ಬೆಂಗಳೂರು; ದಾಖಲಾತಿಗಳ ಪರಿಶೀಲನೆ ನಡೆಸದೆಯೇ ಸಾಲ ನೀಡಿರುವುದು, ಸಾಲ ನೀಡುವ ಮುನ್ನ ಅನುಮೋದನೆ ಪಡೆಯದಿರುವುದು ಸೇರಿದಂತೆ ಇನ್ನಿತರೆ ವಾಮಮಾರ್ಗಗಳ ಮೂಲಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳಲ್ಲಿ ಬಹುಕೋಟಿ ಮೊತ್ತದ ಸಾಲ ನೀಡುವ ಮೂಲಕ ಅಕ್ರಮಗಳನ್ನೆಸಗಿರುವುದನ್ನು ನಬಾರ್ಡ್ ಸಂಸ್ಥೆಯು ಪರಿಶೀಲನೆ ವೇಳೆಯಲ್ಲಿ ಪತ್ತೆ ಹಚ್ಚಿದೆ.
2022-23ನೇ ಸಾಲಿನ ಅಕ್ಟೋಬರ್ 11ರ ಅಂತ್ಯಕ್ಕೆ ಕೇವಲ ನಾಲ್ಕೇ ನಾಲ್ಕು ಡಿಸಿಸಿ ಬ್ಯಾಂಕ್‌ಗಳಲ್ಲಿ 23.36 ಕೋಟಿ ರು. ಅವ್ಯವಹಾರ ನಡೆದಿದೆ. ನಬಾರ್ಡ್‌ನ ಕರ್ನಾಟಕ ಪ್ರಾದೇಶಿಕ ಕೆಂದ್ರ ವ್ಯಾಪ್ತಿಯಲ್ಲಿನ 2022-23ನೇ ಸಾಲಿನ ಸಹಕಾರ ಬ್ಯಾಂಕ್‌ಗಳ ಆರ್ಥಿಕ ಸ್ಥಿತಿಗತಿ ಕುರಿತು 2022ರ ಅಕ್ಟೋಬರ್ 11ರಂದು ನಡೆದ ಉನ್ನತ ಅಧಿಕಾರಯುಕ್ತ ಸಮಿತಿ ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ಗಳ ಒಟ್ಟಾರೆ ಹಣಕಾಸು ವಹಿವಾಟು ಮತ್ತು ಅವ್ಯವಹಾರದ ಸ್ಥಿತಿಗತಿ ಕುರಿತು ಚರ್ಚೆ ನಡೆದಿದೆ. ಈ ಸಭೆಯ ಕಾರ್ಯಸೂಚಿ ಪಟ್ಟಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
1 ಕೋಟಿ ರು.ಗೂ ಮೇಲ್ಪಟ್ಟು ನಡೆದ ವಹಿವಾಟಿನಲ್ಲಿ ನಾಲ್ಕು ಡಿಸಿಸಿ ಬ್ಯಾಂಕ್‌ಗಳಲ್ಲಿ ಅವ್ಯವಹಾರ ನಡೆದಿದೆ. ವಿಜಯಪುರ ಡಿಸಿಸಿ ಬ್ಯಾಂಕ್‌ನಲ್ಲಿ 3.15 ಕೋಟಿ, ಬೀದರ್ ಡಿಸಿಸಿ ಬ್ಯಾಂಕ್‌ನಲ್ಲಿ 1.93 ಕೋಟಿ, ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ 6.01 ಕೋಟಿ, ಬಾಗಲಕೋಟೆ ಡಿಸಿಸಿ ಬ್ಯಾಂಕ್‌ನಲ್ಲಿ 12.27 ಕೋಟಿ ರು. ಅವ್ಯವಹಾರ ನಡೆದಿರುವುದು ಸಭೆಯ ಕಾರ್ಯಸೂಚಿ ಪಟ್ಟಿಯಿಂದ ತಿಳಿದು ಬಂದಿದೆ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳಲ್ಲಿ ಹಣಕಾಸು ದುರುಪಯೋಗವಾಗುತ್ತಿದ್ದರೂ ಸಚಿವ ಸೋಮಶೇಖರ್ ಅವರು ಈ ನಿಟ್ಟಿನಲ್ಲಿ ಗಂಭೀರ ಕ್ರಮ ಕೈಗೊಂಡಿಲ್ಲ ಮತ್ತು ಹೆಚ್ಚಿನ ತನಿಖೆಗೆ ಆಸಕ್ತಿ ವಹಿಸಿಲ್ಲ ಎಂದು ಗೊತ್ತಾಗಿದೆ.
