ಮುರುಘಾ ಶರಣರ ವಿರುದ್ಧ ಪೋಕ್ಸೋದಡಿಯಲ್ಲಿ ಇನ್ನೆರಡು ಪ್ರಕರಣ ದಾಖಲು: ಎಫ್‌ಐಆರ್‌ ಪ್ರಕ್ರಿಯೆ ಆರಂಭ

ಬೆಂಗಳೂರು; ಪೋಕ್ಸೋ  ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾ ಶರಣರ ವಿರುದ್ಧ ಮತ್ತೆರಡು ಪ್ರಕರಣಗಳು ದಾಖಲಾಗಿದೆ. ಮತ್ತಿಬ್ಬರು ಸಂತ್ರಸ್ತೆ  ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಸಂಬಂಧ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಅಕ್ಕಮಹಾದೇವಿ ವಿದ್ಯಾರ್ಥಿನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ 12 ಮತ್ತು 14 ವಯಸ್ಸಿನ ವಿದ್ಯಾರ್ಥಿನಿಯರು ಪೋಷಕರೊಂದಿಗೆ ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾಗಿ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ದೂರು  ದಾಖಲಿಸಿದ್ದಾರೆ ಎಂದು ಗೊತ್ತಾಗಿದೆ.

 

ಶರಣರ  ನ್ಯಾಯಾಂಗ ಬಂಧನದ ಅವಧಿಯನ್ನು ಅಕ್ಟೋಬರ್‌ 21ರವರೆಗೆ ವಿಸ್ತರಣೆಯಾಗಿರುವ ಬೆನ್ನಲ್ಲೇ ಇನ್ನೆರಡು ಪ್ರಕರಣಗಳು ಪೋಕ್ಸೋದಡಿಯಲ್ಲಿ ದಾಖಲಾಗುತ್ತಿರುವುದು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ವಿಸ್ತರಿಸಿದಂತಾಗಿದೆ. ಈ ಕುರಿತು ವಿಶ್ವಸನೀಯ ಮೂಲಗಳು ‘ದಿ ಫೈಲ್‌’ಗೆ ಖಚಿತಪಡಿಸಿವೆ.

 

12 ಮತ್ತು 14 ವರ್ಷದ ಬಾಲಕಿಯರಿಬ್ಬರು ತಮ್ಮ ಪೋಷಕರೊಂದಿಗೆ  ಮೈಸೂರಿನ ಒಡನಾಡಿ ಸ್ಟಾನ್ಲಿ ಅವರನ್ನು ಸಂಪರ್ಕಿಸಿದ್ದರು. ಅವರ ಸಲಹೆ ಮೇರೆಗೆ ಮಕ್ಕಳು ಮತ್ತು ಪೋಷಕರು  ಮೈಸೂರಿನ ಸಿಡಬ್ಲೂಸಿಯ ಮುಂದೆ ಗುರುವಾರ (ಅ.13)ರಂದು ಸಂಜೆ  ಹಾಜರಾಗಿದ್ದಾರೆ ಎಂದು ಗೊತ್ತಾಗಿದೆ.

 

ಸಿಡಬ್ಲ್ಯೂಸಿಯು ಮಕ್ಕಳಿಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿತ್ತು.   ಆ ನಂತರ ಸಂತ್ರಸ್ತೆ ಬಾಲಕಿಯರ ಹೇಳಿಕೆಗಳನ್ನು ಪಡೆದು ದಾಖಲಿಸಿ ತಕ್ಷಣವೇ ಮುರುಘಾ ಶರಣರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಸಿಡಬ್ಲೂಸಿಯು ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.

 

ಸಿಡಬ್ಲ್ಯೂಸಿ ಆದೇಶದ ಮೇರೆಗೆ ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಇದೀಗ ಸಂತ್ರಸ್ತೆ ಬಾಲಕಿಯರಿಬ್ಬರು ಇದ್ದಾರೆ ಎಂದು ತಿಳಿದುಬಂದಿದೆ. ಎಫ್‌ಐಆರ್‌ ಪ್ರಕ್ರಿಯೆ ಆರಂಭವಾಗಿದೆ ಎಂದು ಪೊಲೀಸ್‌ ಠಾಣೆಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದಾರೆ. ಎಫ್‌ಐಆರ್‌ ದಾಖಲಾದ ನಂತರ ಈ ವರದಿಯನ್ನು ಅಪ್‌ಡೇಟ್‌ ಮಾಡಲಾಗುವುದು.

 

ಪೋಕ್ಸೊ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮುರುಘ ರಾಜೇಂದ್ರ ಬೃಹನ್ಮಠದ ಶಿವಮೂರ್ತಿ ಮುರುಘಾ ಶ್ರೀಗಳ ನ್ಯಾಯಾಂಗ ಬಂಧನ ಅಕ್ಟೋಬರ್‌ 21ರವರೆಗೆ ವಿಸ್ತರಿಸಿ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿತ್ತು.

 

ಮುರುಘಾ ಶ್ರೀ ಬಂಧನಕ್ಕೂ ಮುನ್ನ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಸೆಪ್ಟೆಂಬರ್‌ 1ರಂದು ಅವರ ಬಂಧನವಾದ ಬಳಿಕ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಸ್ತೃತ ವಿಚಾರಣೆ ನಡೆಸಿದ ನ್ಯಾಯಾಲಯವು ಶ್ರೀಗಳ ಜಾಮೀನು ಅರ್ಜಿ ವಜಾಗೊಳಿಸಿತ್ತು.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಶ್ರೀಗಳಿಗೆ ನ್ಯಾಯಾಲಯವು ಸೆ.2ರಂದು ಮೂರು ದಿನಗಳ ಅವಧಿಗೆ, ಸೆ. 5ರಂದು ಒಂಭತ್ತು ದಿನಗಳವರೆಗೆ, ಸೆ. 14ರಂದು 14 ದಿನಗಳ ಅವಧಿಗೆ, ಸೆ 27ರಂದು 14ದಿನಗಳವರೆಗೆ, ಅ.10ರಂದು ಅ.21ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ. ಅಂದರೆ, ಈವರೆಗೆ ನ್ಯಾಯಾಲಯವು ಶಿವಮೂರ್ತಿ ಶರಣರಿಗೆ ಐದು ಬಾರಿ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಆದೇಶಿಸಿರುವುದನ್ನು ಸ್ಮರಿಸಬಹುದು.

ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣದ ಸುತ್ತ ‘ದಿ ಫೈಲ್‌’ನ 11 ವರದಿಗಳು

ಸಂತ್ರಸ್ತ ಬಾಲಕಿಯರಿಬ್ಬರು ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಮುರುಘಾ ಶರಣರ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದರು. ನಂತರ ಆ ಪ್ರಕರಣ ಚಿತ್ರದುರ್ಗಕ್ಕೆ ವರ್ಗಾವಣೆಯಾಗಿತ್ತು.

 

ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆ, ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು.‌ ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಪೊಲೀಸರು ಸೆಪ್ಟೆಂಬರ್‌ 1ರಂದು ಮುರುಘಾ ‍ಶ್ರೀಗಳನ್ನು ಬಂಧಿಸಿದ್ದರು. ಸದ್ಯ ಶಿವಮೂರ್ತಿ ಶ್ರೀಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

the fil favicon

SUPPORT THE FILE

Latest News

Related Posts