ಬಳ್ಳಾರಿಯಲ್ಲೂ 11 ಎಕರೆ ಕಬಳಿಕೆ; ರಾಮುಲು ಭೂಹಗರಣ ಸುತ್ತ ‘ದಿ ಫೈಲ್‌’ನ 3 ವರದಿಗಳು

ಬೆಂಗಳೂರು; ತುಂಗ ಭದ್ರಾ ನಾಲೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ ಜಮೀನಿನ ಪೈಕಿ 300 ಕೋಟಿ ರು. ಮೌಲ್ಯದ 27.5 ಎಕರೆ ಜಮೀನು ಕಬಳಿಸಿರುವ ಸಚಿವ ಬಿ ಶ್ರೀರಾಮುಲು ಅವರನ್ನು ವಜಾಗೊಳಿಸಬೇಕು ಎಂದು ವಿಧಾನಪರಿಷತ್‌ನ ಮಾಜಿ ಸದಸ್ಯ ಕಾಂಗ್ರೆಸ್‌ನ ವಿ ಎಸ್‌ ಉಗ್ರಪ್ಪ ಅವರು ಒತ್ತಾಯಿಸಿದ್ದಾರೆ.

 

ಶ್ರೀರಾಮುಲು ಅವರು ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರೊಂದಿಗೆ ಶಾಮೀಲಾಗಿ 27 ಎಕರೆ 5 ಗುಂಟೆ ಸರ್ಕಾರಿ ಜಮೀನು ಕಬಳಿಸಿರುವುದು ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಸಾಬೀತಾಗಿದೆ. ನ್ಯಾಯಾಲಯಕ್ಕೆ ಆರೋಪಪಟ್ಟಿಯೂ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದೂ ಆಗ್ರಹಿಸಿದ್ದಾರೆ. ಅಲ್ಲದೆ ಇದೇ ಪ್ರಕರಣದಲ್ಲಿನ ಆರೋಪಿಗಳ ಪೈಕಿ ಬಳ್ಳಾರಿಯ ಹಿಂದಿನ ಜಿಲ್ಲಾಧಿಕಾರಿ ಬಿ ಶಿವಪ್ಪ ಅವರ ಹೆಸರನ್ನೂ ಉಲ್ಲೇಖಿಸಿದ್ದಾರೆ.

 

ತುಂಗಭದ್ರಾ ನಾಲೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ ಜಮೀನಷ್ಟೇ ಅಲ್ಲದೇ ಬಳ್ಳಾರಿಯ ಕೌಲ್‌ಬಜಾರ್‌ನಲ್ಲಿದ್ದ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು 6 ವರ್ಷಗಳ ಬಳಿಕ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

 

ಆದರೆ ಸಿದ್ದರಾಮಯ್ಯ ಅವರ 5ವರ್ಷಗಳ ಅಧಿಕಾರವಾಧಿಯಲ್ಲಿ ಬಿ ಶ್ರೀರಾಮುಲು ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಲು ವಿಧಾನಸಭೆಯ ಅಂದಿನ ಸ್ಪೀಕರ್‌ಗಳು ಅನುಮತಿ ನೀಡಲು ವಿಳಂಬವೆಸಗಿದ್ದರು. ಈ ಕುರಿತು ‘ದಿ ಫೈಲ್‌’ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಅದನ್ನಿಲ್ಲಿ ಮತ್ತೊಮ್ಮೆ ಕ್ರೋಢೀಕರಿಸಿ  ಕೊಡಲಾಗಿದೆ.

 

