ಅನಧಿಕೃತ ಮಾರಾಟಗಾರರಿಂದ ಖರೀದಿ; ಪ್ಲೈವುಡ್‌ ಶೀಟ್‌ ಮೇಲೆ ಮೀಟರ್‌ ಅಳವಡಿಸಿ 31.80 ಕೋಟಿ ಲೂಟಿ

ಬೆಂಗಳೂರು; ದೀನದಯಾಳ್‌ ಉಪಾಧ್ಯಾಯ ಗ್ರಾಮ ವಿದ್ಯುತ್‌ ಯೋಜನೆಯಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕಳಪೆ ಗುಣಮಟ್ಟದ ಮೀಟರ್‌ ಬೋರ್ಡ್‌ಗಳನ್ನು ಅಳವಡಿಸಲಾಗಿತ್ತು. ಪ್ಲೈವುಡ್‌ ಶೀಟಿನ ಮೇಲೆ ಮೀಟರ್‌ಗಳನ್ನು ಅಳವಡಿಸುವ ಮೂಲಕ 31.80 ಕೋಟಿ ರು.ಗಳನ್ನು ಕೊಳ್ಳೆ ಹೊಡೆಯಲಾಗಿತ್ತು ಎಂಬುದು ಇದೀಗ ಬಹಿರಂಗವಾಗಿದೆ.

 

ದೀನದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಜಾರಿಗಾಗಿ 31.80 ಕೋಟಿ ರು. ಮೌಲ್ಯದಲ್ಲಿ ಮೀಟರ್‌ಗಳ ಖರೀದಿಯಲ್ಲಿ ನಡೆದಿರುವ ಅಕ್ರಮಗಳನ್ನು ಹೊರಗೆಡವಿರುವ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿಯು ಯೋಜನೆ ಅನುಷ್ಠಾನದ ಎಲ್ಲಾ ಮಗ್ಗುಲುಗಳನ್ನು ಅನಾವರಣಗೊಳಿಸಿದೆ.

 

ಬೆಂಗಳೂರು ನಗರ ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ ಮತ್ತು ತುಮಕೂರು ಜಿಲ್ಲೆಯಲ್ಲಿನ 1,05,990 ಕುಟುಂಬಗಳ ಮನೆಗಳ ವಿದ್ಯುದ್ದೀಕರಣಕ್ಕೆ ಮುಕ್ತ ಮಾರುಕಟ್ಟೆಯಲ್ಲಿ ಅನುಮೋದಿತಗೊಂಡಿರುವ ಮಾರಾಟಗಾರರಿಂದ ಮೀಟರ್‌ ಸೇರಿದಂತೆ ಇನ್ನಿತರೆ ಉಪಕರಣಗಳನ್ನು ಖರೀದಿಸಬೇಕಿದ್ದ ಇಂಧನ ಇಲಾಖೆಯು ಅನುಮೋದಿತಗೊಂಡಿರದ/ಅನಧಿಕೃತ ಮಾರಾಟಗಾರರಾದ ಎಲ್‌ವಿಎಚ್‌ ಎನರ್ಜಿ ಪ್ರೈವೈಟ್‌ ಲಿಮಿಟೆಡ್‌, ಸೌತ್‌ ಏಷಿಯಾ ಇಂಪೆಕ್ಸ್‌ (ಇಂಡಿಯಾ) ಮಾರಾಟಗಾರರಿಂದ ಖರೀದಿಸಿತ್ತು. ಅನಧಿಕೃತ ಮಾರಾಟಗಾರರಿಂದ ಉಪಕರಣಗಳನ್ನು ಖರೀದಿಸುವ ಮೂಲಕ ಗುತ್ತಿಗೆ ಷರತ್ತನ್ನೂ ಮಾರ್ಗಪಲ್ಲಟಗೊಳಿಸಲಾಗಿತ್ತು ಎಂಬುದನ್ನು ಸಿಎಜಿ ಲೆಕ್ಕಪರಿಶೋಧನೆಯು ಪತ್ತೆ ಮಾಡಿದೆ.

