ್ಲಿ ಮೇ 16 ರಂದು ಶಾಲೆಗಳು ಪುನರಾರಂಭವಾಗಿದ್ದು, ತಮ್ಮ ವಾರ್ಡ್‌ಗಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಶೂ ಮತ್ತು ಸಾಕ್ಸ್‌ಗಳನ್ನು ಒದಗಿಸುವಂತೆ ಪೋಷಕರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದರು. ಆದರೆ ಸರ್ಕಾರ ಈ ನಿರ್ಧಾರವನ್ನು ತಡೆಹಿಡಿದಿತ್ತು ಎನ್ನಲಾಗಿದೆ.