ಅಧಿಕಾರ ದುರುಪಯೋಗಪಡಿಸಿಕೊಂಡು ಕಚೇರಿಯಲ್ಲಿ ಸೃಷ್ಟಿಸಿದ್ದ ಸುಳ್ಳು ದಾಖಲಾತಿಗಳನ್ನೇ ನೈಜವೆಂದು ನಂಬಿಸಿ ಸರ್ಕಾರಿ ಜಮೀನನ್ನು ಸೇರಿಸಿ 11.38 ಎಕರೆಗೂ ಅಧಿಕ ವಿಸ್ತೀರ್ಣದ ಜಮೀನನ್ನು ಹಾಲಿ ಸಚಿವ ಬಿ ಶ್ರೀರಾಮುಲು ಅವರಿಗೆ ಹೆಸರಿಗೆ ನೋಂದಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ ಶ್ರೀರಾಮುಲು, ಬಳ್ಳಾರಿಯ ಹಿಂದಿನ ಜಿಲ್ಲಾಧಿಕಾರಿ ಬಿ ಶಿವಪ್ಪ (ಆಪಾದಿತ-1) ಸೇರಿದಂತೆ ಹಲವು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು 6 ವರ್ಷದ ಬಳಿಕ ಕಡೆಗೂ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಕುರಿತು 2022ರ ಆಗಸ್ಟ್‌ 22ರಂದು ದಾಖಲೆ ಸಮೇತ ವರದಿ ಪ್ರಕಟಿಸಿತ್ತು.

 

ಸಚಿವ ಶ್ರೀರಾಮುಲುವಿಗೆ ಸರ್ಕಾರಿ ಜಮೀನು ನೋಂದಣಿ ಪ್ರಕರಣ; 6 ವರ್ಷದ ನಂತರ ಚಾರ್ಜ್‌ಶೀಟ್ ಸಲ್ಲಿಕೆ

 

ಬಳ್ಳಾರಿಯ ಕೌಲ್‌ ಬಜಾರ್ ಬಳಿಯ ಟಿ ಬಿ ಸ್ಯಾನಿಟೋರಿಯಂ ಆಸ್ಪತ್ರೆ ಪಕ್ಕದಲ್ಲಿರುವ ಬಳ್ಳಾರಿ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿದ್ದ ಸರ್ಕಾರಿ ಜಮೀನು ಸೇರಿದಂತೆ ಇತರೆ ವ್ಯಕ್ತಿಗಳ ಹೆಸರಿನಲ್ಲಿದ್ದ ಜಮೀನುಗಳಿಗೂ ಸುಳ್ಳು ದಾಖಲೆ ಸೃಷ್ಟಿಸಿದ್ದ ಅಧಿಕಾರಿಗಳ ಅಕ್ರಮಕೂಟವು ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣ ಅವರು ಹೊಂದಿದ್ದ ಜಮೀನಿನ ವಿಸ್ತೀರ್ಣವನ್ನು ಓವರ್‌ ಲ್ಯಾಪಿಂಗ್‌ ಮಾಡುವ ಮೂಲಕ ಹೆಚ್ಚಿಸಿತ್ತು ಎಂದು ಲೋಕಾಯುಕ್ತ ಪೊಲೀಸರ ತನಿಖೆಯಿಂದ ಬಹಿರಂಗವಾಗಿತ್ತು ಈ ಕುರಿತು 2022ರ ಆಗಸ್ಟ್‌ 23ರಂದು ವರದಿ ಪ್ರಕಟಿಸಿತ್ತು.

ರೆಡ್ಡಿ ಪತ್ನಿ ಲಕ್ಷ್ಮಿಅರುಣ ಹೆಸರಿನಲ್ಲಿ ಜಮೀನು ವಿಸ್ತೀರ್ಣ ಹೆಚ್ಚಿಸಲು ಸರ್ಕಾರಿ ಜಮೀನು ಅತಿಕ್ರಮಣ?

 

ಸಾರಿಗೆ ಸಚಿವ ಬಿ ಶ್ರೀರಾಮುಲು ಅವರಿಗೆ ಸಹಕರಿಸುವ ಉದ್ದೇಶದಿಂದ ತಹಶೀಲ್ದಾರ್‌ ಶಶಿಧರ ಬಗಲಿ ಮತ್ತಿತರರ ಅಕ್ರಮಕೂಟವು ಭೂ ಹಿಡುವಳಿದಾರರನ್ನೇ ಬದಲಿಸಿತ್ತು ಎಂಬುದು ಲೋಕಾಯುಕ್ತ ಪೊಲೀಸರ ತನಿಖೆಯಿಂದ ಬಹಿರಂಗವಾಗಿತ್ತು. ಈ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿರುವ ಬೆನ್ನಲ್ಲೇ ಮುನ್ನೆಲೆಗೆ ಬಂದಿರುವ ಅಂತಿಮ ತನಿಖಾ ವರದಿಯು ಬಳ್ಳಾರಿ ಭೂ ಹಗರಣದ ಮತ್ತೊಂದು ಮುಖವನ್ನು ಅನಾವರಣಗೊಳಿಸಿತ್ತು. ಈ ಕುರಿತು 2022ರ ಆಗಸ್ಟ್‌ 25ರಂದು ವರದಿ ಪ್ರಕಟಿಸಿತ್ತು.

