ಮೀಸಲಾತಿ ಕ್ಷೇತ್ರಕ್ಕಿಂತಲೂ ಸಾಮಾನ್ಯ ಕ್ಷೇತ್ರಕ್ಕೇ ಹೆಚ್ಚು ಅನುದಾನ; ಉಪಯೋಜನೆ ಮಾರ್ಗಸೂಚಿ ಉಲ್ಲಂಘನೆ

photo credit;deccanhearald

ಬೆಂಗಳೂರು; ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ (ಎಸ್‌ಸಿಪಿ/ಟಿಎಸ್‌ಪಿ)ಯಡಿಯಲ್ಲಿ ಲೋಕೋಪಯೋಗಿ ಇಲಾಖೆಯು ಬಿಡುಗಡೆ ಮಾಡುತ್ತಿರುವ ಅನುದಾನವನ್ನು ಮೀಸಲಾತಿ ಕ್ಷೇತ್ತಕ್ಕೆ ಹೋಲಿಸಿದಲ್ಲಿ ಸಾಮಾನ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದೆ. ಇಲಾಖೆಯ ಆಯವ್ಯಯದ ಗಾತ್ರವು ಹೆಚ್ಚಾಗಿದ್ದರೂ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವು ಕಡಿಮೆಯಾಗಿದೆ ಎಂಬುದನ್ನು ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಅಧ್ಯಕ್ಷರಾಗಿರುವ  ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿಯು ಬಹಿರಂಗಗೊಳಿಸಿದೆ.

 

ಲೋಕೋಪಯೋಗಿ ಇಲಾಖೆಯು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ಬಳಕೆ ಕುರಿತು (2021-22ನೇ) ಸಮಿತಿಯು ವಿಧಾನಮಂಡಲಕ್ಕೆ 2022ರ ಸೆ.21ರಂದು ಸಲ್ಲಿಸಿರುವ ಐದನೇ ವರದಿಯಲ್ಲಿ ವಿಶ್ಲೇಷಿಸಿದೆ.
ಕಳೆದ 3 ವರ್ಷಗಳಲ್ಲಿ ಲೋಕೋಪಯೋಗಿ ಇಲಾಖೆಗೆ ಉಪ ಯೋಜನೆಗಳಡಿಯಲ್ಲಿ 4,100.87 ಕೋಟಿ ರು.ಗಳನ್ನು ಆಯವ್ಯಯದಲ್ಲಿ ಒದಗಿಸಲಾಗಿದೆ. ಈ ಪೈಕಿ 3,165.84 ಕೋಟಿ ರು. ಖರ್ಚು ಮಾಡಿ ವೆಚ್ಚಕ್ಕೆ 66.06 ಕೋಟಿ ರು.ಗಳನ್ನು ಬಾಕಿ ಇರಿಸಿಕೊಂಡಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

‘ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪಹಂಚಿಕೆ ಅನುದಾನವನ್ನು ಮೀಸಲಾತಿ ಕ್ಷೇತ್ರಕ್ಕೆ ಹೋಲಿಸಿದಲ್ಲಿ ಸಾಮಾನ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುತ್ತಿದೆ. ಈ ಅನುದಾನವನ್ನು ಕ್ಷೇತ್ರಗಳಿಗೆ ಹಂಚಿಕೆ ಮಾಡುವ ಪ್ರಕ್ರಿಯೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಇತರ ಇಲಾಖೆಗಳ ನಡುವೆ ಸಮನ್ವಯತೆ ಕೊರತೆ ಇದೆ. ಆಯವ್ಯಯದ ಗಾತ್ರ ಹೆಚ್ಚಾಗಿದ್ದರೂ ಈ ಯೋಜನೆಯಡಿಯ ಅನುದಾನವು ಕಡಿಮೆಯಾಗಿದೆ,’ ಎಂಬುದನ್ನು ಸಮಿತಿಯು ಗಂಭೀರವಾಗಿ ಪರಿಗಣಿಸಿದೆ.

 

ಅದೇ ರೀತಿ ಅನುದಾನದ ಹಣವನ್ನು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಸಮುದಾಯದ ಅಭಿವೃದ್ಧಿಗಾಗಿ ಬಳಸುವುದರ ಬದಲಿಗೆ ಈ ಅನುದಾನದ ಹಣದಲ್ಲಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಸಂಬಳ, ಆಡಳಿತಾತ್ಮಕ ವೆಚ್ಚಗಳಿಗಾಗಿ ಭರಿಸಿರುವುದು ವರದಿಯಿಂದ ತಿಳಿದು ಬಂದಿದೆ.

 

‘ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡದೇ ಯೋಜನೆಗಳ ಕಾರ್ಯಪ್ರಗತಿಯ ಆಧಾರದ ಮೇಲೆ ಅನುದಾನ ಬಿಡುಗಡೆ ಮಾಡುತ್ತಿರುವುದರಿಂದ ಯೋಜನೆಗಳು ಕಾಲಮಿತಿಯೊಳಗೆ ಪೂರ್ಣಗೊಳ್ಳುತ್ತಿಲ್ಲ.ಬಾಕಿ ಉಳಿದ ಹಣವು ಕ್ಯಾರಿ ಫಾರ್ವರ್ಡ್‌ ಆಗುತ್ತಿದೆ. ಅನುದಾನದ ಹಣ ಕ್ಯಾರಿ ಫಾರ್ವರ್ಡ್‌ ಆದಲ್ಲಿ ಹಣವನ್ನು ಮುಂದಿನ ವರ್ಷದ ಅನುದಾನದ ಜೊತೆಗೆ ಸೇರಿಸಿ ಕೊಡುವುದರ ಬದಲಿಗೆ ಒಂದು ವರ್ಷ ಬಿಟ್ಟು ಅದರ ಮುಂದಿನ ವರ್ಷಕ್ಕೆ ಕೊಡುತ್ತಿದೆ,’ ಎಂದು ಸಮಿತಿಯು ಇಲಾಖೆಯ ಕಾರ್ಯವೈಖರಿಯನ್ನು ವರದಿಯಲ್ಲಿ ವಿವರಿಸಿದೆ.

 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹೆಚ್ಚು ಜನಸಂಖ್ಯೆ ಇರುವ ಮೀಸಲು ಕ್ಷೇತ್ರಗಳಲ್ಲಿ ಈ ಸಮುದಾಯದ ಜನರಿಗೆ ವಿವಿಧ ಯೋಜನೆಗಳಲ್ಲಿ ಸೌಲಭ್ಯಗಳನ್ನು ಒದಗಿಸಬೇಕು. ಹೀಗಾಗಿ ಈ ಉಪ ಯೋಜನೆಗಳಡಿಯಲ್ಲಿ ಜನಸಂಖ್ಯಾಧರಿತ ಹೆಚ್ಚು ಅನುದಾನವನ್ನು ಮೀಸಲು ಕ್ಷೇತ್ರಗಳಿಗೆ ಆದ್ಯತೆ ಮೇರೆಗೆ ನಿಗದಿಗೊಳಿಸಿ ಮಂಜೂರು ಮಾಡಬೇಕು ಎಂದು ಸಮಿತಿಯು ಶಿಫಾರಸ್ಸು ಮಾಡಿದೆ.

the fil favicon

SUPPORT THE FILE

Latest News

Related Posts