ದಾಖಲಾತಿಗಳನ್ನು ಸರಿಯಾಗಿ ಪರಿಶೀಲನೆ ನಡೆಸದಿರುವುದು, ಸಾಲಕ್ಕೆ ಖಾತ್ರಿಯನ್ನು ಪಡೆಯದಿರುವುದು, ಸಾಲಕ್ಕೆ ಖಾತ್ರಿ ನೀಡಿರುವವರ ಕುರಿತು ಪರಿಶೀಲನೆ ನಡೆಸದೆಯೇ ಕೋಟ್ಯಂತರ ರುಪಾಯಿ ಸಾಲ, ಹಣಕಾಸು ವಹಿವಾಟು ನಡೆಸಲಾಗಿದೆ. ಆದರೂ ಬ್ಯಾಂಕ್‌ನ ಆಡಳಿತ ಮಂಡಳಿ ಮೌನ ವಹಿಸಿದೆ ಎಂಬ ಅಂಶವನ್ನು ಕಾರ್ಯಸೂಚಿ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳಲ್ಲಿ ಆಂತರಿಕ ಲೆಕ್ಕಪರಿಶೋಧನೆ ಕ್ರಮಬದ್ಧವಾಗಿ ನಡೆದಿಲ್ಲ. ಸಾಲ ಮಂಜೂರು ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಬ್ಯಾಂಕ್‌ನ ಆಂತರಿಕ ಲೆಕ್ಕಪರಿಶೋಧಕರು ಪರಿಶೀಲನೆಗೆ ಒಳಪಡಿಸಿಲ್ಲ. ವ್ಯವಸ್ಥೆಯಲ್ಲಿನ ದೌರ್ಬಲ್ಯಗಳು ಮತ್ತು ಆಂತರಿಕ ಆಡಳಿತದಲ್ಲಿನ ಲೋಪ ದೋಷಗಳಿಂದಾಗಿ ಬ್ಯಾಂಕ್‌ಗಳ ಹಣಕಾಸು ವಹಿವಾಟಿನಲ್ಲಿ ಅವ್ಯವಹಾರಗಳು ನಡೆಯುತ್ತಿವೆ ಎಂದು ಕಾರ್ಯಸೂಚಿಯ ಪಟ್ಟಿಯಲ್ಲಿ ವಿವರಿಸಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ನಬಾರ್ಡ್‌ನ ಮಾರ್ಗಸೂಚಿಗಳಂತೆ ಬೀದರ್ ಡಿಸಿಸಿ ಬ್ಯಾಂಕ್,ಕಲ್ಬುರ್ಗಿ ಯಾದಗೀರ್, ಮೈಸೂರು, ತುಮಕೂರು ಡಿಸಿಸಿ ಸೇರಿದಂತೆ ರಾಜ್ಯದ ಹಲವು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು ನಿಯಮಿತವಾಗಿ ಲೆಕ್ಕ ಪರಿಶೋಧನೆ ನಡೆಸುತ್ತಿಲ್ಲ. ಬ್ಯಾಲೆನ್ಸ್ ಶೀಟ್‌ಗಳನ್ನು ಸಂಬಂಧಿಸಿದ ಸಕ್ಷಮ ಪ್ರಾಧಿಕಾರಗಳಿಗೆ ಸಲ್ಲಿಸುತ್ತಿಲ್ಲ. 2021-22ನೇ ಸಾಲಿನ ಲೆಕ್ಕಪರಿಶೋಧನೆ ಮತ್ತು ಬ್ಯಾಲೆನ್ಸ್ ಶೀಟ್‌ಗಳನ್ನು 2022ರ ಜೂನ್ ಮೀರಿದರೂ ಸಲ್ಲಿಸಿಲ್ಲ ಎಂಬುದು ಕಾರ್ಯಸೂಚಿ ಪಟ್ಟಿಯಿಂದ ತಿಳಿದು ಬಂದಿದೆ.
ಅದೇ ರೀತಿ ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ಪಡೆಯದೇ ಕೆಲ ಸಹಕಾರಿ ಬ್ಯಾಂಕ್‌ಗಳು ಶಾಖೆಗಳನ್ನು ತೆರೆದಿದೆ. ಧಾರವಾಡದ ಕೆಸಿಸಿ ಬ್ಯಾಂಕ್ ಬ್ಯಾಹಟ್ಟಿ ಮತ್ತು ಬಂಕಾಪುರದಲ್ಲಿ ಕ್ರಮವಾಗಿ 2022ರ ಮೇ 13 ಮತ್ತು ಜೂನ್ 13ರಂದು ತೆರೆದಿದೆ. ಶಾಖೆಗಳನ್ನು ಆರಂಭಿಸುವ ಮುನ್ನ ಆರ್‌ಬಿಐನ ಅನುಮತಿ ಪಡೆದಿಲ್ಲ ಎಂಬುದು ಕಾರ್ಯಸೂಚಿ ಪಟ್ಟಿಯಿಂದ ಗೊತ್ತಾಗಿದೆ.