 

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಪೈಕಿ ತುಮಕೂರಿನ ಕೊರಟಗೆರೆ, ಸಿರಾ ಹಾಗೂ ತುಮಕೂರು ಜಿಲ್ಲೆಯ ಹಲವು ತಾಲೂಕುಗಳ ಫಲಾನುಭವಿಗಳ ಮನೆಗಳ ಸಮೀಕ್ಷೆ ಮಾಡಿದ್ದ ಸಮಯದಲ್ಲಿ ಮೀಟರ್‌ ಬೋರ್ಡ್‌ಗಳಿಗಾಗಿ ನಿಕೃಷ್ಟ ಗುಣಮಟ್ಟದ ಸಾಮಗ್ರಿಗಳನ್ನು ಬಳಸಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

‘ಮೀಟರ್‌ ಬೋರ್ಡ್‌ಗಳು ಉತ್ತಮ ಗುಣಮಟ್ಟದ ಮರದಿಂದ ಅಥವಾ ಫೈಬರ್‌ ಗ್ಲಾಸ್‌ ರೀಇನ್ಫೋರ್ಸ್‌ಡ್‌ ಪಾಲಿಸ್ಟರ್‌ ಶೀಟ್‌ಗಳ ಮೌಲ್ಡಿಂಗ್‌ ಕಾಂಪೌಂಡ್‌ನಿಂದ ತಯಾರಿಸಿರಬೇಕು ಎಂದು ಗುತ್ತಿಗೆಯಲ್ಲಿ ನಿರ್ದಿಷ್ಟಪಡಿಸಲಾಗಿತ್ತು. ಆದರೂ ಫ್ಲೈವುಡ್‌ ಶೀಟ್‌ನ ಮೇಲೆ ಸ್ಥಿರಿಕರಿಸಲಾಗಿತ್ತು. ಮತ್ತು ಅವುಗಳು ಜಖಂಗೊಂಡಿದ್ದ ಸ್ಥಿತಿಯಲ್ಲಿದ್ದವು,’ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಅದೇ ರೀತಿ ಪಿವಿಸಿ ಪೈಪು, ಇನ್‌ಸ್ಯೂಲೇಟೆಡ್‌ ಕೇಬಲ್‌, ಆಂತರಿಕ ವೈರಿಂಗ್‌ ಕಿಟ್‌, ಎಂಎಸ್‌ ಕಂಬಗಳಗಳು ಉತ್ತಮ ಗುಣಮಟ್ಟದಿಂದ ಕೂಡಿರಲಿಲ್ಲ. ಅನುಮೋದನೆಯನ್ನು ಹೊಂದಿರದ/ಅನಧಿಕೃತ ಮಾರಾಟಗಾರರಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸಿಂಗಲ್‌ ಫೀಸ್‌ ವಿದ್ಯುತ್‌ ಮೀಟರ್‌ ಹಾಗೂ ಮೀಟರ್‌ ಬಾಕ್ಸ್‌ಗಳನ್ನೊಳಗೊಂಡ ಕಿಟ್‌ಗಳನ್ನು ಪೂರೈಸಲಾಗಿತ್ತು.

 

ಈ ಸಂಬಂಧ ಇಂಧನ ಇಲಾಖೆಯು ‘ ಸಿಂಗಲ್‌ ಫೇಸ್‌ ವಿದ್ಯುತ್‌ ಮೀಟರ್‌ ಮತ್ತು ಮೀಟರ್‌ ಬಾಕ್ಸ್ ಹೊರತುಪಡಿಸಿದಂತೆ ನಿರ್ದಿಷ್ಟ ಅನುಮೋದಿತ ಮಾರಾಟಗಾರರುಗಳು ಇರಲಿಲ್ಲ. ಹೀಗಾಗಿ ಇತರೆ ಐಟಂಗಳನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಬೇಕಾಗಿತ್ತು. ಎಚ್‌ಟಿ ಮೀಟರಿಂಗ್‌ ಕ್ಯೂಬಿಕಲ್ಸ್‌ಗಳ ಪರೀಕ್ಷಣೆಗೆ ಸಂಬಂಧಿಸಿದಂತೆ ಸಾಮಗ್ರಿಯ ಮೂಲ ಮಾದರಿಯನ್ನು ಫ್ಯಾಕ್ಟರಿ ಸ್ಥಳದಲ್ಲಿ ಮಾಡಲಾಗಿತ್ತು. ಹಾಗೂ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕಾಗಿದ್ದರಿಂದ 90 ಹೆಚ್‌ಟಿ ಕ್ಯೂಬಿಕಲ್‌ಗಳಿಗೆ ಪರೀಕ್ಷಣೆಯನ್ನು ಮನ್ನಾ ಮಾಡಲಾಗಿತ್ತು,’ ಎಂದು ಸರ್ಕಾರವು ನೀಡಿದ್ದ ಉತ್ತರವನ್ನು ಸಿಎಜಿ ಒಪ್ಪಿರಲಿಲ್ಲ.

SUPPORT THE FILE

Latest News

Related Posts