 

ಭೂ ಹಗರಣ; ಶ್ರೀರಾಮುಲುಗೆ ಸಹಕರಿಸಲು ಹಿಡುವಳಿದಾರರನ್ನೇ ಬದಲಿಸಿದ ಅಕ್ರಮ ಕೂಟ

 

ಪ್ರಕರಣದ ಕುರಿತು ಜಿ.ಕೃಷ್ಣಮೂರ್ತಿ ಎಂಬುವರು 2013 ರ ಏಪ್ರಿಲ್ 29ರಂದು ಖಾಸಗಿ ದೂರು ಸಲ್ಲಿಸಿದ್ದರು. (ಪಿಸಿಆರ್ ನಂ 01/2013) ಇದನ್ನಾಧರಿಸಿ ವಿಚಾರಣೆ ನಡೆಸಿದ್ದ ಲೋಕಾಯುಕ್ತ ತನಿಖಾಧಿಕಾರಿ 2016ರ ಜೂನ್‌ 29ರಂದು ತನಿಖಾ ವರದಿಯನ್ನು ಲೋಕಾಯುಕ್ತಕ್ಕೆ ಸಲ್ಲಿಸಿದ್ದರು. ಈ ವರದಿ ಆಧರಿಸಿ ಪ್ರಕರಣದಲ್ಲಿ 6 ನೇ ಆರೋಪಿಯಾಗಿರುವ ಶ್ರೀರಾಮುಲು ಅವರನ್ನು ವಿಚಾರಣೆ ನಡೆಸಲು ಅನುಮತಿ ಕೋರಿ 2016ರ ಆಗಸ್ಟ್‌ ನಲ್ಲಿ ಲೋಕಾಯುಕ್ತ ಎಡಿಜಿಪಿ ಲೋಕಸಭೆ ಸ್ಪೀಕರ್ ಗೆ ಪತ್ರ ಬರೆದಿದ್ದರು.

 

‘ಶ್ರೀರಾಮುಲು ಅವರು ಶಾಸಕರಾಗಿದ್ದಾಗ ನಡೆದ ಪ್ರಕರಣವಾಗಿರುವ ಕಾರಣ ವಿಧಾನಸಭೆ ಸ್ಪೀಕರ್‌ರಿಂದ ಅನುಮತಿ ಪಡೆಯಿರಿ’ ಎಂದು ಲೋಕಸಭೆ ಜಂಟಿ ಕಾರ್ಯದರ್ಶಿ ಒಂದು ವರ್ಷದ ನಂತರ(2017 ಜುಲೈ) ಉತ್ತರಿಸಿದ್ದರು. ಇದಾದ ನಂತರ ಲೋಕಾಯುಕ್ತ ಸಂಸ್ಥೆ ವಿಧಾನಸಭೆ ಸಚಿವಾಲಯಕ್ಕೆ 2017ರ ಅಕ್ಟೋಬರ್‌ನಲ್ಲಿ ಅನುಮತಿ ಕೋರಿ ಪತ್ರ ಬರೆದಿತ್ತು. ‘ಶ್ರೀರಾಮುಲು ಅವರು ಈಗ ಸಂಸತ್‌ ಸದಸ್ಯರಾಗಿರುವ ಕಾರಣ ಲೋಕಸಭೆ ಸ್ಪೀಕರ್‌ ಅವರಿಂದಲೇ ಅನುಮತಿ ಪಡೆಯಬೇಕು’ ಎಂದು ವಿಧಾನಸಭೆ ಸಚಿವಾಲಯ 2018ರ ಜನವರಿ 24ರಂದು ಉತ್ತರಿಸಿತ್ತು.

the fil favicon

SUPPORT THE FILE

Latest News

Related Posts